ಮಂಗಳವಾರ, ಡಿಸೆಂಬರ್ 1, 2020
19 °C
ಜಿಲ್ಲೆಗೊಂದು ಸಚಿವ ಸ್ಥಾನದ ಬೇಡಿಕೆ ನ್ಯಾಯಸಮ್ಮತ

ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡಲು ಸಿಎಂಗೆ ಒತ್ತಡ: ಬೈರತಿ ಬಸವರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಜಿಲ್ಲೆಗೊಂದು ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ ನ್ಯಾಯ ಸಮ್ಮತವಾಗಿದ್ದು, ಇದರಲ್ಲಿ ತಪ್ಪೇನಿಲ್ಲ. ದಾವಣಗೆರೆ ಜಿಲ್ಲೆಗೂ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಚನ್ನಗಿರಿಯ‌ಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು,‘ ಜಿಲ್ಲೆಯಲ್ಲಿ ಎಂ.ಪಿ. ರೇಣುಕಾಚಾರ್ಯ, ಎಸ್.ಎ.ರವೀಂದ್ರನಾಥ್ ಸೇರಿ ಐವರು ಶಾಸಕರಿದ್ದಾರೆ. ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹ ಸರಿಯಾಗಿದೆ. ಈ ಸಂಬಂಧ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಜೊತೆ ಸೇರಿ  ಮುಖ್ಯಮಂತ್ರಿಗೆ ಒತ್ತಡ ಹೇರಲು ಪ್ರಯತ್ನಿಸುತ್ತೇವೆ’ ಎಂದು ತಿಳಿಸಿದರು.

‘ಎಂ.ಟಿ.ಬಿ. ನಾಗರಾಜ್, ಎಚ್. ವಿಶ್ವನಾಥ್‍ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಈ ವಿಚಾರದಲ್ಲಿ ಅವರದ್ದೇ ಪರಮಾಧಿಕಾರ. ಅವರು ನೀಡಿರುವ ಭರವಸೆ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ಈ ವಿಚಾರದಲ್ಲಿ ಮಾತು ತಪ್ಪಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಕಾರಣರಾದ ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ತೀರ್ಮಾನ ಕೈಗೊಳ್ಳುತ್ತಾರೆ’ ಎಂದರು.

₹10 ಸಾವಿರ ಸಸಿ ನೆಡಲು ತೀರ್ಮಾನ:

‘ಚಿಗಟೇರಿ ಆಸ್ಪತ್ರೆಯನ್ನು ನವೀಕರಣಗೊಳಿಸಿ ಅತ್ಯಾಧುನಿಕ ಆಸ್ಪತ್ರೆ ಮಾಡಲು ಎಲ್ಲ ರೀತಿಯ ಸೌಲಭ್ಯ ನೀಡಲು ಒಪ್ಪಿದ್ದಾರೆ. ಮಹಾನಗರಪಾಲಿಕೆ ಪ್ರತಿ ಮನೆ ಮನೆಗೆ ಬಾಗಿಲಿಗೆ 10 ಸಾವಿರ ಸಸಿಗಳನ್ನು ನೆಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲರ ಸಹಯೋಗದೊಂದಿಗೆ ಮಾಡುತ್ತೇವೆ’ ಎಂದು ಹೇಳಿದರು.

200 ಮನೆಗಳ ನಿರ್ಮಾಣ:

ನಗರಾಭಿವೃದ್ಧಿ ಇಲಾಖೆಯಿಂದ ದಾವಣಗೆರೆಯಲ್ಲಿ 150 –200 ಮನೆಗಳನ್ನು ನಿರ್ಮಾಣವಾಗುತ್ತಿದ್ದು, ಕಾಮಗಾರಿ ಪರಿಶೀಲಿಸಿ ಶೀಘ್ರ ಮುಗಿಸಲು ಸೂಚಿಸಿದ್ದೇನೆ. ಬಡವರಿಗೆ ಮನೆ ಕೊಡಿಸುವ ಕೆಲಸವಾಗಬೇಕು. ಮುಖ್ಯವಾಗಿ ಪೌರಕಾರ್ಮಿಕರಿಗೆ ನೀಡುವ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಎಲ್‌ಇಡಿ ಪರದೆಯಲ್ಲಿ ಕೋವಿಡ್ ಜಾಗೃತಿ:

ದಾವಣಗೆರೆ: ಕೋವಿಡ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲೆಯಲ್ಲಿ ಎಲ್‍ಇಡಿ ಬೃಹತ್ ಪರದೆ ಹೊಂದಿರುವ ವಿಶೇಷ ವಾಹನದ ಮೂಲಕ ಹಮ್ಮಿಕೊಂಡಿರುವ ಜಾಗೃತಿ ಆಂದೋಲನಕ್ಕೆ ಸಚಿವ ಬೈರತಿ ಬಸವರಾಜ ಅವರು ಹಸಿರು ನಿಶಾನೆ ತೋರಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಎರಡು ವಾಹನಗಳಲ್ಲಿ ಜಿಲ್ಲೆಯ ಎಲ್ಲ ಆಯ್ದ 180 ಗ್ರಾಮಗಳಲ್ಲಿ 10 ದಿನಗಳ ಕಾಲ ಸಂಚರಿಸಿ ಜಾಗೃತಿ ಮೂಡಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು