ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮೊಬೈಲ್‌ ಕಳವು ಪತ್ತೆಗೆ ಬಂತು ಪೋರ್ಟಲ್‌

ಕಳುವಾದ 24 ಗಂಟೆಯೊಳಗೆ ಮೊಬೈಲ್‌ ಬ್ಲಾಕ್‌
Last Updated 25 ಫೆಬ್ರುವರಿ 2023, 4:51 IST
ಅಕ್ಷರ ಗಾತ್ರ

ದಾವಣಗೆರೆ: ಇನ್ನು ಮುಂದೆ ಯಾರದ್ದಾದರೂ ಮೊಬೈಲ್ ದೂರವಾಣಿ ಸಲಕರಣೆ ಕಳ್ಳತನಕ್ಕೆ ಒಳಗಾದರೆ, ‘ಅಯ್ಯೋ ದುಬಾರಿ ಮೊತ್ತದ ಮೊಬೈಲ್‌ ಕಳೆಯಿತು’, ‘ಸಂಪರ್ಕ ಸಂಖ್ಯೆಗಳು ಹೋದವು’, ‘ಪ್ರಮುಖ ಫೋಟೊಗಳು, ದಾಖಲೆಗಳು ಹೋದವು’ ಎಂದೆಲ್ಲ ಕೊರಗಬೇಕಿಲ್ಲ. ಕಳೆದು ಹೋದ ಮೊಬೈಲ್‌ ಪತ್ತೆಗೆ ಹೊಸ ವೆಬ್‌ ಪೋರ್ಟಲ್‌ ಬಂದಿದೆ. ಈ ಪೋರ್ಟಲ್‌ ಮೂಲಕ ನೀವು ನಿಮ್ಮ ಮೊಬೈಲ್‌ ಪತ್ತೆ ಮಾಡಬಹುದಾಗಿದೆ.

ಕಳೆದುಹೋದ ಮೊಬೈಲ್‌ ಸಲಕರಣೆಗಳ ಪತ್ತೆಗೆ ಕೇಂದ್ರ ಸರ್ಕಾರದ ನೂತನ ಸಿಇಐಆರ್‌ (ಸೆಂಟ್ರಲ್‌ ಇಕ್ಯುಪ್‌ಮೆಂಟ್‌ ಐಡೆಂಟಿಟಿ ರಿಜಿಸ್ಟರ್‌) ಪೋರ್ಟಲ್ ಬಂದಿದೆ. ಕೇಂದ್ರ ದೂರ ಸಂಪರ್ಕ ಇಲಾಖೆ ಜಾರಿಗೆ ತಂದಿರುವ ನೂತನ ವ್ಯವಸ್ಥೆ ಇದು. ಈ ಪೋರ್ಟಲ್‌ಗೆ ಭೇಟಿ ನೀಡಿ ವ್ಯಕ್ತಿಯು ಕಳೆದುಕೊಂಡ ಮೊಬೈಲ್‌ ಮಾಹಿತಿ ಹಾಗೂ ಸ್ವ–ವಿವರವನ್ನು ದಾಖಲಿಸಿದರೆ ಸಾಕು 24 ಗಂಟೆಯೊಳಗೆ ಕಳೆದುಹೋದ ಮೊಬೈಲ್‌ ಬ್ಲಾಕ್‌ ಆಗುತ್ತದೆ. ಮೊಬೈಲ್‌ ಕದ್ದ ಕಳ್ಳ ಆ ಫೋನನ್ನು ಮತ್ತೆ ಬಳಸಲು ಆರಂಭಿಸಿದರೆ ಸಾಕು ಮೊಬೈಲ್‌ ಪತ್ತೆ ಹಚ್ಚಬಹುದು.

ಏನಿದು ವ್ಯವಸ್ಥೆ: ಮೊಬೈಲ್‌ ಕಳೆದು ಹೋದವರು ಸಿಇಐಆರ್‌ ವೆಬ್‌ ಪೋರ್ಟಲ್‌ಗೆ ಹೋಗಿ ಮೊಬೈಲ್‌ ಕಳೆದುಹೋದ ಬಗ್ಗೆ ಮಾಹಿತಿ ನೀಡಬೇಕು. ಇದಕ್ಕೂ ಮೊದಲು ಮೊಬೈಲ್ ಕಳುವಾದ ಬಗ್ಗೆ ನೀಡಿದ ದೂರಿನ ಪ್ರತಿ ಪಡೆದಿರಬೇಕು. ದೂರಿನ ಪ್ರತಿ ಪಡೆಯದಿದ್ದರೆ ಕರ್ನಾಟಕ ರಾಜ್ಯ ಪೊಲೀಸ್‌ (ಕೆಎಸ್‌ಪಿ ಇ–ಲಾಸ್ಟ್‌) ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಇ–ಲಾಸ್ಟ್‌ ಕಾಲಮ್‌ನಲ್ಲಿ ಮಾಹಿತಿ ನೀಡಿದರೆ ‌ಈ ದೂರಿನ ಪ್ರತಿ ಸಿಗುತ್ತದೆ. ಅದನ್ನು ಪಡೆದು‌‌ ಮೊಬೈಲ್‌ ಖರೀದಿಸಿದ ಬಿಲ್‌ ಹಾಗೂ ಆಧಾರ್‌ ಅಥವಾ ಗುರುತಿನ ಚೀಟಿಯ ಮಾಹಿತಿ ನಮೂದಿಸಬೇಕು. ಸ್ವವಿವರವನ್ನು ದಾಖಲಿಸಬೇಕು.

ಮೊಬೈಲ್‌ ಕಳೆದ ತಕ್ಷಣ ನಕಲಿ ನಂಬರ್‌ ಪಡೆದಿರಬೇಕು. ಆ ಸಂಖ್ಯೆಯನ್ನು ನಮೂದಿಸಬೇಕು. ಮೊಬೈಲ್‌ ಬಿಲ್‌ನಲ್ಲಿ ಐಎಂಇ ನಂಬರ್ ಹಾಕಬೇಕು. ಎಲ್ಲಿ ಕಳೆಯಿತು ಎಂಬ ಬಗ್ಗೆ ಮಾಹಿತಿ ಕೇಳುತ್ತದೆ. ಅದನ್ನು ನೀಡಿದಾಗ ಮೊಬೈಲ್‌ಗೆ ಒಂದು ಒಟಿಪಿ ಬರುತ್ತದೆ. ಆಗ ರಿಕ್ವೆಸ್ಟ್‌ ಐಡಿ ಬರುತ್ತದೆ. ತಕ್ಷಣ ಮೊಬೈಲ್‌ ಬ್ಲಾಕ್‌ ಆಗುತ್ತದೆ.

ಮೊಬೈಲ್‌ ಕದ್ದವರು ಬೇರೆ ಸಿಮ್‌ ಹಾಕಿದ ತಕ್ಷಣ ಸಿಇಎನ್‌ ಅಪರಾಧ ಠಾಣೆಗೆ ಮಾಹಿತಿ ಬರುತ್ತದೆ. ಪೊಲೀಸರ ತಕ್ಷಣ ಕಳ್ಳರನ್ನು
ಹಿಡಿಯಲು ಸಹಾಯಕವಾಗುತ್ತದೆ.

‘ಈ ವೆಬ್‌ಸೈಟ್ ಮೊದಲಿನಿಂದಲೂ ಇತ್ತು. ಆದರೆ ಪೊಲೀಸರಿಗೆ ಬಳಸಲು (ಆ್ಯಕ್ಸೆಸ್‌) ಅವಕಾಶ ಇರಲಿಲ್ಲ. ಈಗ ಒಂದು ತಿಂಗಳ ಹಿಂದೆ ನೀಡಲಾಗಿದೆ. ಇದರಡಿ ಮೊದಲ ಪ್ರಕರಣದಲ್ಲಿ ಮೊಬೈಲ್‌ ಪತ್ತೆಯಾಗಿದ್ದು, ಮಾಲೀಕರಿಗೆ ಹಿಂದಿರುಗಿಸಲಾಗಿದೆ’ ಎಂದು ಈ ವ್ಯವಸ್ಥೆಯ ನೋಡಲ್ ಅಧಿಕಾರಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಮಂಜುನಾಥ ಬಿ. ‘ಪ್ರಜಾವಾಣಿ‘ಗೆ ಮಾಹಿತಿ
ನೀಡಿದರು.

‘ಮೊಬೈಲ್‌ ಕಳೆದುಹೋದ ಅಥವಾ ಕಳ್ಳತನವಾದ ಬಗ್ಗೆ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಬೇಕು ಎಂದೇನಿಲ್ಲ. ಕೆಎಸ್‌ಪಿ ಇ–ಲಾಸ್ಟ್‌ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಮೊಬೈಲ್‌ ಕಳೆದುಹೋದ ಅಥವಾ ಕಳ್ಳತನವಾದ ಬಗ್ಗೆ ಮಾಹಿತಿ ನೀಡಿದರೆ ಸಾಕು. ದೂರಿನ ಪ್ರತಿ ಸಿಗುತ್ತದೆ‘ ಎಂದು ವಿವರಿಸಿದರು ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT