ಭಾನುವಾರ, ನವೆಂಬರ್ 29, 2020
20 °C

ರಾಜ್ಯೋತ್ಸವಕ್ಕೆ ಉಸ್ತುವಾರಿ ಸಚಿವರು ಗೈರು: ಕರವೇ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಈ ಬಾರಿಯ ಕರ್ನಾಟಕ ರಾಜ್ಯೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬಾರದೇ ನಾಡದ್ರೋಹಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ಕಾರ್ಯಕರ್ತರು ಜಿಲ್ಲಾ ವರದಿಗಾರರ ಕೂಟದ ಎದುರು ಬೈರತಿ ಬಸವರಾಜ ಅವರ ಭಾವಚಿತ್ರವನ್ನು ಸುಟ್ಟು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿವರ್ಷ ರಾಷ್ಟ್ರಧ್ವಜದೊಂದಿಗೆ ಕನ್ನಡ ಧ್ವಜಾರೋಹಣ ಮಾಡುತ್ತಿದ್ದರು. ಆದರೆ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವದ ಸಂದರ್ಭ ಜಿ‌ಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕೇವಲ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಸರ್ಕಾರ ಏನಾದರೂ ಕನ್ನಡ ಬಾವುಟ ಹಾರಿಸಬಾರದು ಎಂದು ಆದೇಶ ಮಾಡಿದ್ದರೆ ಜಿಲ್ಲಾಧಿಕಾರಿ ಅದನ್ನು ಸ್ಪಷ್ಟಪಡಿಸಬೇಕು’ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ರಾಮೇಗೌಡ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜದೊಂದಿಗೆ ನಾಡ ಧ್ವಜಾರೋಹಣ ಮಾಡಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಕನ್ನಡ ಧ್ವಜ ಹಾರಿಸದೇ ಅಪಚಾರವೆಸಗಿದ್ದಾರೆ. ಕನ್ನಡತನ, ಕನ್ನಡದ ಆಸ್ಮಿತೆಗೆ ಅವಮಾನ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ಮುಖ್ಯಮಂತ್ರಿ ಸಂಪುಟದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

ಸ್ಥಳೀಯರಿಗೆ ಉಸ್ತುವಾರಿ ನೀಡಿ: ‘ಕನ್ನಡದ ಕೆಲಸಕ್ಕೆ ಬಾರದೇ ಇರುವ ಸಚಿವರು ನಮಗೆ ಬೇಡ, ಮುಖ್ಯಮಂತ್ರಿಗಳು ಅವರಿಂದ ರಾಜೀನಾಮೆ ಪಡೆದು, ಹೊರಗಿನವರಿಗೆ ಜಿಲ್ಲಾ ಉಸ್ತುವಾರಿ ನೀಡುವ ಬದಲು ಜಿಲ್ಲೆಯಲ್ಲಿ ಐದು ಮಂದಿ ಬಿಜೆ‍ಪಿ ಶಾಸಕರು ಇದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದರು. 

‘ಮುಂದಿನ ಕರ್ನಾಟಕ ರಾಜ್ಯೋತ್ಸವದ ದಿವಸ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರು ಕನ್ನಡ ಧ್ವಜವನ್ನು ಹಾರಿಸಬೇಕು. ಇಲ್ಲದಿದ್ದರೆ ಮುಂದಿನ ಕರ್ನಾಟಕ ರಾಜ್ಯೋತ್ಸವದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು’ ಎಂದು ಎಚ್ಚರಿಸಿದರು.

‘ಜಿಲ್ಲೆಯಲ್ಲಿ ಮೇಯರ್ ಸೇರಿ ಹಲವು ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಭಾಗವಹಿಸದೇ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. 

ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಮುಖಂಡರಾದ ಗೋಪಾಲ ದೇವರಮನಿ, ಮಂಜುಳಾ ಬಿ, ಹಮೀದಾಬಾನು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.