ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮೊಳಗಿರುವ ಪ್ರತಿಭೆಯ ‘ರತ್ನ’ ಹೊರಬರಲಿ

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ
Last Updated 16 ಜನವರಿ 2021, 3:23 IST
ಅಕ್ಷರ ಗಾತ್ರ

ದಾವಣಗೆರೆ: ‘ಭಾರತ ಹಳ್ಳಿಗಳ ದೇಶ. ಯಾವ ದೇಶದಲ್ಲಿ ಯುವಕರು ಇರುತ್ತಾರೋ ಆ ದೇಶದಲ್ಲಿ ಪ್ರಗತಿ, ಉತ್ಸಾಹ ಇರುತ್ತದೆ. ಎಲ್ಲರ ಒಳಗೂ ಒಂದು ರತ್ನ ಇರುತ್ತದೆ. ಅದನ್ನು ಹುಡುಕಿ ತೆಗೆದು ಯಶಸ್ಸು ಸಾಧಿಸಬೇಕು’ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಶುಕ್ರವಾರ ಹರಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ನಡೆದ ‘ಯುವರತ್ನ ಸಮಾವೇಶ’ದಲ್ಲಿ ಮಾತನಾಡಿದರು.

‘ಇಲ್ಲಿ ಬಂದಿರುವ ಎಲ್ಲ ಯುವ ಸಾಧಕರಲ್ಲಿ ಉತ್ಸಾಹ, ಛಲ ಇದೆ. ಅವರಂತೆ ನೀವೂ ಆಗಬೇಕು. ಈದೇಶದ ಪ್ರಧಾನಿಗೆ ಯುವಕರಲ್ಲಿರುವ ಉತ್ಸಾಹ ಇದೆ. ನಿಮ್ಮಲ್ಲೂ ಅದು ಬರಬೇಕು. ಜಗತ್ತಿನಲ್ಲಿ ಅತಿ ಹೆಚ್ಚು ಯುವಕರು ಇರುವ ದೇಶ ಭಾರತ. ಮಕ್ಕಳಲ್ಲಿ ಕನಸು,ಯುವಕರಲ್ಲಿ ಉತ್ಸಾಹ,ಹಿರಿಯರಲ್ಲಿ ಅನುಭವ ಇರುತ್ತದೆ. ಈ ಮೂರರ ಸಂಗಮ ನಾವಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಯಾವ ದೇಶ ಯುವಜನರಿಂದ ಕೂಡಿರುತ್ತದೆಯೋ ಆ ದೇಶದ ಭವಿಷ್ಯ ಉಜ್ವಲವಾಗಿರುತ್ತದೆ. ಯುವಕರಿಗೆ ಮಾರ್ಗದರ್ಶನ ಮಾಡುವ ಹೊಣೆ ಪೋಷಕರ ಮೇಲೆ ಇದೆ. ಯುವಕರು ಕೃಷಿಕರಾಗುವ ಅಗತ್ಯ ಇಂದು ಹೆಚ್ಚಿದೆ’ ಎಂದರು.

‘ನನಗೆ ಯೋಗ ಕಲಿಯಲು ಪ್ರೇರಣೆ ಡಾ. ರಾಜ್‌ಕುಮಾರ್‌. ಅವರ ಹಾದಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ನಡೆಯುತ್ತಿದ್ದಾರೆ. ಯಾವ ಮನುಷ್ಯ ನಾನು ಸಣ್ಣವನು ಎಂದು ಅಂದುಕೊಳ್ಳುತ್ತಾನೋ ಅವನು ಜನಸಾಮಾನ್ಯರ ಹೃದಯದಲ್ಲಿ ಇರುತ್ತಾನೆ. ಅದಕ್ಕೆ ಪುನೀತ್‌ ಸಾಕ್ಷಿ’ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಯುವ ಕೃಷಿಕ, ಬಿಗ್‌ಬಾಸ್‌ ವಿನ್ನರ್‌ ಶಶಿಕುಮಾರ್‌, ‘ನಾವು ಯಾವುದೇ ಕೆಲಸವನ್ನು ಆಸಕ್ತಿಯಿಂದ ಮಾಡಿದರೆ ಅದರಲ್ಲಿ ಯಶಸ್ಸು ಸಾಧ್ಯ. ಮಕ್ಕಳಲ್ಲಿನ ಆಸಕ್ತಿಯನ್ನು ಪೋಷಕರು ಗುರುತಿಸಬೇಕು. ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿನ ಆಸಕ್ತಿಯನ್ನು ಸಾಯಿಸುತ್ತಿದೆ. ಇದು ಬದಲಾಗಬೇಕು’ ಎಂದು ಹೇಳಿದರು.

‘ಎಸ್ಸೆಸ್ಸೆಲ್ಸಿ, ಪಿಯುಸಿ ಬಳಿಕ ಪದವಿ ಪಡೆದು ಮುಂದುವರಿಯಬೇಕು ಎಂದೇನಿಲ್ಲ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ಪದವಿ ಪಡೆಯಬಹುದು. ನೀವು ಏನು ಮಾಡಬೇಕು ಎಂಬ ಬಗ್ಗೆ ದೃಢ ನಿರ್ಧಾರ ಇರಲಿ. ನಾನು ಕೃಷಿ ಕ್ಷೇತ್ರವನ್ನು ಆರಿಸಿಕೊಂಡು ಇವತ್ತು ಇಲ್ಲಿದ್ದೇನೆ. ನಾನೂ ಎಂದಿಗೂ ಇಂತಹ ಗಣ್ಯರ ಜತೆ ವೇದಿಕೆ ಹಂಚಿಕೊಳ್ಳುತ್ತೇನೆ ಎಂದುಕೊಂಡಿರಲಿಲ್ಲ. ಅದು ಸಾಧ್ಯವಾಗಿದ್ದು ಕೃಷಿಯಿಂದ. ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ವಿನಯ್‌ ಗುರೂಜಿ, ‘ಜಾತಿ ವ್ಯವಸ್ಥೆಯ ಭೇದ ಕಿತ್ತು, ಬಡವ ಬಲ್ಲಿದ ಎಂಬ ಅಸಮಾನತೆ ತೊಡೆದು ನಾವೆಲ್ಲಾ ಶಿವನ ಮಕ್ಕಳು ಎಂದಿದ್ದು ಲಿಂಗಾಯತ ಸಮಾಜ. ಜೀವಂತ ಅನುಭವ ಕಲಿಯಬೇಕಾದರೆ ನಾವು ಬಸವಣ್ಣ, ಅಲ್ಲಮ, ಅಕ್ಕನ ವಚನಗಳನ್ನು ಕೇಳಬೇಕು. ಮೂಢನಂಬಿಕೆಯನ್ನು ತೊಡೆದು, ಜ್ಞಾನಜ್ಯೋತಿ ಬೆಳಗಿಸಿದವರು ಶರಣರು. ಎಡಗೈಗೂ ಪ್ರಾಧ್ಯಾನ್ಯತೆ ನೀಡಿದ ಸಮುದಾಯ ಲಿಂಗಾಯತ’ ಎಂದು ಹೇಳಿದರು.

‘ಬಸವಣ್ಣನಂತೆ ದಾವಣಗೆರೆ, ಹರಿಹರವನ್ನು ಕೈಲಾಸ ಮಾಡಿದವರು, ಯೋಗ ವಿಜ್ಞಾನವನ್ನು ಜಗತ್ತಿಗೆ ಸಾರಿದವರು ವಚನಾನಂದ ಸ್ವಾಮೀಜಿ’ ಎಂದು ಬಣ್ಣಿಸಿದರು.

ಶಾಸಕ ಮುನಿರತ್ನ, ‘ಹರ ಜಾತ್ರೆಯನ್ನು ಸ್ವಾಮೀಜಿ ಪ್ರತಿವರ್ಷ ಆಯೋಜಿಸಲಿ. ಎಲ್ಲೇ ಕಾರ್ಯಕ್ರಮ ಮಾಡಿದರೂ ಬರುತ್ತೇನೆ’ ಎಂದರು.

ನಿಶಾ ಯೋಗೀಶ್ವರ್‌, ರೈತ ಮುಖಂಡ ತೇಜಸ್ವಿ ಪಟೇಲ್‌, ಮೇಯರ್‌ ಬಿ.ಜಿ. ಅಜಯ್‌ಕುಮಾರ್‌, ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ, ಪಂಚಮಸಾಲಿ ಯುವ ಘಟಕದ ನವೀನ್‌ ಪಾಟೀಲ್, ಮಂಜುನಾಥ ನವಲಗುಂದ, ಬಿ. ಲೋಕೇಶ ಹಾಗೂ ಹಲವು ಯುವ ಮುಖಂಡರು ಇದ್ದರು.

ಪುನೀತ್‌ ನೋಡಲು ಮುಗಿಬಿದ್ದ ಜನ

ಹರಜಾತ್ರೆಯ ಯುವರತ್ನ ಸಮಾವೇಶದ ಕೇಂದ್ರಬಿಂದುನಟ ಪುನೀತ್‌ ರಾಜ್‌ಕುಮಾರ್ ಆಗಿದ್ದರು. ಅವರು‌ ಬರುತ್ತಿದ್ದಂತೆ ಜನರು ಕೇಕೆ ಹಾಕಿ ಸಂಭ್ರಮಿಸಿದರು. ಅವರು ಕಂಡಾಗಲೆಲ್ಲಾ ಜನರು ಕೂಗುತ್ತಿದ್ದರು. ಅವರು ವೇದಿಕೆಗೆ ಬರುವುದನ್ನೇ ಕಾಯುತ್ತಿದ್ದರು. ಅವರು ಬಂದಾಗ ಕೇಕೆ ಹಾಕಿ ಸಂಭ್ರಮಿಸಿದರು.

ಪೀಠದ ಆವರಣ ಸೇರಿ ಎಲ್ಲ ಕಡೆಯಿಂದ ಪುನೀತ್‌ ನೋಡಲು ಜನ ಮುಗಿಬಿದ್ದರು.

ವೇದಿಕೆಯಲ್ಲಿ ಮಾತು ಮುಗಿಸಿ ಅಪ್ಪು ಹೊರಟಾಗ ಹಾಡು ಹೇಳುವಂತೆ ಜನರು ಬೇಡಿಕೆ ಇಟ್ಟರು.. ಬಳಿಕ ಪುನೀತ್‌, ‘ಬೊಂಬೆ ಹೇಳುತೈತೆ..ನೀನೇ ರಾಜಕುಮಾರ’..ಎಂಬ ಹಾಡು ಹೇಳಿ ಅಭಿಮಾನಿಗಳನ್ನು ರಂಜಿಸಿದರು.

‘ನಾವು ಮೊದಲು ತಂದೆ–ತಾಯಿ ಬಳಿಕ ಗುರುಹಿರಿಯರನ್ನು ಗೌರವಿಸಬೇಕು. ನಾವು ಮಾಡುವ ಕೆಲಸದಲ್ಲಿ ನಂಬಿಕೆ, ಗೌರವ ಇರಬೇಕು. ನಾವು ಚೆನ್ನಾಗಿದ್ದರೆ ನಮ್ಮ ಸುತ್ತಲಿನವರೂ ಉತ್ತಮ ಸ್ಥಿತಿಯಲ್ಲಿರುತ್ತಾರೆ’ ಎಂದು ಪುನೀತ್‌ ರಾಜ್‌ಕುಮಾರ್‌ ಹೇಳಿದರು.

‘ಗಿಡ ನೆಟ್ಟು, ಮರವಾಗಿ ಬೆಳೆಯುವಂತೆ ನೀವು ಗಟ್ಟಿಯಾಗಿ ಬೆಳೆದು ನಿಮ್ಮಲ್ಲಿನ ‘ಯುವರತ್ನ’ನನ್ನು ಕಂಡುಕೊಳ್ಳಿ’ ಎಂದು ಕಿವಿಮಾತು ಹೇಳಿದರು.

‘ಇಲ್ಲಿ ಶೂಟಿಂಗ್‌ ಮಾಡುವ ಅವಕಾಶ ಸಿಕ್ಕರೆ ಮತ್ತೆ ಬರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT