ಗುರುವಾರ , ಆಗಸ್ಟ್ 5, 2021
26 °C
ಕುಣಿಯಲು ಬಾರದವ ನೆಲ ಡೊಂಕು ಅಂದನಂತೆ: ಆರೋಗ್ಯ ಸಚಿವ ವ್ಯಂಗ್ಯ

ಪೈಸೆ ಪೈಸೆ ಲೆಕ್ಕ ಕೊಡಲು ಸಿದ್ಧ: ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಕಿಟ್‌, ಇತರ ಪರಿಕರ ಖರೀದಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಪೈಸೆ ಪೈಸೆ ಲೆಕ್ಕ ಇದೆ. ಸಿದ್ದರಾಮಯ್ಯ ಕೇಳಿದರೆ ಈ ಲೆಕ್ಕ ಕೊಡಲು ಸಿದ್ಧ. ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಆವರಣದಲ್ಲಿ ತಾಯಿ– ಮಕ್ಕಳ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ರಾಜಕೀಯದಲ್ಲಿ ಅನುಭವ ಇರುವವರು. ಆಧಾರ ಇಲ್ಲದೇ ಈ ರೀತಿ ಆರೋಪ ಮಾಡಬಾರದು. ಕುಣಿಯಲು ಬಾರದವ ನೆಲ ಡೊಂಕು ಎಂಬಂತಿದೆ ಇದು. ಅವರಿಗೆ ಶಕ್ತಿ ಇದ್ದರೆ ತನಿಖೆ ನಡೆಸಲು. ನಾವು ಯಾವುದೇ ತನಿಖೆ ಎದುರಿಸಲು ಸಿದ್ಧ. ಶ್ವೇತಪತ್ರ ಹೊರಡಿಸಲೂ ತಯಾರು’ ಎಂದು ಪ್ರತಿಕ್ರಿಯಿಸಿದರು.

‘ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಕಾರ್ಯವನ್ನು ದೇಶವೇ ಪ್ರಶಂಸಿಸಿದೆ. ನಾವು ಕೋವಿಡ್‌ಗೆ ಸಂಬಂಧಿಸಿದಂತೆ ಜನರನ್ನು ಪರೀಕ್ಷೆಗೆ ಒಳಪಡಿಸುವ, ಸ್ವ್ಯಾಬ್‌ ತೆಗೆಯುವ ವಿಚಾರದಲ್ಲಿ ದೇಶಕ್ಕೆ ಮೂರನೇ ಸ್ಥಾನದಲ್ಲಿದ್ದೇವೆ’ ಎಂದು ವಿವರಿಸಿದರು.

ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಅವರ ಅಭಿಮಾನಿಗಳು ಎಲ್ಲೂ ಕೊರೊನಾ ಕಾರ್ಯದಲ್ಲಿ ತೊಡಗಿಸಿಕೊಂಡಿಲ್ಲ. ಪ್ರಚಾರಕ್ಕಾಗಿ ಈ ರೀತಿ ಆರೋಪ ಮಾಡುವ ಬದಲು ನಮ್ಮ ಜತೆ ಕೈ ಜೋಡಿಸಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿಗೊಳಿಸುವ ಉದ್ದೇಶವಿಲ್ಲ. ಆದರೆ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವ ಪ್ರದೇಶಗಳಲ್ಲಿ ಲಾಕ್ ಡೌನ್ ಮುಂದುವರಿಸುವ ಚಿಂತನೆ ಸರ್ಕಾರದ ಮುಂದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಚಿವರ ನಡುವೆ ಸಮನ್ವಯತೆ ಇಲ್ಲ ಎನ್ನುವುದು ಸುಳ್ಳು. ನಾವೆಲ್ಲ ಭಾರತೀಯ ಜನತಾ ಪಾರ್ಟಿಯವರು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ಜಸ್ಟೀಸ್ ನಾಗಮೋಹನದಾಸ್‌ ವರದಿ ಸಲ್ಲಿಸಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿಯನ್ನು ಮುಖ್ಯಮಂತ್ರಿ ನೇತೃತ್ವದಲ್ಲಿ ಕೆಲವೇ ತಿಂಗಳುಗಳಲ್ಲಿ ಜಾರಿ ಮಾಡಲಿದ್ದೇವೆ. ಕೊರೊನಾ ಮುಗಿದ ತಕ್ಷಣ ಜಾರಿಗೆ ಬರಲಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು