ದೇಶದಲ್ಲಿ ಶ್ರಮ ಸಂಸ್ಕೃತಿ ಅಪಮೌಲ್ಯ

7
ಎಸ್‍ಜೆವಿಪಿ ಕಾಲೇಜಿನ ಪ್ರಾಧ್ಯಾಪಕ ಎ.ಬಿ. ರಾಮಚಂದ್ರಪ್ಪ ವಿಷಾದ

ದೇಶದಲ್ಲಿ ಶ್ರಮ ಸಂಸ್ಕೃತಿ ಅಪಮೌಲ್ಯ

Published:
Updated:
ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಸ್ಕೌಟ್ ಮತ್ತು ಗೈಡ್ ಕಟ್ಟಡದ ಆವರಣದಲ್ಲಿ ಭಾನುವಾರ ಸಿಪಿಐ ರಾಜ್ಯ ಮಂಡಳಿ ಸದಸ್ಯ ಆನಂದರಾಜ್ ಸಿಪಿಐ ಧ್ವಜಾರೋಹಣದ ಮೂಲಕ ಐದು ದಿನಗಳ ಸಿಪಿಐ ರಾಜ್ಯಮಟ್ಟದ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಿದರು.

ಹರಿಹರ: ದೇಶದಲ್ಲಿ ಶ್ರಮ ಸಂಸ್ಕೃತಿ ಅಪಮೌಲ್ಯಗೊಂಡಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಆಗ್ರಹಿಸುವವರನ್ನು ಶತ್ರುಗಳು ಎಂದು ಭಾವಿಸಲಾಗುತ್ತಿದೆ ಎಂದು ಎಸ್‍ಜೆವಿಪಿ ಕಾಲೇಜಿನ ಪ್ರಾಧ್ಯಾಪಕ ಎ.ಬಿ. ರಾಮಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಭಾಂಗಣದಲ್ಲಿ ಭಾನುವಾರ ಆರಂಭಗೊಂಡ ಐದು ದಿನಗಳ ಸಿಪಿಐ ರಾಜ್ಯಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.  ಅಸ್ಪೃಶ್ಯತೆ ಜೀವಂತವಾಗಿರುವುದು ದಾಸ್ಯದ ಸಂಕೇತವಾಗಿದೆ. ದಾಸ್ಯ ಪ್ರವೃತ್ತಿಯಿಂದ ಹೊರಬರದ ಗ್ರಾಮೀಣ ಪ್ರದೇಶದವರ ಶೋಷಣೆ ನಿರಂತರವಾಗಿ ಸಾಗುತ್ತಿದೆ. ಚಳವಳಿ, ಚಳವಳಿಗಾರರನ್ನು ಹತ್ತಿಕ್ಕುವ ಕಾರ್ಯಕ್ಕೆ ಸರ್ಕಾರಗಳು ಮುಂದಾಗುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಮಾರ್ಕ್ಸ್‌ವಾದ ಸಮಾಜಮುಖಿ ಮತ್ತು ಜನಪರ ಚಿಂತನೆಗಳ ಮೂಲ. ಮಾರ್ಕ್ಸ್‌ ಸಿದ್ಧಾಂತ ಜನರಿಗೆ ಅರ್ಥವಾದಾಗ ಸಿಪಿಐಗೆ ದೇಶವನ್ನಾಳುವ ಶಕ್ತಿ ದೊರೆಯಲಿದೆ. ಆದರೆ, ಸಿದ್ಧಾಂತವನ್ನು ಸಂಪೂರ್ಣವಾಗಿ ಅರಿಯದೆ ಆರಂಭಿಸುವ ಹೋರಾಟ ಬಹುಬೇಗ ಭ್ರಮಾ ನಿರಸನ ಮೂಡಿಸುತ್ತದೆ. ಹಾಗಾಗಿ ಸಿದ್ಧಾಂತದ ಆಳವಾದ ಅಧ್ಯಯನ ಅಗತ್ಯವಿದೆ ಎಂದರು.

ಮೋದಿ ಸರ್ಕಾರದಲ್ಲಿ ಹಿಂದುಳಿದವರು, ದಲಿತರು ಭೌತಿಕವಾಗಿ ಬೆತ್ತಲಾಗಿದ್ದಾರೆ. ಶೋಷಣೆ, ಸುಳ್ಳು, ದರೋಡೆ ಮೌಲೀಕರಣಗೊಳ್ಳುತ್ತಿದೆ. ಎಡರಂಗದ ಚಿಂತಕರು ಒಗ್ಗಟ್ಟಾಗುವುದು ಕಷ್ಟ. ಆದರೆ, ವಿಭಿನ್ನ ವಿಚಾರಧಾರೆಯ ಸನಾತನಿಗಳು ಬಹುಬೇಗ ಸಂಘಟಿತರಾಗುತ್ತಾರೆ. ಅವರ ಹೊಂದಾಣಿಕೆ ಪ್ರವೃತ್ತಿ ಎಡರಂಗದ ಚಿಂತಕರಲ್ಲಿ ಮೂಡಿಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಮಾಧ್ಯಮ ಅತ್ಯಂತ ಪ್ರಬಲವಾದ ಕ್ಷೇತ್ರ. ಜನರ ಚಿಂತನೆಗಳನ್ನು ಶಕ್ತಿಯಾಗಿ ಪರಿವರ್ತಿಸುವ ಶಕ್ತಿ ಮಾಧ್ಯಮಕ್ಕಿದೆ. ಜಾತ್ಯಾತಿತ, ವರ್ಗಾತೀತ ನಿಲುವು ಹೊಂದಿದ ಎಡ ಚಿಂತಕರು ಮಾಧ್ಯಮ ಕ್ಷೇತ್ರಕ್ಕೆ ಸೇರಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಜನರಿಗೆ ಅಭಿವೃದ್ಧಿಗಿಂತ ಹಿಂದುತ್ವ ಹಿತವಾಗುತ್ತಿದೆ. ಮಠಗಳು ಬೀದಿಗೆ ಬಂದಿವೆ. ತಮ್ಮ ಜಾತಿ ರಾಜಕಾರಣಿಗಳು, ಸರ್ಕಾರಿ ನೌಕರರ ಪರವಾಗಿ ಹೋರಾಡುತ್ತಿವೆ. ಮಠಗಳು ನಡೆದುಕೊಳ್ಳತ್ತಿರುವ ರೀತಿ ಪ್ರಸ್ತುತ ಆಡಳಿತ ವ್ಯವಸ್ಥೆಯ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ‘ಪ್ರಧಾನಿ ಮೋದಿ ಭರವಸೆ ಸುಳ್ಳಾಗಿವೆ. ಕಮ್ಯುನಿಸ್ಟ್ ಕಾರ್ಯಕರ್ತರು ಎಚ್ಚರಗೊಳ್ಳಬೇಕು. ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದೆವು. ಲೋಕಸಭೆ, ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಹಲವು ಬದಲಾವಣೆ ಕಾಣಲಿದ್ದೇವೆ’ ಎಂದು ತಿಳಿಸಿದರು.

ಸಿಪಿಐ ಮುಖಂಡರಾದ ಮುರುಳೀಧರ್, ಡಾ.ಕೆ.ಎಸ್. ಜನಾರ್ದನ್, ಟಿ.ಎನ್. ನಾಗರಾಜ್, ಪಾಲಿಕೆ ಸದಸ್ಯ ಎಚ್.ಜಿ. ಉಮೇಶ್, ಆನಂದರಾಜ್, ಎಂ.ಸಿ. ಡೊಂಗ್ರೆ, ಆವರಣಗೆರೆ ಚಂದ್ರು ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !