ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಡಿಜಿಟಲ್ ಜಾಹೀರಾತಿಗೆ ಅನುಮತಿ ಕಡ್ಡಾಯ

ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಮಾಹಿತಿ
Published 3 ಏಪ್ರಿಲ್ 2024, 5:25 IST
Last Updated 3 ಏಪ್ರಿಲ್ 2024, 5:25 IST
ಅಕ್ಷರ ಗಾತ್ರ

ದಾವಣಗೆರೆ: ‘ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿಗಳು, ವಿದ್ಯುನ್ಮಾನ ಮಾಧ್ಯಮ, ಡಿಜಿಟಲ್ ಪ್ಲಾರ್ಟ್ ಫಾರಂನಲ್ಲಿ ಜಾಹೀರಾತು ನೀಡಲು ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿ ಅನುಮೋದನೆ ಕಡ್ಡಾಯವಾಗಿದೆ' ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.

 ‘ನಾನು ಅಧ್ಯಕ್ಷನಾಗಿದ್ದು, ಸಹಾಯಕ ಚುನಾವಣಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ನೋಡಲ್ ಅಧಿಕಾರಿ, ಸ್ಮಾರ್ಟ್ ಸಿಟಿ ಯೋಜನೆ ಮುಖ್ಯ ಲೆಕ್ಕಾಧಿಕಾರಿ ಗಿರೀಶ್.ಎಚ್, ಯು.ಬಿ.ಡಿ.ಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಕೆ.ಎಸ್.ಶ್ರೀಧರ್ ಸದಸ್ಯರಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಧನಂಜಯ.ಬಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ’ ಎಂದರು.

‘ರಾಜಕೀಯ ಪಕ್ಷ, ಅಭ್ಯರ್ಥಿಗಳ ರಾಜಕೀಯ ಜಾಹೀರಾತುಗಳನ್ನು ಪ್ರಸಾರಪೂರ್ವದಲ್ಲಿ ದೃಢೀಕರಣ ನೀಡುವುದು, ಕಾಸಿಗಾಗಿ ಸುದ್ದಿಯ ಮೇಲ್ವಿಚಾರಣೆ ಹಾಗೂ ತಡೆಯಲು ಕ್ರಮಗಳನ್ನು ಜರುಗಿಸುವುದು. ಮಾಧ್ಯಮದಲ್ಲಿ ಪ್ರಸಾರವಾಗುವ ಸುಳ್ಳು ಸುದ್ದಿ, ದ್ವೇಷ ಭಾಷಣದ ಮೇಲೆ ನಿಗಾವಹಿಸಿ ವರದಿ ಸಂಗ್ರಹಿಸುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಜಾಹಿರಾತು ಸೇರಿದಂತೆ ಪೋಸ್ಟ್‌ಗಳ ಮೇಲೆ  ಮೇಲ್ವಿಚಾರಣೆ ಮಾಡುವ ಕೆಲಸವನ್ನು ಸಮಿತಿ ಮಾಡಲಿದೆ’ ಎಂದು ಹೇಳಿದರು.

‘ಚುನಾವಣಾ ನೀತಿ ಸಂಹಿತೆ ಇರುವುದರಿಂದ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ವಿದ್ಯುನ್ಮಾನ ಮಾಧ್ಯಮಗಳಾದ ಟಿ.ವಿ, ಕೇಬಲ್ ಟಿವಿ, ಆಕಾಶವಾಣಿ, ಎಫ್.ಎಂ, ಇ-ನ್ಯೂಸ್ ಪೇಪರ್, ರೇಡಿಯೋ, ವಾಯ್ಸ್ ಎಸ್‍ಎಂಎಸ್, ಬಲ್ಕ್ ಎಸ್.ಎಂ.ಎಸ್, ಸಿನಿಮಾ ಹಾಲ್, ಡಿಜಿಟಲ್ ಡಿಸ್ಪ್ಲೆ, ಯುಟ್ಯೂಬ್, ವೆಬ್‍ಸೈಟ್ಸ್, ಸಾಮಾಜಿಕ ಜಾಲತಾಣ ವೆಬ್‍ಸೈಟ್‍ನಲ್ಲಿ ಜಾಹೀರಾತು ನೀಡಲು ಎಂ.ಸಿ.ಎಂ.ಸಿ.ಯಿಂದ ನೀಡುತ್ತಿರುವ ಜಾಹಿರಾತಿಗೆ ಪ್ರಸಾರಕ್ಕೂ ಮುನ್ನ ಪೂರ್ವಾನುಮತಿ ಪಡೆಯಬೇಕು. ಅನುಮತಿಗಾಗಿ ಅನುಬಂಧ-ಎ ಅಡಿ ಅನುಮತಿ ಪಡೆದುಕೊಳ್ಳಬೇಕು. ಅನುಮತಿಗಾಗಿ ಅರ್ಜಿಯೊಂದಿಗೆ ಪ್ರಸಾರ ಮಾಡಲು ಉದ್ದೇಶಿಸಿರುವ ಯಥಾವತ್ತು ಜಾಹೀರಾತು ಅನುವಾದ ಮಾಡಿದ ಬೆರಳಚ್ಚು ಮಾಡಿದ ದೃಢೀಕೃತ ಎರಡು ಪ್ರತಿ ಮತ್ತು ಎರಡು ಸಿಡಿ ಅಥವಾ ಪೆನ್‍ಡ್ರೈವ್‍ನಲ್ಲಿ ಜಾಹೀರಾತನ್ನು ಹಾಕಿ ನೀಡಬೇಕು’ ಎಂದು ಮಾಹಿತಿ ನೀಡಿದರು.

‘ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ರಾಷ್ಟ್ರೀಯ, ರಾಜ್ಯ ನೊಂದಾಯಿತ ಪಕ್ಷಗಳು ಮತ್ತು ಈ ಪಕ್ಷಗಳ ಅಭ್ಯರ್ಥಿಗಳು ರಾಜಕೀಯ ಜಾಹೀರಾತು ಪ್ರಸಾರ ಮಾಡುವ ಮೂರು ದಿನಗಳ ಮುಂಚಿತವಾಗಿ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಯಾವುದೇ ಇತರೆ ವ್ಯಕ್ತಿಗಳು, ನೊಂದಾಯಿತವಲ್ಲದ ಪಕ್ಷಗಳಾಗಿದ್ದಲ್ಲಿ ಜಾಹೀರಾತು ಪ್ರಸಾರ ಮಾಡಲು ಉದ್ದೇಶಿಸಿರುವ 7 ದಿನ ಮೊದಲು ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ಎರಡು ದಿನಗಳಲ್ಲಿ ಎಂ.ಸಿ.ಎಂ.ಸಿ ಸಮಿತಿ ಪರಿಶೀಲಿಸಿ ನಿರ್ಣಯಿಸಿ ಅರ್ಜಿ ಇತ್ಯರ್ಥ ಮಾಡಲಿದೆ’ ಎಂದರು.

- ‘ಮುದ್ರಣ ಮಾಧ್ಯಮಕ್ಕೆ ಪೂರ್ವ ಅನುಮತಿ ವಿನಾಯಿತಿ’

ಚುನಾವಣಾ ಸಂದರ್ಭ ರಾಜಕೀಯ ಜಾಹೀರಾತುಗಳನ್ನು ಮುದ್ರಣ ಮಾಧ್ಯಮದಲ್ಲಿ ನೀಡಲು ಯಾವುದೇ ಪೂರ್ವ ಅನುಮತಿ ಅಗತ್ಯವಿಲ್ಲ. ಆದರೆ ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುಂಚಿತವಾಗಿ ಮತದಾನ ಮುಂಚಿನ ದಿನ ಹಾಗೂ ಮತದಾನ ದಿನ ಜಾಹೀರಾತು ಪ್ರಕಟಿಸಲು ಮುದ್ರಣ ಮಾಧ್ಯಮದಲ್ಲಿ ಮಾತ್ರ ಅನುಬಂಧ-ಸಿ ಅಡಿ ಜಾಹೀರಾತು ಮುದ್ರಿಸುವ ಎರಡು ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT