ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ನಾಲ್ಕು ದಿನಗಳಲ್ಲಿ ಎಂಐಸಿಯು ಆರಂಭ

ಮರಣ ಪ್ರಮಾಣ ತಗ್ಗಿಸಲು ಕ್ರಮ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 24 ಸೆಪ್ಟೆಂಬರ್ 2020, 3:03 IST
ಅಕ್ಷರ ಗಾತ್ರ

ದಾವಣಗೆರೆ: ವೆಂಟಿಲೇಟರ್‌ಗೆ ರೋಗಿಗಳು ಹೋದರೆ ಗುಣಮುಖರಾಗಿ ಬರುವವರ ಪ್ರಮಾಣ ಭಾರಿ ಕಡಿಮೆ ಇರುತ್ತದೆ. ಅದಕ್ಕಾಗಿ ವಿಐಸಿಯುಗಿಂತ ಎಂಐಸಿಯು ಬಲಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಏಳು ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ. 14 ಹೊಸ ವೆಂಟಿಲೇಟರ್‌ಗಳನ್ನು ಒದಗಿಸಿತ್ತಾದರೂ ಅದಕ್ಕೆ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳದ ಕಾರಣ ಸಾರ್ವಜನಿಕ ಸೇವೆಗೆ ಲಭ್ಯವಾಗಿರಲಿಲ್ಲ.

ವೆಂಟಿಲೇಟರ್‌ಗಳನ್ನು ಕೊಠಡಿಗಳಲ್ಲಿ ಕೂಡಿಡಲಾಗಿದೆ. ಕೂಡಲೇ ತಜ್ಞರನ್ನು ನೇಮಕ ಮಾಡಬೇಕು. ಹಿಂದೆ ಇದ್ದ 11 ವೆಂಟಿಲೇಟರ್‌ಗಳಲ್ಲಿ ನಾಲ್ಕು ವೆಂಟಿಲೇಟರ್‌ಗಳು ಕೆಟ್ಟು ಹೋಗಿವೆ. ಅವುಗಳನ್ನು ಸರಿಪಡಿಸಬೇಕು ಎಂದು ಪಾಲಿಕೆ ವಿರೋಧಪಕ್ಷದ ನಾಯಕ ಎ.ನಾಗರಾಜ್‌ ಸಹಿತ ಹಲವರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು.

‘ಅನಸ್ತೇಸಿಯ, ಪಲ್ಮನರಿ ತಜ್ಞರ ಕೊರತೆ ಇತ್ತು. ಸಿಜಿ ಆಸ್ಪತ್ರೆಗೇ 30 ತಜ್ಞರು ಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೆವು. ಸರ್ಕಾರವು ಸಿಜಿ ಆಸ್ಪತ್ರೆಗೆ ಮೂವರನ್ನು ನೀಡಿದೆ. ಈ ಮೂವರು ಸೇರಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ 14 ಮಂದಿಯನ್ನು ನೇಮಕ ಮಾಡಿದೆ. ನಾವು ಸದ್ಯಕ್ಕೆ ಈ ಎಲ್ಲ ಮಂದಿಯನ್ನು ಸಿಜಿ ಆಸ್ಪತ್ರೆಯಲ್ಲಿಯೇ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವೆಂಟಿಲೇಟರ್‌ ಐಸಿಯುಗಿಂತ (ವಿಐಸಿಯು) ಮೊದಲ ಹಂತವಾದ ಮೆಡಿಕಲ್‌ ಐಸಿಯುಗೆ (ಎಂಐಸಿಯು) ಪ್ರಾಮುಖ್ಯ ನೀಡುತ್ತಿದ್ದೇವೆ. ಎಂಐಸಿಯು 12 ಬೆಡ್‌ಗಳು ಸೆ.28ರಿಂದ ಕಾರ್ಯನಿರ್ವಹಿಸಲಿವೆ. ಪ್ರಾಯೋಗಿಕವಾಗಿ ನೋಡಿದ ಬಳಿಕ ನಾಲ್ಕೈದು ದಿನಗಳಲ್ಲಿ ಮತ್ತೆ 12 ಬೆಡ್‌ ಹೆಚ್ಚು ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಕೊರೊನಾ ವರದಿ ಬರುವವರೆಗೆ ಕಾಯದೇ ಕೂಡಲೇ ಚಿಕಿತ್ಸೆ ಆರಂಭಿಸುತ್ತಿರುವುದರಿಂದ ಕೊರೊನಾ ಬಂದವರ ಮರಣ ಪ್ರಮಾಣ ಕಳೆದ ಎರಡು ವಾರಗಳಿಂದ ಇಳಿಕೆಯಾಗಿದೆ. ಎಂಐಸಿಯುನಿಂದ ಈ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಹೊಸತಾಗಿ ನೇಮಕಗೊಂಡವರು ಮತ್ತು ಈಗ ಇರುವವರು ಸೇರಿ ರೋಗಿಗಳಿಗೆ ಕೂಡಲೇ ಚಿಕಿತ್ಸೆ ದೊರೆಯುವಂತೆ ಮಾಡುತ್ತೇವೆ’ ಎಂದು ಜಿಲ್ಲಾ ಸರ್ಜನ್‌ ಡಾ. ಜಯಪ್ರಕಾಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT