ಬುಧವಾರ, ಆಗಸ್ಟ್ 17, 2022
26 °C
ನಗರದಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ 350ಕ್ಕೂ ಹೆಚ್ಚು ಕ್ಲಿನಿಕ್‌ಗಳು ಸ್ಥಗಿತ

ಜಿಲ್ಲೆಯಲ್ಲಿ ಒಪಿಡಿ ಬಂದ್: ರೋಗಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೆ ಕೆಲವು ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಅಲೋಪಥಿ ವೈದ್ಯರು ಶುಕ್ರವಾರ ಹೊರ ರೋಗಿಗಳ ವಿಭಾಗದ ಸೇವೆ (ಒಪಿಡಿ) ಬಂದ್ ಮಾಡಿದರು.

ನಗರದ ಬಾಪೂಜಿ ಆಸ್ಪತ್ರೆ, ಸಿಟಿ ಸೆಂಟ್ರಲ್ ಆಸ್ಪತ್ರೆಗಳು ಸೇರಿ ನಗರದ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳು ಸೇರಿ 350ಕ್ಕೂ ಹೆಚ್ಚು ಕ್ಲಿನಿಕ್‌ಗಳು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸೇವೆಯನ್ನು ಸ್ಥಗಿತಗೊಳಿಸಿದ್ದವು. ಇದರಿಂದ ರೋಗಿಗಳು ಪರದಾಡಬೇಕಾಯಿತು.

ಯಾವುದೇ ಸೂಚನೆ ನೀಡದೇ ಒಪಿಡಿ ಬಂದ್ ಮಾಡಿದ್ದರಿಂದ ರೋಗಿಗಳು ಆಯಾ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಿಗೆ ಬಂದು ಮರಳಿ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು. ಆದರೆ ಹೆರಿಗೆ, ತುರ್ತು ಚಿಕಿತ್ಸೆ, ಕೋವಿಡ್ ಸೇವೆಗಳಲ್ಲಿ ವೈದ್ಯರು ಎಂದಿನಂತೆ ಕಾರ್ಯನಿರ್ವಹಿಸಿದರು.

‘ರಾಷ್ಟ್ರವ್ಯಾಪಿ ಮುಷ್ಕರದ ಕಾರಣ ದಾವಣಗೆರೆಯಲ್ಲೂ ಸಾಂಕೇತಿಕವಾಗಿ ಒಪಿಡಿ ಬಂದ್ ಮಾಡಲಾಗಿತ್ತು. ಆದರೆ ಯಾವುದೇ ರೀತಿ ಪ್ರತಿಭಟನೆ ನಡೆಸಿಲ್ಲ. ರೋಗಿಗಳಿಗೆ ತುರ್ತು ಚಿಕಿತ್ಸೆಗೆ ತೊಂದರೆಯಾಗಿಲ್ಲ’ ಎಂದು ದಾವಣಗೆರೆಯ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎ.ಕೆ. ರುದ್ರಮುನಿ ತಿಳಿಸಿದರು.

ವಿವಿಧ ಬೇಡಿಕೆಗಳುಳ್ಳ ಮನವಿಯನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಸಲ್ಲಿಸಲಾಯಿತು. ಈ ವೇಳೆ ಕಾರ್ಯದರ್ಶಿ ಡಾ.ಪ್ರಸನ್ನ ಅಣಬೇರು ಇದ್ದರು. 

ಆಯುರ್ವೇದ ವೈದ್ಯರಿಂದ ಉಚಿತ ಸೇವೆ

ಕೇಂದ್ರ ಸರ್ಕಾರ ಆಯುರ್ವೇದ ವೈದ್ಯಕೀಯದಲ್ಲಿ ಶಲ್ಯ ತಂತ್ರ ಮತ್ತು ಶಾಲಾಕ್ಯ ತಂತ್ರ ವಿಷಯದಲ್ಲಿ ಸ್ನಾತಕೋತ್ತರ ಪಡೆದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಮಾಡಲು ಅನುಮತಿ ನೀಡಿರುವುದನ್ನು ಸ್ವಾಗತಿಸಿ ಆಯುರ್ವೇದ ವೈದ್ಯರು ಬಲಗೈಗೆ ಗುಲಾಬಿ ಬಣ್ಣದ ರಿಬ್ಬನ್ ಕಟ್ಟಿಕೊಂಡು ಸೇವೆ ಸಲ್ಲಿಸಿದರು.

ಕೇಂದ್ರದ ನಿರ್ಧಾರವನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘವು ಕರೆ ನೀಡಿರುವ ಬಂದ್‍ ಅನ್ನು ಖಂಡಿಸಿರುವ ಆಯುರ್ವೇದ ವೈದ್ಯರು ಆಸ್ಪತ್ರೆ, ನರ್ಸಿಂಗ್ ಹೋಂಗಳ ಒಪಿಡಿಗಳಲ್ಲಿ ರೋಗಿಗಳಿಗೆ ಉಚಿತ ಸೇವೆ (ಕನ್ಸಲ್ಟೇಷನ್ ಶುಲ್ಕ) ನೀಡುವುದರ ಜೊತೆ ತಮ್ಮಲ್ಲಿದ್ದ ಔಷಧಗಳನ್ನು ಉಚಿತವಾಗಿ ನೀಡಿದರು.

‘ಜಿಲ್ಲೆಯ 150 ಕ್ಲಿನಿಕ್‌ಗಳು ಹಾಗೂ 50 ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸೇವೆ ನೀಡಿದ್ದು, ತಪಾಸಣೆ ಹಾಗೂ ಕೆಲವು ಔಷಧಗಳನ್ನು ಉಚಿತವಾಗಿ ನೀಡಿದ್ದೇವೆ. ಇಲ್ಲದೇ ಇರುವ ಔಷಧಗಳನ್ನು ಚೀಟಿ ಬರೆದುಕೊಟ್ಟಿದ್ದೇವೆ’ ಎಂದು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಹಾಗೂ ಐಎಸ್‌ಎಂ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್. ಉಮೇಶ್ ಹಿರೇಮಠ್ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.