ಮಾಯಕೊಂಡ: ಪ್ರಯೋಗಾತ್ಮಕ ಕೃಷಿಗೆ ಒತ್ತುಕೊಡುತ್ತ ಅಡಿಕೆ ನಡುವೆ ಸೀಬೆ (ಪೇರಲ) ಬೆಳೆದು, ನಿರಂತರ ಆದಾಯ ಪಡೆಯುವ ಮೂಲಕ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ ಮಾಯಕೊಂಡ ಗ್ರಾಮದ ರೈತ ಶರತ್ ಬಾಬು.
ತಮ್ಮ ಎರಡು ಎಕರೆ ಜಮೀನಿನಲ್ಲಿ ಅಡಿಕೆ ಬೆಳೆಯುವ ನಿರ್ಧಾರ ಮಾಡಿದ್ದ ಇವರು, ಫಸಲಿಗೆ ಐದಾರು ವರ್ಷ ಕಾಯಬೇಕೆಂಬುದನ್ನು ಅರಿತು ಅಂತರ ಬೆಳೆ ಬೆಳೆಯುವ ಬಗ್ಗೆ ಯೋಚಿಸಿದರು. ಮೊದಲು ಥೈವಾನ್ ಪಿಂಕ್ ತಳಿಯ ಪೇರಲ ಸಸಿಗಳನ್ನು ಆಂಧ್ರದಿಂದ ತಂದು, ಡಿಗ್ಗರ್ ಮೂಲಕ ಗುಂಡಿ ತೆಗೆಸಿ ಅದಕ್ಕೆ ಕಾಂಪೋಸ್ಟ್ ಗೊಬ್ಬರ ತುಂಬಿಸಿ, ನಾಟಿ ಮಾಡಿದರು. ಡ್ರಿಪ್ ಮೂಲಕ ಸಸಿಗಳಿಗೆ ನೀರುಣಿಸಿದರು. ತಜ್ಞರ ಸಲಹೆಯಂತೆ ಗೊಬ್ಬರ, ನೀರು, ಕೀಟನಾಶಕ ಸಿಂಪಡಿಸಿದರು. ಇದಕ್ಕೆ ತಗುಲಿದ್ದು ₹ 3 ಲಕ್ಷ ಖರ್ಚು.
ಸಸಿ ನಾಟಿ ಮಾಡಿದ ವರ್ಷಕ್ಕೆ ಫಸಲು ಬರಲು ಪ್ರಾರಂಭವಾಯಿತು. ನಂತರದ ದಿನಗಳಲ್ಲಿ ವರ್ಷಕ್ಕೆ ಎರಡು ಬಾರಿ ಫಸಲು ಬರುತ್ತಿದೆ. ಈಗ ಮೂರು ವರ್ಷದ ತೋಟವಿದ್ದು, ವಾರ್ಷಿಕ ಸರಾಸರಿ ₹ 10 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಈಗ ಪೇರಲ ಬೆಳೆ ಇವರ ನಿರಂತರ ಆದಾಯದ ಮೂಲವಾಗಿದೆ.
ಸಮೃದ್ಧ ಅಡಿಕೆ: ಪೇರಲ ನಾಟಿ ಮಾಡಿದ ಹದಿನೆಂಟು ತಿಂಗಳ ನಂತರ ಅಂತರ ಬೆಳೆಯಾಗಿ ಅಡಕೆ ಸಸಿ ನೆಡಲಾಗಿದೆ. ಪೇರಲ ಬೆಳೆಯ ನಿರ್ವಹಣೆಯಲ್ಲಿ ಶೂನ್ಯ ನಿರ್ವಹಣೆಯ ಮೂಲಕ ಅಡಿಕೆ ಅತ್ಯುತ್ತಮವಾಗಿ ಬೆಳೆಯುತ್ತಿದೆ. ಇನ್ನು ಎರಡು ವರ್ಷದಲ್ಲಿ ಅಡಿಕೆ ಫಸಲಿಗೆ ಬರುತ್ತದೆ. ಆಗ ಆದಾಯ ದ್ವಿಗುಣಗೊಳ್ಳುತ್ತದೆ ಎಂಬ ಆಶಯ ಶರತ್ ಅವರದ್ದು.
ಉತ್ತಮ ಬೇಡಿಕೆ: ‘ಪೇರಲ ಬೆಳೆಗೆ ಬೇಡಿಕೆ ಚೆನ್ನಾಗಿದ್ದು, ಖರೀದಿದಾರರು ಸ್ಥಳಕ್ಕೆ ಬಂದು ಖರೀದಿಸುತ್ತಿದ್ದಾರೆ. ಕಟಾವು ಮಾಡಿ ಗ್ರೇಡ್ ಮಾಡಿ, ಇಪ್ಪತ್ತು ಕೆ.ಜಿ.ಯ ಬಾಕ್ಸ್‌ಗಳಿಗೆ ತುಂಬಿ ಕೊಡಲಾಗುತ್ತದೆ. ಬೆಂಗಳೂರು, ಹರಪನಹಳ್ಳಿ, ಶಿವಮೊಗ್ಗ, ದಾವಣಗೆರೆಗಳಿಂದ ಖರೀದಿದಾರರು ಬರುತ್ತಾರೆ. ದಾವಣಗೆರೆ ಮಾರುಕಟ್ಟೆ ಉತ್ತಮವಾಗಿದೆ’ ಎಂದು ಹರ್ಷದಿಂದ ನುಡಿಯುತ್ತಾರೆ.
‘ಅಡಿಕೆ ಫಸಲು ಬರುವವರೆಗೂ ಅಂತರ ಬೆಳೆಯಾಗಿ ಪೇರಲ ರೀತಿಯ ಬೇರೆ ಬೇರೆ ಬೆಳೆಗಳನ್ನು ಬೆಳೆದರೆ ನಷ್ಟದ ಸುಳಿಯಿಂದ ತಪ್ಪಿಸಿ ಕೊಳ್ಳಬಹುದು’ ಎಂದು ಇವರು ಹೇಳುತ್ತಾರೆ.
ರೈತ ಶರತ್ ಬಾಬು ಅವರ ಸಂಪರ್ಕ ಸಂಖ್ಯೆ: 9886118339
***
ತರಕಾರಿಯಿಂದ ನಷ್ಟ; ಪೇರಲದಿಂದ ಉತ್ತಮ ಆದಾಯ
‘ನಾವು ಅಲ್ಪಾವಧಿ ಬೆಳೆಗಳಾಗಿ ತರಕಾರಿಗಳನ್ನು ಹೆಚ್ಚು ಬೆಳೆಯುತ್ತಿದ್ದೆವು. ಉತ್ತಮ ಆದಾಯ ಬರುತ್ತಿತ್ತು. ಆದರೆ, ಕೆಲವೊಮ್ಮೆ ದರ ಕುಸಿತ ನಷ್ಟಕ್ಕೆ ಕಾರಣ ಆಗುತ್ತಿತ್ತು. ವರ್ಷದ ಹಿಂದೆ ಪೇರಲ ನಾಟಿ ಮಾಡಿದ್ದೇನೆ. ಈಗ ಫಸಲು ಪ್ರಾರಂಭವಾಗಿದೆ. ಈಗ ದರ ಕಡಿಮೆ ಇದೆ ಎಂದರೂ ಕೆ.ಜಿ.ಗೆ ₹ 26ರಂತೆ ಸ್ಥಳಕ್ಕೇ ಬಂದು ಹರಪನಹಳ್ಳಿ ವ್ಯಾಪಾರಿಗಳು ಖರೀದಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ದರ ಸಿಗುತ್ತದೆ’ ಎಂದು ಹೆಬ್ಬಾಳು ಗ್ರಾಮದ ಪೇರಲ ಬೆಳೆಗಾರ ನಿರಂಜನ್ ಹೇಳುವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.