ರೆಸಾರ್ಟ್ ರಾಜಕಾರಣಿ ಬಳಿ ನೀತಿ ಪಾಠ ಕಲಿಯುವ ಅಗತ್ಯವಿಲ್ಲ: ಎಸ್. ರಾಮಪ್ಪ

ಹರಿಹರ: ‘ನನ್ನ ಅವಧಿಯಲ್ಲಿ ಬಡ ಜನರಿಗೆ ಸೂರು ನೀಡುವ ಪ್ರಯತ್ನ ನಡೆಸುತ್ತಿದ್ದೇನೆಯೇ ಹೊರತು ಬಿ.ಪಿ. ಹರೀಶ್ ಅವರ ರೀತಿ ರೆಸಾರ್ಟ್ ರಾಜಕಾರಣ ನಡೆಸಿಲ್ಲ’ ಎಂದು ಶಾಸಕ ಎಸ್. ರಾಮಪ್ಪ ತಿರುಗೇಟು ನೀಡಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರೆಸಾರ್ಟ್ ರಾಜಕಾರಣದಲ್ಲಿ ಕಾಲಹರಣ ಮಾಡಿ, ಅವಧಿಗೆ ಮುನ್ನ ರಾಜೀನಾಮೆ ನೀಡುವ ಮೂಲಕ ಮತದಾರರನ್ನು ಅವಮಾನಿಸಿದ ಮಾಜಿ ಶಾಸಕರಿಂದ ರಾಜಕೀಯ ಪಾಠ ಕಲಿಯುವ ಅಗತ್ಯವಿಲ್ಲ’ ಎಂದು ಟಾಂಗ್ ನೀಡಿದರು.
‘ಸೂರು ರಹಿತರಿಗೆ ನಿವೇಶನ ನೀಡುವ ಸದುದ್ದೇಶದಿಂದ 11 ಎಕರೆ ಜಮೀನು ಖರೀದಿಸಿ ರಾಜ್ಯಪಾಲರ ಹೆಸರಿಗೆ ನೋಂದಾಯಿಸಿದ್ದೇನೆ. ಸರ್ಕಾರದ ಆದೇಶದ ನಂತರ ಹಣ ನೀಡಿದವರಿಗೆ ಆದ್ಯತೆ ಮೇರೆಗೆ ನಿವೇಶನ ನೀಡಲಾಗುವುದು’ ಎಂದು ತಿಳಿಸಿದರು.
‘ಈ ವಿಷಯದ ಮಾಹಿತಿ ಪಡೆಯದೆ ವಿನಾಕಾರಣ ಆರೋಪಿಸುತ್ತಿರುವ ಅವರಿಗೆ ಚುನಾವಣೆ ಸೋಲುಗಳಿಂದ ಬುದ್ಧಿ ಭ್ರಮಣೆಯಾಗಿರಬಹುದು. ಅನಾವಶ್ಯಕವಾಗಿ ಟೀಕಿಸುವ ಮೂಲಕ ನಮ್ಮ ತೇಜೋವಧೆಗೆ ಯತ್ನಿಸಿದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ಅನುದಾನ ಬಿಡುಗಡೆಯಾಗುತ್ತಿಲ್ಲ. ಮಂಜೂರಾದ ಕಾಮಗಾರಿಗಳಿಗೆ ಜಿಲ್ಲಾಧಿಕಾರಿ ಮೇಲೆ ಒತ್ತಡ ತಂದು ಅಡ್ಡಿಪಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್ ಪಕ್ಷದ ಜಿಲ್ಲಾ ನಾಯಕರ ವಿರುದ್ಧ ಹಗುರವಾಗಿ ಮಾತನಾಡುವ ನೈತಿಕತೆಯನ್ನು ಪಕ್ಷಾಂತರಿ ನಾಯಕ ಬಿ.ಪಿ. ಹರೀಶ್ ಕಳೆದುಕೊಂಡಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಸಿದ್ಧಾಂತವನ್ನು ಚಾಚು ತಪ್ಪದೇ ಪಾಲಿಸುತ್ತೇನೆ’ ಎಂದರು.
‘ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಮೀಸಲಾತಿಯಲ್ಲಿ ಅನೇಕ ಗೊಂದಲಗಳಿದ್ದು, ಮೀಸಲಾತಿ ಪರಿಷ್ಕರಣೆಗೆ ಮನವಿ ಸಲ್ಲಿಸಲಾಗುವುದು. ಸರಿಯಾಗದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗವುದು’ ಎಂದು ವಿವರಿಸಿದರು.
ನಗರಸಭೆ ಉಪಾಧ್ಯಕ್ಷ ಎಂ.ಎಸ್. ಬಾಬುಲಾಲ್, ಸದಸ್ಯರಾದ ಎಸ್.ಎಂ. ವಸಂತ್, ಸೈಯದ್ ಅಬ್ದುಲ್ ಅಲಿಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ. ಅಬಿದಾಲಿ, ಎಲ್.ಬಿ. ಹನುಮಂತಪ್ಪ ಹಾಗೂ ಮುಖಂಡರು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.