ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಟ್ ಖರೀದಿ: ತನಿಖೆಗೆ ಆಗ್ರಹ, ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ

Last Updated 1 ಡಿಸೆಂಬರ್ 2021, 5:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಟ್ಟಡ ಕಾರ್ಮಿಕರಿಗೆ ವಿತರಿಸಲು ಆಹಾರ ಕಿಟ್, ಸುರಕ್ಷಾ ಕಿಟ್, ಬೂಸ್ಟರ್‌ ಕಿಟ್‌ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡಿಲ್ಲ ಎಂದು ಆರೋಪಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ರಾಜ್ಯ ಮತ್ತು ಜಿಲ್ಲಾ ಸಮಿತಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕಿಟ್‌ಗಳ ಖರೀದಿಯಲ್ಲಿ ಸುಪ್ರೀಂ ಕೋರ್ಟ್‌, ಕೇಂದ್ರ ಕಾರ್ಮಿಕ ಇಲಾಖೆ ಹಾಗೂ ಮಂಡಳಿ ನಿಯಮ ಉಲ್ಲಂಘಿಸಲಾಗಿದೆ. ಕೂಡಲೇ ತನಿಖೆ ನಡೆಸಲು ಮುಂದಾಗಬೇಕು ಎಂದು ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ರವಾನಿಸಿದರು.

ಕೋವಿಡ್ ಲಾಕ್‌ಡೌನ್ ಪರಿಹಾರವಾಗಿ ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವ ₹ 3 ಸಾವಿರ ಪರಿಹಾರವನ್ನು ಅರ್ಜಿ ಸಲ್ಲಿಸಿರುವ ಎಲ್ಲರಿಗೂ ತ್ವರಿತವಾಗಿ ತಲುಪಬೇಕು. ವೈದ್ಯಕೀಯ ಸಹಾಯಧನ ₹ 5 ಲಕ್ಷಕ್ಕೆ ಹೆಚ್ಚಿಸಬೇಕು. ಮದುವೆ ಸಹಾಯಧನ ವಿಳಂಬ ಮತ್ತು ಬಾಂಡ್ ವಿತರಣೆಯಲ್ಲಿ ಆಗುತ್ತಿರುವ ವ್ಯತ್ಯಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‌ಪೀರ್, ‘ಕಾರ್ಮಿಕರ ಸಹಜ ಮರಣದ ಪರಿಹಾರ ಮೊತ್ತವನ್ನು ₹ 2 ಲಕ್ಷಕ್ಕೆ, ಅಪಘಾತದಿಂದ ಮೃತಪಟ್ಟಲ್ಲಿ ಪರಿಹಾರದ ಮೊತ್ತವನ್ನು ₹ 10 ಲಕ್ಷಕ್ಕೆ ಏರಿಕೆ ಮಾಡಬೇಕು. ಹೆರಿಗೆ ಭತ್ಯೆ ಕಾರ್ಮಿಕರ ಪತ್ನಿಯರಿಗೂ ನೀಡಬೇಕು. ಮನೆ ನಿರ್ಮಾಣಕ್ಕೆ ₹ 5 ಲಕ್ಷ ಸಹಾಯಧನ ನೀಡಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್‌ ಕಾರಣಕ್ಕೆ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರಿ ಕಟ್ಟಡ ಕಾಮಗಾರಿ ಹೊರತುಪಡಿಸಿ ಖಾಸಗಿಯಾಗಿ ಕಾರ್ಮಿಕರಿಗೆ ಹೆಚ್ಚೆಚ್ಚು ಕೆಲಸಗಳು ಸಿಗುತ್ತಿಲ್ಲ. ಹೊರ ರಾಜ್ಯದ ಗುತ್ತಿಗೆದಾರರು ಅಲ್ಲಿಂದಲೇ ಕಾರ್ಮಿಕರನ್ನು ಕರೆ ತರುತ್ತಿದ್ದು, ಜಿಲ್ಲೆಯ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ’ ಎಂದು ಅಸಮಧಾನ ವ್ಯಕ್ತಪಡಿಸಿದರು.

ಇಲ್ಲಿಯ ಕಾರ್ಮಿಕ ಇಲಾಖೆಯಲ್ಲಿ ಜೇಷ್ಠತೆ ಪರಿಪಾಲನೆ ಮಾಡದಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಪ್ರತಿ ತಾಲ್ಲೂಕಿನಲ್ಲಿಯೂ ಕಾರ್ಮಿಕ ನಿರೀಕ್ಷಕರನ್ನು ನೇಮಿಸಬೇಕು. ಇಲಾಖೆಯಲ್ಲಿ ದಲ್ಲಾಳಿಗಳ ಕಾಟ ಜಾಸ್ತಿಯಾಗಿರುವುದನ್ನು ನಿಯಂತ್ರಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕಟ್ಟಡ ಕಾರ್ಮಿಕರ ಸಂಘಟನೆಗಳ ಮುಖಂಡರ ಸಭೆ ಕರೆಯಬೇಕು ಎಂದು ಕೋರಿದರು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ನಾಗರಾಜಚಾರಿ, ಮಹಿಳಾ ಅಧ್ಯಕ್ಷೆ ಸಣ್ಣಮ್ಮ, ಶೇಖ್ ಕಲೀಂ ಉಲ್ಲಾ, ಜಿಕ್ರಿಯಾ, ದೇವರಾಜ್, ಸಮೀವುಲ್ಲಾ, ತಿಪ್ಪೇಸ್ವಾಮಿ, ಸೈಯದ್ ಖಲಂದರ್, ದೇವಿ ಕರಿಯಪ್ಪ, ಗಿರಿಜಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT