ಭಾನುವಾರ, ಫೆಬ್ರವರಿ 28, 2021
31 °C

‘ಮಹಿಳೆಯರ ಹಕ್ಕುಗಳಿಗೆ ಚ್ಯುತಿ ತರದೆ ಜೀವನ ನಡೆಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಹಿಳೆಯರ ಹಕ್ಕುಗಳಿಗೆ ಚ್ಯುತಿ ತರದೇ ಜೀವನ ಸಾಗಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ ತಿಳಿಸಿದರು.

ಇಲ್ಲಿನ ಹಳೇ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಸಂತ್ರಸ್ತರ ಪರಿಹಾರ ನಿಧಿ ಯೋಜನೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ, ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳು ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸರ್ಕಾರ ಹಲವು ಕಾನೂನುಗಳಿಗೆ ತಿದ್ದುಪಡಿ ತಂದು ಸಂತ್ರಸ್ತ ಮಹಿಳೆಯರಿಗೆ ಪರಿಹಾರ ಒದಗಿಸಲು ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ನೊಂದ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅತ್ಯಾಚಾರ ಸೇರಿದಂತೆ ಇತರೆ ದೌರ್ಜನ್ಯಕ್ಕೆ ಒಳಗಾದ, ಕೊಲೆಯಲ್ಲಿ ಗಂಡನನ್ನು ಕಳೆದುಕೊಂಡ ಸಂತ್ರಸ್ತ ಮಹಿಳೆಯರು ಹಾಗೂ ಅಪಹರಣಕ್ಕೆ ಒಳಗಾದ ಮಕ್ಕಳ ಪೋಷಕರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಬಂದು ಅರ್ಜಿ ಸಲ್ಲಿಸಿದರೆ ಆರಂಭದಲ್ಲಿ ತಾತ್ಕಾಲಿಕ ಪರಿಹಾರವಾಗಿ ₹ 10 ಸಾವಿರ ನೀಡಲಾಗುತ್ತದೆ. ದೂರು ದಾಖಲಾಗಿ, ನ್ಯಾಯಾಲಯದಲ್ಲಿ ವಿಚಾರಣೆಯ ವಿವಿಧ ಹಂತಗಳಲ್ಲಿ ಪರಿಹಾರ ನೀಡಲು ಅವಕಾಶವಿದ್ದು, ಪ್ರಕರಣ ಮುಗಿದು ಆರೋಪಿಗೆ ಶಿಕ್ಷೆಯಾದ ಸಂದರ್ಭದಲ್ಲಿ ₹ 10 ಲಕ್ಷದವರೆಗೆ ಪರಿಹಾರ ನೀಡಲು ಅವಕಾಶ ಇದೆ ಎಂದರು.

ಎಐಟಿಯುಸಿ ಮುಖಂಡ ಆವರಗೆರೆ ಉಮೇಶ್, ‘ಮೊದಲು ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಗಳ ಅಡಿಯಲ್ಲಿ ಮಾತ್ರ ಪರಿಹಾರ ಸಿಗುತ್ತಿತ್ತು. ಈಗ ದೌರ್ಜನ್ಯಕ್ಕೆ ಒಳಗಾದ ಎಲ್ಲಾ ವರ್ಗದ ಮಹಿಳೆಯರಿಗೂ ಪರಿಹಾರ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಹೇಳಿದರು.

ನೆರಳು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಜಬೀನಾ ಖಾನಂ, ‘ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿ ಹಲವು ಹಕ್ಕುಗಳನ್ನು ನೀಡಿದೆ. ಹೀಗಾಗಿ ಸಂವಿಧಾನವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಲ್ಲದೆ, ಮಹಿಳೆಯರ ಪರವಾಗಿ ಹಲವು ಹಕ್ಕುಗಳಿದ್ದು, ಅವುಗಳನ್ನು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮ ಸಹಕಾರಿ’ ಎಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣಕುಮಾರ್, ‘ಮರಣಪಟ್ಟವರ ಅವಲಂಬಿತರು, ನೊಂದ, ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ಅರ್ಜಿ ಸಲ್ಲಿಸಿ ಪರಿಹಾರವನ್ನು ಸುಲಭವಾಗಿ ಪಡೆಯಬಹುದು’ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ, ಸ್ಲಂ ಜನಾಂದೋಲನ-ಕರ್ನಾಟಕದ ರೇಣುಕಾ ಯಲ್ಲಮ್ಮ ಮಾತನಾಡಿದರು. ನೆರಳು ಬೀಡಿ ಕಾರ್ಮಿಕರ ಸಂಘದ ಕಾರ್ಯದರ್ಶಿ ಕರಿಬಸಪ್ಪ ಅವರು ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು