ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾವೃಷ್ಟಿ: ಅಡಿಕೆ ಕೇಣಿದಾರರಿಗೆ ಎದುರಾಗಿದೆ ಸಂಕಷ್ಟ

ಆಗ ಅತಿವೃಷ್ಟಿಯಿಂದ, ಈಗ ಅನಾವೃಷ್ಟಿಯಿಂದ ನಷ್ಟ
Published 21 ಅಕ್ಟೋಬರ್ 2023, 6:58 IST
Last Updated 21 ಅಕ್ಟೋಬರ್ 2023, 6:58 IST
ಅಕ್ಷರ ಗಾತ್ರ

ಬಸವಾಪಟ್ಟಣ: ಕಳೆದ ವರ್ಷ ಅತಿವೃಷ್ಟಿಯಿಂದ ನಷ್ಟಕ್ಕೀಡಾಗಿದ್ದ ಈ ಭಾಗದ ಅಡಿಕೆ ಕೇಣಿದಾರರು, ಈ ವರ್ಷ ಅನಾವೃಷ್ಟಿಯಿಂದ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.

ಈ ವರ್ಷ ಮಳೆಯ ಅಭಾವದಿಂದ ಅಡಿಕೆ ಫಸಲಿನ ಇಳುವರಿ ಶೇಕಡ 40ರಷ್ಟು ಕುಸಿದಿದೆ. ಪ್ರತಿ ವರ್ಷ ಎಕರೆಗೆ ಸರಾಸರಿ 10 ಕ್ವಿಂಟಾಲಲ್‌ನಷ್ಟು ಸಿಗುತ್ತಿದ್ದ ಅಡಿಕೆ, ಈ ವರ್ಷ ಕೇವಲ 5 ಕ್ವಿಂಟಲ್‌ಗೆ ಇಳಿದಿದೆ. ಅಡಿಕೆಗೆ ಮೊದಲಿನ ತೂಕವೂ ಇಲ್ಲ. 80ರಿಂದ 85 ಕೆ.ಜಿ. ತೂಗುತ್ತಿದ್ದ ಒಂದು ಚೀಲ ಅಡಿಕೆ 60ರಿಂದ 65 ಕೆ.ಜಿ.ಯಷ್ಟಾಗುತ್ತಿದೆ.

‘ಪ್ರತಿ ವರ್ಷ ಜೂನ್‌ ತಿಂಗಳಲ್ಲಿಯೇ ನಾವು ರೈತರ ತೋಟಗಳನ್ನು ಕೇಣಿ ಹಿಡಿಯುತ್ತೇವೆ. ರೈತರೊಂದಿಗೆ ದರ ನಿಗದಿ ಮಾಡಿಕೊಂಡು ಮುಂಗಡ ನೀಡುತ್ತೇವೆ. ನಮಗೆ ನಷ್ಟವಾಗಿದೆ ಎಂದರೆ ರೈತರು ಕೇಳುವುದಿಲ್ಲ. ಹೆಚ್ಚು ಲಾಭವಾದಾಗ ನಮಗೇನು ಕೊಡುತ್ತೀರಾ ಎಂದು ಪ್ರಶ್ನಿಸುವ ರೈತರು ಒಪ್ಪಂದದ ಪ್ರಕಾರ ಹಣ ವಸೂಲಿ ಮಾಡುತ್ತಾರೆ. ಹಣ ಕೊಡುವುದು ತಡವಾದರೆ, ನಮ್ಮನ್ನು ಕಪ್ಪು ಪಟ್ಟಿಗೆ ಸೇರಿಸಿಕೊಂಡು ಮುಂದಿನ ವರ್ಷ ಕೇಣಿ ಕೊಡುವುದಿಲ್ಲ ನಮಗೆ ಸತತ ಎರಡು ವರ್ಷದಿಂದ ನಷ್ಟವಾಗುತ್ತಿದೆ’ ಎಂದು ಕಣಿವೆಬಿಳಚಿ ಗ್ರಾಮದ ಕೇಣಿದಾರ ಎಸ್‌.ಅಣ್ಣೋಜಿರಾವ್‌ ಅಳಲು ತೋಡಿಕೊಂಡರು.

‘ಗ್ರಾಮದಲ್ಲಿ ಅಂದಾಜು 20 ಜನ ಕೇಣಿದಾರರಿದ್ದೇವೆ. ಸುತ್ತಲಿನ ಗ್ರಾಮಗಳ ನೂರಾರು ಎಕರೆ ಅಡಿಕೆ ತೋಟಗಳನ್ನು ಕೇಣಿ ಪಡೆಯುತ್ತೇವೆ. ಮರಗಳಿಂದ ಅಡಿಕೆ ಕೊಯ್ಲು ಮಾಡುವುದು, ಕಣಗಳಿಗೆ ಸಾಗಿಸಿ ಸುಲಿಯುವುದು, ಬೇಯಿಸುವುದು, ಒಣಗಿಸುವ ಕೆಲಸವನ್ನು ನಾವೇ ಮಾಡಿಸುತ್ತೇವೆ. ಒಣಗಿಸಿದ ತಕ್ಷಣವೇ ಮಾರಲು ಆಗುವುದಿಲ್ಲ. ದರ ಹೆಚ್ಚಾಗುವವರೆಗೆ ಕಾಯಬೇಕು. ಕೆಲವು ದಿನ ಇಡುವುದರಿಂದ ತೂಕ ಕಡಿಮೆಯಾಗುತ್ತದೆ. ಪ್ರಕೃತಿ ವಿಕೋಪದಿಂದ ನಮಗೆ ನಷ್ಟವಾಗುತ್ತಿದೆ’ ಎಂದು ಕೇಣಿದಾರ ಎಚ್‌.ಟಿ. ನಾಗರಾಜ ವಿವರಿಸಿದರು.

‘ಕಣಗಳಲ್ಲಿ ಅಡಿಕೆ ಸಂಸ್ಕರಣೆಗೆ ದೊಡ್ಡ ಮನೆ, ಉಗ್ರಾಣ ನಿರ್ಮಿಸಿಕೊಂಡಿದ್ದು, ಜೂನ್‌ನಿಂದ ಜನವರಿವರೆಗೆ ಅಡಿಕೆ ಕೊಯ್ಲು, ಸಾಗಣೆ, ಹಸಿ ಅಡಿಕೆ ಸುಲಿದು ಬೇಯಿಸುವುದು, ಒಣಗಿಸುವುದು, ಪ್ರತ್ಯೇಕಿಸಿ ಚೀಲ ತುಂಬುವುದಕ್ಕೆ ಅಂದಾಜು 600 ಜನ ಮಹಿಳೆಯರಿಗೆ, 400 ಜನ ಪುರುಷರಿಗೆ ನಿತ್ಯ ಕೆಲಸ ನೀಡುತ್ತಿದ್ದೇವೆ. ರೈತರು ಮತ್ತು ಕೂಲಿಕಾರರಿಗೆ ಈ ಅಡಿಕೆ ಬೆಳೆ ಮತ್ತು ಸಂಸ್ಕರಣೆಯಿಂದ ಸಾಕಷ್ಟು ಲಾಭವಾಗಿದೆ. ಆದರೆ, ಒಂದಷ್ಟು ಲಾಭದ ನಿರೀಕ್ಷೆಯಲ್ಲಿದ್ದ ನಮ್ಮಂತಹ ಕೇಣಿದಾರರಿಗೆ ಹಾಕಿದ ಬಂಡವಾಳವೂ ದೊರೆಯುತ್ತಿಲ್ಲ’ ಎಂದವರು ಇಲ್ಲಿನ ಕೇಣಿದಾರ ಎಚ್‌.ಜಿ. ರವಿಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT