ಶನಿವಾರ, ನವೆಂಬರ್ 23, 2019
23 °C

ಎಲ್‌ಐಸಿಯಲ್ಲಿ ವಿದೇಶಿ ನೇರ ಹೂಡಿಕೆ ಅವಕಾಶ ಬೇಡ: ಎಲ್‌. ಮಂಜುನಾಥ್

Published:
Updated:
Prajavani

ದಾವಣಗೆರೆ: ಸಾರ್ವಜನಿಕ ವಲಯದಲ್ಲಿರುವ ಭಾರತೀಯ ಜೀವವಿಮಾ ನಿಗಮದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವುದಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಚರ್ಚೆಯಾಗಿದ್ದು, ಎಲ್ಲರೂ ಇದನ್ನು ವಿರೋಧಿಸಬೇಕಾಗಿದೆ ಎಂದು ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ ದಕ್ಷಿಣ ಮಧ್ಯ ವಲಯದ ಅಧ್ಯಕ್ಷ ಎಲ್‌. ಮಂಜುನಾಥ್ ಹೇಳಿದರು.

ಎಲ್‌ಐಸಿ ಏಜೆಂಟ್ಸ್ ಅಸೋಸಿಯೇಷನ್ ದಾವಣಗೆರೆ ಶಾಖೆ–1ರ 2018–19ನೇ ಸಾಲಿನ ಸರ್ವ ಸದಸ್ಯರ 13ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ಎಲ್‌ಐಸಿ ಸಾರ್ವಜನಿಕ ಸಂಸ್ಥೆಯಾಗಿ ಉಳಿಸಬೇಕು ಎಲ್ಲರ ಒತ್ತಾಸೆ. ಕಳೆದ ಆಗಸ್ಟ್‌ 31ರ ವೇಳೆಗೆ 24 ವಿಮಾ ಸಂಸ್ಥೆಗಳು 105 ಕೋಟಿ ಪ್ರೀಮಿಯಂ ಸಂಗ್ರಹಿಸಿದ್ದು, ಇದರಲ್ಲಿ ಎಲ್‌ಐಸಿಯ ಪಾಲು 77.22 ಕೋಟಿಯಷ್ಟಿದೆ.  ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ಗೆಲ್ಲಲ್ಲು ಸಾಧ್ಯವಿರುವುದು ಎಲ್ಐಸಿಗೆ ಮಾತ್ರ’ ಎಂದು ಹೇಳಿದರು.

‘ಬ್ಯಾಂಕಿಂಗ್‌, ವಿಮೆ ಸೇರಿ ಅನೇಕ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಪ್ರಯತ್ನ 15 ವರ್ಷಗಳಿಂದಲೂ ನಡೆಯುತ್ತಿದ್ದು, ಅದು ವಿಫಲಾಗಿದೆ. ಈ ವಿಷಯ ತಿಳಿದ ಮೇಲೂ ಎಫ್‌ಡಿಐ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಪ್ರಸ್ತಾವ ಮಾಡುತ್ತಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

‘ಬ್ಯಾಂಕಿಂಗ್ ಕ್ಷೇತ್ರಗಳಲ್ಲಿನ ವಿಲೀನ ಪ್ರಕ್ರಿಯೆಯ ಬಿಸಿ ಎಲ್‌ಐಸಿಗೂ ಮುಟ್ಟಿದ್ದು, ಆರ್ಥಿಕ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆ ಇದರ ಮೇಲೆ ಪ್ರಭಾವ ಬೀರುತ್ತಿವೆ. ಸಾರ್ವಜನಿಕ, ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಖಾಸಗಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು, ಇಡೀ ಸಾರ್ವಜನಿಕ ವಲಯದ ಕ್ಷೇತ್ರಗಳನ್ನು ಅಸ್ತಿರಗೊಳಿಸುವ ಪ್ರಯತ್ನವನ್ನು ಮಾಡುತ್ತಿದೆ’ ಎಂದು ಆರೋಪಿಸಿದರು.

ಭಾರತೀಯ ಜೀವವಿಮಾ ನಿಗಮದ ದಾವಣಗೆರೆ ಶಾಖೆ–1ರ ಮುಖ್ಯ ಪ್ರಬಂಧಕ ಡಿ. ಬಾಲಕೃಷ್ಣ ಮಾತನಾಡಿ, ‘ಎಲ್‌ಐಸಿ ಪ್ರತಿನಿಧಿಗಳು ನಾಮಕಾವಸ್ಥೆಗೆ ಕೆಲಸ ಮಾಡುವ ಬದಲು ವೃತ್ತಿಪರವಾಗಿ ಕೆಲಸ ಮಾಡಿದರೆ ಸಾರ್ವಜನಿಕರಿಂದ ಇನ್ನಷ್ಟು ಪಾಲಿಸಿಗಳನ್ನು ತೆಗೆಯಬಹುದು. ಬೇರೆಯವರಿಗೆ ವಿಮೆ ಮಾಡಿಸುವುದರ ಜೊತೆಗೆ ನೀವು ವಿಮೆಯನ್ನು ಮಾಡಿಸಿಕೊಂಡರೆ ನಿಮ್ಮ ಕುಟುಂಬಕ್ಕೆ ಭದ್ರತೆ ಸಿಗುತ್ತದೆ’ ಎಂದರು.

25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪ್ರತಿನಿಧಿಗಳಿಗೆ ಸನ್ಮಾನ, ಶತಕವೀರ (ಒಂದು ವರ್ಷದಲ್ಲಿ 100 ಪಾಲಿಸಿ ಮಾಡಿಸಿದ) ಹಾಗೂ 25 ಲಕ್ಷಕ್ಕಿಂತ ಹೆಚ್ಚು ಪ್ರೀಮಿಯಂ ತಂದ 56ಕ್ಕೂ ಹೆಚ್ಚು ಎಲ್‌ಐಸಿ ಪ್ರತಿನಿಧಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಹಾಗೂ ಪದವಿಯಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಎಲ್‌ಐಸಿ ಏಜೆಂಟ್ಸ್ ಅಸೋಸಿಯೇಷನ್ ದಾವಣಗೆರೆ ಅಧ್ಯಕ್ಷ ಎಸ್‌.ಜಿ. ಪಂಪಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿವಮೂರ್ತಿ, ಗೌರವಾಧ್ಯಕ್ಷ ಎಂ.ಎಸ್‌. ನಾಗರಾಜ್‌, ಜಗಳೂರು ಸಂಪರ್ಕ ಶಾಖೆಯ ಶಾಖಾಧಿಕಾರಿ ಪ್ರಕಾಶ್ ಮಾಳೆಕೊಪ್ಪ, ಪ್ರಶಾಂತ್, ಖಜಾಂಚಿ ಎಚ್‌. ಸಿದ್ದರಾಮೇಶ್ವರ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)