ಎಲ್ಲ ವಾಹನಗಳಿಗೂ ಎಮಿಷನ್‌ ಟೆಸ್ಟ್‌ ಮಾಡಿಸಿ: ಜಿಲ್ಲಾಧಿಕಾರಿ ರಮೇಶ್‌

7
ವಾಯು ಮಾಲಿನ್ಯ ನಿಯಂತ್ರಣ ಕಾರ್ಯಪಡೆ ಸಮಿತಿ ಸಭೆ

ಎಲ್ಲ ವಾಹನಗಳಿಗೂ ಎಮಿಷನ್‌ ಟೆಸ್ಟ್‌ ಮಾಡಿಸಿ: ಜಿಲ್ಲಾಧಿಕಾರಿ ರಮೇಶ್‌

Published:
Updated:
Deccan Herald

ದಾವಣಗೆರೆ: ನಗರದಲ್ಲಿ ವಾಯು ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಕಡ್ಡಾಯವಾಗಿ ಎಲ್ಲ ವಾಹನಗಳ ‘ಎಮಿಷನ್‌ ಟೆಸ್ಟ್‌’ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ವಾಯು ಮಾಲಿನ್ಯ ನಿಯಂತ್ರಿಸಲು ರಚಿಸಿರುವ ಕಾರ್ಯಪಡೆ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದಲ್ಲಿರುವ ವಾಹನಗಳನ್ನು ನಿಯಮಿತವಾಗಿ ‘ಎಮಿಷನ್‌ ಟೆಸ್ಟ್‌’ ಮಾಡಿಸುತ್ತಿಲ್ಲ. ಕೆಲವು ವಾಹನಗಳು ಮಾತ್ರ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿವೆ. ಹೀಗಾಗಿ ಎಲ್ಲಾ ವಾಹನಗಳು ಪ್ರಮಾಣಪತ್ರವನ್ನು ತೆಗೆದುಕೊಳ್ಳುವಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳನ್ನು ನಿಯಮಿತವಾಗಿ ತಪಾಸಣೆ ಮಾಡಿ ಗುಣಮಟ್ಟ ಇರುವುದನ್ನು ಮಾತ್ರ ಓಡಿಸಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸ್‌, ‘ಕಳೆದ ವರ್ಷ ₹ 18 ಲಕ್ಷ ದಂಡ ಹಾಕಲಾಗಿತ್ತು. ಈ ವರ್ಷ ಏಪ್ರಿಲ್‌ನಿಂದ ಜುಲೈವರೆಗೆ 1,612 ವಾಹನಗಳಿಗೆ ಒಟ್ಟು ₹ 4.85 ಲಕ್ಷ ದಂಡ ವಿಧಿಸಲಾಗಿದೆ. ನಿಗದಿಗಿಂತ ಹೆಚ್ಚಿನ ಭಾರ ಸಾಗಿಸುವ ವಾಹನಗಳಿಗೂ ದಂಡ ವಿಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಭಾಗೀಯ ಕಚೇರಿಯ ಪ್ರಾದೇಶಿಕ ಹಿರಿಯ ಪರಿಸರ ಅಧಿಕಾರಿ ಸಿ.ಡಿ. ಕುಮಾರ್‌, ‘ಮೋತಿ ಟಾಕೀಸ್‌ ಬಳಿ ದೂಳಿನ ಕಣ (ಪಿ.ಎಂ–10) ನಿಗದಿತ ಮಾನದಂಡಕ್ಕಿಂತ ಶೇ 116ರಷ್ಟು ಹೆಚ್ಚಿರುವುದು ಒಮ್ಮೆ ದಾಖಲಾಗಿತ್ತು. ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣ ಹೆಚ್ಚಿದ್ದರಿಂದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಾರ್ಯಯೋಜನೆ ರೂಪಿಸಿ ವರದಿ ನೀಡುವಂತೆ 2015ರಲ್ಲೇ ಸೂಚಿಸಿತ್ತು. ಇದೀಗ ಕಾರ್ಯಯೋಜನೆ ಸಿದ್ಧಪಡಿಸಲು ವಿವಿಧ ಇಲಾಖೆಗಳ ಅಧಿಕಾರಿಗಳ ಒಳಗೊಂಡ ಕಾರ್ಯಪಡೆ ಸಮಿತಿಯನ್ನು ಜಿಲ್ಲಾಡಳಿತ ರಚಿಸಿದೆ. ವಾಯು ವಾಲಿನ್ಯ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರದಿ ಸಲ್ಲಿಸಬೇಕು’ ಎಂದು ತಿಳಿಸಿದರು.

ಇಟ್ಟಂಗಿ ಭಟ್ಟಿ: ಗ್ರಾಮ ಪಂಚಾಯಿತಿಗಳಿಂದ ಪರವಾನಗಿ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿರುವ ಇಟ್ಟಂಗಿ ಭಟ್ಟಿಗಳಿಂದಲೂ ವಾಯು ಮಾಲಿನ್ಯವಾಗುತ್ತಿದೆ. ಚಿಮಣಿ ಇರುವ ಕೈಗಾರಿಕೆಗಳಿಗೆ ಮಾತ್ರ ನಾವು ಪರವಾನಗಿ ನೀಡುತ್ತೇವೆ ಎಂದು ಮಂಡಳಿಯ ಪ್ರಾದೇಶಿಕ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌ ಸಭೆಯ ಗಮನಕ್ಕೆ ತಂದರು. ಸಂಬಂಧಪಟ್ಟ ಅಧಿಕಾರಿಗಳ ಸಹಕಾರ ಪಡೆದು ಅವುಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ರಮೇಶ್‌ ಸೂಚಿಸಿದರು.

ನಗರದ ಕಾಂಕ್ರೀಟ್‌ ರಸ್ತೆಗಳನ್ನು ಎರಡು ದಿನಗಳಿಗೆ ಒಮ್ಮೆಯಾದರೂ ದೂಳನ್ನು ಹೊಡೆಯಲು ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಅಗಲಗೊಳಿಸಿರುವ ರಸ್ತೆಗಳಲ್ಲಿ ಗಿಡ–ಮರಗಳನ್ನು ನೆಟ್ಟು ಹಸಿರು ಹೊದಿಕೆಯನ್ನು ನಿರ್ಮಿಸಬೇಕು ಎಂದು ಜಿಲ್ಲಾಧಿಕಾರಿ ಪಾಲಿಕೆ ಅಧಿಕಾರಿಗೆ ಸೂಚಿಸಿದರು.

ಜಿಲ್ಲಾ ಕೈಗಾರಿಕಾ ಸಂಘದ ಶಂಬುಲಿಂಗಪ್ಪ, ‘ನಗರದ ಪಾರ್ಕ್‌ಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಸಿದ್ಧರಿದ್ದೇವೆ. ಪಾಲಿಕೆಯು ಇದಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

‘ನಗರದಲ್ಲಿ ವಾಯು ಮಾಲಿನ್ಯ ತಪಾಸಣಾ ಕೇಂದ್ರವನ್ನು ಕಚೇರಿ ಬಳಿ ಸ್ಥಾಪಿಸಲಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಇನ್ನೂ ಐದು ಕಡೆ ವಾಯು ಗುಣಮಟ್ಟ ತಪಾಸಣೆ ಮಾಡುವ ಯಂತ್ರವನ್ನು ಅಳವಡಿಸಲಾಗುವುದು’ ಎಂದು ಪರಿಸರ ಅಧಿಕಾರಿ ಮಾಹಿತಿ ನೀಡಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

‘ಕಟ್ಟಡ ತ್ಯಾಜ್ಯ ನಿರ್ವಹಣೆ ಮಾಡಿ’

ಸೂಕ್ತ ಜಾಗವನ್ನು ಗುರುತಿಸಿ ಕಟ್ಟಡಗಳ ತ್ಯಾಜ್ಯಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಮೇಶ್‌ ಪಾಲಿಕೆ ಅಧಿಕಾರಿಗೆ ಸೂಚಿಸಿದರು.

ಇದಕ್ಕೂ ಮೊದಲು ಮಾತನಾಡಿದ ಎಂಜಿನಿಯರ್‌ ಸುರೇಶ್‌, ‘ಕಟ್ಟಡಗಳ ತ್ಯಾಜ್ಯ ನಿರ್ವಹಣೆ ಮಾಡಲು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಮಾಡಿಸಲಾಗುವುದು. ತ್ಯಾಜ್ಯವನ್ನು ಒಯ್ಯುವ ವ್ಯವಸ್ಥೆಯನ್ನು ಪಾಲಿಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಪಾಲಿಕೆ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್‌ ಸುಂಕದ್‌, ‘ಸದ್ಯಕ್ಕೆ ತಗ್ಗು ಪ್ರದೇಶಗಳಲ್ಲಿ ಕಟ್ಟಡ ತ್ಯಾಜ್ಯವನ್ನು ಹಾಕಲಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯೊಳಗೆ ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡುವುದನ್ನೂ ಸೇರಿಸಿಕೊಳ್ಳಲಾಗಿದೆ. ಆವರಗೊಳ್ಳದಲ್ಲಿ ಇದಕ್ಕಾಗಿ ಜಾಗವನ್ನೂ ಗುರುತಿಸಲಾಗಿದೆ’ ಎಂದು ತಿಳಿಸಿದರು.

ವಾಯು ಮಾಲಿನ್ಯದ ಕಾರಣಗಳು

ರಸ್ತೆ ಮೇಲಿನ ದೂಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದೇ ಇರುವುದು, ಕಸ ಸುಡುವುದು, ಕೈಗಾರಿಕೆಗಳ ಹೊಗೆ, ಕಟ್ಟಡ ತ್ಯಾಜ್ಯಗಳನ್ನು ಸೂಕ್ತವಾಗಿ ವಿಲೇವಾರಿ ಮಾಡದಿರುವುದರಿಂದ ಮತ್ತು ಪೆಟ್ರೋಲ್‌, ಡೀಸೇಲ್‌ ಕಲಬೆರಕೆ ಮಾಡುವುದರಿಂದ ವಾಯು ಮಾಲಿನ್ಯ ಪ್ರಮಾಣ ಹೆಚ್ಚುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !