ಶುಕ್ರವಾರ, ಜೂನ್ 25, 2021
21 °C
7,000 ಕೋವಿಶೀಲ್ಡ್ ಲಸಿಕೆ ಪೂರೈಕೆ l ಸೋಮವಾರ ಇನ್ನಷ್ಟು ಬರುವ ಸಾಧ್ಯತೆ

ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆಗೆ ಕೊರತೆ ಎದುರಾಗಿದೆ. ಶನಿವಾರವಷ್ಟೇ 7 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದ್ದರೂ ಇದು ಸಾಲದಾಗಿದೆ. ಕೊವ್ಯಾಕ್ಷಿನ್ ಲಸಿಕೆ ಸಹ ಖಾಲಿಯಾಗಿದ್ದು, ಜಿಲ್ಲೆಗೆ ಬರಬೇಕಿದೆ.

ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆರೋಗ್ಯ ಕೇಂದ್ರಗಳು ಹಾಗೂ ಉಪ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಪಡೆಯಲು ಟೋಕನ್ ಸಿಸ್ಟಂ ಮಾಡಲಾಗಿದೆ. ಆದರೂ ಜನರು ದಿನಗಟ್ಟಲೆ ಕಾಯಬೇಕಿದೆ.

‘ಲಸಿಕೆ ಖಾಲಿಯಾಗಿದ್ದರಿಂದ ಜನರು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ. ಈಗ ಬಂದಿರುವ ಲಸಿಕೆಗಳು ಸರ್ಕಾರಿ ಆಸ್ಪತ್ರೆಗೆ ಸಾಲದಾಗಿದ್ದು, ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ’ ಎಂದು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. 

‘ಜಿಲ್ಲೆಗೆ 1.70 ಲಕ್ಷ ವ್ಯಾಕ್ಸಿನ್ ಪೂರೈಕೆಯಾಗಿತ್ತು. ಆದರೆ ಶುಕ್ರವಾರ ಮಧ್ಯಾಹ್ನದ ವೇಳೆಗೆ ಖಾಲಿಯಾಗಿದೆ. ಶನಿವಾರ ಬೆಳಿಗ್ಗೆ 7 ಸಾವಿರ ಡೋಸ್ ಬಂದಿದ್ದು, ಹೊನ್ನಾಳಿಗೆ 1,500, ಹರಿಹರಕ್ಕೆ 1,000, ಜಗಳೂರು 800, ಚನ್ನಗಿರಿಗೆ 1,000 ಹಾಗೂ ದಾವಣಗೆರೆ ನಗರಕ್ಕೆ 2,200 ಡೋಸ್ ವಿತರಿಸಲಾಗಿದೆ’ ಎಂದು ಕೋವಿಡ್ ಲಸಿಕೆ ಉಸ್ತುವಾರಿ ವಹಿಸಿಕೊಂಡಿರುವ ಆರ್‌ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ ಹೇಳುತ್ತಾರೆ.

‘ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ 10 ದಿನಗಳಿಂದ ವ್ಯಾಕ್ಸಿನ್ ಪಡೆಯಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ. ಇದರಿಂದಾಗಿ ಅಭಾವ ಸೃಷ್ಟಿಯಾಗಿದೆ’ ಎಂಬುದು ಮೀನಾಕ್ಷಿಯವರ ಹೇಳಿಕೆ.

ಖರ್ಚು ಮಾಡಿದಷ್ಟು ಲಸಿಕೆ: ‘ಈ ಹಿಂದೆ ಲಸಿಕೆ ದಾಸ್ತಾನು ಇದ್ದರೂ ಜನರು ಲಸಿಕೆ ಪಡೆಯಲು ಮುಂದಾಗಲಿಲ್ಲ. ಇದರಿಂದಾಗಿ ಕಡಿಮೆ ಪ್ರಮಾಣಕ್ಕೆ ಬೇಡಿಕೆ ಇಡಲಾಗುತ್ತಿತ್ತು. ಆದರೆ ಈಗ ಏಕಾಏಕಿ ಬೇಡಿಕೆ ಹೆಚ್ಚಾಗಿದೆ. ನಾವು ಖರ್ಚು ಮಾಡಿದಷ್ಟು ಮಾತ್ರ ಲಸಿಕೆ ಪೂರೈಕೆಯಾಗುತ್ತದೆ. ಸೋಮವಾರ ಕೊವ್ಯಾಕ್ಷಿನ್ ಬರುತ್ತದೊ ಅಥವಾ ಕೊವಿಶೀಲ್ಡ್ ಬರುತ್ತದೋ ಗೊತ್ತಿಲ್ಲ. ಆರಂಭದಲ್ಲಿ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾತ್ರ ಲಸಿಕೆ ಪೂರೈಸಲಾಗುತ್ತಿತ್ತು. ಆದರೆ ಈಗ ಉಪಕೇಂದ್ರಗಳಿಗೂ ಪೂರೈಸಬೇಕಾಗಿದೆ’ ಎನ್ನುತ್ತಾರೆ  

‘ಎರಡು ದಿನಗಳಿಗಾಗಿ 7,000 ಕೋವಿಶೀಲ್ಡ್ ಲಸಿಕೆ ಜಿಲ್ಲೆಗೆ ಬಂದಿದ್ದು, ಭಾನುವಾರ ಇಲ್ಲವೇ ಸೋಮವಾರ ಇನ್ನಷ್ಟು ಬರಲಿದೆ. ಜಿಲ್ಲೆಯಲ್ಲಿ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಪ್ರತಿ ದಿನ ಅವುಗಳಿಗೆ 100 ಡೋಸ್ ಪೂರೈಸಿದರೂ 10 ಸಾವಿರದಷ್ಟು ಲಸಿಕೆ ಬೇಕಾಗುತ್ತದೆ’ ಎಂದು ಮೀನಾಕ್ಷಿ ವಿವರಿಸುತ್ತಾರೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು