ಬುಧವಾರ, ಮೇ 19, 2021
24 °C
ಹರಿಹರ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ

ಮೀಸಲಾತಿ ನೀಡದಿದ್ದರೆ ತಕ್ಕ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಾಯಕ ಸಮಾಜದವರಿಗೆ ಮೀಸಲಾತಿ ನೀಡದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದರು.

ವಾಲ್ಮೀಕಿ ಜಾತ್ರೆಯ ಯಶಸ್ಸಿಗೆ ಕಾರಣರಾದವರಿಗೆ ಇಲ್ಲಿನ ನಾಯಕ ಹಾಸ್ಟೆಲ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ‘ಪ್ರಜ್ಞಾವಂತರಾಗಿ ನಮ್ಮ ಸಮುದಾಯಕ್ಕೆ ಸಾಂವಿಧಾನಿಕ ಹಕ್ಕು ನೀಡದಿದ್ದರೆ ಬುದ್ಧಿ ಕಲಿಸುತ್ತೇವೆ ಎಂಬ ಸಂಕಲ್ಪ ಮಾಡಬೇಕು’ ಎಂದರು.

‘ದಾವಣಗೆರೆ ಜಿಲ್ಲೆಯಲ್ಲಿ ನಮ್ಮದು ಅತಿ ದೊಡ್ಡ ಸಮಾಜವಾಗಿದ್ದರೂ ರಾಜಕೀಯವಾಗಿ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಇದಕ್ಕೆ ನೀವು ಯಾವುದೋ ಪಕ್ಷ ಹಾಗೂ ನಾಯಕರ ಅನುಯಾಯಿಗಳಾಗಿರುವುದೇ ಕಾರಣ. ವಾಲ್ಮೀಕಿ ಜಾತ್ರೆ ಯಶಸ್ಸು ಆಗಬೇಕಾದರೆ ವಾಲ್ಮೀಕಿ ಸಮಾಜದವರ ಅನುಯಾಯಿಗಳಾಗಬೇಕು’ ಎಂದು ಹೇಳಿದರು.

‘ವಾಲ್ಮೀಕಿ ನಾಯಕ ಸಮಾಜಕ್ಕೆ ದೊರೆಯಬೇಕಾದ ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಹಕ್ಕಿಗಾಗಿ ಸಮಾಜದವರು ಪಕ್ಷಾತೀತವಾಗಿ ಸಂಘಟಿತರಾಗಿ, ಒಗ್ಗಟ್ಟಿನ ಹೋರಾಟ ನಡೆಸಬೇಕು. ರಾಜ್ಯದ 28 ಜಿಲ್ಲೆಗಳ ಪ್ರವಾಸ ಕಾರ್ಯಕ್ರಮದ ನಂತರ ಮತ್ತೆ ಮೀಸಲಾತಿಗಾಗಿ ಹೋರಾಟ ನಡೆಸಲಾಗುವುದು’ ಎಂದು ಸ್ವಾಮೀಜಿ ತಿಳಿಸಿದರು.

3ನೇ ವಾಲ್ಮೀಕಿ ಜಾತ್ರೆಯ ‘ವಾಲ್ಮೀಕಿ ವಿಜಯ‘ದ ಸಂಪುಟದ ಸಂಪಾದಕ  ಸಂಪುಟದ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಮಾತನಾಡಿ, ‘ಅಧಿಕಾರ, ಸಂಪತ್ತನ್ನು ಪಾರಂಪರಿಕವಾಗಿ ಅನುಭವಿಸಿಕೊಂಡಿರುವ ಸಮುದಾಯ
ಗಳು, ಸಮುದಾಯದ ಸಂಘಟನೆಯನ್ನು ಗಟ್ಟಿಯಾಗಿ ಕಾಪಾಡಿಕೊಂಡು ಬಂದಿವೆ. ನಮ್ಮಂತಹ ಅಲಕ್ಷ್ಯ ಸಮುದಾಯ ಸಣ್ಣ ಪ್ರಮಾಣದ ಸಾಂಘಿಕ ಬದುಕು ಕಟ್ಟಿಕೊಳ್ಳಲು, ನಮ್ಮ ಪ್ರಾಥಮಿಕ ಬದುಕು ಈಡೇರಿಸಿಕೊಳ್ಳುವುದಕ್ಕೆ ವಿನಾ ಅಧಿಕಾರ ಸಂಪತ್ತು ಕಾಪಾಡಿಕೊಳ್ಳಲು ಅಲ್ಲ’ ಎಂದರು.

ಜಾತ್ರಾ ಸಂಚಾಲಕ ಹೊದಿಗೆರೆ ರಮೇಶ್, ‘ಸಮಾಜದ ಮುಂದೆ ಹಲವು ಸವಾಲುಗಳು ಇದ್ದು, ಸ್ವಾಮೀಜಿಗಳ ಹೋರಾಟಕ್ಕೆ ಸಾಥ್ ನೀಡಬೇಕು’ ಎಂದು ಮನವಿ ಮಾಡಿದರು.

ದಂಪತಿಗೂ ಸನ್ಮಾನ

ವಾಲ್ಮೀಕಿ ಜಾತ್ರೆಯ ಸಂದರ್ಭದಲ್ಲಿ ಶ್ರಮಿಸಿದ ವಾಲ್ಮೀಕಿ ಸೇವಾ ಸಮಿತಿಯ ಪದಾಧಿಕಾರಿಗಳನ್ನು ದಂಪತಿಯ ಸಮೇತ ಸನ್ಮಾನಿಸಲಾಯಿತು. ಮಹಿಳೆಯರಿಗೆ ಸೀರೆ ಹಾಗೂ ಕುಪ್ಪಸ ನೀಡಲಾಯಿತು.

ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ. ವೀರಣ್ಣ, ವಕೀಲ ಆಂಜನೇಯ ಗುರೂಜಿ, ಸಮಾಜದ ಮುಖಂಡರಾದ ಜಿ.ಟಿ. ಚಂದ್ರಶೇಖರಪ್ಪ, ಶ್ರೀನಿವಾಸ ದಾಸಕರಿಯಪ್ಪ ಅವರೂ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.