ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಒಳಚರಂಡಿ ಅವ್ಯವಸ್ಥೆಗೆ ಸಿಗದ ಮುಕ್ತಿ

ಮಳೆ ಬಂದರೆ ರಸ್ತೆ ಮೇಲೆ ಹರಿವ ಕೊಳಚೆ ನೀರು; ನಾಗರಿಕರ ಅಸಮಾಧಾನ
Published : 2 ಸೆಪ್ಟೆಂಬರ್ 2024, 6:04 IST
Last Updated : 2 ಸೆಪ್ಟೆಂಬರ್ 2024, 6:04 IST
ಫಾಲೋ ಮಾಡಿ
Comments

ದಾವಣಗೆರೆ: ಮಳೆ ಸುರಿದರೆ ನಗರದಲ್ಲಿ ಮಣ್ಣಿನ ಘಮದ ಬದಲು ದುರ್ವಾಸನೆ ಹರಡುತ್ತದೆ. ರಸ್ತೆಗಳ ಮೇಲೆ ಕೊಳಚೆ ಮಿಶ್ರಿತ ಮಳೆ ನೀರು ಹರಿಯುತ್ತದೆ. ಸಹಿಸಲಸಾಧ್ಯವಾದ ವಾಸನೆ ಮೂಸುತ್ತಲೇ ಸಾಗುವ ತ್ರಾಸು ನಾಗರಿಕರದ್ದು. ಒಳಚರಂಡಿ (ಯುಜಿಡಿ), ಮ್ಯಾನ್‌ಹೋಲ್‌ಗಳ ಈ ಅವ್ಯವಸ್ಥೆಗೆ ಜನರು ಬೇಸತ್ತುಹೋಗಿದ್ದಾರೆ.

‘ಸ್ಮಾರ್ಟ್‌ಸಿಟಿ’ ಹಿರಿಮೆ ಹೊಂದಿರುವ ದಾವಣಗೆರೆಯಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಮಳೆ ನೀರಿಗೆ ಚರಂಡಿ ಹಾಗೂ ಶೌಚಾಲಯ, ಸ್ನಾನದ ನೀರು ಹರಿದು ಹೋಗಲು ಒಳಚರಂಡಿ ಪ್ರತ್ಯೇಕವಾಗಿದ್ದರೂ ಎಲ್ಲೆಡೆ ರಸ್ತೆಯಲ್ಲಿ ಕೊಳಚೆ ನೀರು ನಿಲ್ಲುವುದನ್ನು ಮಾತ್ರ ತಪ್ಪಿಸಲು ಸಾಧ್ಯವಾಗಿಲ್ಲ. ಇದೇ ನೀರಿನ ಮೇಲೆ ವಾಹನಗಳು ತುಸು ವೇಗವಾಗಿ ಚಲಿಸಿದಾಗ ಪಾದಚಾರಿಗಳಿಗೆ ಕೊಳಚೆಯ ಮಜ್ಜನವಾಗುವುದು ತಪ್ಪಿಲ್ಲ. ಅಲ್ಲಲ್ಲಿ ಬಾಯ್ದೆರೆದಿರುವ ಮ್ಯಾನ್‌ಹೋಲ್‌ಗಳು ಬಲಿಗಾಗಿ ಕಾಯುತ್ತಿವೆಯೇನೋ ಎಂಬಂತೆ ಭಾಸವಾಗುತ್ತವೆ.

2014ರಲ್ಲಿ ₹ 124 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ದೊರೆತಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯುಎಸ್‌) ಈ ಯೋಜನೆ ಅನುಷ್ಠಾನಗೊಳಿಸಿದೆ. ಶೇ 95ರಷ್ಟು ಒಳಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮಹಾನಗರ ಪಾಲಿಕೆಯು ಇದರ ನಿರ್ವಹಣೆಯ ಹೊಣೆ ಹೊತ್ತಿದೆ. ಈ ನಿರ್ವಹಣೆಯಲ್ಲಿನ ಲೋಪಗಳು ಸರಿಹೋಗುತ್ತಿಲ್ಲ.

ನಿತ್ಯ ಒಂದಿಲ್ಲೊಂದು ಬೀದಿಯಲ್ಲಿ ಒಳಚರಂಡಿ ಕಟ್ಟಿಕೊಂಡು ಅವಾಂತರ ಸೃಷ್ಟಿಯಾಗುತ್ತಿದೆ. ಮನೆಯ ನೀರು ಹರಿದುಹೋಗದೇ ದುರ್ನಾತ ಬೀರುತ್ತಿದೆ. ಒಳಚರಂಡಿಯಲ್ಲಿ ಕೊಳಚೆ ನೀರು ಹರಿಯದ ಹಾಗೂ ಮ್ಯಾನ್‌ಹೋಲ್‌ ಕಟ್ಟಿಕೊಂಡ ಹತ್ತಾರು ದೂರುಗಳು ನಿತ್ಯ ಮಹಾನಗರ ಪಾಲಿಕೆಗೆ ಬರುತ್ತಿವೆ. ಮಳೆಗಾಲದಲ್ಲಿ ಈ ಸಮಸ್ಯೆ ಇನ್ನೂ ಬಿಗಡಾಯಿಸಿದೆ. ಸುಸಜ್ಜಿತವಾಗಿ ನಿರ್ಮಾಣವಾಗಿರುವ ಎಸ್‌.ಎಸ್‌.ಬಡಾವಣೆ, ಎಂಸಿಸಿ ಬಡಾವಣೆ, ನಿಜಲಿಂಗಪ್ಪ ಬಡಾವಣೆಯಲ್ಲಿಯೂ ಒಳಚರಂಡಿ ಅವ್ಯವಸ್ಥೆ ಅಸಹನೀಯವಾಗಿದೆ. ದೂರುಗಳಿಗೆ ಸ್ಪಂದಿಸಿ ಸಮಸ್ಯೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬುದು ನಾಗರಿಕರ ಅಸಮಾಧಾನ.

ಚಿಗಟೇರಿ ಆಸ್ಪತ್ರೆಯ ಮುಂಭಾಗದ ಮುಖ್ಯರಸ್ತೆಯಲ್ಲಿ ಮ್ಯಾನ್‌ಹೋಲ್‌ನಿಂದ ನೀರು ಉಕ್ಕುತ್ತಿದೆ. ನಿತ್ಯ ಸಾವಿರಾರು ಜನರು ಮೂಗು ಮುಚ್ಚಿಕೊಂಡು ಈ ಮಾರ್ಗದಲ್ಲಿ ಸಂಚರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸಮೀಪದ ಅಂಗಡಿಯ ವ್ಯಾಪಾರಿಗಳು ಮಹಾನಗರ ಪಾಲಿಕೆಗೆ ಹಲವು ಬಾರಿ ದೂರು ನೀಡಿದರೂ ಪರಿಹಾರ ಸಿಕ್ಕಿಲ್ಲ. ಮಳೆ ಸುರಿದಾಗ ಹಳೆ ದಾವಣಗೆರೆಯ ಹಲವು ಮ್ಯಾನ್‌ಹೋಲ್‌ಗಳಿಂದಲೂ ಇದೇ ರೀತಿ ನೀರು ಉಕ್ಕುತ್ತದೆ.

‘ಮಲ–ಮೂತ್ರವಲ್ಲದೇ ಬೇರೆ ತ್ಯಾಜ್ಯ ಸೇರಿಕೊಳ್ಳುತ್ತಿರುವುದರಿಂದ ಒಳಚರಂಡಿ ಕಟ್ಟಿಕೊಳ್ಳುತ್ತಿದೆ. ಇದರಿಂದ ಮ್ಯಾನ್‌ಹೋಲ್‌ಗಳು ತುಂಬಿ ಗಲೀಜು ನೀರು ಹೊರಬರುತ್ತದೆ. ಮನೆ ಮೇಲೆ ಬಿದ್ದ ಮಳೆನೀರು ಹರಿದು ಹೋಗಲು ಒಳಚರಂಡಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಆಗ ಸಹಜವಾಗಿ ನೀರು ಮ್ಯಾನ್‌ಹೋಲ್‌ಗಳಲ್ಲಿನ ಕೊಳಚೆಯ ಜೊತೆ ಮಿಶ್ರಣಗೊಂಡು ರಸ್ತೆ ಮೇಲೆ ಹರಿಯುತ್ತದೆ’ ಎಂಬುದು ಪಾಲಿಕೆ ಅಧಿಕಾರಿಗಳ ಹೇಳಿಕೆ.

‘ಸ್ಯಾನಿಟರಿ ಪ್ಯಾಡ್‌ ಹಾಗೂ ಡೈಪರ್‌ಗಳು ಒಳಚರಂಡಿಯಲ್ಲಿ ಸಿಲುಕಿ ಸಮಸ್ಯೆ ಬಿಗಡಾಯಿಸುತ್ತಿದೆ. ಇವು ಸರಿಯಾಗಿ ವಿಲೇವಾರಿ ಆಗದಿರುವುದು ಸಹ ಒಳಚರಂಡಿ ಕಟ್ಟಿಕೊಳ್ಳಲು ಬಹುಮುಖ್ಯ ಕಾರಣ. ಬಹುತೇಕರು ಪ್ಯಾಡ್‌ ಹಾಗೂ ಡೈಪರ್‌ಗಳನ್ನು ಶೌಚದ ಗುಂಡಿಗಳಲ್ಲಿ ಹಾಕಿ ನೀರು ಹರಿಸುತ್ತಾರೆ. ನೀರಿನಲ್ಲಿ ಕರಗದ ಇವು ಒಂದೆಡೆ ಸಂಗ್ರಹವಾಗಿ ಮ್ಯಾನ್‌ಹೋಲ್‌ ತುಂಬುತ್ತವೆ’ ಎಂಬುದು ಪೌರಕಾರ್ಮಿಕರೊಬ್ಬರ ಅನುಭವ.

ಬಡಾವಣೆಗಳ ರಸ್ತೆಯ ಪ್ರತಿ 15ರಿಂದ 20 ಮೀಟರ್‌ಗೆ ಒಂದು ಮ್ಯಾನ್‌ಹೋಲ್‌ಗಳಿವೆ. ಮುಖ್ಯರಸ್ತೆಗಳಲ್ಲಿ 30 ಮೀಟರ್‌ ಅಂತರದಲ್ಲಿ ಇವನ್ನು ನಿರ್ಮಿಸಲಾಗಿದೆ. ಇಂತಹ ಮ್ಯಾನ್‌ಹೋಲ್‌ ಕಟ್ಟಿಕೊಂಡಿರುವ ಬಗ್ಗೆ ಪಾಲಿಕೆಗೆ ನಿತ್ಯ 10ಕ್ಕೂ ಹೆಚ್ಚು ದೂರುಗಳು ಬರುತ್ತವೆ. ಮಳೆಗಾಲದಲ್ಲಿ ದೂರುಗಳ ಪ್ರಮಾಣ ಹೆಚ್ಚು. ಚಿಕ್ಕ ಸಮಸ್ಯೆಗಳಿಗೆ ತಕ್ಷಣಕ್ಕೆ ಪರಿಹಾರ ಸಿಗುತ್ತಿದೆ. ಕುಸಿದ ಮ್ಯಾನ್‌ಹೋಲ್‌ ದುರಸ್ತಿಗೆ ಹಲವು ದಿನ ಕಾಯಬೇಕಾಗುತ್ತದೆ. ಇದು ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ.

ಮುಖ್ಯರಸ್ತೆ ಹಾಗೂ ಬಡಾವಣೆಯ ಮಾರ್ಗಗಳಲ್ಲಿನ ಮ್ಯಾನ್‌ಹೋಲ್‌ಗಳು ಸುಗಮ ಸಂಚಾರಕ್ಕೂ ಅಡ್ಡಿಯಾಗಿವೆ. ಕೆಲವೆಡೆ ರಸ್ತೆಗಿಂತ ಎತ್ತರದಲ್ಲಿದ್ದರೆ, ಇನ್ನೂ ಹಲವೆಡೆ ಗುಂಡಿಯಾಗಿ ಪರಿವರ್ತನೆಯಾಗಿವೆ. ಇಂತಹ ಮ್ಯಾನ್‌ಹೋಲ್‌ ತಪ್ಪಿಸಲು ಪ್ರಯತ್ನಿಸುವ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಕೆ.ಟಿ.ಜೆ. ನಗರ, ವಿನೋಬನಗರ, ದೇವರಾಜ ಅರಸು ಬಡಾವಣೆ, ಆಂಜನೇಯ ಬಡಾವಣೆ, ಪಿಜೆ ಬಡಾವಣೆ, ಎಂಸಿಸಿ ‘ಬಿ’ ಬ್ಲಾಕ್‌, ವಿದ್ಯಾನಗರ ಸೇರಿ ಹಲವೆಡೆ ಇಂತಹ ಮ್ಯಾನ್‌ಹೋಲ್‌ಗಳು ಸಾಕಷ್ಟಿವೆ.

ಹೋಟೆಲ್‌ ತ್ಯಾಜ್ಯ ಒಳಚರಂಡಿಗೆ ಸೇರಿ ಮ್ಯಾನ್‌ಹೋಲ್‌ ಮೂಲಕ ರಸ್ತೆಗೆ ಹರಿಯುತ್ತದೆ. ದುರ್ವಾಸನೆ ಸಹಿಸಿಕೊಂಡು ವ್ಯಾಪಾರ ಮಾಡುವುದೇ ನಿತ್ಯದ ಗೋಳಾಗಿದೆ

-ಗುಂಡಣ್ಣ ಚಿಗಟೇರಿ ಆಸ್ಪತ್ರೆ ರಸ್ತೆಯ ಹಣ್ಣಿನ ವ್ಯಾಪಾರಿ

ನಗರವನ್ನು ಹಲವು ವಿಭಾಗಗಳನ್ನಾಗಿ ವಿಂಗಡಿಸಿ ಒಳಚರಂಡಿ ಸಮಸ್ಯೆಗಳನ್ನು ತಕ್ಷಣ ಪರಿಹರಿಸುತ್ತಿದ್ದೇವೆ. ಪಾಲಿಕೆ ಎಂಜಿನಿಯರ್‌ಗಳು ಅದರ ಮೇಲ್ವಿಚಾರಣೆ ನಡೆಸುತ್ತಾರೆ

-ರೇಣುಕಾ ಪಾಲಿಕೆ ಆಯುಕ್ತೆ

ಪೈಪ್ ಅಳವಡಿಸಲು ರಸ್ತೆ ಅಗೆದು ಹಾಕಿದ್ದಾರೆ. ಕಾಮಗಾರಿಯನ್ನು ತ್ವರಿತಗೊಳಿಸಿ ಆದಷ್ಟು ಶೀಘ್ರ ಕಾಮಗಾರಿಯನ್ನು ಮುಕ್ತಾಯಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಿ

-ಬಸವರಾಜಪ್ಪ ಚನ್ನಗಿರಿ ಪಟ್ಟಣದ ನಿವಾಸಿ

ದಿನಕ್ಕೆ 60 ಎಂಎಲ್‌ಡಿ ತ್ಯಾಜ್ಯ ನೀರು

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 60 ಎಂಎಲ್‌ಡಿ (ಮಿಲಿಯನ್ಸ್‌ ಆಫ್‌ ವಾಟರ್‌ ಪರ್‌ ಡೇ) ತ್ಯಾಜ್ಯ ನೀರು ಸೃಷ್ಟಿಯಾಗುತ್ತದೆ. ಈ ತ್ಯಾಜ್ಯದ ನೀರನ್ನು ನಿತ್ಯ ಶುದ್ಧೀಕರಿಸಲು ನಗರದಲ್ಲಿ ಮೂರು ಶುದ್ಧೀಕರಣ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಶಿವನಗರದಲ್ಲಿ 40 ಎಂಎಲ್‌ಡಿ ಸಾಮರ್ಥ್ಯ ಆವರಗೆರೆಯಲ್ಲಿ 5 ಎಂಎಲ್‌ಡಿ ಸಾಮರ್ಥ್ಯ ಹಾಗೂ ಬಾತಿ ಕೆರೆ ಸಮೀಪ 14 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಲಾಗಿದೆ. ಇಲ್ಲಿ ನೀರನ್ನು ಶುದ್ಧೀಕರಿಸಿ ಹಳ್ಳಗಳ ಮೂಲಕ ನದಿಗೆ ಬಿಡಲಾಗುತ್ತಿದೆ. 

ಒಳಚರಂಡಿ ಅವ್ಯವಸ್ಥೆ; ಹೈರಾಣಾದ ಬದುಕು

-ಇನಾಯತ್ ಉಲ್ಲಾ ಟಿ. 

ಹರಿಹರ: ನಗರದಲ್ಲಿ ಎರಡು ಹಂತಗಳಲ್ಲಿ ಒಳಚರಂಡಿ ಯೋಜನೆ (ಯುಜಿಡಿ) ಜಾರಿಯಾಗಿದೆ. ಮಹತ್ವದ ಯೋಜನೆ ಜಾರಿಗೂ ಮುನ್ನ ನಾಗರಿಕರಲ್ಲಿ ಇದ್ದ ಭರವಸೆ ಸಂತಸ ಯೋಜನೆ ಜಾರಿಯಾದ ನಂತರ ಕಾಣದಂತಾಗಿದೆ. ₹ 80 ಕೋಟಿಗೂ ಹೆಚ್ಚಿನ ಅನುದಾನ ಎರಡೂ ಹಂತಗಳ ಯೋಜನೆ ಜಾರಿಗೆ ಬಳಕೆಯಾಗಿದೆ. ಹಲವು ಲೋಪಗಳಿಂದಾಗಿ ಯೋಜನೆಯ ಲಾಭ ದೊರಕದಂತಾಗಿದೆ’ ಎಂಬುದು ನಗರದ ನಾಗರಿಕರ ಅಭಿಪ್ರಾಯ. ‘ನಗರದ ಒಳಗೆ ಹಾಗೂ ಹೊರ ಭಾಗದಲ್ಲಿ ಮ್ಯಾನ್‌ಹೋಲ್‌ಗಳ ಮುಚ್ಚಳ ಕಿತ್ತು ಹೋಗಿವೆ. ಹೊರವಲಯದ ಕೆಲವು ಬಡಾವಣೆಗಳನ್ನು ಹೊರತುಪಡಿಸಿ ಉಳಿದೆಡೆ ಯುಜಿಡಿ ಪೈಪ್‌ಗಳಿಗೆ ಮನೆಗಳ ಪೈಪ್‌ಗಳನ್ನು ಲಿಂಕ್ ಮಾಡುವ ಕಾಮಗಾರಿ ನಡೆದಿಲ್ಲ. ಈ ಕುರಿತು ಉನ್ನತ ತನಿಖೆ ನಡೆಯಬೇಕು’ ಎಂದು ಆಗ್ರಹಿಸುತ್ತಾರೆ ನಗರಸಭೆ ಸದಸ್ಯ ಆಟೊ ಹನುಮಂತಪ್ಪ. ‘ಮ್ಯಾನ್‌ಹೋಲ್‌ಗಳ ಮೂಲಕ ಹರಿಯುವ ತ್ಯಾಜ್ಯ ನಾಲ್ಕು ವೆಟ್‌ವೆಲ್‌ಗಳಿಗೆ ತಲುಪುತ್ತದೆ. ಈ ಪೈಕಿ ಒಂದು ವೆಟ್‌ವೆಲ್ ದುರಸ್ತಿ ಕಾರ್ಯ ಬಾಕಿ ಇದೆ. ಉಳಿದ ಮನೆಗಳನ್ನು ಯುಜಿಡಿಗೆ ಲಿಂಕ್ ಮಾಡಲು ಹಾಗೂ ಇತರೆ ಕಾಮಗಾರಿಗೆ ಅನುದಾನ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ನಗರಸಭೆ ಜೆಇ ಪ್ರಕಾಶ್ ಹೇಳಿದರು.

ನಿಧಾನಗತಿಯಲ್ಲಿ ಸಾಗಿದ ಕಾಮಗಾರಿ

-ಎಚ್.ವಿ. ನಟರಾಜ್

ಚನ್ನಗಿರಿ: ಪಟ್ಟಣದ ಜನಸಂಖ್ಯೆಯ ಆಧಾರದಲ್ಲಿ 2022– 23ರಲ್ಲಿ ಒಳ ಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗೆ ₹ 86.65 ಕೋಟಿ ಅನುದಾನ ಮಂಜೂರಾಗಿತ್ತು. ಆರಂಭದಿಂದಲೂ ಇಲ್ಲಿನ ಒಳ ಚರಂಡಿ ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗಿದೆ. ಕಾಮಗಾರಿ ಆರಂಭಗೊಂಡು ವರ್ಷದ ಮೇಲಾಗಿದ್ದು ಇದುವರೆಗೆ ಶೇ 50ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಕಾಮಗಾರಿಯ ವೇಗವನ್ನು ನೋಡಿದರೆ ಇದು ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗುತ್ತದೆ. ಪ್ರಸ್ತುತ ಮನೆಗಳ ಶೌಚಾಲಯಗಳಿಗೆ ಪೈಪ್ ಅಳವಡಿಸಲಾಗುತ್ತಿದೆ. ಹಾಗಾಗಿ ಪಟ್ಟಣದ ಎಲ್ಲ ರಸ್ತೆಗಳಲ್ಲೂ ಅಗೆದಿರುವುದನ್ನು ಕಾಣಬಹುದು. ‘ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು ಎಲ್ಲ ವಾರ್ಡ್‌ಗಳಲ್ಲಿನ ಮನೆಗಳಿಗೆ ಪೈಪ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು. ಈಗ ಕಾಮಗಾರಿಯ ವೇಗವನ್ನು ಹೆಚ್ಚಿಸಲಾಗಿದೆ. ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಿರುವುದರಿಂದ ರಸ್ತೆ ಅಗೆಯುವುದೇ ದೊಡ್ಡ ಕಾರ್ಯವಾಗಿದೆ. ವರ್ಷದೊಳಗೆ ಕಾಮಗಾರಿ ಸಂಪೂರ್ಣಗೊಳ್ಳಲಿದೆ’ ಎಂದು ಒಳ ಚರಂಡಿ ಮಂಡಳಿ ಸಹಾಯಕ ಎಂಜಿನಿಯರ್ ನಾಗಭೂಷಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT