ಬುಧವಾರ, ಆಗಸ್ಟ್ 17, 2022
27 °C
ವಿಶೇಷ ವೀಕ್ಷಕರಿಂದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಶೇಷ ವೀಕ್ಷಕ ಎಸ್‌.ಆರ್‌. ಉಮಾಶಂಕರ್‌

ಮತದಾರರ ಪಟ್ಟಿ ಪರಿಷ್ಕರಣೆಗೆ ಪಕ್ಷಗಳ ಸಹಕಾರವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸರಿಯಾದ ಮತದಾರರ ಪಟ್ಟಿಯಿಂದ ಲೋಪರಹಿತವಾದ ಮತದಾನ ಸಾಧ್ಯ. ಆದ್ದರಿಂದ ರಾಜಕೀಯ ಪಕ್ಷಗಳ ಮುಖಂಡರು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತಮ್ಮ ಪ್ರದೇಶಗಳಿಗೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ನೀಡಿ ರಚನಾತ್ಮಕವಾದ ಸಹಕಾರ ನೀಡಬೇಕು ಎಂದು ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ವಿಶೇಷ ವೀಕ್ಷಕ ಎಸ್.ಆರ್. ಉಮಾಶಂಕರ್ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಮತದಾರರ ಪಟ್ಟಿಗಳ ಪರಿಷ್ಕರಣೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಯಾವ ಮತದಾರರನ್ನು ಸೇರ್ಪಡೆಗೊಳಿಸಬೇಕು, ಹೆಸರು ತೆಗೆದು ಹಾಕಬೇಕು, ವರ್ಗಾವಣೆ, ತಿದ್ದುಪಡಿಗೆ ಸಂಬಂಧಿಸಿದಂತೆ (ಅರ್ಜಿ ನಮೂನೆ 6, 7, 8 ಮತ್ತು 8ಎ) ಅರ್ಜಿಗಳನ್ನು ನೀಡಿ ಸಹಕರಿಸಬೇಕು. ನಿಮ್ಮ ಸಹಕಾರ ಇದ್ದರೆ ಮತದಾರರ ಪಟ್ಟಿ ತಯಾರಿಕೆಯಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಇಲ್ಲವಾದರೆ ಪಟ್ಟಿಗೆ ಸಂಬಂಧಿಸಿಂದತೆ ದೂರುಗಳು ಹೆಚ್ಚುತ್ತವೆ ಎಂದರು.

ಎಲೆಕ್ಟರಲ್ ಪಾಪ್ಯುಲೇಷನ್ (ಇಪಿ) ಪ್ರಮಾಣ ಶೇ 77 ಇದೆ. ಇಷ್ಟು ಹೆಚ್ಚು ಇರಲು ಹೆಸರು ತೆಗೆದು ಹಾಕುವ ಕೆಲಸ ಸರಿಯಾಗಿ ಆಗದೇ ಇರುವುದು ಕಾರಣ. ಮರಣ ಹೊಂದಿದವರ, ಬೇರೆ ಊರಿಗೆ ಹೋಗಿ ನೆಲೆಸಿರುವವರ ಹೆಸರನ್ನು ತೆಗೆದುಹಾಕಲು ನೀಡಲಾದ ಅರ್ಜಿಯನ್ನು ಅಪ್‌ಡೇಟ್ ಮಾಡಬೇಕು ಎಂದು ಹೇಳಿದರು.

ಯುವ ಮತದಾರರ ಅರ್ಜಿ ನೀಡಲಾಗಿದ್ದು ಕರಡು ಪ್ರತಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿಲ್ಲ. ದಾವಣಗೆರೆಯಲ್ಲಿ ನೆಲೆಸಿರದ ಕೆಲವು ಎಂಎಲ್‌ಸಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಈ ಬಗ್ಗೆ ನಾವು ಆಕ್ಷೇಪಣೆ ಸಲ್ಲಿಸಿದ್ದೆವು. ಈ ಬಗ್ಗೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಕೂಡ ಆಗಿ ವರದಿ ನೀಡಿದ್ದು, ಪ್ರಕರಣ ಸದ್ಯ ಹೈಕೋರ್ಟ್‌ನಲ್ಲಿ ಇದೆ. ಈ ಬಗ್ಗೆ ನಿಯಮಾನುಸಾರ ಆಕ್ಷೇಪಣೆಯನ್ನು ನಾವು ಸಲ್ಲಿಸಲಿದ್ದು ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಇವರ ಹೆಸರನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಮುಖಂಡ ಎ. ನಾಗರಾಜ್ ಮನವಿ ಮಾಡಿದರು.

ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ತಮ್ಮ ಬಿಎಲ್‌ಎ (ಬೂತ್ ಮಟ್ಟದ ಏಜೆಂಟ್ಸ್)ಗಳ ಪಟ್ಟಿಯನ್ನು ಚುನಾವಣಾಧಿಕಾರಿಗಳಿಗೆ ನೀಡಬೇಕು. ಹೊನ್ನಾಳಿ ತಾಲ್ಲೂಕು ಹೊರತುಪಡಿಸಿ ಬೇರೆ ಕ್ಷೇತ್ರಗಳಿಂದ ಪಟ್ಟಿ ಬಂದಿಲ್ಲ. ಡಿ.17ರ ವರೆಗೆ ಆಕ್ಷೇಪಣೆಗಳು, ತಿದ್ದುಪಡಿಗೆ ಅವಕಾಶ ಇದೆ ಎಂದು ಉಮಾಶಂಕರ್‌ ಮಾಹಿತಿ ನೀಡಿದರು.

ಮೊದಲು ಬಿಎಲ್‌ಒಗಳು ಯುವ ಮತದಾರರ ಕಾರ್ಡನ್ನು ಬೇಗ ನೀಡುತ್ತಿದ್ದರು. ಕೊರೊನಾ ವೇಳೆ ಯುವ ಮತದಾರರ ಕಾರ್ಡ್‌ ನೀಡುವುದು ವಿಳಂಬವಾಗಿದೆ ಎಂದು ಬಿಜೆಪಿ ಪಕ್ಷದ ಮುಖಂಡರಾದ ಲಿಂಗರಾಜ ಗೌಳಿ ತಿಳಿಸಿದರು.

ಈಗ ಪಿವಿಸಿ ಎಪಿಕ್ ಕಾರ್ಡ್ ನೀಡುತ್ತಿದ್ದು ತಾಂತ್ರಿಕ ತೊಂದರೆಯಿಂದ ಸ್ವಲ್ಪ ವಿಳಂಬವಾಗಿತ್ತು. ಇದೀಗ ಇದನ್ನು ಸರಿಪಡಿಸಲಾಗಿತ್ತು ಎಪಿಕ್ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಸಂಯುಕ್ತ ದಶದ ಎಚ್.ಜಯಪ್ಪ, ಕಾಂಗ್ರೆಸ್ ಪಕ್ಷದ ಪಿ.ಜೆ. ನಾಗರಾಜ್, ಸಿಪಿಐ ಪಕ್ಷದ ರಂಗನಾಥ ನರೆಗಾ ಅವರೂ ಇದ್ದರು.

ಅಧಿಕಾರಿಗಳೊಂದಿಗೆ ಸಭೆ

ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಬಳಿಕ ಚುನಾವಣಾಧಿಕಾರಿಗಳೊಂದಿಗೆ ಎಸ್‌.ಆರ್‌. ಉಮಾಶಂಕರ್‌ ಸಭೆ ನಡೆಸಿದರು.

ಬಿಎಲ್‌ಒಗಳು ತಂದ ಅರ್ಜಿ ನಮೂನೆಗಳಾದ 6, 7, 8 ಮತ್ತು 8ಎಗಳನ್ನು ಪಾಲಿಕೆ ಮತ್ತು ತಹಶೀಲ್ದಾರ್ ಕಚೇರಿಯಲ್ಲಿ ನಿಯಮಾನುಸಾರ ಸ್ವೀಕರಿಸಿ ಅಪ್‌ಡೇಟ್ ಮಾಡಬೇಕು. ಬಲ್ಕ್ ಆಗಿ ಅರ್ಜಿ ಸ್ವೀಕರಿಸಿ ಶೇಖರಿಸಿಡಬಾರದು ಎಂದು ಸೂಚನೆ ನೀಡಿದರು.

ಜಿಲ್ಲೆಯ ಇಪಿ(ಎಲೆಕ್ಟರಲ್ ಪಾಪ್ಯುಲೇಷನ್) ಅನುಪಾತವನ್ನು ಶೇ 77 ಇದ್ದು ಅದನ್ನು ಶೇ 72ಕ್ಕೆ ಇಳಿಸಬೇಕು. ಎಷ್ಟೇ ಚುನಾವಣೆಯಲ್ಲಿ ಕೆಲಸ ಮಾಡಿದ್ದರೂ ಪ್ರತಿ ಚುನಾವಣೆಯೂ ಹೊಸದೇ ಆಗಿರುತ್ತದೆ. ಆದ ಕಾರಣ ರಿಫ್ರೆಷ್ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಒಂದು ಕಾರ್ಯಾಗಾರ ನಡೆಸಬೇಕು ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಚುನಾವಣಾಧಿಕಾರಿಗಳಾದ ಎಸಿ ಮಮತಾ ಹೊಸಗೌಡರ್, ಎಸ್‌ಎಲ್‌ಒ ರೇಷ್ಮಾ ಹಾನಗಲ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಶಿರಸ್ತೇದಾರರು, ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.