ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಟೀಕೆ ನಿಲ್ಲಿಸದಿದ್ದರೆ ಹಗರಣ ಬಯಲಿಗೆಳೆಯುವೆ

ಶಾಮನೂರು, ಮಲ್ಲಿಕಾರ್ಜುನ ವಿರುದ್ಧ ಗುಡುಗಿದ ಯಶವಂತರಾವ್ ಜಾಧವ್
Last Updated 4 ಜುಲೈ 2021, 8:55 IST
ಅಕ್ಷರ ಗಾತ್ರ

ದಾವಣಗೆರೆ: ‘ಸಂಸದರ ವಿರುದ್ಧ ವೈಯಕ್ತಿಕ ಟೀಕೆಗಳನ್ನು ನಿಲ್ಲಿಸದಿದ್ದರೆ ನಿಮ್ಮ ಎಲ್ಲ ಹಗರಣಗಳನ್ನು ಬಯಲಿಗೆಳೆಯುತ್ತೇನೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಅವರು ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಎಚ್ಚರಿಸಿದರು.

‘ಶಾಮನೂರು ಶಿವಶಂಕರಪ್ಪ ಹಿರಿಯರು. ಅವರು ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಬೇಕು. ಅದು ಬಿಟ್ಟು ಕೆಟ್ಟ ಶಬ್ದಗಳನ್ನು ಬಳಸಿ ಹೇಳಿಕೆ ನೀಡುವುದು ಸರಿಯಲ್ಲ. ಅವರು ರಾಜಕೀಯ ನಾಯಕರು ಎನಿಸಿಕೊಳ್ಳಲೂ ಲಾಯಕ್ಕಿಲ್ಲ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘ಅಪ್ಪ-ಮಕ್ಕಳ ಜಾತಕವೇ ನನ್ನ ಬಳಿಯಿದೆ. ಹಿಂದೆ ಮೋತಿ ವೀರಣ್ಣ ಅವರಿಗೆ ಅವಕಾಶ ತಪ್ಪಿಸಿ ಹಣ ಬಲದಿಂದ ವಿಧಾನಸಭೆ ಚುನಾವಣೆಯ ಟಿಕೆಟ್ ತಂದಿರಿ. ನೀವು ಮೊದಲು ಏನಾಗಿದ್ದಿರಿ, ಬಾಪೂಜಿ ವಿದ್ಯಾಸಂಸ್ಥೆಗೆ ಹೇಗೆ ಬಂದಿರಿ ಎಂಬುದರ ಮಾಹಿತಿ ನಮ್ಮ ಬಳಿ ಇದೆ. ಮಲ್ಲಿಕಾರ್ಜುನ ಅವರು ಯಾವುದೇ ಹೋರಾಟದ ಹಿನ್ನೆಲೆ ಇಲ್ಲದೇ
ತಂದೆಯ ನೆರಳಲ್ಲಿ ಬಂದವರು. ಅವರು ಬಹಿರಂಗ ಚರ್ಚೆಗೆ ಬರುವುದಾದರೆ ತಾವು ಸಿದ್ಧ’ ಎಂದು ಸವಾಲು ಹಾಕಿದರು.

‘ಶಾಮನೂರು ಕುಟುಂಬದವರು ಒಂದರ್ಥದಲ್ಲಿ ಸರ್ವ ಪಕ್ಷಗಳ ಸದಸ್ಯರಿದ್ದಂತೆ. ಕೆಲ ತಿಂಗಳ ಹಿಂದೆ ಎಸ್.ಎಸ್. ಮಲ್ಲಿಕಾರ್ಜುನ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಏಕೆ ಹೋಗಿದ್ದರು ಎಂಬುದನ್ನು ಹೇಳಲಿ’ ಎಂದರು.

‘18 ಸಾವಿರ ಡೋಸ್‌ ಲಸಿಕೆ ಮಾತ್ರ’

‘ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ ಅವರು ಸ್ವಂತ ಖರ್ಚಿನಲ್ಲಿ 18 ಸಾವಿರ ಡೋಸ್ ಅನ್ನು ಮಾತ್ರ ಜನರಿಗೆ ನೀಡಿದ್ದಾರೆ. 5 ಸಾವಿರ ಡೋಸ್ ಅನ್ನು ಅವರ ಆಸ್ಪತ್ರೆಯಲ್ಲಿ ಹಣಕ್ಕೆ ಮಾರಿಕೊಂಡಿದ್ದಾರೆ’ ಎಂದು ಆರೋಪಿಸಿರುವ ಯಶವಂತರಾವ್ ಜಾಧವ್‌, ‘ನಿಮಗೆ ಬಡವರ ಬಗ್ಗೆ ಕಾಳಜಿ ಇದ್ದಿದ್ದರೆ ನಿಮ್ಮ ಎರಡೂ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಸರ್ಕಾರದ ಆರೋಗ್ಯ ಯೋಜನೆಗಳಡಿ ನೋಂದಣಿ ಮಾಡಿಸಿ ಉಚಿತ ಚಿಕಿತ್ಸೆ ನೀಡಬಹುದಿತ್ತು’ ಎಂದು ಅವರು ಹೇಳಿದರು.

ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರಾದ ಎಲ್.ಡಿ. ಗೋಣೆಪ್ಪ, ಉಮಾ ಪ್ರಕಾಶ್, ಪಕ್ಷದ ಮುಖಂಡರಾದ ದೇವರಮನೆ ಶಿವಕುಮಾರ, ಶ್ರೀನಿವಾಸ ದಾಸಕರಿಯಪ್ಪ, ಗೋಪಾಲರಾವ್ ಮಾನೆ ಅವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT