ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವನಾತ್ಮಕ ಸಂಬಂಧ ಬೆಳೆಸುವುದೇ ಸಾಹಿತ್ಯದ ಆಶಯ: ಸಾಹಿತಿ ಮಂಜುನಾಥ ಕುರ್ಕಿ

Last Updated 10 ನವೆಂಬರ್ 2019, 11:11 IST
ಅಕ್ಷರ ಗಾತ್ರ

ದಾವಣಗೆರೆ: ‘ಸಾಹಿತ್ಯದ ಆಶಯ ಭಾವನಾತ್ಮಕ ಸಂಬಂಧಗಳನ್ನು ಬೆಳೆಸುವುದು. ಜಾತಿ, ಮತ, ಪಂಥ ಎಲ್ಲವನ್ನೂ ಮೀರಿ ನಮ್ಮನ್ನು ಬೆಳೆಸುವುದು ಸಾಹಿತ್ಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ ಹೇಳಿದರು.

ನಗರದ ವಿದ್ಯಾನಗರದ ರೋಟರಿ ಭವನದಲ್ಲಿ ದಾವಣಗೆರೆ ಜಿಲ್ಲಾ ಬ್ಯಾಂಕ್‌ ನೌಕರರ ಸಂಘ ಹಾಗೂ ದಾವಣಗೆರೆ–ಚಿತ್ರದುರ್ಗ ಜಿಲ್ಲಾ ಬ್ಯಾಂಕ್‌ ನಿವೃತ್ತರ ಒಕ್ಕೂಟದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್‌.ಟಿ. ಶಾಂತಗಂಗಾಧರ್‌ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಕೆಲವು ಸಾಹಿತಿಗಳಲ್ಲಿ ಇಂದು ದ್ವಂದ್ವ ನಿಲುವುಗಳಿವೆ. ವೇದಿಕೆ ಮೇಲೆ ಒಂದು, ವೇದಿಕೆ ಮುಂದೆ ಒಂದು, ಖಾಸಗಿ ಬದುಕಿನಲ್ಲಿ ಒಂದು ನಿಲುವು ವ್ಯಕ್ತಪಡಿಸುತ್ತಾರೆ. ಮನಸು ಮನಸುಗಳ ನಡುವೆ ಗೋಡೆ ಕಟ್ಟುತ್ತಿದ್ದಾರೆ. ಆದರೆ ಇದೆಲ್ಲದಕ್ಕೂ ಅಪವಾದ ಶಾಂತ ಗಂಗಾಧರ್‌.

ಯಾವುದೇ ಜಾತಿ, ಮತ, ಪಂಥಗಳಲ್ಲಿ ವ್ಯತ್ಯಾಸ ಕಾಣದ ವ್ಯಕ್ತಿತ್ವ ಅವರದ್ದು. ಜಾತಿ, ಧರ್ಮವನ್ನೂ ಎಲ್ಲಿಯೂ ಬಳಸಿಲ್ಲ ಎಂದು ಅಭಿಪ್ರಾಯಪಟ್ಟರು.

ಶಾಂತ ಗಂಗಾಧರ್‌ ಅವರಿಗೆ ಪ್ರಶಸ್ತಿ ಬಂದಿದ್ದು ಜಿಲ್ಲೆಯ ಪ್ರತಿಯೊಬ್ಬ ಕನ್ನಡಿಗನಿಗೆ ಸಿಕ್ಕ ಗೌರವ. ಬ್ಯಾಂಕ್‌ ನೌಕರರ ಒಕ್ಕೂಟ ಕನ್ನಡದ ಕೆಲಸ ಮಾಡುವ ಜೊತೆಗೆ ಮಾನವೀಯ ಮೌಲ್ಯಗಳನ್ನು ಸಾರುತ್ತಿದೆ ಎಂದು ಹೇಳಿದರು.

ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ ಎನ್‌.ಟಿ. ಎರ‍್ರಿಸ್ವಾಮಿ, ‘ಕನ್ನಡ ಭಾಷೆಗಾಗಿ ಹಲವು ಕೆಲಸಗಳನ್ನು ತಿರಸ್ಕರಿಸಿದ ಶಾಂತ ಗಂಗಾಧರ್‌ ಕನ್ನಡಕ್ಕಾಗಿ ನಿಜವಾಗಿ ಕೈ ಎತ್ತಿದವರು. ಇಂತಹ ಗಟ್ಟಿತನ ಎಲ್ಲರಿಗೂ ಬರುವುದಿಲ್ಲ. ಇಂಗ್ಲಿಷ್‌ನಲ್ಲಿ ಪ್ರಶ್ನೆ ಕೇಳಿದ ಸಂದರ್ಶಕರಿಗೆ ಕನ್ನಡದಲ್ಲೇ ಉತ್ತರ ನೀಡಿ ಮುಂದೆ ಅವರೂ ಕನ್ನಡದ ಕೆಲಸ ಮಾಡುವಂತೆ ಪ್ರಭಾವ ಬೀರಿದವರು ಶಾಂತಗಂಗಾಧರ್‌’ ಎಂದು ಹೇಳಿದರು.

ಪ್ರತಿಯೊಬ್ಬರೂ ಕನ್ನಡ ಭಾಷೆ ಬಗ್ಗೆ ಅಭಿಮಾನ, ಕೆಚ್ಚೆದೆ ಬೆಳೆಸಿಕೊಳ್ಳಬೇಕು ಎಂದು ಸಾರಿದವರು. ಇಂಗ್ಲಿಷ್‌, ಹಿಂದಿಮಯವಾಗಿದ್ದ ಬ್ಯಾಂಕ್‌ನಲ್ಲಿ ಕನ್ನಡದ ವಾತಾವರಣ ನಿರ್ಮಿಸಿದವರು. ‘ಬಡ್ತಿ ಬೇಡ, ಕನ್ನಡ ಬಿಡ’ ಎಂಬ ಮನೋಭಾವದ ಅವರು ಸಿಂಡಿಕೇಟ್‌ ಬ್ಯಾಂಕಿನ ವ್ಯವಹಾರದಲ್ಲಿ ಕನ್ನಡ ಬಳಕೆ ಜಾರಿಯಾಗುವಂತೆ ಮಾಡಿದರು. ಬ್ಯಾಂಕಿನಲ್ಲಿ ಕನ್ನಡದ ಪದಗಳನ್ನು ಸುಲಲಿತವಾಗಿ ಹೇಗೆ ಬಳಸಬೇಕು ಎಂಬುದನ್ನು ತಿಳಿಸಿದರು. 10 ವರ್ಷಗಳ ಕಾಲ ದುಡಿದು ಬ್ಯಾಂಕಿಂಗ್‌ ಶಬ್ದಕೋಶ ತರಲು ಕಾರಣರಾದರು ಎಂದರು.

ಸನ್ಮಾನ ಸ್ವೀಕರಿಸಿದ ಎಸ್‌.ಟಿ. ಶಾಂತಗಂಗಾಧರ್‌ ಮಾತನಾಡಿದರು.

ಜಿಲ್ಲಾ ಬ್ಯಾಂಕ್‌ ನೌಕರರ ಸಂಘದ ಅಧ್ಯಕ್ಷ ಬಿ. ಆನಂದಮೂರ್ತಿ, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ, ದಾವಣಗೆರೆ–ಚಿತ್ರದುರ್ಗ ಜಿಲ್ಲಾ ಬ್ಯಾಂಕ್‌ ನಿವೃತ್ತರ ಒಕ್ಕೂಟದ ಅಧ್ಯಕ್ಷ ವಿ. ನಂಜುಂಡೇಶ್ವರ, ಜಿ. ರಂಗಸ್ವಾಮಿ, ಇಂದಿರಾ ಶಾಂತಗಂಗಾಧರ್‌, ಬ್ಯಾಂಕ್‌ ನೌಕರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT