ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ, ಬುದ್ಧಿವಂತಿಕೆ ಇದ್ದರೆ ಪರೀಕ್ಷೆ ಸಲೀಸು: ಜಿಲ್ಲಾಧಿಕಾರಿ ಬೀಳಗಿ

‘ಪ್ರಜಾವಾಣಿ’– ‘ಡೆಕ್ಕನ್‌ ಹೆರಾಲ್ಡ್‌’ ಗೈಡಿಂಗ್‌ ಫೋರ್ಸ್‌ ಕಾರ್ಯಕ್ರಮ
Last Updated 14 ಮಾರ್ಚ್ 2021, 5:43 IST
ಅಕ್ಷರ ಗಾತ್ರ

ದಾವಣಗೆರೆ: ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಜ್ಞಾನ ಬೇಕೇಬೇಕು. ಅದರ ಜತೆಗೆ ಬುದ್ಧಿವಂತಿಕೆ ಕೂಡ ಇದ್ದರೆ ಉತ್ತೀರ್ಣರಾಗುವುದು ಸುಲಭ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವುಬೆಂಗಳೂರಿನ ‘ಇನ್‌ಸೈಟ್ಸ್‌ ಐಎಎಸ್‌’ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಸರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ‘ಗೈಡಿಂಗ್‌ ಫೋರ್ಸ್‌’ ಕಾರ್ಯಕ್ರಮದಲ್ಲಿ ಅವರು ಐಎಎಸ್‌, ಐಪಿಎಸ್‌ ಆಕಾಂಕ್ಷಿಗಳನ್ನು ಉದ್ದೇಶಿಸಿ ಮಾತನಾಡಿದರು.

ಹಳ್ಳಿಯಿಂದ ಬಂದವರಿಗೆ ಜ್ಞಾನ ಇರುತ್ತದೆ. ಆದರೆ ಅದನ್ನು ಪ್ರಸ್ತುತಪಡಿಸುವ ತಂತ್ರ ಗೊತ್ತಿರುವುದಿಲ್ಲ. ಎಷ್ಟು ತಿಳಿದುಕೊಂಡಿದ್ದರೂ ಯಾವ ಪ್ರಶ್ನೆಗೆ ಎಷ್ಟು ಶಬ್ದಗಳಲ್ಲಿ ಉತ್ತರಿಸಬೇಕು? ಹೇಗೆ ಉತ್ತರಿಸಬೇಕು ಎಂಬ ಬಗ್ಗೆ ತಿಳಿದಿರಬೇಕು. ಅದಕ್ಕೆ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು.

‘ತರಬೇತಿ ಕೇಂದ್ರಗಳ ಬಗ್ಗೆ ಎಚ್ಚರ ಅಗತ್ಯ. ಮೋಸ ಹೋಗುವ ಸಾಧ್ಯತೆ ಇದೆ. ಜಾಹೀರಾತು ನಂಬಿ ನಾನೂ ದೆಹಲಿಗೆ ಹೋಗಿ ₹ 2.5 ಲಕ್ಷ ಕಳೆದುಕೊಂಡಿದ್ದೆ. ಹಾಗಾಗಿ ಗುಣಮಟ್ಟದ ತರಬೇತಿ ನೀಡುವ ಸಂಸ್ಥೆಗಳು ಯಾವುದು ಎಂಬುದನ್ನು ಮೊದಲು ಗುರುತಿಸಿಕೊಳ್ಳಬೇಕು. ಅಲ್ಲಿ ತರಬೇತಿ ಪಡೆಯಬೇಕು’ ಎಂದು ಎಚ್ಚರಿಕೆ ನೀಡಿದರು.

‘ಒಟ್ಟು 1,750 ಅಂಕಗಳಿಗೆ ಪರೀಕ್ಷೆ ಬರೆಯಬೇಕಾಗುತ್ತದೆ. ಸುಮಾರು 900 ಅಂಕ ಗಳಿಸಿದರೆ ಉದ್ಯೋಗ ಖಚಿತವಾಗುತ್ತದೆ. ಪ್ರಿಲಿಮಿನರಿ, ಮೈನ್‌ ಮತ್ತು ಪರ್ಸನಾಲಿಟಿ ಪರೀಕ್ಷೆಗಳು ಇರುತ್ತವೆ. ಪ್ರಿಲಿಮಿನರಿ ಪರೀಕ್ಷೆಯಲ್ಲಿ ಗೊತ್ತಿರುವುದನ್ನು ಮೊದಲು ಬರೆಯಿರಿ. ಬಳಿಕ ಸ್ವಲ್ಪ ಕಷ್ಟ ಇರುವುದನ್ನು ಯೋಚಿಸಿ ಯಾವುದು ಸರಿ ಇರಬಹುದು ಅನ್ನಿಸಿದೆಯೋ ಅವುಗಳನ್ನು ಟಿಕ್‌ ಮಾಡಿ. ಗೊತ್ತೇ ಇಲ್ಲದ್ದನ್ನು ಬಿಟ್ಟುಬಿಡಿ. ಯಾಕೆಂದರೆ ಮೈನಸ್‌ ಅಂಕ ಇರುವುದರಿಂದ ತಪ್ಪಾದರೆ ಅಂಕ ಕಡಿಮೆಯಾಗುತ್ತದೆ’ ಎಂದು ಸಲಹೆ ನೀಡಿದರು.

‘ಡಿಗ್ರಿವರೆಗೆ ಓದಿರುವ ಪಠ್ಯಗಳನ್ನು ಮತ್ತೊಮ್ಮೆ ಮನನ ಮಾಡಿಕೊಳ್ಳಿ. ಕನಿಷ್ಠ 5 ವರ್ಷಗಳ ಪ್ರಶ್ನೆಪತ್ರಿಕೆ ಮತ್ತು ಸಿಲೆಬಸ್‌ಗಳನ್ನು ತಿಳಿದುಕೊಳ್ಳಿ. ಶೇ 80ರಷ್ಟು ಪರೀಕ್ಷೆಗಳು ಅದರಲ್ಲಿಯೇ ಬಂದಿರುತ್ತವೆ. ಶೇ 20 ಅಷ್ಟೇ ಹೊಸತು ಇರುತ್ತವೆ’ ಎಂದು ಸುಳಿವುಗಳನ್ನು ನೀಡಿದರು.

‘ಹೆತ್ತವರ ಒತ್ತಡಕ್ಕೆ, ಇಲ್ಲವೇ ಸ್ನೇಹಿತರು ಪರೀಕ್ಷೆ ಬರೆಯುತ್ತಾರೆ ಎಂಬ ಕಾರಣಕ್ಕೆ ಪರೀಕ್ಷೆ ಬರೆಯಲು ಮನಸ್ಸು ಮಾಡಿದ್ದರೆ, ಅಂಥವರು ಹಿಂದೆ ಸರಿದುಬಿಡಿ. ಪರೀಕ್ಷೆ ಬರೆಯಲೇಬೇಕು. ಐಎಎಸ್‌, ಐಪಿಎಸ್‌ ಮಾಡಲೇಬೇಕು ಎಂಬ ಹಠ ಇರುವವರಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಹೊರಗಿನ ಪ್ರೇರಣೆಗಳು ಹೆಚ್ಚು ಸಮಯ ಉಳಿಯುವುದಿಲ್ಲ. ಒಳಗಿನಿಂದ ಪ್ರೇರಣೆ ಬಂದರೆ ಗುರಿ ತಲುಪಲು ಸಾಧ್ಯ’ ಎಂದರು.

ಮೇಲರಿಮೆ ಇದ್ದವರು ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಹೋದರೆ ಬೇಗ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಕೀಳರಿಮೆ ಇದ್ದರೆ ಪರೀಕ್ಷೆ ಪಾಸಾಗುವುದು ಕಷ್ಟವಾಗುತ್ತದೆ. ಹಾಗಾಗಿ ಮೇಲರಿಮೆ ಮತ್ತು ಕೀಳರಿಮೆ ಎರಡನ್ನೂ ತೊಡೆದು ಹಾಕಿ. ಆತ್ಮವಿಶ್ವಾಸ ಮಾತ್ರ ಇರಲಿ. ಸಮಾಜಕ್ಕಾಗಿ ತುಡಿಯುವ, ಮಿಡಿಯುವ ಮನಸ್ಸು, ಹೃದಯ ಇಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಬರೆಯಿರಿ ಎಂದು ಆಶಿಸಿದರು.

ಚಿಂತನೆಯಲ್ಲಿ ಸ್ಪಷ್ಟತೆ ಇರಬೇಕು: ಎಸ್‌ಪಿ ಹನುಮಂತರಾಯ
ದಾವಣಗೆರೆ:
‘ಯಾವ ಪರೀಕ್ಷೆ ಬರೆಯಬೇಕು ಎಂಬ ಸ್ಪಷ್ಟ ಚಿಂತನೆ ಇರಬೇಕು. ಎಲ್ಲ ಪರೀಕ್ಷೆಗಳನ್ನು ಬರೆಯುತ್ತಾ ಹೋದರೆ ನಾವು ಏನಾಗಬೇಕೋ ಅದನ್ನು ತಲುಪಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವು ಬೆಂಗಳೂರಿನ ‘ಇನ್‌ಸೈಟ್ಸ್‌ ಐಎಎಸ್‌’ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಗೈಡಿಂಗ್‌ ಫೋರ್ಸ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯುಪಿಎಸ್‌ಸಿ, ಕೆಪಿಎಸ್‌ಸಿ, ಎಸ್‌ಎಸ್‌ಸಿ, ಬ್ಯಾಂಕಿಂಗ್‌ ಪರೀಕ್ಷೆ, ಐಎಎಂ, ಐಎಫ್ಎಸ್‌, ಮಿಲಿಟರಿ, ಕ್ಯಾಟ್‌ ಹೀಗೆ ಹಲವು ಪರೀಕ್ಷೆಗಳನ್ನು ಬರೆದೆ. ಕ್ಯಾಟ್‌ನಲ್ಲಿ ಇಂಟರ್‌ವ್ಯೂ ಚೆನ್ನಾಗಿ ಮಾಡಲಿಲ್ಲ. ಐಎಫ್‌ಎಸ್‌ನಲ್ಲಿ ನಿರೀಕ್ಷಿತ ಅಂಕ ಬರಲಿಲ್ಲ. ಯುಪಿಎಸ್‌ಸಿಯಲ್ಲಿ ಉತ್ತರ ಗೊತ್ತಿದ್ದರೂ ಬರೆಯಲಾಗದೆ ಸ್ವಲ್ಪದರಲ್ಲೇ ತಪ್ಪಿಹೋಯಿತು. ಬ್ಯಾಂಕಿಂಗ್‌, ಐಎಎಂ ಪರೀಕ್ಷೆಗಳನ್ನು ಪಾಸ್‌ ಮಾಡಿದೆ. ಬ್ಯಾಂಕ್‌ ಸೇರಿ ಕಲಬುರ್ಗಿ, ಉತ್ತರ ಪ್ರದೇಶ, ದೆಹಲಿ ಮುಂತಾದ ಕಡೆಗಳಲ್ಲಿ ಬ್ಯಾಂಕ್‌ನಲ್ಲಿ ಕೆಲಸ ಮಾಡಿದೆ. ನಡುವೆ ಕೆಪಿಎಸ್‌ಸಿ ಪರೀಕ್ಷೆ ಬರೆದು ಪಾಸಾದೆ. ನಾನು ಈ ರೀತಿ ನಾನಾ ಪರೀಕ್ಷೆ ಬರೆಯುವ ಬದಲು ಐಎಎಸ್‌ ಒಂದನ್ನೇ ಆಯ್ಕೆ ಮಾಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಸ್ಪಷ್ಟತೆ ಇಲ್ಲದ ಕಾರಣ ಹೀಗಾಯಿತು’ ಎಂದು ಸ್ವಾನುಭವ ತಿಳಿಸಿದರು.

‘ಆಗ ಸರಿಯಾದ ಮಾರ್ಗದರ್ಶನ ಸಿಕ್ಕಿರಲಿಲ್ಲ. ಕೋಚಿಂಗ್‌ ಕ್ಲಾಸ್‌ಗೆ ಹೋಗಿರಲಿಲ್ಲ. ಈಗ ಮಾರ್ಗದರ್ಶನ ನೀಡಲು ಹಲವು ಸಂಸ್ಥೆಗಳಿವೆ. ತಪ್ಪುದಾರಿ ತೋರುವ ಸಂಸ್ಥೆಗಳೂ ಇವೆ. ಅವುಗಳ ಬಗ್ಗೆ ಎಚ್ಚರದಿಂದ ಇಟ್ಟುಕೊಂಡು ಸರಿಯಾದ ಮಾರ್ಗದರ್ಶನ ನೀಡುವ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಪರೀಕ್ಷೆ ಬರೆದರೂ ಉತ್ತೀರ್ಣರಾಗದೇ ಇದ್ದರೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಜ್ಞಾನ ಹೆಚ್ಚಾಗಿರುತ್ತದೆ. ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಇದು ಪೂರಕವಾಗುತ್ತದೆ. ಅರ್ಜಿ ಸಲ್ಲಿಸಿದವರಲ್ಲಿ ಕೆಲವರು ಉತ್ತೀರ್ಣರಾಗಿರುತ್ತಾರೆ. ಅವರಷ್ಟೇ ಬುದ್ಧಿವಂತರು ಎಂದು ತಿಳಿದುಕೊಳ್ಳಬೇಡಿ. ಅರ್ಜಿ ಸಲ್ಲಿಸದ, ಪರೀಕ್ಷೆ ಬರೆಯದೆ ಹೊರಗೆ ಇರುವವರಲ್ಲಿ ಬಹಳ ಮಂದಿ ಬುದ್ಧಿವಂತರಿರುತ್ತಾರೆ’ ಎಂದರು.

‘ಬದ್ಧತೆ, ಕಠಿಣ ಪರಿಶ್ರಮ ಮತ್ತು ಆಶಾವಾದ ಬಹಳ ಮುಖ್ಯ. ಹನುಮಂತಪ್ಪ ಎಂಬುವವರೊಬ್ಬರು ಐಎಎಸ್ ಮಾಡಲೇಬೇಕು ಎಂದು ದೆಹಲಿಯಲ್ಲಿ ರೂಂ ಮಾಡಿಕೊಂಡು ಓದುತ್ತಿದ್ದರು. ಐದು ಬಾರಿ ಪರೀಕ್ಷೆ ಬರೆದರೂ ಉತ್ತೀರ್ಣರಾಗಲಿಲ್ಲ. ಅವರ ರೂಂನಲ್ಲಿ ತಾತ್ಕಾಲಿಕವಾಗಿ ಉಳಿದುಕೊಂಡು ಓದಿ, ಹಲವು ಮಂದಿ ಐಎಎಸ್‌ ಮಾಡಿಕೊಂಡು ಹೋದರು. ಹೀಗಾಗಿ ಉತ್ತೀರ್ಣರಾಗದೇ ಇದ್ದರೂ ಅದರ ಬಗ್ಗೆ ಯೋಚಿಸದೇ ಮುಂದಿನ ಬದುಕಿನ ಬಗ್ಗೆ ಚಿಂತನೆ ನಡೆಸಬೇಕು. ಪರೀಕ್ಷೆ ಪಾಸ್‌ ಆದ ಮೇಲೂ ಅಲ್ಲಿಗೆ ಹೋಗಲ್ಲ, ಇಲ್ಲಿಗೆ ಹೋಗಲ್ಲ, ಅಲ್ಲಿಯೂ ಊಟ ಸರಿಯಾಗಲ್ಲ, ಇಲ್ಲಿಯ ವಾತಾವರಣ ಹೊಂದಲ್ಲ ಎಂದೆಲ್ಲ ನಿಮಗೆ ನೀವೇ ಗೋಡೆ ನಿರ್ಮಿಸಿಕೊಳ್ಳಬೇಡಿ. ಮೊದಲು ತಲೆಯೊಳಗಿನ ಇಂತಹ ನಕಾರಾತ್ಮಕ ಅಂಶಗಳನ್ನು ಕಿತ್ತೆಸೆಯಿರಿ’ ಎಂದು ಸಲಹೆ ನೀಡಿದರು.

ವಿಷಯದಲ್ಲಿ ಅಳವಾದ ಅಧ್ಯಯನ ಇರಲಿ
ದಾವಣಗೆರೆ:
ಸ್ಪರ್ಧಾತ್ಮಕ ಪರೀಕ್ಷೆಗಳ ಕನಸು ಹೊತ್ತು, ಐಎಎಸ್‌, ಐಪಿಎಸ್ ಆಗಬೇಕೆಂಬ ಆಕಾಂಕ್ಷೆಯಿಂದ ನೂರಾರು ಯುವ ಮನಸುಗಳು ಅಲ್ಲಿ ಸೇರಿದ್ದವು.ಐಎಎಸ್‌, ಐಪಿಎಸ್‌ನಂತಹ ಉನ್ನತ ಹುದ್ದೆಗೇರಲು ಏನೆಲ್ಲಾ ಪಯತ್ನ ಮಾಡಬೇಕು ಎನ್ನುವುದನ್ನು ಅರಿಯಲು ಹಾಗೂ ಅಧಿಕಾರಿಗಳ ಅನುಭವದ ಮಾತು ಕೇಳಲು ನಗರದಲ್ಲಿ ಕುವೆಂಪು ಕನ್ನಡ ಭವನದಲ್ಲಿ ನೂರಾರುಐಎಎಸ್‌, ಐಪಿಎಸ್ ಆಕಾಂಕ್ಷಿಗಳು ಸೇರಿದ್ದರು.

ಸಂಪನ್ಮೂಲ ವ್ಯಕ್ತಿಗಳು ಅವರಿಗೆ ಮಾರ್ಗದರ್ಶನ ಮಾಡಿ, ಅವರ ಸಂದೇಹ ನಿವಾರಿಸುವ ಪ್ರಯತ್ನ ಮಾಡಿದರು. ಬಂದಿದ್ದವರು ಹೊಸ ಭರವಸೆಗಳೊಂದಿಗೆ ಹೆಜ್ಜೆ ಹಾಕಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವು ಬೆಂಗಳೂರಿನ ಇನ್‌ಸೈಟ್‌ ಐಎಎಸ್‌ ಸಂಸ್ಥೆ ಸಹಯೋಗದಲ್ಲಿನಗರದ ಕುವೆಂಪು ಕನ್ನಡ ಭವನದಲ್ಲಿ ಐಎಎಸ್‌, ಐಪಿಎಸ್‌ ಆಕಾಂಕ್ಷಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ‘ಗೈಡಿಂಗ್‌ ಫೋರ್ಸ್‌’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯ ಇದು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಗಾಯತ್ರಿ ದೇವರಾಜ, ‘ಯಾವುದೇ ವಿಷಯದಲ್ಲಿ ಆಳವಾದ ಅಧ್ಯಯನ ಅಗತ್ಯ. ಎಲ್ಲ ವಿಷಯಗಳನ್ನು ಅಪೂರ್ಣವಾಗಿ ತಿಳಿದುಕೊಳ್ಳುವ ಬದಲು ಒಂದೇ ವಿಷಯದತ್ತ ಕೇಂದ್ರೀಕರಿಸಬೇಕು’ ಎಂದರು.

ಐಎಎಸ್‌, ಐಪಿಎಸ್‌ ಅಧಿಕಾರಿಯಾಗುವುದು ಸವಾಲಿನ ಕೆಲಸ. ಬಡವರಿಗೆ, ಅಗತ್ಯ ಇರುವವರಿಗೆ ಆಡಳಿತ ಮೂಲಕ ನೆರವಾಗಲು ಸಹಕಾರಿಯಾದ ಇಂತಹ ಉನ್ನತ ಕೆಲಸಕ್ಕೆ ಅಪಾರ ಗೌರವವಿದೆ. ಹಾಗಾಗಿ ಹೆಚ್ಚಿನವರು ಇದರತ್ತ ಆಕರ್ಷಿತರಾಗುತ್ತಾರೆ. ಆದರೆ, ಈ ಹುದ್ದೆ ಅದೃಷ್ಟದಿಂದ ಸಿಗುವುದಿಲ್ಲ. ಕಠಿಣ ಪರಿಶ್ರಮದಿಂದ ಇಂತಹ ಉನ್ನತ ಹುದ್ದೆಗೇರುವ ಕನಸು ನನಸು ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿ‌ದರು.

‘ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಬಹುದು. ಆದರೆ, ವಿಚಾರವಂತರನ್ನಾಗಿ ಮಾಡುವುದು ಕಷ್ಟದ ಕೆಲಸ.ಅಕ್ಷರಸ್ಥರನ್ನು ವಿಚಾರವಂತರನ್ನಾಗಿ ಮಾಡುವುದೇ ಇಂತಹ ಕಾರ್ಯಕ್ರಮಗಳ ಉದ್ದೇಶ.ಐಎಎಸ್‌, ಐಪಿಎಸ್‌ನಂತಹ ಕನಸಿಗೆ ನೀರೆರೆಯುವ ಕೆಲಸ ಮಾಡುತ್ತಿರುವ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ನ ಸಾಮಾಜಿಕ ಕಾಳಜಿ ಶ್ಲಾಘನೀಯ’ ಎಂದು ಹೇಳಿದರು.

‘ಭಯವನ್ನು ಬಿಟ್ಟು ಹೊರಬನ್ನಿ. ಭಯವೆಂಬ ಅಂಧಕಾರವನ್ನು ಓಡಿಸಿ ಜ್ಞಾನವೆಂಬ ಬೆಳಕನ್ನು ಪಡೆಯಿರಿ. ಸಾಧಕರನ್ನು ನಿಮ್ಮ ಸಾಧನೆಗೆ ಪ್ರೇರಣೆಯಾಗಿಸಿಕೊಳ್ಳಿ. ಹೊಗಳಿಕೆಗೆ ಮೈಮರೆಯಬೇಡಿ. ನನ್ನಿಂದ ಆಗದು ಎಂಬುದನ್ನು ಬಿಟ್ಟು ಸವಾಲು ಎದುರಿಸಲು ಸಿದ್ಧರಾಗಿ’ ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ‘ಪ್ರಜಾವಾಣಿ’ ಬ್ಯುರೊ ಮುಖ್ಯಸ್ಥ ವಿಶಾಖ ಎನ್‌., ‘ಒಂದು ಕಟ್ಟಡ ಕಟ್ಟುವಾಗ ಅನೇಕ ಇಟ್ಟಿಗೆಗಳು ಬೆಂದು ಕಟ್ಟಡದ ಭಾಗವಾಗುವ ಹಾಗೆ ನಮ್ಮ ಬದುಕಿನಲ್ಲಿ ಅನೇಕ ಸಂಗತಿಗಳು ಇಟ್ಟಿಗೆಗಳಂತೆ ಕೆಲಸ ಮಾಡುತ್ತವೆ. ಕನಸನ್ನು ಕಟ್ಟಿ ಅದನ್ನು ಸಾಕಾರಗೊಳಿಸಲು ಅನೇಕ ಮಾಧ್ಯಮಗಳು ಸಹಕಾರಿಯಾಗುತ್ತವೆ. ಅದರಲ್ಲಿ ಪತ್ರಿಕೆಗಳೂ ಸೇರಿವೆ. ಪತ್ರಿಕೆಗಳು ಹಿಂದಿನಿಂದಲೂ ಸಾಮಾಜಿಕ ಚಳವಳಿಯ ಭಾಗವಾಗಿ ನಡೆದುಕೊಂಡು ಬಂದಿವೆ. ‘ಪ್ರಜಾವಾಣಿ’ ಕೂಡ ಅನೇಕ ಹೋರಾಟಗಳ ಭಾಗವಾಗಿ, ಸಾಮಾಜಿಕ ಕಳಕಳಿಯ ಅಸ್ಮಿತೆಯಾಗಿ, ರಾಜಕೀಯ ಸ್ಥಿತ್ಯಂತರಕ್ಕೆ ಕನ್ನಡಿ ಹಿಡಿಯುತ್ತಾ ಬಂದಿದೆ. ಇಂದಿಗೂ ಹಲವುಐಎಎಸ್‌, ಐಪಿಎಸ್‌ ಅಧಿಕಾರಿಗಳು ‘ಪ್ರಜಾವಾಣಿ’ಯನ್ನು ಉಲ್ಲೇಖಿಸುತ್ತಾರೆ. ಅದು ಸಂತಸ ತರುವ ವಿಷಯ. ‘ಗೈಡಿಂಗ್‌ ಫೋರ್ಸ್’‌ ಕಾರ್ಯಕ್ರಮಐಎಎಸ್‌, ಐಪಿಎಸ್ ಆಕಾಂಕ್ಷಿಗಳಿಗೆ ಮಾರ್ಗದರ್ಶಿ ಶಕ್ತಿವರ್ಧಕ ಇದ್ದಂತೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಇನ್‌ಸೈಟ್‌ ಐಎಎಸ್‌ ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ದೇಶಕ ವಿನಯಕುಮಾರ್‌ ಜಿ.ಬಿ., ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಪ್ರದೀಪ್‌ಕುಮಾರ್‌, ಶಮಂತಗೌಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ವಿದ್ಯಾರ್ಥಿನಿ ಅಂಜಲಿ ಎಂ. ಪ್ರಾರ್ಥಿಸಿದರು. ಬಾಲಕೃಷ್ಣ ಪಿ.ಎಚ್‌. ಕಾರ್ಯಕ್ರಮ ನಿರೂಪಿಸಿದರು. ‘ಪ್ರಜಾವಾಣಿ’ ದಾವಣಗೆರೆ ಪ್ರಸರಣ ವಿಭಾಗದ ವ್ಯವಸ್ಥಾಪಕ ಪ್ರಕಾಶ್‌ ಎಸ್‌., ಬೆಂಗಳೂರು ವಿಭಾಗದ ಪ್ರಸರಣ ವ್ಯವಸ್ಥಾಪಕ ಮುರಳಿ, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ಪ್ರಮೋದ್‌ ಭಾಗವತ್‌, ಮುದ್ರಣ ವಿಭಾಗದ ವ್ಯವಸ್ಥಾಪಕ ಮುರಳೀಧರ ಟಿ., ‘ಡೆಕ್ಕನ್ ಹೆರಾಲ್ಡ್‌’ನ ಹಿರಿಯ ವರದಿಗಾರ ಎಸ್‌.ಕೆ.ನೃಪತುಂಗ ಇದ್ದರು.

‘ಐಎಎಸ್‌ ಕಬ್ಬಿಣದ ಕಡಲೆ ಅಲ್ಲ’
ಇನ್‌ಸೈಟ್‌ ಐಎಎಸ್‌ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಪ್ರದೀಪ್‌ಕುಮಾರ್‌, ಆಕಾಂಕ್ಷಿಗಳಲ್ಲಿರುವ ಸಾಮಾನ್ಯ ಪ್ರಶ್ನೆಗಳು ಯಾವುವು ಎಂಬುದನ್ನು ತಿಳಿಸಿ ಅದಕ್ಕೆ ಉತ್ತರವನ್ನೂ ನೀಡಿದರು.

‘ನಾನು ಗ್ರಾಮೀಣ ಭಾಗದವನು. ಕನ್ನಡ ಮಾಧ್ಯಮದವನು. ನನಗೆ ಐಎಎಸ್‌ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಸಹಜ. ಆದರೆ, ಹಳ್ಳಿಯಿಂದ ಬಂದವರೇ ಹಲವು ಸಾಧನೆ ಮಾಡಿದ್ದಾರೆ. ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಜಾಣ್ಮೆ ಹಾಗೂ ತಾಳ್ಮೆ ಇರುವುದು ಹಳ್ಳಿಗರಲ್ಲೇ’ ಎಂದು ಹುರಿದುಂಬಿಸಿದರು.

‘ಕರ್ಣ, ಏಕಲವ್ಯ ಹಲವು ಅವಮಾನ, ತಿರಸ್ಕಾರಗಳನ್ನು ಅನುಭವಿಸಿದರೂ ಗುರಿಯನ್ನಿಟ್ಟುಕೊಂಡು ಸಾಧನೆ ಮಾಡಿದರು ಎಂಬುದನ್ನು ಮರೆಯಬೇಡಿ’ ಎಂದು ಉದಾಹರಣೆಗಳ ಮೂಲಕ ತಿಳಿಸಿದರು.

‘ಐಎಎಸ್‌ ಕಬ್ಬಿಣದ ಕಡಲೆ ಅಲ್ಲ.ಛಲ, ಶ್ರದ್ಧೆ, ಪರಿಶ್ರಮ ಇದ್ದರೆ ಯಾವುದೂ ಅಸಾಧ್ಯ ಅಲ್ಲ. ನನ್ನಲ್ಲಿ ಆಗುತ್ತದೆಯೋ ಇಲ್ಲವೋ ಎಂಬ ದ್ವಂದ್ವ ಬೇಡ’ ಎಂದರು.

ಐಎಎಸ್ ಮಾಡಲು ಬೆಂಗಳೂರು, ಹೈದರಾಬಾದ್‌, ದೆಹಲಿಗೇ ಹೋಗಬೇಕು ಎಂದೇನಿಲ್ಲ. ನೀವು ಇರುವಲ್ಲಿಯೇ ಕುಳಿತು ಕೋಚಿಂಗ್‌ ಸಂಸ್ಥೆಗಳ ಮೂಲಕ ಮಾರ್ಗದರ್ಶನ ಪಡೆಯಬಹುದು. ಇನ್‌ಸೈಟ್‌ ವೆಬ್‌ಸೈಟ್‌ ಕೂಡ ಇದೆ ಎಂದು ವಿವರಿಸಿದರು.

ಪರೀಕ್ಷೆಗೆ ತಯಾರಿ ಮುಖ್ಯ
‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ಮುಖ್ಯ. ಯಾವುದೇ ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆಯಿರಿ. ಆರ್ಥಿಕತೆ, ಬೇರೆ ಪರಿಸರಕ್ಕೆ ಹೋಗಬೇಕು ಎಂಬುದರ ಬಗ್ಗೆ ಚಿಂತೆ ಮಾಡದೆ, ಸಾಧನೆ ಮಾಡುವ ಮನೋಭಾವ ಬೆಳೆಸಿಕೊಳ್ಳಿ. ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಚಿಕ್ಕವರಿದ್ದಾಗ ಕ್ರೀಡೆ, ಪಾಠ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಎಲ್ಲದರಲ್ಲೂ ಪಾಲ್ಗೊಳ್ಳುವ ನಾವು ದೊಡ್ಡವರಾದ ಮೇಲೆ ಏಕೆ ಪರಿಶ್ರಮ ಪಡುವುದಿಲ್ಲ ಎಂಬುದನ್ನು ಅರಿಯಿರಿ. ಹವ್ಯಾಸಗಳು ವ್ಯಸನಗಳಾಗದಿರಲಿ. ಸಾಂದರ್ಭಿಕ ಪ್ರಜ್ಞೆ, ಪರಿಶ್ರಮ ಇರಲಿ’ ಎಂದುಇನ್‌ಸೈಟ್‌ ಐಎಎಸ್‌ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶಮಂತಗೌಡ ಸಲಹೆ ನೀಡಿದರು.

ಗಮನ ಸೆಳೆದ ಆಕಾಂಕ್ಷಿಗಳೊಂದಿಗೆ ಸಂವಾದ
ಕಾರ್ಯಕ್ರಮದಲ್ಲಿ ಹಲವು ಆಕಾಂಕ್ಷಿಗಳು ಪ್ರಶ್ನೆಗಳನ್ನು ಕೇಳಿ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತರ ಪಡೆದರು.

* ಸದ್ಯ ಕೃಷಿ ಕಾಯ್ದೆ ಬಗ್ಗೆ ಪರ–ವಿರೋಧ ಚರ್ಚೆಯಾಗುತ್ತಿದೆ. ಇಂತಹ ವಿಷಯಗಳ ಬಗ್ಗೆ ಐಎಎಸ್‌ ಪರೀಕ್ಷೆಯಲ್ಲಿ ಪ್ರಶ್ನೆ ಬಂದಾಗ ಹೇಗೆ ಬರೆಯಬೇಕು?
–ಕಲಂದರ್‌, ತುರ್ಚಘಟ್ಟ, ಐಎಎಸ್‌ ಆಕಾಂಕ್ಷಿ

ಜಿಲ್ಲಾಧಿಕಾರಿ: ಪರೀಕ್ಷೆಯಲ್ಲಿ ವಿವಾದಾತ್ಮಕ ವಿಷಯಗಳ ಬಗ್ಗೆ ಸಾಮಾನ್ಯವಾಗಿ ಪ್ರಶ್ನೆ ಕೇಳುವುದಿಲ್ಲ. ಆದರೆ, ಶಿಕ್ಷಣ, ಕೃಷಿ ಕಾಯ್ದೆಗಳು, ಪೌರತ್ವ ಕಾಯ್ದೆ ಇಂತಹ ವಿಷಯಗಳ ಬಗ್ಗೆ ಪ್ರಶ್ನೆ ಬರುತ್ತವೆ. ಅಂತಹ ಪ್ರಶ್ನೆಗಳು ನಿಮ್ಮ ವ್ಯಕ್ತಿತ್ವ ಪರೀಕ್ಷಿಸಲು ಕೇಳುತ್ತಾರೆ ವಿನಾ ಅದರ ಬಗ್ಗೆ ವಿವರಿಸಲು ಅಲ್ಲ.

ಆಗ ಕಾಯ್ದೆಗಳು ಏನು. ಅವುಗಳ ಸಾಧಕ–ಬಾಧಕಗಳ ಬಗ್ಗೆ ತಿಳಿಸಿ. ಕೊನೆಗೆ ನಿಮ್ಮ ನಿಲುವೂ ತಿಳಿಸಬೇಕು.

* ಕನ್ನಡ ಸಾಹಿತ್ಯ ವಿಶಾಲವಾಗಿದೆ. ಅಧ್ಯಾಯಗಳೂ ಹೆಚ್ಚಿವೆ. ಇದರ ಮೇಲೆ ಪ್ರಶ್ನೆ ಬಂದಾಗ ಉತ್ತರಿಸುವುದು ಹೇಗೆ?
– ಬಿಂದು ಎಸ್‌.ಬಿ.

ಪ್ರದೀಪ್‌ಕುಮಾರ್‌: ಕನ್ನಡದಲ್ಲಿ ಶೇ 75ರಷ್ಟು ಪ್ರಶ್ನೆಗಳು ಪ್ರತಿ ಪರೀಕ್ಷೆಯಲ್ಲೂ ಪುನರಾವರ್ತನೆಯಾಗಿರುತ್ತವೆ. ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಅಂಕ ಪಡೆಯಲು ಅವಕಾಶ ಇದೆ. ‘ವಡ್ಡಾರಾಧನೆ’ಯ ಯಾವುದಾದರೂ ಎರಡು ಅಧ್ಯಾಯ. ಪಂಪ, ಕುಮಾರವ್ಯಾಸ ಭಾರತದ ಕರ್ಣ ಪರ್ವ, ದಾಸರಲ್ಲಿ ಕನಕ, ಪುರಂದರ ದಾಸರ ಬಗ್ಗೆ ಪ್ರಶ್ನೆ ಬರುವುದು ಸಾಮಾನ್ಯ. ಮೌಲ್ಯಮಾಪಕರು ಕನ್ನಡದವರೇ ಆಗಿರುವುದರಿಂದ ಹೆಚ್ಚಿನ ಅಂಕ ಬರುವ ಸಾಧ್ಯತೆ ಇರುತ್ತದೆ.

* ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ ಅಡ್ಡಿಯಾಗುತ್ತದೆಯೇ?
–ಬಿಂದು ಎಸ್‌.ಬಿ.

ಜಿಲ್ಲಾಧಿಕಾರಿ: ಇಲ್ಲ. ಯಾವುದೇ ಆಗಲಿ, ನೀವು ಸ್ವೀಕರಿಸುವ ಮನೋಭಾವದಲ್ಲಿ ಇರುತ್ತದೆ. ಸೇವೆ ಮಾಡಲು ಬಂದಿದ್ದೇವೆ. ‌ಎನಗಿಂತ ಕಿರಿಯರಿಲ್ಲ ಎಂಬ ಭಾವನೆಯಿಂದ ಕೆಲಸ ಮಾಡಿದರೆ ಯಾವುದೇ ಪ್ರಭಾವಕ್ಕೆ ಒಳಗಾಗಬೇಕಿಲ್ಲ.

* ಸಾಮಾನ್ಯರಿಗೆ ಒಂದು ದಿನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ನೀಡಲು ಸಾಧ್ಯವೇ?
– ಕುಮಾರ್‌, ದಾವಣಗೆರೆ

ಜಿಲ್ಲಾಧಿಕಾರಿ: ಇಲ್ಲ. ಅದು ಆಗದ ಮಾತು. ಇಂತಹ ಆಸೆಗಳನ್ನು ಅಣಕು ಸಂಸತ್‌ ರೀತಿಯ ಕಾರ್ಯಕ್ರಮದಲ್ಲಿ ನನಸು ಮಾಡಿಕೊಳ್ಳಬಹುದು.

ಆಕಾಂಕ್ಷಿಗಳು ಏನಂತಾರೆ?
ಮಾರ್ಗದರ್ಶನವಿಲ್ಲದೆ ಯಾವುದೇ ಪರೀಕ್ಷೆ ಎದುರಿಸುವುದು ಕಷ್ಟ ಎಂಬುದನ್ನು ತಿಳಿಸಿದ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’, ‘ಇನ್‌ಸೈಟ್ ಐಎಎಸ್‌’ ಸಂಸ್ಥೆಗಳಿಗೆ ಧನ್ಯವಾದಗಳು. ಜ್ಞಾನಕ್ಕಿಂತ ವಿಚಾರ ಮುಖ್ಯ ಎಂಬುದು ಈ ಕಾರ್ಯಕ್ರಮದಿಂದ ತಿಳಿಯಿತು.
– ಬಿಂದು ಎಸ್.ಬಿ.

ಐಎಎಸ್ ಪರೀಕ್ಷೆಯ ಐಚ್ಛಿಕ ವಿಷಯಗಳನ್ನು ಹೇಗೆ ಆಯ್ಕೆ ಮಾಡಬೇಕು ಎಂಬ ಅರಿವು ಮೂಡಿತು. ತರಬೇತಿ ಪಡೆಯಬೇಕೇ? ಬೇಡವೇ ಎಂಬ ಗೊಂದಲ ಈ ಕಾರ್ಯಕ್ರಮದಿಂದ ಪರಿಹಾರವಾಯಿತು. ಸ್ಪಷ್ಟತೆ ಸಿಕ್ಕಿತು.
– ಅಂಜಲಿ

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಮಾತುಗಳು ನನಗೆ ಉನ್ನತಾಧಿಕಾರಿ ಆಗುವ ಉತ್ಸಾಹವನ್ನು ತುಂಬಿದೆ. ಅವರ ಮಾತುಗಳಿಂದ ನಾನೂ ತರಬೇತಿ ಪಡೆದು ಐಎಎಸ್‌ ಅಧಿಕಾರಿಯಾಗಬೇಕು ಎಂಬ ಆಸೆ ಹೆಚ್ಚಾಗಿದೆ.
– ಸಂದೀಪ್ ಡಿ.ಎಸ್.

ಐಎಎಸ್ ಪರೀಕ್ಷೆ ಎಂದರೆ ತುಂಬಾ ಕಠಿಣ ಎಂಬ ಭಯವಿತ್ತು. ಉತ್ತಮ ಮಾರ್ಗದರ್ಶನ ದೊರೆಯಿತು. ಪಠ್ಯ, ಹಳೆ ಪ್ರಶ್ನೆಪತ್ರಿಕೆಗಳ ಅಧ್ಯಯನ ಮಾಡುವುದರಿಂದ ಪರೀಕ್ಷೆಯನ್ನು ಸುಲಭ ಮಾಡಿಕೊಳ್ಳಬಹುದು ಎಂದೆನಿಸಿತು.
– ನಿಂಗರಾಜ್ ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT