ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ ಡಿಪೊ ವ್ಯವಸ್ಥಾಪಕರಿಗೆ ನೋಟಿಸ್‌

ಶಾಸಕ ರೇಣುಕಾಚಾರ್ಯ ಕೆಎಸ್‌ಆರ್‌ಟಿಸಿ ಬಸ್‌ ಓಡಿಸಿದ ಪ್ರಕರಣ
Last Updated 7 ಜನವರಿ 2020, 10:02 IST
ಅಕ್ಷರ ಗಾತ್ರ

ಹೊನ್ನಾಳಿ: ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಚಾಲಕನ ಸಮವಸ್ತ್ರವನ್ನು ಹಾಕಿಕೊಂಡು ಭಾನುವಾರ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ಚಲಾಯಿಸಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್‌. ನವೀನ್‌ಕುಮಾರ್‌ ಅವರು ಹೊನ್ನಾಳಿ ಡಿಪೊ ವ್ಯವಸ್ಥಾಪಕ ಮಹೇಶಪ್ಪ ಅವರಿಗೆ ನೋಟಿಸ್‌ ನೀಡಿದ್ದಾರೆ.

ರೇಣುಕಾಚಾರ್ಯ ಅವರು ಗ್ರಾಮೀಣ ಪ್ರದೇಶಗಳಿಗೆ ಬಸ್‌ ಸೇವೆಗೆ ಚಾಲನೆ ನೀಡಿದ ಬಳಿಕ ಚಾಲಕನ ಸಮವಸ್ತ್ರ ಹಾಕಿಕೊಂಡು, ಹೊನ್ನಾಳಿ ಖಾಸಗಿ ಬಸ್‍ನಿಲ್ದಾಣದಿಂದ ಬಸ್‌ ಚಲಾಯಿಸಿಕೊಂಡು ಗೊಲ್ಲರಹಳ್ಳಿ, ಬೆನಕಹಳ್ಳಿ, ಉಜ್ಜನೀಪುರ, ಉಜ್ಜನೀಪುರ ತಾಂಡ, ಹೊಟ್ಯಾಪುರ, ಬೀರಗೊಂಡನಹಳ್ಳಿ, ರಾಂಪುರ, ಸಾಸ್ವೆಹಳ್ಳಿ ಗ್ರಾಮಗಳಿಗೆ ತೆರಳಿ ಪುನಃ ಇದೇ ಗ್ರಾಮಗಳ ಮೂಲಕ ಹೊನ್ನಾಳಿಗೆ ಮರಳಿ ಬಂದಿದ್ದರು. ಸುಮಾರು 60 ಕಿ.ಮೀ ಬಸ್‌ ಚಲಾಯಿಸಿಕೊಂಡು ಹೋಗಿದ್ದರು.

ಸಂಜೆ ಹೊನ್ನಾಳಿ ಖಾಸಗಿ ಬಸ್‍ನಿಲ್ದಾಣದಿಂದ ಬಸ್ ಚಲಾಯಿಸಿಕೊಂಡು ಸೊರಟೂರು, ರಾಮೇಶ್ವರ, ನ್ಯಾಮತಿ, ಕೋಡಿಕೊಪ್ಪ, ಚಟ್ನಹಳ್ಳಿ, ಮುಸ್ಸೇನಾಳ್ ಮೂಕಲ ಶಿವಮೊಗ್ಗ ತಲುಪಿದ್ದರು. ಸುಮಾರು 50 ಕಿ.ಮೀನಷ್ಟು ದೂರದ ಬಸ್‌ ಚಲಾಯಿಸಿಕೊಂಡು ಹೋಗಿದ್ದರು. ಶಾಸಕರು ಬಸ್‌ ಚಲಾಯಿಸಿಕೊಂಡು ಹೋಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಬಸ್‌ ಚಲಾಯಿಸಿಕೊಂಡು ಹೋಗಿ ಬಂದ ಬಗ್ಗೆ ಶಾಸಕರು ತಮ್ಮ ಟ್ವಿಟ್ಟರ್‌ ಖಾತೆಯಲ್ಲೂ ಫೋಟೊ ಹಾಕಿಕೊಂಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡ ಬಳಿಕ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆಗಳೂ ಕೇಳಿಬಂದಿದ್ದವು.

ಪ್ರಕರಣವು ತೀವ್ರತೆ ಪಡೆದುಕೊಂಡಿದ್ದರಿಂದ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್‌ಕುಮಾರ್‌ ಅವರು ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಡಿಪೊ ವ್ಯವಸ್ಥಾಪಕರಿಗೆ ಸೋಮವಾರ ನೋಟಿಸ್‌ ಜಾರಿಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿ ಅವರ ಮೊಬೈಲ್‌ಗೆ ಕರೆ ಮಾಡಿದಾಗ ‘ಸ್ವಿಚ್ಡ್‌ ಆಫ್‌’ ಎಂದು ಕೇಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT