ಶನಿವಾರ, ಜುಲೈ 31, 2021
28 °C
ಸಂವಿಧಾನ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆಯಲ್ಲಿ ಆರೋಪ

ಮುಂದಿನ ಚುನಾವಣೆ ಮನುವಾದಿ– ಸಂವಿಧಾನವಾದಿಗಳ ಸಂಗ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮನುವಾದಿಗಳು ಗೆದ್ದರೆ ಸಂವಿಧಾನವನ್ನು ಬದಲಾಯಿಸುತ್ತಾರೆ. ಇದರಿಂದ ಶೇ 85ರಷ್ಟು ಮಂದಿಯ ಬದುಕಿಗೆ ಏಟು ಬೀಳಲಿದೆ ಎಂದು ಸಂವಿಧಾನ ಉಳಿಸಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್‌ ಹುಸೇನ್‌ ಆತಂಕ ವ್ಯಕ್ತಪಡಿಸಿದರು.

ಸಂವಿಧಾನ ಸುಟ್ಟವರನ್ನು ಬಂಧಿಸಲು ಒತ್ತಾಯಿಸಿ ಸಂವಿಧಾನ ಉಳಿಸಿ ಹೋರಾಟ ಸಮಿತಿಯಿಂದ ಸೋಮವಾರ ಜಯದೇವ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಂವಿಧಾನ ಉಳಿಸುವುದಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ದುರಂತ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದ ಮನುವಾದಿಗಳು ಈಗ ದೇಶಪ್ರೇಮದ ಪಾಠ ಮಾಡುತ್ತಿದ್ದಾರೆ. ಸಂವಿಧಾನ ಉಳಿದರಷ್ಟೇ ನಾವು ಉಳಿಯುತ್ತೇವೆ ಎಂದು ಹೇಳಿದರು.

ಹೋರಾಟ ಸಮಿತಿಯ ಉಪಾಧ್ಯಕ್ಷ ಸಿ.ಕೆ. ಮಹೇಶ್‌ ಮಾತನಾಡಿ, ‘ಮನುಶಾಸ್ತ್ರವನ್ನು ಆಧುನಿಕತೆಗೆ ಹೊಂದಿಕೊಳ್ಳುವಂತೆ ಬದಲಾವಣೆ ಮಾಡಿ ತಯಾರಿಸಿ ನಾಗಪುರದಲ್ಲಿ ಇಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸಂವಿಧಾನ ವಿರೋಧಿ ಪಕ್ಷ ಅಧಿಕಾರಕ್ಕೆ ಮತ್ತೆ ಬಂದರೆ ಖಂಡಿತ ಅಂಬೇಡ್ಕರ್‌ ಸಂವಿಧಾನವನ್ನು ಬದಲಾಯಿಸಿ ಮನು ಸಂವಿಧಾನವನ್ನು ಜಾರಿಗೆ ತರುತ್ತಾರೆ. ಹಾಗಾಗಿ ಮುಂದಿನ ಲೋಕಸಭೆ ಚುನಾವಣೆ ಮನುವಾದಿಗಳು ಮತ್ತು ಸಂವಿಧಾನಗಳ ನಡುವಿನ ಸಂಗ್ರಾಮವಾಗಲಿದೆ’ ಎಂದು ತಿಳಿಸಿದರು.

ವಕೀಲ ರಾಮಚಂದ್ರ ಕಲಾಲ್‌ ಮಾತನಾಡಿ, ‘ಮಾನವ ಸರಪಳಿ ಮಾಡಿದರೆ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಬಂಧಿಸಲು ಬರುತ್ತಾರೆ. ಆದರೆ ಜಂತರ್‌ಮಂತರ್‌ನಲ್ಲಿ ಪೊಲೀಸರ ಎದುರೇ ಸಂವಿಧಾನ ಸುಟ್ಟಾಗ ನಮ್ಮ ದೇಶದ ಪೊಲೀಸರು ಸುಮ್ಮನಿದ್ದರು. ಇದು ದೇಶದ್ರೋಹ, ರಾಜದ್ರೋಹದ ಕಲಂ ಅಡಿಯಲ್ಲಿ ಬರುವ, ಜೀವಾವಧಿ ಶಿಕ್ಷೆ ಇರುವ ಅಪರಾಧ. ಆದರೂ ಯಾರನ್ನೂ ಬಂಧಿಸಿಲ್ಲ. ಪೊಲೀಸ್‌ ವ್ಯವಸ್ಥೆ ನಿಷ್ಕ್ರಿಯವಾಗಿರುವುದಕ್ಕೆ ಇದು ಸಾಕ್ಷಿ’ ಎಂದು ಟೀಕಿಸಿದರು.

ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಕಾಂಗ್ರೆಸ್‌ ಕರೆಯಂತೆ ಇಂದು ಬಂದ್‌ ಆಚರಿಸಲಾಗುತ್ತಿದೆ. ಆದರೆ ದೇಶದಲ್ಲಿ ಅಷ್ಟೇ ಆಗುತ್ತಿರುವುದು ಅಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿದೆ. ನರೇಂದ್ರ ಮೋದಿಯನ್ನು ಪ್ರಶ್ನಿಸಿದರೆ ಸಾಕು ದೇಶದ್ರೋಹಿ ಎಂಬ ಪಟ್ಟ ಬರುತ್ತಿದೆ ಎಂದು ಹರಿಹಾಯ್ದರು.

ಪ್ರತಿಭಟನಾ ಸಭೆಗಿಂತ ಮೊದಲು ಅಂಬೇಡ್ಕರ್‌ ವೃತ್ತದಿಂದ ಜಯದೇವ ವೃತ್ತದವರೆಗೆ ಮೆರವಣಿಗೆ ನಡೆಸಲಾಯಿತು.

ಸಂವಿಧಾನ ಸುಟ್ಟವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಶಿಕ್ಷೆ ನೀಡಬೇಕು. ಈ ಕೃತ್ಯ ಎಸಗಲು ಪ್ರಚೋದನೆ ನೀಡಿದ ಸಂಘಟನೆಗಳನ್ನು ನಿಷೇಧಿಸಬೇಕು. ಇಂತಹ ಕೃತ್ಯಗಳು ಮರುಕಳಿಸದಂತೆ ಸದೃಢವಾದ ಶಾಸನ ರೂಪಿಸಬೇಕು ಎಂದು ಆಗ್ರಹಿಸಲಾಯಿತು.

ಸಮಿತಿ ಅಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಅನೀಸ್‌ ಪಾಷ, ದಾದಾಪೀರ್‌ ನವಿಲೆಹಾಳ್‌, ಆವರಗೆರೆ ಚಂದ್ರು, ಜಿ.ಟಿ. ಗೋವಿಂದಪ್ಪ, ಕೆ.ಎಲ್‌. ಭಟ್‌, ಮಲ್ಲಿಕಾರ್ಜುನ ಕಲಮರಹಳ್ಳಿ, ತೇಜಸ್ವಿ ಪಟೇಲ್‌, ಮಲ್ಲೇಶ್‌, ದುರ್ಗೇಶ್‌, ತಿಪ್ಪೇರುದ್ರಪ್ಪ, ಹೆಗ್ಗೆರೆ ರಂಗಪ್ಪ, ಐರಣಿ ಚಂದ್ರು, ಆವರಗೆರೆ ಉಮೇಶ್, ಕೈದಾಳೆ ಮಂಜುನಾಥ್‌, ಕುಕ್ಕುವಾಡ ಮಂಜುನಾಥ, ಶಿವಾಜಿ ರಾವ್‌, ಮಂಜುನಾಥ ರೆಡ್ಡಿ, ಪರಶುರಾಮ, ಭಾರತಿ, ಜ್ಯೋತಿ, ನಾಗಜ್ಯೋತಿ, ನಾಗಸ್ಮಿತಾ, ಪೂಜಾ, ರೇಣುಕಮ್ಮ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು