ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್

ರಸ್ತೆ ಸುರಕ್ಷತಾ ಸಪ್ತಾಹ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ಚರಿಕೆ
Last Updated 25 ಜೂನ್ 2019, 15:25 IST
ಅಕ್ಷರ ಗಾತ್ರ

ದಾವಣಗೆರೆ: ರಸ್ತೆ ಸುರಕ್ಷತಾ ಸಪ್ತಾಹ ಸಮಿತಿ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ನೋಟಿಸ್ ಜಾರಿ ಮಾಡಿ ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಗೆ ಮೇಲ್ಮಟ್ಟದ ಅಧಿಕಾರಿಗಳು ಗೈರು ಹಾಜರಾಗಿದ್ದರು. ಕೆಲವು ಇಲಾಖೆಯ ಅಧಿಕಾರಿಗಳ ಬಳಿ ಸೂಕ್ತ ಮಾಹಿತಿ ಇರಲಿಲ್ಲ. ಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ಅಧಿಕಾರಿಗಳು ತಡವರಿಸಿದರು. ಇದರಿಂದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾದರು.

ಲೋಕೋಪಯೋಗಿ ಎಕ್ಸಿಗ್ಯುಟೀವ್ ಎಂಜಿನಿಯರ್ ಗೈರು ಹಾಜರಾಗಿ, ತಾಂತ್ರಿಕ ಸಹಾಯಕರನ್ನು ಸಭೆಗೆ ಕಳುಹಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌.ಚೇತನ್‌, ‘ನಿಮ್ಮ ಎಕ್ಸಿಗ್ಯುಟೀವ್ ಎಂಜಿನಿಯರ್ ಎಲ್ಲಿ ಹೋದರು. ರಸ್ತೆಯಲ್ಲಿ ಎಷ್ಟು ಜನಗಳಾದರೂ ಸಾಯಲಿ ಅಂತನಾ, ಅಧಿಕಾರಿಗಳು ಬಾರದೇ ಸಭೆ ಮಾಡಬೇಡಿ, ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ’ ಎಂದು ಗರಂ ಆದರು.

ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ‘ಸಭೆ ಯಾರಿಗೆ ಮಾಡಬೇಕು, ಬರೀ ಟೈಮ್‌ ಪಾಸ್ ಮಾಡಿ ಹೋಗಬೇಕೇ, ಏನು ಕೆಲಸವಿಲ್ಲ ಸಭೆಗೆ ಹೋಗಿ ಬನ್ನಿ ಎನ್ನುವ ಹಾಗಿದೆ. ಗೈರು ಹಾಜರಾದವರ ವಿರುದ್ಧ ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತೇನೆ’ ಎಂದು ಎಚ್ಚರಿಸಿದರು.

‘ಸಭೆಯಲ್ಲಿ ಆಯಾ ಇಲಾಖೆಗಳ ಮೇಲಧಿಕಾರಿಗಳು ಇರಬೇಕು. ಇಲ್ಲದಿದ್ದರೆ ನೋಟಿಸ್ ಜಾರಿ ಮಾಡಿ. ಸಮಯ ವ್ಯರ್ಥ ಮಾಡಲು ಆಗುವುದಿಲ್ಲ. ಸಭೆಯ ಉದ್ದೇಶವನ್ನೇ ಮರೆತಿದ್ದಾರೆ. ಅಧಿಕಾರಿಗಳಿಗೆ ಜವಾಬ್ದಾರಿ ಇರಬೇಕು. ಮುಂದಿನ ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ನಗರಪಾಲಿಕೆ ಆಯುಕ್ತರು ಸಭೆಯಲ್ಲಿ ಹಾಜರಿರಬೇಕು ಮಹಾನಗರಪಾಲಿಕೆ ಎಇಇ ಪೂವಯ್ಯ ಅವರಿಗೆ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌. ಚೇತನ್ ‘ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಅಪಘಾತಗಳು ಸಂಭವಿಸುವಂತಹ ಸ್ಥಳಗಳನ್ನು ಪರಿಶೀಲಿಸಿ ಒಟ್ಟು 37 ಬ್ಲಾಕ್ ಸ್ಪಾಟ್‍ಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸಬಹುದಾದಂತಹ ಸ್ಥಳಗಳು 10 ಎಂದು ಗುರುತಿಸಲಾಗಿದೆ. ಈ ಬ್ಲಾಕ್ ಸ್ಟಾಟ್‍ಗಳನ್ನು ಸರಿಪಡಿಸಲು ಅಂದಾಜು ಯೋಜನಾ ದರದ ಪಟ್ಟಿಯನ್ನು ತಯಾರಿಸಲಾಗಿದ್ದು, ಪಿಡಬ್ಲ್ಯುಡಿ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಪಿಡಬ್ಲ್ಯುಡಿ ಟೆಕ್ನಿಕಲ್ ಅಸಿಸ್ಟೆಂಟ್ ಮಾತನಾಡಿ, ‘ಬ್ಲಾಕ್ ಸ್ಪಾಟ್ ಸರಿಪಡಿಸಲು ₹30.87 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಟೆಂಡರ್ ಆಗಿದೆ ಎಂದರು.

ಬಿಎಸ್ಸೆನ್ನೆಲ್ ವೃತ್ತದ ಸಿಗ್ನಲ್‌ನಲ್ಲಿ ಪ್ರತಿನಿತ್ಯ ಬೆಳಿಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಫ್ಲೈಓವರ್ ಮೇಲಿನಿಂದ ಇಳಿಯುವ ವಾಹನಗಳು ರಭಸದಿಂದ ಬರುವುದರಿಂದ ತೊಂದರೆಯಾಗುತ್ತಿದೆ, ಬ್ಯಾರಿಕೇಡ್ ಅಳವಡಿಸಬೇಕು ಎಂದು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಫುಲ್ಲಾ ಸಭೆಯಲ್ಲಿ ಒತ್ತಾಯಿಸಿದರು.

ಶಾಮನೂರು, ರಾಮನಗರ ಈ ಕಡೆ ಕಡಿಮೆ ದರದಲ್ಲಿ ಓಡಾಡುತ್ತಿರುವ ಆಪೆ ಆಟೋಗಳನ್ನು ನಿಲ್ಲಿಸಬೇಕೆಂದು ಸಂಘದವರು ಮನವಿ ಮಾಡಿದರು.

ಸಿಇಓ ಎಚ್.ಬಸವರಾಜೇಂದ್ರ ನಗರ ಹೊರ ವಲಯದಲ್ಲಿ ಯಾರ್ಡ್ ಮಾಡಿಕೊಂಡು ಫೋನ್ ಕಾಲ್ ಮೂಲಕ ಅಟೆಂಡ್‌ ಮಾಡಬಹುದು ಎಂದು ಸಲಹೆ ನೀಡಿದರೆ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಪದ್ಮಾಂಜಲಿ ಟಾಕೀಸ್ ಮುಂಭಾಗದಲ್ಲಿ ನಿಲುಗಡೆಗೆ ಸ್ಥಳ ನೀಡಬಹುದು ಎಂದರು.

‘ಹರಿಹರ-ಹೊನ್ನಾಳಿ ರಸ್ತೆಯಲ್ಲಿ ರಸ್ತೆಗಿಂತ ಅರ್ಧ ಅಡಿ ಟಾರ್ ರಸ್ತೆ ಎತ್ತರ ಇದ್ದು ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳೆರಡೂ ಕೆಳಗೆ ಇಳಿಸಲು ಆಗದೇ ಹೆಚ್ಚಿನ ಅಪಘಾತ ಸಂಭವಿಸುತ್ತಿದೆ. ಕೂಡಲೇ ಮುಚ್ಚಬೇಕು’ ಎಂದು ಆರ್‌.ಚೇತನ್ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT