ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಔಷಧಗಳ ಕೊರತೆ: ಪಶು ಚಿಕಿತ್ಸಾಲಯಗಳಿಗೇ ಬೇಕಿದೆ ತುರ್ತು ಚಿಕಿತ್ಸೆ!

Published 29 ಜನವರಿ 2024, 7:10 IST
Last Updated 29 ಜನವರಿ 2024, 7:10 IST
ಅಕ್ಷರ ಗಾತ್ರ

ದಾವಣಗೆರೆ: ‘ಎರಡು ವರ್ಷದ ಹಿಂದಿನ ಮಾತು. ಮನೆಯಲ್ಲಿದ್ದ ಎರಡು ಆಕಳುಗಳಿಗೆ ಕಾಲು ಬಾಯಿ ಜ್ವರ ಬಾಧಿಸಿತ್ತು. ಮೇವು ಹಾಕಿದರೆ ಮುಟ್ಟುತ್ತಲೇ ಇರಲಿಲ್ಲ. ಪ್ರತಿ ದಿನವೂ ಗ್ಲೂಕೋಸ್‌ ಹಾಕಿಸುವುದು ಅನಿವಾರ್ಯವಾಗಿತ್ತು. ಅಗತ್ಯವಿದ್ದ ಔಷಧ ಊರಿನ ಪಶು ಚಿಕಿತ್ಸಾಲಯದಲ್ಲಿ ಲಭ್ಯವಿರಲಿಲ್ಲ. ನಗರದಲ್ಲಿನ ಔಷಧಾಲಯಗಳಿಗೆ ಎಡ ತಾಕುವುದನ್ನು ಬಿಟ್ಟರೆ ಬೇರೆ ದಾರಿಯೂ ಇರಲಿಲ್ಲ. ಚಿಕಿತ್ಸೆಗೆಂದೇ ಅಂದಾಜು ₹ 40 ಸಾವಿರ ಖರ್ಚು ಮಾಡಿದೆ. ಆದರೂ ಅವು ಬದುಕುಳಿಯಲಿಲ್ಲ. ₹ 1.17 ಲಕ್ಷ ಕೊಟ್ಟು ಅವುಗಳನ್ನು ಖರೀದಿಸಿದ್ದೆ. ಅಷ್ಟೂ ದುಡ್ಡು ನೀರಿನಲ್ಲಿ ಹೋಮ ಮಾಡಿದಂತಾಯಿತು’.....

ದಾವಣಗೆರೆ ಸಮೀಪದ ಶಿರಮಗೊಂಡನಹಳ್ಳಿಯ ಮಂಜಣ್ಣ ಹೀಗೆ ಹೇಳುತ್ತಿರುವಾಗ ಅವರ ಮೊಗದ ಮೇಲೆ ಬೇಸರದ ಛಾಯೆ ಆವರಿಸಿತ್ತು. ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಲೇ ಅವರು ಮಾತು ಮುಂದುವರಿಸಿದರು. 

‘ಹಸುಗಳಿಗೆ ಗರ್ಭಧಾರಣೆಯ ಚುಚ್ಚುಮದ್ದು (ಇಂಜೆಕ್ಷನ್‌) ಕೊಡಿಸಿ ನನಗಂತೂ ಸಾಕಾಗಿ ಹೋಗಿದೆ. ಒಂದೇ ಒಂದು ಆಕಳಿಗೂ ಗರ್ಭ ಕಟ್ಟಿಲ್ಲ. ವೈದ್ಯರನ್ನು ಕೇಳಿದರೆ ಈಗ ಬರುತ್ತಿರುವ ಇಂಜೆಕ್ಷನ್‌ಗಳೇ ಹೀಗೆ, ನಾವೇನು ಮಾಡೋದಪ್ಪಾ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಅವರನ್ನು ದೂರಿ ಏನು ಪ್ರಯೋಜನ’ ಎಂದು ಹೇಳಿ ಕರುವಿಗೆ ಮೇವು ಹಾಕಲು ಮುಂದಾದರು.

‘ಹಿಂದಿನದ್ದನ್ನೆಲ್ಲಾ ಬಿಡಿ ಸರ್‌. ಈ ಎಳೆಗರುಗಳಿಗೆ ಹಾಕೋಕೆ ಜಂತು ಹುಳು ನಾಶಕ ಗುಳಿಗೆ ಬೇಕೆಂದರೂ ನಮ್‌ ದನದ ಆಸ್ಪತ್ರೆಯಲ್ಲಿ ಸಿಗ್ತಿಲ್ಲಾ. ಆರು ತಿಂಗಳಿಂದ ಕೇಳಿ ಕೇಳಿ ಸಾಕಾಗಿ ಕೊನೆಗೆ ನಾನೇ ಮೆಡಿಕಲ್‌ ಶಾಪ್‌ನಿಂದ ತಂದು ಹಾಕಿದೀನಿ. ಹಿಂದೆಲ್ಲಾ ಹಸುಗಳಿಗೆಂದೇ ಚಿಕ್ಕ ಬಾಟಲ್‌ಗಳಲ್ಲಿ ಜಂತು ಹುಳುವಿನ ಔಷಧ ಬರ್ತಿತ್ತು. ಈಗ ಅದೂ ಇಲ್ವಂತೆ’ ಎಂದು ಬೇಸರಿಸಿದರು.

ಮಂಜಣ್ಣನವರ ಮಾತುಗಳು ಜಿಲ್ಲೆಯ ಪಶು ಚಿಕಿತ್ಸಾಲಯಗಳ ವಾಸ್ತವ ಸ್ಥಿತಿ ಹಾಗೂ ಹೈನುಗಾರರ ಬವಣೆಯ ಮೇಲೆ ಬೆಳಕು ಚೆಲ್ಲುವಂತಿವೆ. ಮೂಕ ಜೀವಿಗಳಿಗೆ ಚಿಕಿತ್ಸೆ ನೀಡಬೇಕಿದ್ದ ಪಶು ಚಿಕಿತ್ಸಾಲಯಗಳೇ ಹಲವು ಸಮಸ್ಯೆಗಳಿಂದ ಬಳಲುತ್ತಿವೆ. ಅವುಗಳಿಗೇ ತುರ್ತು ಚಿಕಿತ್ಸೆ ದೊರೆಯಬೇಕಿದೆ!

ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 157 ಪಶು ಚಿಕಿತ್ಸಾಲಯಗಳಿವೆ. ಒಂದೊಂದರದ್ದೂ ಒಂದೊಂದು ಬಗೆಯ ಕಥೆ–ವ್ಯಥೆ! 

ಸಂತೇಬೆನ್ನೂರು ಸಮೀಪದ ದೇವರಹಳ್ಳಿಯಲ್ಲಿ ಹೆದ್ದಾರಿಗೆ ಹೊಂದಿಕೊಂಡಂತಿರುವ ಪಶು ಚಿಕಿತ್ಸಾಲಯ ಪಾಳು ಬಿದ್ದ ಸ್ಥಿತಿಯಲ್ಲಿದೆ. ಹೋಬಳಿ ಮಟ್ಟದ ಪಶು ಆಸ್ಪತ್ರೆಗಳು ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿರುವುದಕ್ಕೆ ಇದೊಂದು ನಿದರ್ಶನ. ಕೆಲವೆಡೆ ತುಂಬಾ ಹಳೆಯದಾದ ಕಟ್ಟಡಗಳಿದ್ದು ಸುಣ್ಣ–ಬಣ್ಣ ಕಾಣದೆ ವರ್ಷಗಳೇ ಉರುಳಿವೆ. ಇನ್ನೂ ಹಲವೆಡೆ ಆಸ್ಪತ್ರೆಯ ಸುತ್ತ ಕಾಂಪೌಂಡ್‌ಗಳಿಲ್ಲ. ಅಂತಹ ಆಸ್ಪತ್ರೆಗಳು ರಾತ್ರಿಯಾದರೆ ಕುಡುಕರ ತಾಣಗಳಾಗಿ ಮಾರ್ಪಡುತ್ತವೆ. 

ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ನೆರವಾಗಲಿ ಎಂಬ ಉದ್ದೇಶದಿಂದ ಆಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ಆದರೆ, ಅವುಗಳನ್ನು ನಿಲ್ಲಿಸುವುದಕ್ಕೆ ಸೂಕ್ತ ಶೆಡ್‌ ವ್ಯವಸ್ಥೆ ಇಲ್ಲ. ಅವು ದಿನವಿಡೀ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ದುಃಸ್ಥಿತಿ ಇದೆ. ಪೂರೈಕೆಯಾದ ಔಷಧಗಳು ಹಾಗೂ ಮೇವಿನ ಬೀಜಗಳನ್ನು ದಾಸ್ತಾನು ಇಡುವುದಕ್ಕೆ ಸುಸಜ್ಜಿತವಾದ ಕೊಠಡಿಗಳೂ ಇಲ್ಲ. ಚಿಕಿತ್ಸಾಲಯ ಹಾಗೂ ಪಶು ಆಸ್ಪತ್ರೆಗಳ ಸುತ್ತ ಸ್ವಚ್ಛತೆಯೂ ಮಾಯವಾಗಿದೆ. 

ದಾವಣಗೆರೆ ನಗರ ವ್ಯಾಪ್ತಿಯ ಪಶು ಚಿಕಿತ್ಸಾಲಯಗಳು ಹೊರಗಿನಿಂದ ನೋಡುವುದಕ್ಕೆ ಚೆನ್ನಾಗಿಯೇ ಕಾಣುತ್ತವೆ. ಅವುಗಳ ಒಳಹೊಕ್ಕು ನೋಡಿದರೆ ನಿಜ ಬಣ್ಣ ಬಯಲಾಗುತ್ತದೆ. ದಾವಣಗೆರೆಯ ನಿಯಂತ್ರಿತ ಮಾರುಕಟ್ಟೆ ಆವರಣದಲ್ಲಿರುವ ಪಶು ಚಿಕಿತ್ಸಾಲಯದ ಹೊರ ಭಾಗದಲ್ಲಿ ಅಳವಡಿಸಿರುವ ಟೈಲ್ಸ್‌ಗಳು ಮೇಲಕ್ಕೆದ್ದಿವೆ. ಆವರಣವು ಬೀದಿ ನಾಯಿಗಳ ಆಶ್ರಯ ತಾಣವಾಗಿಯೂ ಬದಲಾಗಿದೆ. ನಗರ ವ್ಯಾಪ್ತಿಯ ಕಟ್ಟಡದ ಸ್ಥಿತಿಯೇ ಹೀಗಿದ್ದ ಮೇಲೆ ಗ್ರಾಮಾಂತರ ಭಾಗದಲ್ಲಿನ ಕಟ್ಟಡಗಳ ಸ್ಥಿತಿಯನ್ನು ಊಹಿಸುವುದೂ ಕಷ್ಟ.

ಸಿಬ್ಬಂದಿ ಕೊರತೆ: ಜಿಲ್ಲೆಯ ಎಲ್ಲಾ ಭಾಗದಲ್ಲೂ ಸಿಬ್ಬಂದಿ ಕೊರತೆ ಇದೆ. ಇದರಿಂದ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಯ ಕಾರ್ಯಭಾರ ಹೆಚ್ಚಿದೆ. ಇದರಿಂದಾಗಿ ತುರ್ತು ಸಂದರ್ಭಗಳಲ್ಲಿ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ದೊರೆಯದೆಯೇ ಅವು ಅಸುನೀಗಿದ ಉದಾಹರಣೆಗಳೂ ಇವೆ. 

‘ನಮಗೆ ಸಮಯದ ಮಿತಿ ಇಲ್ಲ. ರೈತರು ಯಾವ ಸಂದರ್ಭದಲ್ಲಿ ಕರೆ ಮಾಡಿದರೂ ಅವರ ಮನೆಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತೇವೆ. ಸಿಬ್ಬಂದಿ ಕೊರತೆ ಇರುವುದರಿಂದ ಕಾರ್ಯಾಭಾರ ಹೆಚ್ಚಿದೆ. ದಾಖಲೆಗಳ ನಿರ್ವಹಣೆ, ಸಭೆ ಹೀಗೆ ನಿತ್ಯದ ಕೆಲಸಕ್ಕೂ ಅಡ್ಡಿಯಾಗುತ್ತದೆ. ಬರ ಇರುವುದರಿಂದ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ’ ಎಂದು ದಾವಣಗೆರೆಯ ನಿಯಂತ್ರಿತ ಮಾರುಕಟ್ಟೆ ಆವರಣದಲ್ಲಿರುವ ಪಶು ಚಿಕಿತ್ಸಾಲಯದ ಮುಖ್ಯ ವೈದ್ಯಾಧಿಕಾರಿ ಡಾ.ಬಸವೇಶ್ವರ ಐನಳ್ಳಿ ಹೇಳಿದರು. 

ದಾವಣಗೆರೆಯ ನಿಯಂತ್ರಿತ ಮಾರುಕಟ್ಟೆ ಆವರಣದಲ್ಲಿರುವ ಪಶು ಚಿಕಿತ್ಸಾಲಯದ ಹೊರ ನೋಟ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ನಿಯಂತ್ರಿತ ಮಾರುಕಟ್ಟೆ ಆವರಣದಲ್ಲಿರುವ ಪಶು ಚಿಕಿತ್ಸಾಲಯದ ಹೊರ ನೋಟ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿರುವುದು
ಚನ್ನಗಿರಿ ತಾಲ್ಲೂಕು ದೇವರಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಟ್ಟಡ ಸಂಪೂರ್ಣವಾಗಿ ಶಿಥಿಲಗೊಂಡಿರುವುದು
ಮಾಯಕೊಂಡ ಪಶು ಚಿಕಿತ್ಸಾ ಕೇಂದ್ರದಲ್ಲಿ ಹಸುವಿಗೆ ಚಿಕಿತ್ಸೆ ನೀಡುತ್ತಿರುವ ಸಿಬ್ಬಂದಿ 
ಮಾಯಕೊಂಡ ಪಶು ಚಿಕಿತ್ಸಾ ಕೇಂದ್ರದಲ್ಲಿ ಹಸುವಿಗೆ ಚಿಕಿತ್ಸೆ ನೀಡುತ್ತಿರುವ ಸಿಬ್ಬಂದಿ 
ಹೊನ್ನಾಳಿಯ ಹರಳಹಳ್ಳಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಸುತ್ತ ಕಾಂಪೌಂಡ್‌ ಇಲ್ಲದಿರುವುದು 
ಹೊನ್ನಾಳಿಯ ಹರಳಹಳ್ಳಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಸುತ್ತ ಕಾಂಪೌಂಡ್‌ ಇಲ್ಲದಿರುವುದು 
ಸಂತೇಬೆನ್ನೂರಿನಲ್ಲಿರುವ ಪಶು ಆಸ್ಪತ್ರೆ
ಸಂತೇಬೆನ್ನೂರಿನಲ್ಲಿರುವ ಪಶು ಆಸ್ಪತ್ರೆ
‘ಜಾನುವಾರಗಳ ಸಂಖ್ಯೆಗೆ ಹೋಲಿಸಿದರೆ ಪೂರೈಕೆಯಾಗುತ್ತಿರುವ ಔಷಧ ಕಡಿಮೆ ಇದೆ. ಜಂತು ನಾಶಕಗಳು ನೋವು ನಿವಾರಕ ಟಿಂಚರ್‌ ಬೇವಿನ ಎಣ್ಣೆ ಹತ್ತಿ ಹೀಗೆ ಚಿಕಿತ್ಸೆಗೆ ಅತ್ಯವಶ್ಯಕವಾಗಿ ಬೇಕಿರುವ ಔಷಧಗಳೇ ಲಭ್ಯವಿಲ್ಲ. ಇದರಿಂದ ರೈತರಿಗೂ ತೊಂದರೆಯಾಗುತ್ತಿದೆ. ಜಾನುವಾರುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ದುಬಾರಿ ದರ ನೀಡಿ ಮೆಡಿಕಲ್‌ ಶಾಪ್‌ಗಳಿಂದ ಔಷಧಗಳನ್ನು ಖರೀದಿಸಿ ಕೊಡುವುದು ಅನಿವಾರ್ಯವಾಗಿದೆ.  
–ಡಾ.ಬಸವೇಶ್ವರ ಐನಳ್ಳಿ ಮುಖ್ಯ ವೈದ್ಯಾಧಿಕಾರಿ ದಾವಣಗೆರೆ
ಸಿಬ್ಬಂದಿ ನೇಮಕದ ಅಧಿಕಾರ ನಮಗಿಲ್ಲ..
‘ಸಿಬ್ಬಂದಿ ಕೊರತೆಯಿಂದಾಗಿ ವೈದ್ಯರು ಹಾಗೂ ಇತರರ ಮೇಲೆ ಕಾರ್ಯಾಭಾರ ಹೆಚ್ಚಿರುವುದು ನಿಜ. ತುರ್ತು ಸಂದರ್ಭಗಳಲ್ಲಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಆದರೆ ಸಿಬ್ಬಂದಿ ನೇಮಕದ ಅಧಿಕಾರ ನಮಗಿಲ್ಲ. ಅದು ಸರ್ಕಾರದ ಮಟ್ಟದಲ್ಲಿ ನಡೆಯಬೇಕಿರುವ ಪ್ರಕ್ರಿಯೆ. ಈ ವಿಚಾರವನ್ನು ಉನ್ನತ ಅಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದು ದಾವಣಗೆರೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಚಂದ್ರಶೇಖರ ಸುಂಕದ ‘‍ಪ್ರಜಾವಾಣಿ’ಗೆ ತಿಳಿಸಿದರು. ‘ಇಲಾಖೆಗೆ ಸದ್ಯ ₹ 1.3 ಕೋಟಿ ಅನುದಾನ ನೀಡಲಾಗುತ್ತಿದೆ. ಇದರಲ್ಲಿ ಯಾವ ಕೆಲಸಗಳನ್ನೂ ಸರಿಯಾಗಿ ಮಾಡುವುದಕ್ಕೆ ಆಗುತ್ತಿಲ್ಲ. ₹ 6 ಕೋಟಿ ಅನುದಾನಕ್ಕಾಗಿ ಬೇಡಿಕೆ ಇಟ್ಟಿದ್ದೇವೆ. ಸರ್ಕಾರ ಪ್ರತಿ ಹಸುವಿನ ಚಿಕಿತ್ಸೆಗೆಂದು ಕನಿಷ್ಠ ₹ 6 ಕೂಡ ವ್ಯಯಿಸುತ್ತಿಲ್ಲ’ ಎಂದರು. ‘ಸಂತೇಬೆನ್ನೂರು ಸಮೀಪದ ದೇವರಹಳ್ಳಿಯಲ್ಲಿ ಹೊಸ ಕಟ್ಟಡ ನಿರ್ಮಿಸಲು ಮುಂದಾಗಿದ್ದೇವೆ. ಜಿಲ್ಲೆಯನ್ನು ಕೇಂದ್ರೀಕರಿಸಿಕೊಂಡು ಔಷಧ ಪೂರೈಸಲಾಗುತ್ತದೆ. ಕೆಲವೆಡೆ ಔಷಧಗಳು ಸಿಗುತ್ತಿಲ್ಲ ಎಂಬ ದೂರುಗಳು ಇವೆ. ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.
ವೈದ್ಯರು ಕಟ್ಟಡಗಳ ಕೊರತೆ ಎಚ್.ವಿ.ನಟರಾಜ್
ಚನ್ನಗಿರಿ: ತಾಲ್ಲೂಕಿನಲ್ಲಿ ಒಟ್ಟು 33 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿವೆ. ನಲ್ಲೂರು ದೇವರಹಳ್ಳಿ ಹೊದಿಗೆರೆ ತಾವರೆಕೆರೆ ಪಾಂಡೋಮಟ್ಟಿ ಗೊಪ್ಪೇನಹಳ್ಳಿ ಹಾಗೂ ಸಂತೇಬೆನ್ನೂರು ಚಿಕಿತ್ಸಾ ಕೇಂದ್ರಗಳಲ್ಲಿ ಕಾಯಂ ವೈದ್ಯರ ಕೊರತೆ ಇದ್ದು ಪ್ರಭಾರ ವೈದ್ಯರು ವಾರದಲ್ಲಿ ಮೂರು ದಿನ ಕಾರ್ಯ ನಿರ್ವಹಿಸುತ್ತಾರೆ. ನಲ್ಲೂರು ದೇವರಹಳ್ಳಿ ಹಾಗೂ ತಾವರೆಕೆರೆಯಲ್ಲಿರುವ ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿವೆ. ಔಷಧಗಳ ಕೊರತೆಯೂ ಇದೆ.  ‘ಶಾಸಕರು ₹ 9 ಲಕ್ಷ ವಿಶೇಷ ಅನುದಾನ ಒದಗಿಸಿದ್ದು ಆ ಮೊತ್ತದಲ್ಲಿ ಔಷಧ ಖರೀದಿಸಲಾಗುತ್ತದೆ. ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಗಂಭೀರವಾದ ಯಾವ ರೋಗಗಳೂ ಕಾಣಿಸಿಕೊಂಡಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಕರುಗಳಿಗೆ ಚರ್ಮಗಂಟು ರೋಗದ ಲಸಿಕೆ  ಹಾಕಲಾಗಿದೆ’ ಎಂದು ಪಶು ವೈದ್ಯ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ಅಶೋಕ್ ಕುಮಾರ್ ತಿಳಿಸಿದರು. ‘ದೇವರಹಳ್ಳಿ ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯದ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಇದರ ಹಿಂಭಾಗದಲ್ಲಿರುವ ಸಣ್ಣ ಕೊಠಡಿಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಕಾಯಂ ವೈದ್ಯರೂ ಇಲ್ಲ. ಇದರಿಂದ ಹೈನುಗಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಟ್ಟಡ ನಿರ್ಮಿಸಿ ಕೊಡುವ ಜೊತೆಗೆ ಆದಷ್ಟು ಬೇಗ ಕಾಯಂ ವೈದ್ಯರನ್ನು ನೇಮಿಸಬೇಕು’ ಎಂದು ಗ್ರಾಮದ ಶಿವಣ್ಣ ಆಗ್ರಹಿಸಿದರು.
ಅಗತ್ಯಕ್ಕನುಗುಣವಾಗಿ ಔಷಧ ಸರಬರಾಜು ಮಾಡಲಿ- ಮಂಜುನಾಥ್‌ ಎಸ್‌.
ಎಂ ಮಾಯಕೊಂಡ: ಇಲ್ಲಿನ ಮಾಯಕೊಂಡಾಪುರದಲ್ಲಿ ಪಶು ಚಿಕಿತ್ಸಾ ಕೇಂದ್ರವಿದೆ. ಮಾಯಕೊಂಡ ಅಣ್ಣಾ ದಿಂಡದ ದೊಡ್ಡಮಾಗಡಿ ಬುಳ್ಳಾಪುರ ಹೆದ್ನೆ ಒಂಟಿಹಾಳು ಪರಶುರಾಮಪುರ ಸೇರಿ ಎಂಟು ಹಳ್ಳಿಗಳ ಜನ ಜಾನುವಾರುಗಳ ಚಿಕಿತ್ಸೆಗೆ ಇಲ್ಲಿಗೇ ಬರಬೇಕು. ಕೇಂದ್ರದ ವ್ಯಾಪ್ತಿಯಲ್ಲಿ 2161 ದನಗಳು 1660 ಕುರಿ ಹಾಗೂ 335 ಮೇಕೆಗಳಿವೆ.  ‘ಕೇಂದ್ರದಲ್ಲಿ ಎಲ್ಲಾ ಬಗೆಯ ಔಷಧಗಳ ಲಭ್ಯತೆ ಇಲ್ಲ. ಹೊರಗಿನಿಂದಲೇ ಔಷಧ ತರುವಂತೆ ವೈದ್ಯರು ಚೀಟಿ ಬರೆದು ಕೊಡುತ್ತಾರೆ. ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರೂ ಹಣ ಖರ್ಚು ಮಾಡುವುದು ತಪ್ಪಿಲ್ಲ’ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ. ‘ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಔಷಧಗಳ ಲಭ್ಯತೆ ಇಲ್ಲ. ಆದ್ದರಿಂದ ಹೊರಗಿನಿಂದ ತರುವಂತೆ ರೈತರಿಗೆ ಹೇಳುತ್ತಿದ್ದೇವೆ’ ಎಂದು ಪಶು ವೈದ್ಯಾಧಿಕಾರಿ ಅಶೋಕ್‌ ಹೇಳುತ್ತಾರೆ.  ‘ಸರ್ಕಾರ ಪಶು ಚಿಕಿತ್ಸಾಲಯಗಳಲ್ಲೇ ಅಗತ್ಯ ಔಷಧಗಳನ್ನು ಒದಗಿಸುವ ಮೂಲಕ ಕೃಷಿಕರ ಹಿತ ಕಾಯಬೇಕು’ ಎಂದು ರೈತ ಮುಖಂಡರಾದ ರಾಮಜೋಗಿ ಪ್ರಾಚಾರ್ಯ ಹಾಗೂ ಗೌಡ್ರ ನಟರಾಜ್ ಒತ್ತಾಯಿಸುತ್ತಾರೆ.
ಸಿಬ್ಬಂದಿ ಕೊರತೆಯಿಂದ ಸೊರಗಿದ ಚಿಕಿತ್ಸೆ ಡಿ.ಎಂ.ಹಾಲಾರಾಧ್ಯ 
ನ್ಯಾಮತಿ: ಪಟ್ಟಣದಲ್ಲಿರುವ ಪಶು ಆಸ್ಪತ್ರೆ ಕಟ್ಟಡ ಸುಸಜ್ಜಿತವಾಗಿದೆ. ವಿಶಾಲವಾದ ಜಾಗವನ್ನೂ ಹೊಂದಿದೆ. ಮೊಬೈಲ್ ಚಿಕಿತ್ಸಾ ವಾಹನವು ಇದೆ. ತಜ್ಞ ಪಶು ವೈದ್ಯರು ಹಾಗೂ ಸಹಾಯಕರು ಇದ್ದಾರೆ. ಆದರೆ ನಿಗದಿತ ಸಂಖ್ಯೆಯ ಸಿಬ್ಬಂದಿ ಇಲ್ಲದಿರುವುದರಿಂದ ಜಾನುವಾರುಗಳಿಗೆ ಸೂಕ್ತ ಸಮಯಕ್ಕೆ ಗುಣಮಟ್ಟದ ಚಿಕಿತ್ಸೆ ನೀಡಲು ಆಗುತ್ತಿಲ್ಲ. ಕೆಂಚಿಕೊಪ್ಪ ಮಲ್ಲಿಗೇನಹಳ್ಳಿ ಕುಂಕುವ ಒಡೆಯರಹತ್ತೂರಿನಲ್ಲಿರುವ ಪಶು ಚಿಕಿತ್ಸಾಲಯಗಳಲ್ಲಿ ಸಹಾಯಕರೇ ಇಲ್ಲ. ಚಟ್ನಹಳ್ಳಿ ಹಾಗೂ ಚೀಲೂರಿನಲ್ಲಿರುವ ಕೇಂದ್ರಗಳಲ್ಲಿ ‘ಡಿ’ ದರ್ಜೆ ನೌಕರರ ಕೊರತೆ ಇದೆ. ಇದರಿಂದ ಲಸಿಕೆ ಕಾರ್ಯಕ್ರಮ ಹಾಗೂ ಇನ್ನಿತರ ಸಂದರ್ಭದಲ್ಲಿ ವೈದ್ಯರೇ ಎಲ್ಲಾ ಕೆಲಸವನ್ನು ನಿರ್ವಹಿಸಬೇಕಿದೆ. ‘ತಾಲ್ಲೂಕಿನ ಚಿಕಿತ್ಸಾಲಯಗಳಲ್ಲಿ ಸಹಾಯಕರು ಮತ್ತು ‘ಡಿ’ ದರ್ಜೆ ನೌಕರರ ನೇಮಕಾತಿ ಆಗಬೇಕಿದೆ. ಈ ವಿಚಾರವನ್ನು ಇಲಾಖೆಯ ಗಮನಕ್ಕೆ ತರಲಾಗಿದೆ’ ಎಂದು ನ್ಯಾಮತಿ ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ (ಆಡಳಿತ) ಚಂದ್ರಶೇಖರ ಹೊಸಮನೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT