ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್ಸಿಡಿಗಾಗಿ ಅಲ್ಲ, ಬದುಕಿಗಾಗಿ ಸಾಲ ಮಾಡಿ

ಫಲಾನುಭವಿಗಳಿಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ. ವಿ ಟೆಂಗಳಿ ಸಲಹೆ
Last Updated 20 ಜನವರಿ 2021, 15:25 IST
ಅಕ್ಷರ ಗಾತ್ರ

ದಾವಣಗೆರೆ: ಬಹಳ ಮಂದಿ ಸಬ್ಸಿಡಿ ಸಿಗುತ್ತದೆ ಎಂದು ಸಾಲ ತೆಗೆದುಕೊಳ್ಳುತ್ತಾರೆ. ಬಳಿಕ ಅದನ್ನು ಆದಾಯದ ಮೂಲವಾಗಿ ಬಳಸದೇ ಮದುವೆ, ಮುಂಜಿಗೆ ಖರ್ಚು ಮಾಡಿ ಬಿಡುತ್ತಾರೆ. ಅದರ ಬದಲು ನೀವು ಏನು ಮಾಡಬೇಕು ಎಂದು ತೀರ್ಮಾನಿಸಿ ಅದಕ್ಕೆ ಸಾಲ ತಗೊಳ್ಳಿ. ಅದೇ ಉದ್ದೇಶಕ್ಕೆ ಬಳಸಿಕೊಂಡು ಬದುಕು ನಡೆಸಿ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ. ವಿ ಟೆಂಗಳಿ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಿಗಮಗಳ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಫಲಾನುಭವಿಗಳ ಜತೆಗೆ ಸಂವಾದ ನಡೆಸಿ ಮಾತನಾಡಿದರು.

ಸಾಲವನ್ನು ನಿಗದಿತ ಸಮಯದೊಳಗೆ ಮರು ಪಾವತಿಸಿದರೆ ನಿಮಗೂ ಮತ್ತೆ ಸಾಲ ಪಡೆಯಲು ಅನುಕೂಲವಾಗುತ್ತದೆ. ನೀವು ಸಾಲ ಕಟ್ಟದೇ ಇದ್ದರೆ ಬೇರೆ ಫಲಾನುಭವಿಗಳಿಗೂ ಸಾಲ ಸಿಗದಂತಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ 14 ಜಿಲ್ಲೆಗಳಲ್ಲಿ 44,660 ಮಾಜಿ ದೇವದಾಸಿಯರಿದ್ದಾರೆ. ಅದರಲ್ಲಿ 24,184 ಮಂದಿಗೆ ವಸತಿ ಒದಗಿಸಲಾಗಿದೆ. ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಹಾಗೂ ಮಾಜಿ ದೇವದಾಸಿಯರ ಮಕ್ಕಳ ಸ್ವಾವಲಂಬನೆಗಾಗಿ ನಿಗಮ ಹೊಸ ಯೋಜನೆಯೊಂದು ಹಾಕಿಕೊಂಡಿದೆ. ದೇವದಾಸಿಯರನ್ನಾಗಿ ಮಾಡಿದ ದೇವಸ್ಥಾನಗಳ ಆವರಣದಲ್ಲಿಯೇ ಮಾಜಿ ದೇವದಾಸಿಯರ ಮಕ್ಕಳಿಗೆ ತರಬೇತಿ ಕೇಂದ್ರ ತೆರೆಯಲಾಗುತ್ತದೆ. ಹೊಲಿಗೆ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗುತ್ತದೆ. ಈಗಾಲೇ ಮೂರು ಕಡೆ ಇದು ಜಾರಿಯಾಗಿದೆ. ಮಾಜಿ ದೇವದಾಸಿಯರು ಇರುವ ಎಲ್ಲ ಕಡೆ ಇದನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಮಹಿಳೆಯರ ಗುಂಪೊಂದು ಶೇಂಗಾ ಚಿಕ್ಕಿ ಘಟಕ ಸ್ಥಾಪಿಸಿದೆ. ₹ 20 ಲಕ್ಷ ವೆಚ್ಚದಲ್ಲಿ ಆರಂಭಗೊಂಡ ಈ ಘಟಕದಿಂದ ಆ ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಚಿಕ್ಕಿ ನೀಡಲಾಗುತ್ತಿದೆ. ಅಂಥ ಉದ್ಯಮಗಳನ್ನು ಇಲ್ಲೂ ಆರಂಭಿಸಬೇಕು ಎಂದು ಸಲಹೆ ನೀಡಿದರು. ಏಪ್ರಿಲ್‌ನಲ್ಲಿ ಇಲ್ಲಿಯೂ ಒಂದು ಘಟಕ ಆರಂಭಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದರು.

ಉದ್ಯೋಗಿನಿ ಯೋಜನೆಯಡಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಕೆನರಾ ಬ್ಯಾಂಕಿನಿಂದ ₹ 5 ಲಕ್ಷ ಸಾಲಸೌಲಭ್ಯವನ್ನು ಪಡೆದ ನಿಟುವಳ್ಳಿಯಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿರುವ ಫಲಾನುಭವಿ ಕವಿತಾ ಅವರಿಗೆ ಅಧ್ಯಕ್ಷರು ಮತ್ತು ಲೀಡ್ ಬ್ಯಾಂಕ್ ಪ್ರಾದೇಶಕ ಪ್ರಬಂಧಕ ಸುಶ್ರುತ್‌ ಶಾಸ್ತ್ರಿ ಚೆಕ್ ವಿತರಣೆ ಮಾಡಿದರು. ‘ಸಹಾಯಧನ ಮತ್ತು ಸಾಲ ನೀಡಲು ಹೆಚ್ಚು ಅಲೆದಾಡಿಸದೇ ಸುಲಭದಲ್ಲಿ ಸಿಗುವಂತೆ ಮಾಡಬೇಕು’ ಎಂದು ಕವಿತಾ ಕೇಳಿಕೊಂಡರು.

‘ಲಿಂಗತ್ವ ಅಲ್ಪಸಂಖ್ಯಾತರ ಮೂರು ಸ್ವಸಹಾಯ ಗುಂಪುಗಳನ್ನು ಮಾಡಿ ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಸರ್ಕಾರ ಸಹಾಯಧನ ನೀಡಿದರೆ ಕಿರಾಣಿ ಅಂಗಡಿ, ಕುರಿ, ಕೋಳಿ ಸಾಕಣೆ, ಸೀರೆ ವ್ಯಾಪಾರ ಮಾಡಲು ತಯಾರಿದ್ದೇವೆ’ ಎಂದು ಚೈತ್ರಾ ತಿಳಿಸಿದರು.

ವಸತಿ ಸಮಸ್ಯೆಯನ್ನು ಚೈತ್ರಾ ಗಮನಕ್ಕೆ ತಂದಾಗ, ‘ಹಿಂದೆ ತುರ್ಚಘಟ್ಟದಲ್ಲಿ ನಿವೇಶನ ತೋರಿಸಲಾಗಿತ್ತು. ಅಲ್ಲಿ ಬೇಡ ಎಂದು ಫಲಾನುಭವಿಗಳು ನಿರಾಕರಿಸಿದ್ದರು’ ಎಂದು ವಿಜಯಕುಮಾರ್‌ ಹೇಳಿದರು. ‘ತುರ್ಚಘಟ್ಟದಲ್ಲಿ ನೀಡುವುದಿದ್ದರೆ ಪಡೆದುಕೊಳ್ಳಲು ನಾವು ತಯಾರಿದ್ದೇವೆ’ ಎಂದು ಚೈತ್ರ ತಿಳಿಸಿದರು.

ಪಾಲಿಕೆ ಸದಸ್ಯೆ ಉಮಾ ಪ್ರಕಾಶ್, ನಾಮನಿರ್ದೇಶಿತ ಸದಸ್ಯೆ ಜಯಮ್ಮ, ದಿಶಾ ವಿಚಕ್ಷಣಾ ಸಮಿತಿ ಸದಸ್ಯೆ ಚೇತನಾ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಯಲಕ್ಷ್ಮಿ, ಮಹಿಳಾ ಅಭಿವೃದ್ದಿ ನಿಗಮದ ಯೋಜನಾ ನಿರೀಕ್ಷಕಿ ಮಂಜುಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾಧಿಕಾರಿ ಗಂಗಾಂಬಿಕೆ, ದೇವದಾಸಿ ಪುನರ್ವಸತಿ ಯೋಜನೆಯ ಅಧಿಕಾರಿ ಮೋಕ್ಷಪತಿ, ಯೋಜನಾನುಷ್ಠಾಧಿಕಾರಿ ಪ್ರಜ್ಞಾ ಪಾಟಿಲ್ ಅವರೂ ಇದ್ದರು.

‘ನಾನೇ ಮದುವೆ ಮಾಡಿಸುವೆ’

ನನಗೆ ಇಬ್ಬರು ಹೆಣ್ಣುಮಕ್ಕಳು. ಅವರ ಮದುವೆ ಮಾಡಲು ಸಹಾಯಧನ ನೀಡಬೇಕು’ ಎಂದು ಮಾಜಿ ದೇವದಾಸಿಯೊಬ್ಬರು ಕೋರಿದರು. ಅದಕ್ಕೆ ಉತ್ತರಿಸಿದ ಶಶಿಕಲಾ ವಿ. ಟೆಂಗಳಿ, ‘ಅದ್ದೂರಿ ಮದುವೆ ಬೇಡ. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ಮದುವೆ ಆಗಲು ಹುಡುಗರು ತಯಾರು ಇದ್ದಾರೆ ಎಂದಾದರೆ ಈಗಲೇ ಕರೆಸಿ. ಇಲ್ಲೇ ಮದುವೆ ಮಾಡಿ ಬಿಡುತ್ತೇನೆ. ನಾನೇ ವಧು, ವರರಿಗೆ ಬಟ್ಟೆ, ಹಾರ ಕೊಡಿಸುತ್ತೇನೆ’ ಎಂದು ತಿಳಿಸಿದರು. ‘ರೇಷ್ಮೆ ಸೀರೆ ನಾನು ಕೊಡಿಸುತ್ತೇನೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಘೋಷಿಸಿದರು.

ಮಾಜಿ ದೇವದಾಸಿಯರ ಮಕ್ಕಳು ದೇವದಾಸಿಯರಲ್ಲದ ಕುಟುಂಬದವರನ್ನು ಮದುವೆಯಾದರೆ ಪುರುಷರಿಗೆ ₹ 3 ಲಕ್ಷ ಹಾಗೂ ಮಹಿಳೆಯರಿಗೆ ₹ 5 ಲಕ್ಷ ಪ್ರೋತ್ಸಾಹಧನವನ್ನು ಸರ್ಕಾರ ನೀಡುತ್ತದೆ. ಅಂತರಜಾತಿ ವಿವಾಹವಾದವರಿಗೆ ಸಿಗುವ ಸೌಲಭ್ಯ ಇವರಿಗೂ ದೊರೆಯುತ್ತದೆ ಎಂದು ಯೋಜನಾನುಷ್ಠಾನಾಧಿಕಾರಿ ಪ್ರಜ್ಞಾ ಪಾಟಿಲ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT