ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು: ಪ್ರಶಾಂತ ಪರಿಸರದಲ್ಲಿ ಆಕರ್ಷಿಸುವ ನಲ್ಲೂರು ಉದ್ಯಾನ

ಅರಣ್ಯ ಇಲಾಖೆಯ 12 ಎಕರೆ ನಿವೇಶನದಲ್ಲಿ ತಲೆ ಎತ್ತಿದ ಸುಸಜ್ಜಿತ ಪಾರ್ಕ್‌
Last Updated 26 ಜನವರಿ 2022, 3:06 IST
ಅಕ್ಷರ ಗಾತ್ರ

ಸಂತೇಬೆನ್ನೂರು: ನಲ್ಲೂರು ಬಳಿಯ ‘ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ’, ಮಾವಿನಕಟ್ಟೆಯ ಶಾಂತಿಸಾಗರ ಅರಣ್ಯ ವಲಯದಿಂದ ನಿರ್ಮಿಸಿರುವ ಉದ್ಯಾನ ಈಚೆಗೆ ಜನಾಕರ್ಷಕ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.

ಅರಣ್ಯ ಇಲಾಖೆಯ 12 ಎಕರೆ ನಿವೇಶನ ಸುಸಜ್ಜಿತ ಸೌಲಭ್ಯಗಳ, ಮರಗಿಡಗಳ ವಿಶೇಷ ಆಕರ್ಷಣೆಯಿಂದ ಕಂಗೊಳಿಸುತ್ತಿದೆ. ಪ್ರವಾಸಿಗರನ್ನು ಆಕರ್ಷಕ ಪ್ರವೇಶ ದ್ವಾರದೊಂದಿಗೆ ಸ್ವಾಗತಿಸುತ್ತದೆ. ಮೂರು ವರ್ಷಗಳ ಹಿಂದೆ ಅರಣ್ಯ ಇಲಾಖೆಯ ವೃಕ್ಷೋದ್ಯಾನ ಯೋಜನೆಯ ಅಡಿಯಲ್ಲಿ ಸುಮಾರು ₹ 98 ಲಕ್ಷ ವೆಚ್ಚದಲ್ಲಿ ಹಂತ–ಹಂತವಾಗಿ ಅಭಿವೃದ್ಧಿ ಪಡಿಸಲಾಗಿದೆ.

ಹಲವು ವಿಶೇಷಗಳಲ್ಲಿ ಸುಮಾರು 810 ಮೀಟರ್‌ ವಾಕಿಂಗ್ ಪಾಥ್, ಶುದ್ಧ ಕುಡಿಯುವ ನೀರಿನ ಘಟಕ, ಪರಿಸರಸ್ನೇಹಿ ಶೌಚಾಲಯ, ಕಸದ ವಿಲೇವಾರಿ ಬುಟ್ಟಿಗಳನ್ನು ಅಳವಡಿಸಲಾಗಿದೆ. ವ್ಯಾಯಾಮಕ್ಕಾಗಿ ಮಕ್ಕಳಿಗೆ ಹಾಗೂ ವಯಸ್ಕರಿಗೆ ಪ್ರತ್ಯೇಕ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಧ್ಯಾನ ಮಂದಿರವನ್ನು ನಿರ್ಮಿಸಲಾಗಿದೆ.

ಸಾಂಪ್ರದಾಯಿಕ ವೃಕ್ಷಗಳಾದ ಆಲ, ಅರಳಿ, ಬೇವು, ಹತ್ತಿಯಂತಹ ಮರಗಳನ್ನು ಪೋಷಿಸಲಾಗಿದೆ. ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಜಿಮ್‌ ನಿರ್ಮಿಸಲಾಗಿದೆ. ಸುತ್ತಲೂ ಕುಳಿತುಕೊಳ್ಳಲು ಬೆಂಚ್‌ಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ಮಕ್ಕಳಿಗೆ ವಿವಿಧ ಬಗ್ಗೆ ಮನರಂಜನೆ ನೀಡುವ ಕ್ರೀಡಾ ಸಾಮಗ್ರಿಗಳನ್ನು ಶಾಶ್ವತವಾಗಿ ನೆಲೆಗೊಳಿಸಲಾಗಿದೆ ಎಂದು ಆರಂಭದಲ್ಲಿ ಉದ್ಯಾನ ನಿರ್ಮಿಸಲು ಶ್ರಮಿಸಿದ ನಿವೃತ್ತ ವಲಯ ಅರಣ್ಯಾಧಿಕಾರಿ ವೀರೇಶ್ ನಾಯ್ಕ್ ತಿಳಿಸಿದರು.

ಚನ್ನಗಿರಿಯಿಂದ ನಲ್ಲೂರಿನ ಹೆದ್ದಾರಿಯಲ್ಲಿ ನಲ್ಲೂರಿನ ಹೊರವಲಯದಿಂದ ಬುಳುಸಾಗರ ರಸ್ತೆಯಲ್ಲಿ 2 ಕಿ.ಮೀ ಕ್ರಮಿಸಿದರೆ ಪ್ರಶಾಂತ ಪರಿಸರದಲ್ಲಿ ಉದ್ಯಾನ ತಲೆ ಎತ್ತಿದೆ. ಸೂಳೆಕೆರೆಗೆ ಬರುವ ಹಲವು ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡುತ್ತಾರೆ. ಮಕ್ಕಳೊಂದಿಗೆ ಆಟವಾಡುತ್ತಾರೆ. ಮಕ್ಕಳಿಗಾಗಿ ಮತ್ತಷ್ಟು ಕ್ರೀಡಾ ಸಾಮಗ್ರಿಗಳನ್ನು ಅಳವಡಿಸಲಾಗಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಮಾವಿನ ಹೊಳಿಯಪ್ಪ.

ಕೆರೆ ಹಿನ್ನೆಲೆಯಲ್ಲಿ, ವೃಕ್ಷಗಳ ಹಚ್ಚ ಹಸಿರಿನಲ್ಲಿ ವೈವಿಧ್ಯಮಯ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಈ ತಾಣ ಮತ್ತಷ್ಟು ಪರಿಸರ ಪ್ರೇಮ ಮೂಡಿಸಲಿದೆ ಎನ್ನುತ್ತಾರೆ ನಲ್ಲೂರು ಗ್ರಾಮದ ಜಹೀರ್ ಖಾನ್.

ಇಲ್ಲಿಗೆ ವಾಹನ ಸೌಕರ್ಯವಿಲ್ಲದಿರುವುದೇ ಮುಖ್ಯ ಕೊರತೆಯಾಗಿದೆ. ಸ್ವಂತ ವಾಹನ ಸೌಕರ್ಯ ಇರುವವರಷ್ಟೇ ಇಲ್ಲಿಗೆ ಬಂದು ಹೋಗಬಹುದು.

ಸಂತೇಬೆನ್ನೂರಿನ ಪುಷ್ಕರಣಿ ಉದ್ಯಾನದಲ್ಲಿ ಹಸಿರು ಹುಲ್ಲು ಹಾಸು ಹಾಗೂ ಕಲ್ಲಿನ ಪಥಗಳನ್ನು ನಿರ್ಮಿಸಲಾಗಿದೆ. ಸುಮಾರು 11 ಎಕರೆ, 10 ಗುಂಟೆ ವ್ಯಾಪ್ತಿಯಲ್ಲಿ ಪುಷ್ಕರಣಿ ನಿವೇಶನ ಇದೆ. ಪುಷ್ಕರಣಿ ಸೌಂದರ್ಯ ಸವಿಯಲು ಬಂದವರು ಹುಲ್ಲು ಹಾಸಿನ ಮೇಲೆ ವಿಶ್ರಾಂತಿ ಪಡೆಯುತ್ತಾರೆ. ಇನ್ನೂ ಖಾಲಿ ನಿವೇಶನದಲ್ಲಿ ಉದ್ಯಾನ ಹಂತ–ಹಂತವಾಗಿ ವಿಸ್ತರಿಸಲು ಯೋಜನೆ ನಡೆಸಿದಿದೆ. ಹೈಮಾಸ್ಟ್ ದೀಪ ಅಳವಡಿಸಲು ಚಿಂತನೆ ನಡೆದಿದೆ ಎನ್ನುತ್ತಾರೆ ಸಿಬ್ಬಂದಿ.

ಈಚೆಗೆ ಪುಷ್ಕರಣಿಗೆ ಹಲವು ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ಪ್ರಾಚ್ಯವಸ್ತು ಇಲಾಖೆ ಆಮೆಗತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಸಿದೆ. ಮರ ಗಿಡಗಳ ಪೋಷಣೆಗೆ ಆದ್ಯತೆ ನೀಡಿಲ್ಲ. ರಾತ್ರಿ ವೇಳೆ ವಿದ್ಯುತ್ ದೀಪಗಳಿಲ್ಲ. ಉದ್ಯಾನದ ಹಸಿರನ್ನು ಯಾವಾಗಲೂ ಇರುವಂತೆ ಕಾಯ್ದುಕೊಳ್ಳುವ ಕಾರ್ಯ ಆಗುತ್ತಿಲ್ಲ ಎನ್ನುತ್ತಾರೆ ಶಿವರಾಜ್ ಜಿ.ಎಸ್.

ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಪುಷ್ಕರಣಿ ಸೌಂದರ್ಯದ ಜೊತೆ ಉದ್ಯಾನ ಸಮೃದ್ಧಗೊಳಿಸಲು ಸಕಾರಾತ್ಮಕ ಕಾರ್ಯಗಳು ನಡೆಯಬೇಕು. ಪ್ರವಾಸೋದ್ಯಮ ಚುರುಕುಗೊಳಿಸಲು ಪ್ರಯತ್ನಗಳಾಗಬೇಕು ಎನ್ನುತ್ತಾರೆ ಸಿದ್ಧೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT