ಮಂಗಳವಾರ, ಮೇ 18, 2021
23 °C
‘ರಾಜನಹಳ್ಳಿಯಿಂದ ರಾಜಧಾನಿ’ಗೆ ಹೊರಟ ಪಾದಯಾತ್ರೆಗೆ ಸ್ವಾಮೀಜಿಗಳ ಬೆಂಬಲ

ದಾವಣಗೆರೆಯಲ್ಲಿ ಪಾದಯಾತ್ರೆಗೆ ಜನಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ‘ರಾಜನಹಳ್ಳಿಯಿಂದ ರಾಜಧಾನಿ’ಗೆ ಹೊರಟ ಬೃಹತ್ ಪಾದಯಾತ್ರೆ ಸೋಮವಾರ ದಾವಣಗೆರೆಯಿಂದ ಹೊರಟಿತು.

ಭಾನುವಾರ ಸಾಯಂಕಾಲ ದಾವಣಗೆರೆಗೆ ಬಂದಿದ್ದ ನಾಯಕ ಸಮಾಜದ ಮುಖಂಡರು ರಾತ್ರಿ ನಾಯಕರ ವಿದ್ಯಾರ್ಥಿನಿಲಯದಲ್ಲಿ ವಾಸ್ತವ್ಯ ಹೂಡಿ ಸೋಮವಾರ ಬೆಳಿಗ್ಗೆ ಅನಗೋಡು ಮೂಲಕ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಿದರು.

ನಾಯಕರ ಹಾಸ್ಟೆಲ್‌ನಿಂದ ಪಾದಯಾತ್ರೆ ಹೊರಡುವ ವೇಳೆ ಮಹಿಳೆಯರು ಸ್ವಾಗತಿಸಿದರು. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಜಯದೇವ ವೃತ್ತ, ಗಾಂಧಿವೃತ್ತ ತಲುಪಿ ಪಿ.ಬಿ. ರಸ್ತೆಯ ಮೂಲಕ ಅನಗೋಡಿಗೆ ಪ್ರಯಾಣ ಬೆಳೆಸಿತು.

ಪಾದಯಾತ್ರೆಯ ನೇತೃತ್ವ ವಹಿಸಿದ್ದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರಿಗೆ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಬೆಂಬಲ ಸೂಚಿಸಿದರು.

ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಸ್ವಾಮೀಜಿ ಪಾದಯಾತ್ರೆಗೆ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಲಿಂಗಾಯತಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಪ್ರಸನ್ನಾನಂದ ಪುರಿ ಸ್ವಾಮೀಜಿ ಸ್ವಾಮೀಜಿ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಒಂದು ದೊಡ್ಡ ಶಕ್ತಿಯಾಗಿ ರೂಪುಗೊಳ್ಳಲಿ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಶಿವಯೋಗಿಸ್ವಾಮಿ ಮಾತನಾಡಿ, ‘ಸ್ವಾಮೀಜಿಗಳ ಪಾದಯಾತ್ರೆ ಬೆಂಗಳೂರಿಗೆ ಹೋಗುವ ಅನಿವಾರ್ಯ ಸ್ಥಿತಿ ಬರಬಾರದಿತ್ತು. ಸರ್ಕಾರ ಅದಕ್ಕೆ ಅವಕಾಶ ಮಾಡಬಾರದಿತ್ತು. ಸರ್ಕಾರ ಶೀಘ್ರ ಮೀಸಲಾತಿ ನೀಡುವ ನಿರ್ಣಯ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌. ಎ. ರವೀಂದ್ರನಾಥ್‌ ಮಾತನಾಡಿ ‘ಸರ್ಕಾರ ಎಷ್ಟು ಜಿಡ್ಡುಗಟ್ಟಿದೆ ಎಂಬುದು ಇದರಿಂದ ತಿಳಿಯುತ್ತದೆ. ರಾಜಕೀಯದಿಂದಲೇ ಈ ಸರ್ಕಾರಕ್ಕೆ ಬುದ್ಧಿ ಕಲಿಸಬೇಕು. ಪಾದಯಾತ್ರೆ ಬೆಂಗಳೂರಿಗೆ ಹೋಗಲು ಸರ್ಕಾರ ಅವಕಾಶ ಮಾಡಿಕೊಡಬಾರದು. ಶೀಘ್ರ ಮೀಸಲಾತಿ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್ ‘ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಲು ಸರ್ಕಾರ ಮೀನಮೇಷ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಇದನ್ನು ಅರ್ಥಮಾಡಿಕೊಳ್ಳಬೇಕು’ ಎಂದರು.

ಸಮಾಜದ ಮುಖಂಡರಾದ ಡಾ. ವೈ.ರಾಮಪ್ಪ ‘ಒಂದು ವೇಳೆ ಜಾತಿ ಜನಗಣತಿ ವರದಿ ಬಹಿರಂಗೊಂಡಿದ್ದರೆ ಪಾದಯಾತ್ರೆ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಚ್. ಓಬಳಪ್ಪ ಮಾತನಾಡಿ, ಇದೇ 25ರಂದು ಬೆಂಗಳೂರಿನಲ್ಲಿ ನಡೆಯುವ ಹೋರಾಟಕ್ಕೆ ಪ್ರತಿ ತಾಲ್ಲೂಕುಗಳಿಗೆ 100 ಬಸ್ ವ್ಯವಸ್ಥೆ ಮಾಡಲಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಹೇಳಿದರು.

ಸಮಾಜದ ಮುಖಂಡರಾದ ಎಚ್‌.ಕೆ. ರಾಮಚಂದ್ರಪ್ಪ, ದಾವಣಗೆರೆ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಎಂ.ಬಿ.ಹಾಲಪ್ಪ, ರಘು ದೊಡ್ಮನಿ ಅವರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು