ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕೇಳಿ ಅಕ್ಕಿ ಕೊಡುವುದಾಗಿ ಘೋಷಿಸಿದ್ದೀರಾ?: ಶಾಸಕ ಹರೀಶ್ ಹೇಳಿಕೆಗೆ ಆಕ್ರೋಶ

Published 6 ಆಗಸ್ಟ್ 2023, 15:00 IST
Last Updated 6 ಆಗಸ್ಟ್ 2023, 15:00 IST
ಅಕ್ಷರ ಗಾತ್ರ

ದಾವಣಗೆರೆ: ಭಾನುವಾರ ಇಲ್ಲಿ ನಡೆದ ‘ಗೃಹಜ್ಯೋತಿ’ ಉದ್ಘಾಟನಾ ಸಮಾರಂಭದಲ್ಲಿ ‘ಅನ್ನಭಾಗ್ಯ’ ಯೋಜನೆಗೆ ಕೇಂದ್ರ ಅಕ್ಕಿ ನೀಡದೇ ಇರುವುದನ್ನು ಸಮರ್ಥಿಸಿದ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿದರು.

ಮಾಯಕೊಂಡದ ಕಾಂಗ್ರೆಸ್ ಶಾಸಕ ಕೆ.ಎಸ್. ಬಸವಂತಪ್ಪ ಅವರು ತಮ್ಮ ಭಾಷಣದಲ್ಲಿ ‘ಅನ್ನಭಾಗ್ಯ’ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಶಾಸಕ ಬಿ.ಪಿ. ಹರೀಶ್ ಅವರು ‘ನರೇಂದ್ರ ಮೋದಿ ಅವರನ್ನು ಕೇಳಿಯೇ ನೀವು 10 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಿಸಿದ್ದೀರಾ’ ಎಂದು ಪ್ರಶ್ನಿಸಿದಾಗ, ಸಭೆಯಲ್ಲಿ ಗದ್ದಲ ಉಂಟಾಯಿತು.

ತಕ್ಷಣವೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಹರೀಶ್‌ ಅವರಿಗೆ ಘೇರಾವ್ ಹಾಕಿದರು.

‘ನಾನು ನಿಮ್ಮ ಗರಡಿಯಲ್ಲೇ (ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು) ಪಳಗಿದವನು. ನೀವು ಗದ್ದಲ ಮಾಡುವುದನ್ನು ನಿಲ್ಲಿಸುವ ತನಕ ಮೈಕ್ ಬಿಟ್ಟು ಕದಲುವುದಿಲ್ಲ. ಇದು ಸರ್ಕಾರಿ ಕಾರ್ಯಕ್ರಮ ಎಂಬ ಎಚ್ಚರವಿರಲಿ. ಹೀಗೆ ಮಾಡುವುದಿದ್ದರೆ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲೇ ಬಾರದಿತ್ತು. ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ಬಸ್‌ಗಳಲ್ಲಿ ಸಂಚರಿಸಲು ವಿದ್ಯಾರ್ಥಿಗಳಿಗೆ ಜಾಗವಿಲ್ಲದಂತಾಗಿದೆ’ ಎಂದು ಏರುದನಿಯಲ್ಲೇ ಹೇಳಿದರು. ಈ ಸಂದರ್ಭ ಮತ್ತೆ 10–15 ನಿಮಿಷ ಗದ್ದಲ ಉಂಟಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಾಸಕರಾದ ಕೆ.ಎಸ್. ಬಸವಂತಪ್ಪ, ದೇವೇಂದ್ರಪ್ಪ ಸಮಾದಾನ ಮಾಡಿದರೂ ಗದ್ದಲ ನಿಲ್ಲಲಿಲ್ಲ. ಇದರಿಂದ ಬೇಸತ್ತ ಹರೀಶ್ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ, ವೇದಿಕೆಯಿಂದ ಹೊರಗಡೆ ಹೋಗಲು ಸಿದ್ಧವಾದರು. ಕೊನೆಗೆ ಸಚಿವ ಮಲ್ಲಿಕಾರ್ಜುನ್ ಮಧ್ಯಪ್ರವೇಶಿಸಿ ಮಾತನಾಡುವಂತೆ ಬಿ.ಪಿ. ಹರೀಶ್ ಅವರಿಗೆ ಸೂಚಿಸಿದರು.

‘ಯೋಜನೆಗಳಲ್ಲಿ ಕೆಲವು ಲೋಪಗಳಿವೆ. ವಿರೋಧ ಪಕ್ಷದವನಾಗಿ ಹೇಳುವುದು ನನ್ನ ಕರ್ತವ್ಯ. 5 ಗ್ಯಾರಂಟಿ ಯೋಜನೆಗಳು ದುಷ್ಟರ ಪಾಲಾಗಬಾರದು. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ, ಯಾವುದೇ ಸರ್ಕಾರವಿರಲಿ. ಬಡವರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗಬಾರದು. ನಿಗಾ ವಹಿಸಬೇಕು. ಯೋಜನೆಗಳು ಯಶಸ್ವಿಯಾಗಲೀ, ತಪ್ಪಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದ ಹರೀಶ್ ಭಾಷಣ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT