ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆ.ಎಚ್‌. ಪಟೇಲ್‌ ಅಧ್ಯಯನ ಪೀಠವಾಗಲಿ

ಸೌಹಾರ್ದ ಸಂಭ್ರಮ’ ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ್
Last Updated 2 ಅಕ್ಟೋಬರ್ 2022, 4:43 IST
ಅಕ್ಷರ ಗಾತ್ರ

ದಾವಣಗೆರೆ: ಸರ್ಕಾರವು ಜೆ.ಎಚ್. ಪಟೇಲರ ಹೆಸರಲ್ಲಿ ಅಧ್ಯಯನಪೀಠ ಸ್ಥಾಪಿಸಬೇಕು. ಸಮಾಜವಾದಿ ಚಳವಳಿ, ಹೋರಾಟಗಳ ಬಗ್ಗೆ ಅಧ್ಯಯನ ಆ ಪೀಠದ ಮೂಲಕ ಆಗಬೇಕು ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ್ ಹೇಳಿದರು.

ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ 92ನೇ ಜನ್ಮ ದಿನದ ಪ್ರಯುಕ್ತ ಜೆ.ಎಚ್. ಪಟೇಲ್ ಅಭಿಮಾನಿ ಬಳಗದಿಂದ ಶನಿವಾರ ಇಲ್ಲಿನ ಶಿವಯೋಗಾಶ್ರಮದಲ್ಲಿ ನಡೆದ ‘ಸೌಹಾರ್ದ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಂತ ಆಸ್ತಿಯನ್ನೇ ಮಾರಿ ರಾಜಕಾರಣ ಮಾಡಿದವರು ಪಟೇಲರು. ಈಗ ಅಂಥ ರಾಜಕಾರಣಿಗಳು ಕಾಣಲು ಸಾಧ್ಯವಿಲ್ಲ. ಅಧಿಕಾರ ಸಿಕ್ಕಾಗ ಸಂವಿಧಾನ ಬದ್ಧವಾಗಿ ಕೆಲಸ ಮಾಡಿ ಆಡಳಿತವನ್ನು ಜನರ ಬಳಿಗೆ ತಂದವರು. ನೀರಾವರಿ ಬಗ್ಗೆ ವಿಶೇಷ ಆಸಕ್ತಿವಹಿಸಿ ಅದಕ್ಕಾಗಿ ಕಾರ್ಯ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ತಾಂತ್ರಿಕವಾಗಿಯೂ ಅನುಭವ ಹೊಂದಿದ್ದರು ಎಂದರು.

ಏಳು ಜಿಲ್ಲೆಗಳನ್ನು ಮಾಡುವ ಮೂಲಕ ಜನರ ಕಲ್ಯಾಣಕ್ಕಾಗಿ ಅಧಿಕಾರವನ್ನು ಹೇಗೆ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟರು. ಪಟೇಲರ ಚಿಂತನೆಗಳು ಹಾಗೂ ಈಗಿನ ರಾಜಕಾರಣಿಗಳ ಚಿಂತನೆಗಳಿಗೆ ಭಾರಿ ವ್ಯತ್ಯಾಸವಿದೆ. ಅವರು ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡ ನಿರ್ಧಾರ, ಯೋಜನೆ ಇಂದಿಗೂ ಮರೆಯುವಂತಿಲ್ಲ ಎಂದು ಶ್ಲಾಘಿಸಿದರು.

ಇಂದಿನ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಜನರಿಗೆ ಉದ್ಯೋಗ ಕೊಟ್ಟಿಲ್ಲ, ಸರ್ಕಾರಿ ನೌಕರಿ ಕೊಟ್ಟಿಲ್ಲ. ನೆಮ್ಮದಿ ಜೀವನ ನಡೆಸುವ ವಾತಾವರಣವೂ ಕಲ್ಪಿಸಲಿಲ್ಲ. ರೈತರ ಬದುಕು ಬೀದಿಗೆ ಬಂದರೂ ಸರ್ಕಾರ ಗಮನಿಸದೇ ಇರುವುದು ಖೇದಕರ ಸಂಗತಿ ಎಂದು ಕೆ.ಟಿ. ಗಂಗಾಧರ ಹೇಳಿದರು.

ಪ್ರಜಾಪ್ರಭುತ್ವ ಎಂದರೆ ಜನಸಾಮಾನ್ಯರಿಗೆ, ಜನಭಾಷೆಗಳಿಗೆ ಗೌರವ ಕೊಡುವುದಾಗಿದೆ. ಪಟೇಲ್‌ ಅವರು ಸಂಸತ್‌ನಲ್ಲಿ ಕನ್ನಡದಲ್ಲಿ ಮಾತನಾಡುವವರೆಗೆ ತಮಿಳು ಸಹಿತ ದಕ್ಷಿಣದ ರಾಜ್ಯಗಳ ಭಾಷೆಗಳಲ್ಲಿ ಮಾತನಾಡಿಯೇ ಇರಲಿಲ್ಲ. ಹಿಂದಿ ಇಲ್ಲವೇ ಇಂಗ್ಲಿಷ್‌ನಲ್ಲಿ ಮಾತ್ರ ಮಾತನಾಡುತ್ತಿದ್ದರು. ಪಟೇಲ್‌ ಕನ್ನಡದಲ್ಲಿ ಮಾತನಾಡಿದಾಗ ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಮತ್ತು ಸ್ಪೀಕರ್‌ ಆಗಿದ್ದ ನೀಲಂ ಸಂಜೀವ ರೆಡ್ಡಿ ‘ಇದು ಅವರ ಹಕ್ಕು’ ಎಂದು ಹೇಳಿದ್ದರು ಎಂದು ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ನೆನಪು ಮಾಡಿಕೊಂಡರು.

ಪಟೇಲರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಬಡವರ ಪರವಾಗಿ, ಎಲ್ಲ ಜಾತಿಯವರ ಪರವಾಗಿ ಹೋರಾಟ ಮಾಡಿದರು. ಎಲ್ಲ ವರ್ಗದವರಿಗೆ ಕಾರ್ಯಕ್ರಮ ರೂಪಿಸಿದರು. ಸಮಾಜವಾದಿ ಚಿಂತನೆಯ ಜಾತ್ಯತೀತವಾದಿ ಎಂದು ಹೇಳಿದರು.

ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ‘ತ್ಯಾವಣಿಗೆಯನ್ನು ತಾಲ್ಲೂಕನ್ನಾಗಿ ಮಾಡಬೇಕು ಎಂದು ಅಭಿಮಾನಿ ಬಳಗದ ಪರವಾಗಿ ಸರ್ಕಾರಕ್ಕೆ ಮನವಿ ಮಾಡಿದರು.

ಜೆ.ಎಚ್. ಪಟೇಲರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಾಲುಮರದ ತಿಮ್ಮಕ್ಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಪತ್ರಕರ್ತ ಎಸ್.ಆರ್. ಆರಾಧ್ಯ ಅವರು ಜೆ.ಎಚ್. ಪಟೇಲರ ವ್ಯಕ್ತಿತ್ವದ ವಿವಿಧ ಮಜಲುಗಳನ್ನು ಮೆಲುಕು ಹಾಕಿದರು.

ಜೆ.ಎಚ್‌. ಪಟೇಲರ ಸಹೋದರಿ ಅನಸೂಯಮ್ಮ, ಮಗ ಮಹಿಮಾ ಪಟೇಲ್‌ ಸಹಿತ ಹಲವರು ಇದ್ದರು. ಜೆ. ದಾದಾಪೀರ್‌, ದಾಗಿನಕಟ್ಟೆ ಪರಮೇಶ್‌, ಜಿ.ಸಿ. ಮಂಜುನಾಥ್‌ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮ ಆರಂಭವಾಗುವ ಮುನ್ನ ಶಾಸಕ ಎಂ.ಪಿ. ರೇಣುಕಾಚಾರ್ಯ ಶುಭಾಶಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಸೌಹಾರ್ದ ಕುರಿತ ಜಾಗೃತಿ ಗೀತೆಗಳನ್ನು ಹಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT