ಹೋಂ ಐಸೋಲೇಷನ್ ಇಲ್ಲ: ಎಂ.ಪಿ. ರೇಣುಕಾಚಾರ್ಯ

ಹೊನ್ನಾಳಿ: ‘ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನ ಯಾವುದೇ ಗ್ರಾಮದಲ್ಲೂ ಇನ್ನು ಮುಂದೆ ಹೋಂ ಐಸೋಲೇಷನ್‌ಗೆ ಅವಕಾಶ ಕೊಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ' ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ನಗರದ ಅಂಬೇಡ್ಕರ್ ಭವನಕ್ಕೆ ಗುರುವಾರ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ ಮಾತನಾಡಿದರು.
‘ಸೋಂಕಿತ ವ್ಯಕ್ತಿ ಹೋಂ ಐಸೋಲೇಷನ್‌ನಲ್ಲಿ ಇದ್ದರೆ ಸೋಂಕು ಕುಟುಂಬಸ್ಥರಿಗೂ ಹರಡುವ ಅಪಾಯವಿದೆ. ಆದ್ದರಿಂದ ಹೋಂ ಐಸೋಲೇಷನ್ ಬೇಡವೆಂದು ತೀರ್ಮಾನಿಸಲಾಗಿದೆ. ಅದರ ಬದಲು ಆರೈಕೆ ಕೇಂದ್ರಕ್ಕೆ ಬನ್ನಿ, ನಾವು ನಿಮ್ಮ ಜೊತೆ ಇರುತ್ತೇವೆ’ ಎಂದು ಮನವಿ ಮಾಡಿದರು.
‘ಕೋವಿಡ್ ಎರಡನೇ ಅಲೆಯ ಸೋಂಕು ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಆದರೂ ತಜ್ಞರು ಪ್ರಕಾರ ಮೂರನೇ ಅಲೆ ಬಗ್ಗೆ ಎಚ್ಚರಿಸಿರುವ ಕಾರಣ ಅದನ್ನು ಸಮರ್ಥವಾಗಿ ಎದುರಿಸುವ ಅಧಿಕಾರಿಗಳ ತಂಡ ನಮ್ಮ ಜೊತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಒಂದು ಸುತ್ತಿನ ಚರ್ಚೆ ಸಹ ಅಧಿಕಾರಿಗಳ ಜೊತೆ ಮಾಡಿದ್ದೇನೆ’ ಎಂದರು.
‘ಮಾದನಬಾವಿ, ಕಿತ್ತೂರು ರಾಣಿ ಚನ್ನಮ್ಮ, ಅರಬಗಟ್ಟೆ ಹಾಗೂ ಸಿಂಗಟಗೆರೆ ಸಮೀಪ ಇರುವ ಕೋವಿಡ್ ಕೇಂದ್ರಗಳಲ್ಲಿ ಒಟ್ಟು 1500 ಬೆಡ್‍ಗಳ ಆರೈಕೆ ಕೇಂದ್ರ ಸಿದ್ಧವಾಗಿದೆ. ವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದ್ದು, ಸದ್ಯದಲ್ಲಿಯೇ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡುತ್ತೇವೆ’ ಎಂದು ತಿಳಿಸಿದರು.
ಎರಡು ದಿನಗಳಿಂದ ಮಾದನಬಾವಿ ಹಾಗೂ ಎಚ್. ಕಡದಕಟ್ಟೆಯಲ್ಲಿನ ಕೋವಿಡ್ ಕೇಂದ್ರಗಳಿಂದ 73 ಜನ ಸೋಂಕಿತರು ಗುಣಮುಖರಾಗಿದ್ದು, ಅವರಿಗೆ ಶಾಸಕರು ಹೂ ಮಳೆ ಸುರಿಸಿ ಬೀಳ್ಕೊಟ್ಟರು.
ತಾಲ್ಲೂಕಿನ ಮಾದನಬಾವಿಯಲ್ಲಿರುವ ಕೋವಿಡ್ ಕೇಂದ್ರಕ್ಕೆ ಬೆಳಿಗ್ಗೆಯೇ ತೆರಳಿದ ಶಾಸಕರು ಕೊರೊನಾ ಸೋಂಕಿತರಿಗೆ ಯೋಗಾಭ್ಯಾಸ ಮಾಡಿಸಿದರು.
ಪುರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ತಹಶೀಲ್ದಾರ್ ಬಸನಗೌಡ ಕೋಟೂರ, ಪಿಎಸ್‍ಐ ಬಸವನಗೌಡ ಬಿರಾದಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.