ಗಾಂಜಾ ಪೂರೈಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಬಂಧನ

7
₹ 1 ಲಕ್ಷ ಮೌಲ್ಯದ ಮಾದಕ ದ್ರವ್ಯ ವಶಕ್ಕೆ

ಗಾಂಜಾ ಪೂರೈಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಬಂಧನ

Published:
Updated:
Prajavani

ದಾವಣಗೆರೆ: ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸೇರಿ ಕೆಲ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದಡಿ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಸಾಜನ್‌ ರಾಜಗೋಪಾಲ್‌ (28)ನನ್ನು ಸಿಇಎನ್‌ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಆರೋಪಿಯಿಂದ ₹ 45 ಸಾವಿರ ಮೌಲ್ಯದ ಒಂದು ಕೆ.ಜಿ. 100 ಗ್ರಾಂ ಗಾಂಜಾ ಸೊಪ್ಪು, 0.10 ಗ್ರಾಂ ತೂಕದ ಎಲ್‌.ಎಸ್‌.ಡಿ ಮಾದಕ ದ್ರವ್ಯ, 1.79 ಗ್ರಾಂ ತೂಕದ ಎಂ.ಡಿ.ಎಂ.ಎ ಟ್ರಾನ್ಸ್‌ಪರಂಟ್‌ ಗುಳಿಗೆ ತರಹದ ಮಾದಕ ವಸ್ತು, 1.56 ಗ್ರಾಂ ತೂಕದ ಎಂ.ಡಿ.ಎಂ.ಎ ಮಾದಕ ದ್ರವ್ಯದ ಪೌಡರ್‌ ಹಾಗೂ ಮಾದಕದ್ರವ್ಯ ಸೇವನೆಗೆ ಬಳಸುವ ಪರಿಕರಗಳು ಸೇರಿ ಅಂದಾಜು ₹ 1 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ‘ಗಾಂಜಾ ಮಾರಾಟ ದಂಧೆ ಮೇಲೆ ತನಿಖೆ ನಡೆಸುತ್ತಿದ್ದ ಸಿಇಎನ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಟಿ.ವಿ. ದೇವರಾಜ್‌ ನೇತೃತ್ವದ ತಂಡದ ಸಿದ್ದವೀರಪ್ಪ ಬಡಾವಣೆಯ 1ನೇ ಮುಖ್ಯ ರಸ್ತೆ, 12 ‘ಎ’ ಕ್ರಾಸ್‌ನಲ್ಲಿ ಸಾಜನ್‌ ನೆಲೆಸಿದ್ದ ಮನೆಯ ಮೇಲೆ ದಾಳಿ ನಡೆಸಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಗಾಂಜಾ ಹಾಗೂ ಇತರ ಮಾದಕದ್ರವ್ಯಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಸಲುವಾಗಿ ದಾಸ್ತಾನು ಮಾಡಿದ್ದ’ ಎಂದು ತಿಳಿಸಿದರು.

‘ಕೇರಳ ರಾಜ್ಯದ ತಿರುವಂತಪುರ ಜಿಲ್ಲೆಯ ವರ್ತುಲ ಟೌನ್‌ ಮೂಲದ ವ್ಯಕ್ತಿಯಾಗಿದ್ದ ಸಾಜನ್‌ 2010ರಲ್ಲಿ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದಿರುವುದಾಗಿ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆ. ಸದ್ಯ ಈತ ಹೌಸ್‌ ಸರ್ಜನ್‌ಷಿಪ್‌ ಮಾಡುತ್ತಿದ್ದ. ಮಾದಕದ್ರವ್ಯಗಳನ್ನು ತಾನು ಸೇವಿಸುವುದರ ಜೊತೆಗೆ ಉಳಿದವರಿಗೂ ಮಾರಾಟ ಮಾಡುತ್ತಿದ್ದ’ ಎಂದು ಅವರು ತಿಳಿಸಿದರು.

‘ಈತ ಎಲ್ಲಿಂದ ಗಾಂಜಾ ತರುತ್ತಿದ್ದ, ಯಾರು ಯಾರಿಗೆ ಮಾರಾಟ ಮಾಡುತ್ತಿದ್ದ. ಈತನೊಂದಿಗೆ ಇನ್ನೂ ಯಾರು ಶಾಮೀಲಾಗಿದ್ದಾರೆ ಎಂಬ ದಿಕ್ಕಿನಲ್ಲೂ ತನಿಖೆ ನಡೆಸಲಾಗುತ್ತಿದೆ. ಮಾದಕ ದ್ರವ್ಯ ಮಾರಾಟ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹತ್ತು ದಿನಗಳಲ್ಲಿ ನಾಲ್ಕು ಗಾಂಜಾ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಕಾಲೇಜಿನ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿಯಿಂದಲೂ ಮಾಹಿತಿ ಪಡೆದು ಹಾಗೂ ಹಾಸ್ಟೆಲ್‌ಗಳ ಮೇಲೆ ನಿಗಾ ವಹಿಸಿ ಕಾರ್ಯಾಚರಣೆ ನಡೆಸಲಾಗುವುದು. ದಾವಣಗೆರೆಯನ್ನು ಮಾದಕ ದ್ರವ್ಯ ಮುಕ್ತವನ್ನಾಗಿ ನಿರ್ಮಿಸುವ ಗುರಿ ಹೊಂದಿದ್ದೇವೆ’ ಎಂದು ಚೇತನ್‌ ಹೇಳಿದರು.

‘ಇದೇ ಮೊದಲ ಬಾರಿಗೆ ಎಲ್‌.ಎಸ್‌.ಡಿ, ಎಂ.ಡಿ.ಎಂ.ಎ ಅಂತಹ ಮಾದಕದ್ರವ್ಯಗಳನ್ನು ದಾಸ್ತಾನು ಮಾಡಿರುವುದನ್ನು ಪತ್ತೆ ಮಾಡಲಾಗಿದೆ. ಹೀಗಾಗಿ ದೇವರಾಜ್‌ ನೇತೃತ್ವದ ತಂಡಕ್ಕೆ ಐಜಿಪಿ ಕಡೆಯಿಂದ ಬಹುಮಾನ ಕೊಡಿಸಲಾಗುವುದು’ ಎಂದು ಅವರು ಹೇಳಿದರು.

ಮೂರು ವರ್ಷಗಳಿಂದ ದಂಧೆ

‘ಭಾರಿ ಹಣ ನೀಡಿ 2010ರಲ್ಲಿ ‘ಕಾಮೆಡ್‌–ಕೆ’ ಮೂಲಕ ಸಾಜನ್‌ ವೈದ್ಯಕೀಯ ಸೀಟು ಪಡೆದಿದ್ದ. ಆರಂಭದಲ್ಲಿ ಓದಿನಲ್ಲಿ ಮುಂದಿದ್ದ ಈತ ಕ್ರಮೇಣ ಸ್ನೇಹಿತರೊಂದಿಗೆ ಸೇರಿ ಮಾದಕ ದ್ರವ್ಯ ಸೇವನೆಯ ಚಟವನ್ನು ಮೈಗೂಡಿಸಿಕೊಂಡ. ನಂತರ ಪರೀಕ್ಷೆಯಲ್ಲೂ ಅನುತ್ತೀರ್ಣಗೊಂಡಿದ್ದ. ಮೂರು–ನಾಲ್ಕು ವರ್ಷಗಳಿಂದ ಈತ ಮಾದಕ ದ್ರವ್ಯ ಮಾರಾಟ ದಂಧೆಯಲ್ಲಿ ತೊಡಗಿಕೊಂಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

‘ನೆಟ್‌ ಬ್ಯಾಂಕಿಂಗ್‌ ಮೂಲಕ ತನ್ನ ಖಾತೆಗೆ ಹಣ ವರ್ಗಾಯಿಸಿಕೊಂಡು ವಿದ್ಯಾರ್ಥಿಗಳಿಗೆ ಗಾಂಜಾ ಸೊಪ್ಪು ಪೂರೈಕೆ ಮಾಡುತ್ತಿದ್ದ. ₹ 4,000ದಿಂದ ₹ 5,000ವರೆಗೆ ಪಡೆದು ಎಲ್‌.ಎಸ್‌.ಡಿ, ಎಂ.ಡಿ.ಎಂ.ಎ ಅಂತಹ ಮಾದಕ ದ್ರವ್ಯಗಳನ್ನು ಸ್ನೇಹಿತರಿಗೆ ಕೊಡುತ್ತಿದ್ದ. ಪಾರ್ಟಿ ನಡೆಸುವ ವೇಳೆ ಈತನಿಂದ ಮಾದಕ ದ್ರವ್ಯಗಳ ಗುಳಿಗೆಗಳನ್ನು ವಿದ್ಯಾರ್ಥಿಗಳು ಖರೀದಿಸುತ್ತಿದ್ದರು’ ಎಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !