ಸೋಮವಾರ, ನವೆಂಬರ್ 18, 2019
29 °C
ದೋಣಿವಿಹಾರ ಕೇಂದ್ರಕ್ಕೆ ಬಾರದ ಬೋಟ್‌, ಹಾಳು ಬಂಗಲೆಯಾದ ಯಾತ್ರಿನಿವಾಸ

ದಶಕ ಕಳೆದರೂ ಶಾಂತಿಸಾಗರಕ್ಕಿಲ್ಲಅಭಿವೃದ್ಧಿ ಭಾಗ್ಯ

Published:
Updated:
Prajavani

ದಾವಣಗೆರೆ: ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಶಾಂತಿಸಾಗರವನ್ನು (ಸೂಳೆಕೆರೆ) ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸುವ ಯೋಜನೆ ದಶಕ ಕಳೆದರೂ ಸಾಕಾರಗೊಂಡಿಲ್ಲ.

ಜಿಲ್ಲೆಯ ಪ್ರಸಿದ್ಧ ತಾಣಗಳಲ್ಲಿ ಒಂದಾದ ಸೂಳೆಕೆರೆಗೆ ವಿವಿಧೆಡೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದನ್ನು ಉತ್ತಮ ಪ್ರವಾಸಿತಾಣವನ್ನಾಗಿಸಿ ಪ್ರವಾಸೋದ್ಯಮದ ಆದಾಯದ ಮೂಲವನ್ನಾಗಿಸುವ ಯೋಜನೆ ಕುಂಟುತ್ತಾ ಸಾಗಿದೆ.

ಸೂಳೆಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇದನ್ನು ಹೊರತುಪಡಿಸಿದರೆ ಅಭಿವೃದ್ಧಿ ಕಾರ್ಯಗಳು ಆಗಿಲ್ಲ.

ದೋಣಿವಿಹಾರ ಕೇಂದ್ರ ಮಾಡಿ ದಶಕಗಳೇ ಕಳೆದರೂ ದೋಣಿ (ಬೋಟ್‌) ಬಂದಿಲ್ಲ. ಯಾತ್ರಿನಿವಾಸ ಇದ್ದರೂ ಕಿಡಿಗೇಡಿಗಳ ಹಾವಳಿಗೆ ತುತ್ತಾಗಿ ಪಾಳು ಬಂಗಲೆಯಂತಾಗಿದೆ. ಅಪಾಯ ಆಹ್ವಾನಿಸುತ್ತಿರುವ ಆಕ್ವಾಡಕ್‌ ಸುತ್ತ ತಡೆಗೋಡೆ ನಿರ್ಮಿಸಿಲ್ಲ. ದೋಣಿವಿಹಾರ ಕೇಂದ್ರ ಹಾಗೂ ಅಕ್ವಾಡಕ್‌ ಅನ್ನು ಸಮರ್ಪಕ ಸ್ಥಳದಲ್ಲಿ ನಿರ್ಮಿಸದ ಕಾರಣ ಪ್ರವಾಸಿಗರಿಂದ ದೂರವೇ ಉಳಿದಿದೆ.

ದೋಣಿ ವಿಹಾರ ಕೇಂದ್ರವನ್ನು ಕೆರೆಬಿಳಚಿ ಬಸ್‌ ತಂಗುದಾಣದ ಬಳಿ ನಿರ್ಮಿಸದೆ ಬಸವರಾಜಪುರ, ಸೇವಾನಗರ ಸಮೀಪ ಮಾಡಿದ್ದಾರೆ. ಇದರಿಂದ ಪ್ರವಾಸಿಗರಿಗೆ ಅನಾನುಕೂಲ ಆಗಿದೆ. ಇಲ್ಲಿ ನಿರ್ಮಿಸಿದ್ದರೆ ಕೆರೆಯ ವಿಹಂಗಮ ದೃಶ್ಯ, ಬೆಟ್ಟಗಳ ಸುತ್ತಲಿನ ಸುಂದರ ಪರಿಸರ ನೋಡಿ ಆಸ್ವಾದಿಸಬಹುದಿತ್ತು. ಈಗ ಇದರಿಂದ 3 ಕಿ.ಮೀ ದೂರ ಆಗುತ್ತಿದೆ. ಯೋಜನೆ ಅಸಮರ್ಪಕವಾದ ಕಾರಣ ಕೇಂದ್ರದತ್ತ ಜನರೂ ಬಂದಿಲ್ಲ. ದೋಣಿಯೂ ಬಂದಿಲ್ಲ.

ದೂರದಲ್ಲಿ ದೋಣಿ ವಿಹಾರ ಕೇಂದ್ರ ಮಾಡಿರುವ ಕಾರಣ ಪ್ರವಾಸಿಗರಿಗೆ ಜಾಸ್ತಿ ಹೊತ್ತು ಕಳೆಯಲು ಸಾಧ್ಯವಾಗುತ್ತಿಲ್ಲ. ಬಸ್‌ ನಿಲ್ದಾಣಕ್ಕೆ ನಡೆದುಕೊಂಡು ಬರಬೇಕು. ಸರ್ಕಾರದ ಹಣ ಪೋಲಾಗಿದೆ. ಅಲ್ಲದೇ ಅಕ್ವಾಡೆಕ್‌ ಕೆಳಗೆ ಮೀನುಗಾರಿಕೆ ಇಲಾಖೆಯ ಜಾಗ ಇದೆ. ಅಲ್ಲಿ ಉದ್ಯಾನ ನಿರ್ಮಿಸಿ, ಪ್ರವೇಶ ಶುಲ್ಕ ಇಟ್ಟಿದ್ದರೆ ಪ್ರವಾಸೋದ್ಯಮ ಇಲಾಖೆಗೂ ಆದಾಯ ಬರುತ್ತಿತ್ತು. ಆದರೆ, ಅಭಿವೃದ್ಧಿಯೇ ಕಂಡಿಲ್ಲ ಎಂದು ದೂರುತ್ತಾರೆ ಸ್ಥಳೀಯರಾದ ಜಾಕೀರ್‌ ಹುಸೇನ್‌.

ಜೆ.ಎಚ್‌.ಪಟೇಲ್ ಕಾಲದಲ್ಲಿ ಒಮ್ಮೆ ದೋಣಿ ಬಂದಿದ್ದು ಬಿಟ್ಟರೆ ಮತ್ತೆ ಬರಲಿಲ್ಲ. 25 ವರ್ಷಗಳ ಹಿಂದೆ ಇದ್ದ ಹೊಟೇಲ್‌ಗಳು ಮುಚ್ಚಿವೆ. ಇದರಿಂದ ಪ್ರಸಿದ್ಧ ಪ್ರವಾಸಿ ತಾಣವೊಂದು ಸೌಲಭ್ಯಗಳಿಲ್ಲದೆ ನಲುಗುವಂತಾಗಿದೆ. ಸಿದ್ದೇಶ್ವರ ದೇವಸ್ಥಾನದ ಬಳಿಯಾದರೂ ದೋಣಿ ವಿಹಾರ ಕೇಂದ್ರ ಮಾಡಿದ್ದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ, ಅಭಿವೃದ್ಧಿಯಾಗದ ಕಾರಣ ಪ್ರವಾಸಿಗರು ಕೇವಲ ಕೆರೆ ನೋಡಿಕೊಂಡು ಮರಳಬೇಕಾಗಿದೆ ಎನ್ನುತ್ತಾರೆ ವೀರೇಶ್‌ ಸೋಮಲಾಪುರ.

ಅಕ್ವಾಡೆಕ್‌ ಮೇಲೆ ತಡೆಗೋಡೆ ನಿರ್ಮಿಸುವಂತೆ ಹಿಂದಿನ ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ, ಕ್ರಮ ಕೈಗೊಂಡಿಲ್ಲ. ಕೆರೆ ಹೂಳೆತ್ತಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಖಡ್ಗ ಸಂಘದ ಅಧ್ಯಕ್ಷ ರಘು ಬಿ.ಆರ್‌. ಹೇಳಿದರು.

ಪ್ರತಿಕ್ರಿಯಿಸಿ (+)