ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲೆಯಲ್ಲಿ ರಂಗೇರದ ಚುನಾವಣಾ ಕಣ

ಪ್ರತಿಸ್ಪರ್ಧಿಗಾಗಿ ಕಾಯುತ್ತಿರುವ ಕಾಂಗ್ರೆಸ್‌ l ಅಭ್ಯರ್ಥಿಗಾಗಿ ಕಾಯುತ್ತಿರುವ ಬಿಜೆಪಿ
Last Updated 2 ಏಪ್ರಿಲ್ 2023, 5:15 IST
ಅಕ್ಷರ ಗಾತ್ರ

ದಾವಣಗೆರೆ: ಚುನಾವಣೆ ಘೋಷಣೆಯಾಗಿ ಮೂರು ದಿನ ಕಳೆದರೂ ಚುನಾವಣಾ ಕಣ ಇನ್ನೂ ರಂಗೇರಿಲ್ಲ. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಂತಿಮಗೊಂಡಿದ್ದರೂ ಪ್ರತಿಸ್ಪರ್ಧಿ ಯಾರು ಎಂದು ಗೊತ್ತಾಗದೇ ಕಾಯುತ್ತಿದ್ದಾರೆ. ಪ್ರಚಾರ ಕೈಗೊಳ್ಳಲು ತಾವು ತಯಾರಾಗಿದ್ದರೂ ಅಭ್ಯರ್ಥಿ ಯಾರು ಎಂಬುದು ಇನ್ನೂ ಬಹಿರಂಗಗೊಳ್ಳದಿರುವುದು ಬಿಜೆಪಿ ಕಾರ್ಯಕರ್ತರನ್ನು ಚಿಂತೆಗೀಡು ಮಾಡಿದೆ. ಜೆಡಿಎಸ್‌ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದರೂ ಪ್ರಚಾರದ ಬಿರುಸು ಕಾಣುತ್ತಿಲ್ಲ.

‘ನಮ್ಮ ಪಕ್ಷ ಸಂಘಟನೆ ಬಲಿಷ್ಠವಾಗಿದೆ. ಪಕ್ಷದ ಹೆಸರಲ್ಲಿ ಪ್ರಚಾರ ನಡೆಯುತ್ತಿದೆ. ಮನೆ ಮನೆಗೆ ತಲುಪಲಾಗಿದೆ. ಆದರೆ, ಅಭ್ಯರ್ಥಿ ಘೋಷಣೆಯಾಗದೇ ರಂಗು ಕಾಣಲು ಸಾಧ್ಯವಿಲ್ಲ. ಏಪ್ರಿಲ್‌ 8 ಅಥವಾ 10ರಂದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಅಲ್ಲಿಂದ ಕಣಗಳು ರಂಗೇರಲಿವೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪ್ರತಿಸ್ಪರ್ಧಿ ಗೊತ್ತಾಗದ ಕಾರಣ ರಂಗು ಕಾಣದೇ ಇರಬಹುದು. ನಮ್ಮ ಕಡೆಯಿಂದ ಪ್ರಚಾರಗಳು ನಡೆಯುತ್ತಿವೆ. ದಾವಣಗೆರೆ ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳಲ್ಲಿ ಅನೇಕ ಸಭೆಗಳಾಗಿವೆ. ಜನರನ್ನು ಭೇಟಿ ಮಾಡಿ ಮತ ಕೇಳುತ್ತಿದ್ದೇವೆ. ಮಾಯಕೊಂಡ ಕ್ಷೇತ್ರದಲ್ಲಿಯೂ ಪ್ರಚಾರ ನಡೆಯುತ್ತಿದೆ. ಉಳಿದ ಕ್ಷೇತ್ರಗಳಿಗೆ ಇನ್ನು ಎರಡು–ಮೂರು ದಿನಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗಲಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್‌. ಮಲ್ಲಿಕಾರ್ಜುನ ತಿಳಿಸಿದರು.

‘ರಂಜಾನ್‌ ಉಪವಾಸ ಇರುವುದರಿಂದ ಅಲ್ಪಸಂಖ್ಯಾತ ಕಾರ್ಯಕರ್ತರು ಹಗಲು ಅಷ್ಟಾಗಿ ಪ್ರಚಾರ ಮಾಡುತ್ತಿಲ್ಲ. ರಾತ್ರಿ 7.30ರಿಂದ 10.30ರವರೆಗೆ ಪ್ರಚಾರ ಮಾಡುತ್ತಿದ್ದಾರೆ. ಹರಿಹರ ಕ್ಷೇತ್ರದಲ್ಲಿ 2013ರಲ್ಲಿ ಇದ್ದಂತೆ ಜೆಡಿಎಸ್‌ ಪರವಾಗಿ ಅಲೆ ಇದೆ. ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಬಗ್ಗೆ ಜನರಿಗೆ ಉತ್ಸಾಹ ಇಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆಯೇ ಪೈಪೋಟಿ ಇದೆ. ಉಳಿದ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಪ್ರಯತ್ನಿಸುತ್ತಿದ್ದೇವೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳ ಘೋಷಣೆಯಾದರೆ ಪ್ರಚಾರಕ್ಕೆ ಖದರು ಬರಲಿದೆ’ ಎಂದು ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಟಿ. ಅಸ್ಗರ್‌ ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲಲ್ಲಿ ಸೀರೆ, ಕುಕ್ಕರ್‌ ಇನ್ನಿತರ ವಸ್ತುಗಳನ್ನು ಹಂಚಿ ಆಮಿಷ ಒಡ್ಡುತ್ತಿರುವ ಪ್ರಕರಣಗಳು ಕಂಡು ಬಂದಿದ್ದರೂ ವಾಕ್ಸಮರಗಳು ಶುರುವಾಗಿಲ್ಲ. ಏಟು, ಪ್ರತಿಯೇಟು, ಒಳಯೇಟುಗಳು ಆರಂಭವಾಗಿಲ್ಲ. ಹೀಗಾಗಿ ಕಾರ್ಯಕರ್ತರಲ್ಲಿ ಇನ್ನೂ ಉತ್ಸಾಹ ಮೂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT