ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಅನ್ನ ನೀಡುವ ಭಾಷೆಯನ್ನಾಗಿಸಿ: ಅರುಣಕುಮಾರಿ ಬಿರಾದಾರ

ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ
Last Updated 5 ಮೇ 2019, 11:26 IST
ಅಕ್ಷರ ಗಾತ್ರ

ದಾವಣಗೆರೆ: ‘ಕನ್ನಡ ಸಾಹಿತ್ಯ ಪರಿಷತ್ತು ಜಾಗತೀಕರಣದ ಸವಾಲುಗಳನ್ನು ಎದುರಿಸಿ ಕನ್ನಡ ಅನ್ನ ನೀಡುವ ಭಾಷೆಯನ್ನಾಗಿ ಮಾಡಲು ಸರ್ಕಾರದ ಗಮನ ಸೆಳೆದು ಯೋಜನೆ ರೂಪಿಸುವಂತೆ ಮಾಡಬೇಕು’ ಎಂದು ಸೀತಮ್ಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅರುಣಕುಮಾರಿ ಬಿರಾದಾರ ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲ್ಲೂಕು ಘಟಕ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರಿಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆ, ಸನ್ಮಾನ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಸಾಹಿತ್ಯವನ್ನು ಬಲಗೊಳಿಸಬೇಕು. ಜನರ ಕಷ್ಟಗಳಿಗೆ ಸ್ಪಂದಿಸುವ ಜೊತೆಗೆ ಕನ್ನಡವನ್ನು ಅನ್ನ ನೀಡುವ ಭಾಷೆಯನ್ನಾಗಿ ರೂಪಿಸುವ ಜವಾಬ್ದಾರಿ ಪರಿಷತ್ತಿನ ಮೇಲಿದೆ. ಯುವಕರ ಮನಸ್ಸಿಗೆ ಕನ್ನಡ ತಲುಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

‘ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅವರು ಅರ್ಹ ಕನ್ನಡಿಗರಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಕೊಡಿಸಲು ಪರಿಷತ್ತಿನ ವೆಬ್‌ಸೈಟ್‌ನಲ್ಲಿ ರೆಸ್ಯೂಮ್‌ ಹಾಕುವ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ವಿದ್ಯಾರ್ಥಿಗಳ ರೆಸ್ಯೂಮ್‌ ಅನ್ನು ವಿವಿಧ ಕಂಪನಿಗಳಿಗೆ ಕಳುಹಿಸಿ ಉದ್ಯೋಗ ಕೊಡಿಸುವ ಪ್ರಯತ್ನ ನಡೆಯುತ್ತಿದೆ. ಇದು ಯಶಸ್ವಿಯಾದರೆ ಅನ್ನ ನೀಡುವ ಕೆಲಸ ಸಾಕಾರಗೊಂಡಂತಾಗುತ್ತದೆ’ ಎಂದು ಹೇಳಿದರು.

ಕನ್ನಡ ಕಾರ್ಯಕ್ರಮಗಳಿಗೆ ಜನ ಬರುವುದಿಲ್ಲ ಎಂಬ ಕೊರಗು ಇದೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಹೆಚ್ಚು ಜನರನ್ನು ತಲುಪಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಸಾಗಿ ಬಂದ ಕುರಿತು ಪಕ್ಷಿನೋಟ ಕಟ್ಟಿಕೊಟ್ಟ ಅರುಣಕುಮಾರಿ, ‘ಪರಿಷತ್ತು ಇಂದಿಗೂ ಸ್ವಂತಿಕೆ ಉಳಿಸಿಕೊಂಡಿದೆ. ಯಾವುದೇ ಮುಲಾಜಿಗೆ ಒಳಗಾಗದೇ ದಿಟ್ಟ ಚಿಂತನೆಗಳನ್ನು ಸರ್ಕಾರಕ್ಕೆ ತಲುಪಿಸುವ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ, ‘ಪರಿಷತ್ತು ಕನ್ನಡಿಗರ ಸ್ವಾಭಿಮಾನದ ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಹಲವು ಸಮಾಜಮುಖಿ ಕೆಲಸಗಳನ್ನೂ ಮಾಡುತ್ತಿದೆ’ ಎಂದು ಹೇಳಿದರು.

‘1915ರ ಮೇ 5ರಂದು ನಾಲ್ವಡಿ ಕೃಷ್ಣರಾಜ ಒಡೆಯರ ನೇತೃತ್ವದಲ್ಲಿ ಪರಿಷತ್ತು ಆರಂಭಗೊಂಡಿತು. 1995ರಿಂದ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ. ಪರಿಷತ್ತು 3 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಇದುವರೆಗೆ ಒಟ್ಟು 17 ತಿದ್ದುಪಡಿಗಳನ್ನು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭ್ರಷ್ಟಾಚಾರ ನಿಗ್ರಹ ದಳದ ಜಿಲ್ಲಾ ವರಿಷ್ಠಾಧಿಕಾರಿಯಾಗಿ ನಿವೃತ್ತರಾದ ಸಾಹಿತಿ ಜಿ.ಎ. ಜಗದೀಶ್‌ ಹಾಗೂ ವರ್ಗಾವಣೆಗೊಂಡ ‘ಪ್ರಜಾವಾಣಿ’ಯ ಹಿರಿಯ ಛಾಯಾಗ್ರಾಹಕ ಅನೂಪ್‌ ಆರ್‌. ತಿಪ್ಪೇಸ್ವಾಮಿ ಅವರನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.

ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಎ.ಆರ್‌. ಉಜ್ಜಿನಪ್ಪ, ಬಿ.ಎಂ. ಸದಾಶಿವಪ್ಪ ಶ್ಯಾಗಲೆ, ಪ್ರೊ. ಎಸ್‌.ಬಿ. ರಂಗನಾಥ್‌, ತಾಲ್ಲೂಕು ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಹಾಜರಿದ್ದರು.

ವಿನೂತನ ಮಹಿಳಾ ಸಮಾಜದ ಸದಸ್ಯರು ನಾಡಗೀತೆ ಹಾಡಿದರು. ಬಿ. ದಿಳ್ಯಪ್ಪ ಸ್ವಾಗತಿಸಿದರು. ಎನ್‌.ಎಸ್‌. ರಾಜು ನಿರೂಪಿಸಿದರು.

ಈಚೆಗೆ ನಿಧನರಾದ ರಂಗಕರ್ಮಿ ಮಾಸ್ಟರ್‌ ಹಿರಣ್ಣಯ್ಯ ಅವರಿಗೆ ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

‘ಹಿರಣ್ಣಯ್ಯಗೆ ಮಾತೇ ಬಂಡವಾಳ’

‘ಮಾಸ್ಟರ್‌ ಹಿರಣ್ಣಯ್ಯ ಅವರು ಶಾಶ್ವತವಾಗಿ ವಿರೋಧ ಪಕ್ಷದ ನಾಯಕರಂತೆ ಕಾರ್ಯನಿರ್ವಹಿಸಿದ್ದಾರೆ. ಅವರೊಬ್ಬ ಮಾತಿನ ಚಾಟಿ ಬೀಸಿ ಜನರನ್ನು ಬೆಚ್ಚಿ ಬೀಳಿಸುತ್ತಿದ್ದ ಮಾತುಗಾರ ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌ ಸ್ಮರಿಸಿದರು.

‘ಹಿರಣ್ಣಯ್ಯ ಅವರಿಗೆ ಮಾತೇ ಜೀವಾಳ; ಮಾತೇ ಬಂಡವಾಳವಾಗಿತ್ತು. ಅವರ ಮಾತು ಕತ್ತಿಯಂತೆ ಹರಿತವಾಗಿತ್ತು. ಮಾತಿನಿಂದಲೇ ನಾಟಕದ ಪ್ರಕಾರ ಸೃಷ್ಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ನುಡಿನಮನ ಸಲ್ಲಿಸಿದರು.

‘ಪೊಲೀಸ್‌ ಅಧಿಕಾರಿಗಳೆಂದರೆ ದರ್ಪದ ಚಿತ್ರಣ ಕಣ್ಣಿನ ಮುಂದೆ ಬರುತ್ತದೆ. ಆದರೆ, ಜಿ.ಎ. ಜಗದೀಶ್‌ ಅವರು ವಿನಯ ಸ್ವಭಾವದಿಂದ ತಮ್ಮದೇ ಆದ ಚಿತ್ರಣವನ್ನು ಕಟ್ಟಿಕೊಂಡಿದ್ದರು. ಜನಸ್ನೇಹಿ ಪೊಲೀಸ್‌ ಅಧಿಕಾರಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ’ ಎಂದು ಅಭಿನಂದನಾ ನುಡಿಗಳನ್ನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT