ಶುಕ್ರವಾರ, ಸೆಪ್ಟೆಂಬರ್ 24, 2021
24 °C
500 ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿಯ ನಿರ್ಮಾಣ * ಆರು ತಿಂಗಳಲ್ಲಿ ಕಾಮಗಾರಿ ಮುಗಿದು ಕಾರ್ಯಾರಂಭದ ನಿರೀಕ್ಷೆ

ದಾವಣಗೆರೆ: ನಿಂತು ಹೋಗಿದ್ದ ಈಜುಕೊಳಕ್ಕೆ ಆಧುನಿಕ ಸ್ಪರ್ಶ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದೇವರಾಜ ಅರಸ್‌ ಬಡಾವಣೆಯಲ್ಲಿರುವ ಈಜುಕೊಳ ಆರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈಗ ಸ್ಮಾರ್ಟ್‌ಸಿಟಿ ಯೋಜನೆಯಡಿ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ಇನ್ನಾರು ತಿಂಗಳಲ್ಲಿ ಕಾಮಗಾರಿ ಮುಗಿದು ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ.

2001ರಲ್ಲಿ ₹ 1.61 ಕೋಟಿ ವೆಚ್ಚದಲ್ಲಿ ಈಜುಕೊಳ ಕಾಮಗಾರಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಸುದೀರ್ಘ ಕಾಲದ ನಂತರ 2008ರಲ್ಲಿ ಈ ಕಾಮಗಾರಿ ಪೂರ್ಣಗೊಂಡಿತ್ತು. ಕರ್ನಾಟಕ ಭೂ ಸೇನಾ ನಿಗಮವು ಈ ಈಜುಕೊಳವನ್ನು ನಿರ್ಮಿಸಿ ನೀಡಿತ್ತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ಇರುವ ಈ ಈಜುಕೊಳದಲ್ಲಿ 2015ರ ವರೆಗೆ ಇಲ್ಲಿ ಈಜು ನಡೆಯುತ್ತಿತ್ತು. ಬಳಿಕ ನಿರ್ವಹಣೆ ಇಲ್ಲದೇ ನಿಂತು ಹೋಯಿತು.

‘ಮತ್ತೆ ಈಜುಕೊಳ ಚಟುವಟಿಕೆಯ ಕೇಂದ್ರವಾಗಬೇಕು ಎಂಬ ಕಾರಣದಿಂದ ಸರ್ಕಾರಕ್ಕೆ, ನಮ್ಮ ಇಲಾಖೆಯ ಮೇಲಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದಿದ್ದೆ. ಈಗ ಸ್ಮಾರ್ಟ್‌ಸಿಟಿ ಯೋಜನೆಯಡಿ ಆಧುನಿಕ ಸ್ಪರ್ಶ ನೀಡುವ ಕೆಲಸ ಆರಂಭಗೊಂಡಿದೆ. ಇನ್ನು ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

2 ಅಡಿ ಆಳದ ಸಣ್ಣ ಈಜುಕೊಳ ಇದ್ದು, ಪುಟ್ಟ ಮಕ್ಕಳಿಗಾಗಿ ಮೀಸಲಿಡಲಾಗಿದೆ. 3 ಅಡಿಯಿಂದ 18 ಅಡಿವರೆಗೆ ಆಳ ಇರುವ 50 ಅಡಿ ಉದ್ದದ 25 ಅಡಿ ಅಗಲದ ಈಜುಕೊಳದ ನವೀಕರಣ ನಡೆಯುತ್ತಿದೆ. ಮೇಲೆ ಟೈಲ್ಸ್‌ ಹಾಕುವ ಕೆಲಸ ಇನ್ನಾಗಬೇಕು ಎಂದು ಅವರು ವಿವರಿಸಿದರು.

ಸ್ಪರ್ಧೆಗಳು ನಡೆಯುವ ಸಮಯದಲ್ಲಿ ಸುತ್ತ 500 ಮಂದಿ ಕುಳಿತುಕೊಳ್ಳುವ ಪ್ರೇಕ್ಷಕರ ಗ್ಯಾಲರಿ ಇರುತ್ತದೆ. ಅಲ್ಲದೇ ಸ್ಪರ್ಧೆಗಳ ಸಣ್ಣ ಉದ್ಘಾಟನೆ ಕಾರ್ಯಕ್ರಮ ನಡೆಸಲೂ ಅವಕಾಶ ಕಲ್ಪಿಸಲಾಗುತ್ತಿದೆ. ಸ್ಪರ್ಧೆ ಅಲ್ಲದೇ ನಿತ್ಯ ಈಜಾಡಲು, ಈಜು ಕಲಿಯಲು ಬಯಸುವವರಿಗೆ ಈ ಈಜುಕೊಳ ಬಳಕೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

**
ಈಜುಕೊಳದ ಸಿವಿಲ್‌ ಕೆಲಸಗಳು ಎರಡು ಮೂರು ತಿಂಗಳುಗಳಲ್ಲಿ ಮುಗಿಯಲಿದೆ. ನೆರಳಿನ ವ್ಯವಸ್ಥೆ, ಸೋಲಾರ್‌ ಅಳವಡಿಕೆಗಳಿಗೆ ಮತ್ತೆ ಮೂರು ತಿಂಗಳು ಬೇಕಾಗುತ್ತದೆ.
-ರವೀಂದ್ರ ಮಲ್ಲಾಪುರ, ದಾವಣಗೆರೆ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ

**

ಈಜುಕೊಳವನ್ನು ಪುನರ್ ಆರಂಭಿಸಲು 2016ರಿಂದಲೇ ಪ್ರಯತ್ನಿಸುತ್ತಿದ್ದೆ. ಈಗ ಸ್ಮಾರ್ಟ್‌ಸಿಟಿ ಯೋಜನೆಯಡಿ ತೆಗೆದುಕೊಳ್ಳುವ ಮೂಲಕ ಪ್ರಯತ್ನ ಸಫಲಗೊಂಡಿದೆ.
-ಬಿ. ಶ್ರೀನಿವಾಸ, ಸಹಾಯಕ ನಿರ್ದೇಶಕ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.