ಸೋಮವಾರ, ಅಕ್ಟೋಬರ್ 14, 2019
22 °C

ಜನರ ಸಪ್ಪಳಕ್ಕೆ ಸ್ಥಳ ಬದಲಾಯಿಸುತ್ತಿದ್ದ ಚಿರತೆ

Published:
Updated:
Prajavani

ಸಾಸ್ವೆಹಳ್ಳಿ: ಚಿರತೆ ಓಡಾಟದಿಂದ ಆತಂಕಕ್ಕೆ ಒಳಗಾಗಿದ್ದ ರೈತರು ಸ್ಪಲ್ಪ ನಿರಾಳರಾಗಿದ್ದಾರೆ. ಬಹುದಿನಗಳಿಂದ ಹಟ್ಟಿಹಾಳು, ಭೈರನಹಳ್ಳಿ, ಚೀಲಾಪುರ, ತ್ಯಾಗದಕಟ್ಟೆ, ಕರಡಿ ಕ್ಯಾಂಪ್ ಇತರೆ ಗ್ರಾಮಗಳಲ್ಲಿ ಭಯ ಹುಟ್ಟಿಸಿದ್ದ ಚಿರತೆ ಭಾನುವಾರ ಬೆಳಗ್ಗೆ ಚೀಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದೆ.

ಭೈರನಹಳ್ಳಿ ಗ್ರಾಮದಲ್ಲಿ ಕಳೆದ ವರ್ಷ ಬಿತ್ತನೆ ಸಂದರ್ಭದಲ್ಲಿ ಕಾಣಸಿಕೊಂಡಿತ್ತು. ಸುತ್ತಮುತ್ತಲ ಗ್ರಾಮಗಳ ಗಡಿ ಭಾಗಗಳಲ್ಲಿ ಓಡಾಡಿಕೊಂಡು ಬೀಡಾಡಿ ನಾಯಿಗಳನ್ನು ಎಳೆದೊಯ್ದು ತಿನ್ನುತಿದ್ದ ಚಿರತೆ ಹಟ್ಟಿಹಾಳು ಬಂಡೆ ಹೊಲದ ಕಲ್ಲು ಬಂಡೆಯ ಮೇಲೆ ವಿಶ್ರಾಂತಿ ಪಡೆಯುತಿದ್ದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿಯಾಗಿತ್ತು.

ಸೆಪ್ಟೆಂಬರ್‌ 4 ರಂದು ಅರಣ್ಯ ಇಲಾಖೆಯು ಹಟ್ಟಿಹಾಳು ಬಂಡೆ ಹೊಲದ ತೋಟದಲ್ಲಿ ಬೋನು ಇಟ್ಟು ಅದರಲ್ಲಿ ನಾಯಿ ಕೂಡಿ ಹಾಕಿದ್ದರು. ನಾಲ್ಕು ವಾರ ಕಳೆದರೂ ಜನರ ಸಪ್ಪಳದಿಂದ ಚಿರತೆ ಸ್ಥಳ ಬದಲಾಯಿಸಿ, ಕರಡಿ ಕ್ಯಾಂಪ್‍ನಲ್ಲಿ ಕುರಿ ಮೇಕೆ, ಐದಾರು ನಾಯಿಗಳನ್ನು ತಿಂದಿದೆ. ಕುಳಗಟ್ಟೆ ಗ್ರಾಮದ ರೈತರ ಸಾಕು ಪ್ರಾಣಿಗಳು, ಉಜ್ಜನಿಪುರ, ಸದಾಶಿವಪುರ, ಹನುಮನಹಳ್ಳಿ ಮತ್ತಿತರೆ ಭಾಗಗಳಲ್ಲಿ ಓಡಾಡಿ ರೈತರಿಗೆ ನಿದ್ದೆ ಗೆಡಿಸಿತ್ತು.

ಮೂರು ನಾಲ್ಕು ದಿನಗಳ ಹಿಂದೆ ಚೀಲಾಪುರ ಗ್ರಾಮದ ರೈತರಿಗೆ ಚಿರತೆ ಇರುವಿನ ಬಗ್ಗೆ ಸುಳಿವಿನ ಮೇರೆಗೆ ಬೋನನ್ನು, ಚೀಲಾಪುರ ಗಡಿಭಾಗದ ಹಳ್ಳ ಭಾಗದಲ್ಲಿ ಬೋನ್ ಅಳವಡಿಸಲಾಗಿತ್ತು. ಸೆರೆಸಿಕ್ಕ ಹೆಣ್ಣು ಚಿರತೆಯನ್ನು ಮಾವಿನಕೋಟೆ ಅರಣ್ಯವಲಯಕ್ಕೆ ಸಾಗಿಸಲಾಗಿದೆ.

ಪ್ರತ್ಯಕ್ಷದರ್ಶಿ ಭೈರನಹಳ್ಳಿ ಗ್ರಾಮದ ಮಂಜಪ್ಪ ಹೇಳುವಂತೆ, ‘ನಮ್ಮದು ಕಾಡಂಚಿನ ಗ್ರಾಮವಾಗಿದ್ದು, ಜನರು ಕೆಲಸಗಳಿಗೆ ಹೋದಾಗ ನರಿ, ಕರಡಿ, ತೋಳ, ಕಾಡಂದಿ, ಕತ್ತೆ ಕಿರುಬಗಳು ಕಾಣಿಸಿಕೊಳ್ಳುತ್ತವೆ. ಕಳೆದ ವರ್ಷದಿಂದ ಚಿರತೆ ಈ ಭಾಗದಲ್ಲಿ ಕಾಣಿಸಿಕೊಂಡು ಕುರಿ, ಮೇಕೆ, ಸಾಕು ಪ್ರಾಣಿಗಳನ್ನು ತಿನ್ನುತ್ತಿವೆ. ಈ ಚಿರತೆಗೆ ಮರಿಗಳಿವೆ. ಈ ಹೆಣ್ಣು ಚಿರತೆಯೊಂದಿಗೆ ಇನ್ನೆರಡು ಚಿರತೆಗಳು ಇವೆ’ ಎನ್ನುತ್ತಾರೆ.

Post Comments (+)