ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸೇವೆ ವ್ಯತ್ಯಯ: ರೋಗಿಗಳ ಪರದಾಟ

ಶಿಷ್ಯವೇತನಕ್ಕಾಗಿ ಜೆಜೆಎಂಸಿ ಕಾಲೇಜಿನ ಕಿರಿಯ ವೈದ್ಯರ ಧರಣಿ ಆರಂಭ
Last Updated 22 ಅಕ್ಟೋಬರ್ 2018, 14:30 IST
ಅಕ್ಷರ ಗಾತ್ರ

ದಾವಣಗೆರೆ: ಶಿಷ್ಯವೇತನ ಬಿಡುಗಡೆಗಾಗಿ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಇದರ ಪರಿಣಾಮ ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯಕೀಯ ಸೇವೆ ಲಭ್ಯವಾಗದೇ ರೋಗಿಗಳು ಪರದಾಡಬೇಕಾಯಿತು.

ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರ ಸಂಘದ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಧರಣಿ ನಡೆಸಿದ ಕಿರಿಯ ವೈದ್ಯರು, ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಜೀವ ಉಳಿಸುವ ವೈದ್ಯರು, ಜೀವ ಹಿಂಡುವ ಸರ್ಕಾರ’, ‘ಮೈಮೇಲೆ ಬಿಳಿ ಬಟ್ಟೆ, ಒಳಗೆ ಖಾಲಿ ಹೊಟ್ಟೆ’, ‘ವೈದ್ಯೋ ನಾರಾಯಣ ಹರಿ, ನಮ್ಮ ವೇತನಕ್ಕೆ ಕತ್ತರಿ’ ಎಂಬ ಘೋಷಣೆಗಳನ್ನು ಕೂಗಿದರು.

ಸಂಘದ ಮುಖಂಡ ಡಾ. ಮನೀಶ್‌, ‘ಸರ್ಕಾರಿ ಕೋಟಾದಡಿ ಪ್ರವೇಶ ಪಡೆದ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದು, ಇದಕ್ಕಾಗಿ ಶಿಷ್ಯವೇತನ ನೀಡಲಾಗುತ್ತಿತ್ತು. ಆದರೆ, ಎಂಟು ತಿಂಗಳಿಂದ 235 ಜನರಿಗೆ ಶಿಷ್ಯವೇತನ ಕೊಟ್ಟಿಲ್ಲ. ಹಗಲು–ರಾತ್ರಿ ಆಸ್ಪತ್ರೆಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಜನರಿಗೆ ತೊಂದರೆ ಆಗದಿರಲಿ ಎಂದು ಇಷ್ಟು ದಿನ ಸಹಿಸಿಕೊಂಡಿದ್ದೆವು. ಅಕ್ಟೋಬರ್‌ 12ರಂದು 6 ಕಿ.ಮೀ ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದೆವು. ಹೀಗಿದ್ದರೂ ಅಧಿಕಾರಿಗಳು ಹಾಗೂ ಸಚಿವರು ಸ್ಪಂದಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸುತ್ತಲಿನ ನಾಲ್ಕೈದು ಜಿಲ್ಲೆಗಳಿಂದ ಚಿಗಟೇರಿ ಆಸ್ಪತ್ರೆಗೆ ನಿತ್ಯ ಸಾವಿರಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಆಸ್ಪತ್ರೆಯ 40 ಕಾಯಂ ವೈದ್ಯರಿಂದ ಇಷ್ಟೊಂದು ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ನಾವೂ ವೈದ್ಯಕೀಯ ಸೇವೆ ನೀಡುತ್ತಿರುವುದರಿಂದಲೇ ರೋಗಿಗಳನ್ನು ಉಪಚರಿಸಲು ಸಾಧ್ಯವಾಗುತ್ತಿದೆ. ಶೇ 90ರಷ್ಟು ವಿದ್ಯಾರ್ಥಿಗಳು ಶಿಷ್ಯವೇತನದ ಮೇಲೆ ಅವಲಂಬಿತರಾಗಿದ್ದಾರೆ. ಶಿಷ್ಯವೇತನ ಬಿಡುಗಡೆ ಮಾಡದೇ ಇರುವುದರಿಂದ ಶಿಕ್ಷಣ ಮುಂದುವರಿಸಲು ತೀವ್ರ ತೊಂದರೆಯಾಗಿದೆ’ ಎಂದು ಕಿರಿಯ ವೈದ್ಯ ಡಾ. ಚಂದನ್‌ ಕೆ.ಎಂ. ಅಳಲು ತೋಡಿಕೊಂಡರು.

ರೋಗಿಗಳ ಪಡಿಪಾಟಲು:ಬೆಳಿಗ್ಗೆಯಿಂದ ಆಸ್ಪತ್ರೆಯಲ್ಲಿ ಕಾಯ್ದರೂ ವೈದ್ಯರು ಬಂದು ಚಿಕಿತ್ಸೆ ನೀಡದೇ ಇರುವುದರಿಂದ ಸಿಟ್ಟಿಗೆದ್ದ ಕೆಲವು ರೋಗಿಗಳು ಧರಣಿ ನಿರತರ ಕಿರಿಯ ವೈದ್ಯರ ಬಳಿ ಬಂದು ವಾಗ್ವಾದ ನಡೆಸಿದರು. ತಮಗೆ ತೊಂದರೆಯಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಿರಿಯ ವೈದ್ಯರೂ ತಮ್ಮ ಸಂಕಟವನ್ನು ರೋಗಿಗಳ ಬಳಿ ಹೇಳಿಕೊಂಡರು.

‘ಜ್ವರಕ್ಕೆ ಔಷಧ ಪಡೆಯಲು ಬೆಳಿಗ್ಗೆ 9.30ಕ್ಕೆ ಆಸ್ಪತ್ರೆಗೆ ಬಂದಿದ್ದೆ. ಎರಡು ಗಂಟೆ ಕಳೆದರೂ ವೈದ್ಯರು ಸಿಕ್ಕಿಲ್ಲ. ಸಾಲಿನಲ್ಲಿ ನಿಂತು ಸುಸ್ತಾಗಿದೆ’ ಎಂದು ಬಾತಿಯ ಸುಧಾ ಅಳಲು ತೋಡಿಕೊಂಡರು.

‘ತಂದೆಯ ತೊಡೆಗೆ ಕಳೆದ ವಾರ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಭಾನುವಾರ ರಾತ್ರಿಯಿಂದ ರಕ್ತಸ್ರಾವವಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ್ದರೂ ಸೋಮವಾರ ಮಧ್ಯಾಹ್ನದವರೆಗೂ ವೈದ್ಯರು ಬಂದಿಲ್ಲ. ಕೇಳಿದರೆ, ಕಿರಿಯ ವೈದ್ಯರ ಮುಷ್ಕರ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ’ ಎಂದು ಸೊರಬ ತಾಲ್ಲೂಕಿನ ಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಮುಷ್ಕರ: ಚಿಕಿತ್ಸೆ ನೀಡಲು ವಿಳಂಬ

‘930 ಹಾಸಿಗೆಯ ಜಿಲ್ಲಾ ಆಸ್ಪತ್ರೆಗೆ ನಿತ್ಯ ಸರಾಸರಿ 2000 ಹೊರರೋಗಿಗಳು ಬರುತ್ತಾರೆ. 600ಕ್ಕೂ ಹೆಚ್ಚು ಒಳರೋಗಿಗಳು ಇರುತ್ತಾರೆ. 40ರಿಂದ 50 ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ನಮ್ಮಲ್ಲಿ 40 ಕಾಯಂ ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ನೆರವು ಪಡೆಯುತ್ತಿರುವುದರಿಂದ ಇಷ್ಟೊಂದು ಪ್ರಮಾಣದ ರೋಗಿಗಳನ್ನು ಉಪಚರಿಸಲು ಸಾಧ್ಯವಾಗುತ್ತಿತ್ತು. ಮುಷ್ಕರ ನಡೆಸುತ್ತಿರುವುದರಿಂದ 10 ವೈದ್ಯರು ತಪಾಸಣೆ ಮಾಡುತ್ತಿದ್ದ ರೋಗಿಗಳನ್ನು ಒಬ್ಬ ವೈದ್ಯ ನೋಡಬೇಕಾಗುತ್ತಿದೆ. ಹೀಗಾಗಿ ಚಿಕಿತ್ಸೆ ನೀಡುವಲ್ಲಿ ವಿಳಂಬವಾಗುತ್ತಿದೆ’ ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಎಚ್‌.ಡಿ. ನೀಲಾಂಬಿಕೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಯನ್ನು ನಿರ್ವಹಿಸಲು ಕಿರಿಯ ವೈದ್ಯರ ಸೇವೆ ತುರ್ತಾಗಿ ಅಗತ್ಯವಿದೆ. ಹೀಗಾಗಿ ಶಿಷ್ಯವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದೇವೆ’ ಎಂದು ಅವರು ಹೇಳಿದರು.

ಅಂಕಿ–ಅಂಶಗಳು

₹ 20,000 ಗೃಹ ವೈದ್ಯರಿಗೆ ತಿಂಗಳಿಗೆ ನೀಡುವ ಶಿಷ್ಯವೇತನ

₹ 30,000 ಮೊದಲನೇ ವರ್ಷದ ಪಿ.ಜಿ. ವಿದ್ಯಾರ್ಥಿಗಳ ಶಿಷ್ಯವೇತನ

₹ 35,000 ಎರಡನೇ ವರ್ಷದ ಪಿ.ಜಿ. ವಿದ್ಯಾರ್ಥಿಗಳ ಶಿಷ್ಯವೇತನ

₹ 40,000 ಮೂರನೇ ವರ್ಷದ ಪಿ.ಜಿ. ವಿದ್ಯಾರ್ಥಿಗಳ ಶಿಷ್ಯವೇತನ

* ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ವೈದ್ಯಕೀಯ ಸೇವೆ ಲಭ್ಯವಾಗದೇ ಇರುವುದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ.
– ಡಾ. ಚಂದನ್‌ ಕೆ.ಎಂ., ಕಿರಿಯ ವೈದ್ಯ

* ಶಿಕ್ಷಣ ಸಾಲ ಪಡೆದು ಅಧ್ಯಯನ ಮಾಡುತ್ತಿರುವ ಹಲವರು ಶಿಷ್ಯವೇತನವನ್ನೇ ನಂಬಿಕೊಂಡಿದ್ದಾರೆ. ಹೀಗಾಗಿ ಶೀಘ್ರವೇ ಬಿಡುಗಡೆ ಮಾಡಬೇಕು.
– ಡಾ. ಮನೀಶ್‌, ಕಿರಿಯ ವೈದ್ಯ

* ಕಾಲು ನೋವು, ತಲೆ ಸುತ್ತು ಬರುತ್ತದೆ ಆಸ್ಪತ್ರೆಗೆ ಬಂದಿದ್ದೆ. ಒಂದೂವರೆ ಗಂಟೆಯಿಂದ ಸಾಲಿನಲ್ಲಿ ನಿಂತು ವೈದ್ಯರಿಗಾಗಿ ಕಾಯುತ್ತಿದ್ದೇನೆ.
– ಚನ್ನಬಸಪ್ಪ, ವೃದ್ಧೆ, ಕೆಂಚನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT