ಶನಿವಾರ, ಫೆಬ್ರವರಿ 22, 2020
19 °C
ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಸಲಹೆ

ನೀರಿನ ಸದ್ಬಳಕೆ ಸಮರ್ಪಕವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನೀರಿಗೆ ಕೊರತೆ ಇರುವ ಈ ಕಾಲಘಟ್ಟದಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚಿನ ಆಹಾರ ಉತ್ಪಾದನೆ ಮಾಡುವ ತಂತ್ರಜ್ಞಾನಗಳು ಆವಿಷ್ಕಾರವಾಗಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಸಮಿತಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ 27ನೇ ರಾಷ್ಟ್ರೀಯ ಮಕ್ಕಳ ಸಮಾವೇಶ–2019ರ ಅಂಗವಾಗಿ ಬಾಪೂಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ರಾಜ್ಯಮಟ್ಟದ ಜಿಲ್ಲಾ ಸಂಯೋಜಕರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಗಿಡಗಳು ಹಸಿರಾಗಿರಬೇಕಾದರೆ ನೀರು ಅವಶ್ಯಕ. ನೀರನ್ನು ಉಳಿಸದೇ ಇದ್ದರೆ ನಮ್ಮ ನಮ್ಮ ಪ್ರದೇಶಗಳಲ್ಲಿ ಹಸಿರು ಬೆಳೆಸಲು ಸಾಧ್ಯವಿಲ್ಲ. ಆದ್ದರಿಂದ ನೀರಿನ ಸಂಪನ್ಮೂಲವನ್ನು ಮಿತವಾಗಿ ಬಳಸಬೇಕು. ಹಲವು ರೈತರು ಕಬ್ಬು ಹಾಗೂ ಕಾಫಿ ತೋಟಗಳಲ್ಲಿ ಹನಿ ನೀರಾವರಿ ಅಳವಡಿಸಿಕೊಂಡು ಹೆಚ್ಚಿನ ಉತ್ಪನ್ನ ತೆಗೆಯುತ್ತಿದ್ದಾರೆ’  ಎಂದರು.

‘ಸ್ವಚ್ಛ ಭಾರತ ಯೋಜನೆಯಡಿ ವಿವಿಧ ನಗರಗಳಲ್ಲಿ ಬಯೊ ಟಾಯ್ಲೆಟ್ ನಿರ್ಮಿಸುತ್ತಿದ್ದು, ಕಡಿಮೆ ನೀರಿನಲ್ಲಿ ಬಳಸಬಹುದು ಹಾಗೂ ಕಲ್ಮಶವೂ ಇರುವುದಿಲ್ಲ. ಆದ್ದರಿಂದ ಇವುಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ’ ಎಂದು ಹೇಳಿದರು.

‘ಈ ಹಿಂದೆ ಜನರು ಬಾವಿ ಹಾಗೂ ಬೋರ್ವೆಲ್ ನೀರು ಕುಡಿಯುತ್ತಿದ್ದರು. ಬೋರ್ವೆಲ್ ನೀರಿನಲ್ಲಿ ಲವಣಗಳು ಹೆಚ್ಚು ಇದ್ದುದರಿಂದ ಆರೋಗ್ಯಕರ ನೀರು ಪೂರೈಸುವ ಸಲುವಾಗಿ ರಾಜ್ಯದ ಅರ್ಧ ಭಾಗ ಹಳ್ಳಿಗಳಲ್ಲಿ ಆರ್‌.ಒ ವಾಟರ್ ಪೂರೈಸುತ್ತಿರುವುದು ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಗೆ ಸಾಕ್ಷಿ’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ. ನಟರಾಜ್ ಮಾತನಾಡಿ, ‘ಇಂದಿನ ದಿನಗಳಲ್ಲಿ ವಿಜ್ಞಾನ ಮುಖ್ಯ. ವಿಜ್ಞಾನವಿಲ್ಲದೇ ನೇರವಾಗಿ ತಂತ್ರಜ್ಞಾನಕ್ಕೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ವಿಜ್ಞಾನ ಬೇಕೇ ಬೇಕು. ಎಂಜಿನಿಯರ್ ಎಂದರೆ ಏನು ತಿಳಿಯಬೇಕು ಎಂದರೆ ಮೊದಲು ನಮಗೆ ವಿಜ್ಞಾನ ಗೊತ್ತಾಗಬೇಕು’ ಎಂದು ಹೇಳಿದರು.

‘ಪ್ರತಿಯೊಬ್ಬ ಮನುಷ್ಯನಿಗೂ ಕಡಿಮೆ ಬೆಲೆಗೆ ಗುಣಮಟ್ಟದ ನೀರು ಸಿಗುವಂತೆ ಮಾಡಬೇಕಾದರೆ ತಂತ್ರಜ್ಞಾನ ಬೇಕು. ತಾಂತ್ರಿಕತೆಯಾಗಬೇಕಾದರೆ ಹೆಚ್ಚಿನ ಆವಿಷ್ಕಾರಗಳು ಆಗಬೇಕು. ಇಂದಿನ ದಿನಗಳಲ್ಲಿ ಎಂಜಿನಿಯರಿಂಗ್ ಅನ್ನು ತಾಂತ್ರಿಕತೆಗೆ ಯಾವ ರೀತಿ ವರ್ಗಾಹಿಸುತ್ತೇವೆ ಎನ್ನುವುದು ಮುಖ್ಯ. ಇದು ಆಗಬೇಕು ಅಂದರೆ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಮಾತ್ರ ಸಾಧ್ಯ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅಧ್ಯಕ್ಷ ಡಾ.ಬಿ.ಇ. ರಂಗಸ್ವಾಮಿ ಮಾತನಾಡಿದರು. ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ರಾಜ್ಯ ಸಂಯೋಜಕ ಸಿ. ಕೃಷ್ಣೇಗೌಡ, ಎಸ್.ಎಂ ಕೊಟ್ರಸ್ವಾಮಿ, ಆರ್.ಎಸ್. ಪಾಟೀಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು