ಮೈತ್ರಿ ಇಲ್ಲ, ಸ್ವತಂತ್ರ ಸ್ಪರ್ಧೆಯೇ ಎಲ್ಲಾ

7
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜುಗೊಂಡ ರಾಜಕೀಯ ಪಕ್ಷಗಳು

ಮೈತ್ರಿ ಇಲ್ಲ, ಸ್ವತಂತ್ರ ಸ್ಪರ್ಧೆಯೇ ಎಲ್ಲಾ

Published:
Updated:

ದಾವಣಗೆರೆ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಖಾಡ ಸಜ್ಜಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದರೂ ಈ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧ ಇಲ್ಲ. ಸ್ಥಳೀಯ ಮಟ್ಟದಲ್ಲಿ ಆಯಾ ಪರಿಸ್ಥಿತಿಗೆ ಅನುಗುಣವಾಗಿ ಮೈತ್ರಿ ಮಾಡಿಕೊಳ್ಳಲು ಅಡ್ಡಿ ಇಲ್ಲ ಎಂದು ಎರಡೂ ಪಕ್ಷಗಳ ನಾಯಕರು ಸ್ಪಷ್ಟಪಡಿಸಿದರೂ ದಾವಣಗೆರೆಯಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮುಖಂಡರು ಮೈತ್ರಿ ಸಾಧ್ಯವೇ ಇಲ್ಲ ಎಂದು ಖಚಿತಪಡಿಸಿದ್ದಾರೆ. ಹಾಗಾಗಿ, ಎರಡೂ ಪಕ್ಷಗಳು ಸ್ಪತಂತ್ರವಾಗಿ ಸ್ಪರ್ಧಿಸಲಿವೆ.

ಇದೇ 10ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ರಾಷ್ಟ್ರೀಯ ಪಕ್ಷಗಳನ್ನು ಒಳಗೊಂಡಂತೆ ಪಕ್ಷೇತರಾಗಿ ಸ್ಪರ್ಧಿಸಲು ಹಲವರು ಸಿದ್ಧರಾಗಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಆಯಾ ಪಕ್ಷದ ಮುಖಂಡರು, ಶಾಸಕರಿಗೆ ಈಗ ಸಂಕಷ್ಟ ಎದುರಾಗಿದೆ. ಲೋಕಸಭೆ ಚುನಾವಣೆಯೂ ಹತ್ತಿರದಲ್ಲಿರುವುದರಿಂದ ಎಲ್ಲಾ ಪಕ್ಷಗಳಿಗೂ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯುವುದು ಈಗ ಪ್ರತಿಷ್ಠೆಯಾಗಿದೆ.

ಮೂರು ತಾಲ್ಲೂಕಿನಲ್ಲಿ ಚುನಾವಣೆ:

ಜಿಲ್ಲೆಯಲ್ಲಿ ಚನ್ನಗಿರಿ, ಹೊನ್ನಾಳಿ ಹಾಗೂ ಜಗಳೂರಿನಲ್ಲಿ ಮಾತ್ರ ಚುನಾವಣೆ ನಡೆಯಲಿದೆ. ಈ ಮೂರು ಕಡೆ ಐದು ವರ್ಷಗಳ ಕಾಂಗ್ರೆಸ್‌ ಅಧಿಕಾರ ನಡೆಸಿತ್ತು. ಚನ್ನಗಿರಿಯ 19 ವಾರ್ಡ್‌ಗಳಲ್ಲಿ 13 ಕಾಂಗ್ರೆಸ್, 2 ಬಿಜೆಪಿ ಹಾಗೂ 1 ವಾರ್ಡ್‌ನಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದರು. ಹೊನ್ನಾಳಿಯ 16 ವಾರ್ಡ್‌ಗಳಲ್ಲಿ 10 ಬಿಜೆಪಿ ಹಾಗೂ 6 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಗೆಲುವು ಕಂಡಿತ್ತು. ಆದರೆ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಲಾಭ ಪಡೆದು ಐದೂ ವರ್ಷ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಜಗಳೂರಿನ 15 ವಾರ್ಡ್‌ಗಳಲ್ಲಿ 12 ಕಾಂಗ್ರೆಸ್‌, 2 ಜೆಡಿಎಸ್ ಹಾಗೂ 1 ವಾರ್ಡ್‌ ಬಿಜೆಪಿ ಪಾಲಾಗಿತ್ತು.

ಚನ್ನಗಿರಿ ಈಗ ಪುರಸಭೆಯಾಗಿದೆ. ಹೊನ್ನಾಳಿ ಹಾಗೂ ಜಗಳೂರು ಪಟ್ಟಣ ಪಂಚಾಯಿತಿಯಾಗಿದ್ದರೂ ಕ್ರಮವಾಗಿ ಎರಡು ಮತ್ತು ಮೂರು ವಾರ್ಡ್‌ಗಳು ಹೆಚ್ಚಾಗಿವೆ. ಈ ಮೂರೂ ಕಡೆಯಲ್ಲಿ ಈಗ ಬಿಜೆಪಿ ಶಾಸಕರಿದ್ದಾರೆ.

ಕಾಂಗ್ರೆಸ್‌ನಿಂದ ಸೂಚನೆ ಬಂದಿಲ್ಲ:

ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಳ್ಳುವುದು ಆಯಾ ಜಿಲ್ಲಾ ಮುಖಂಡರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಪಕ್ಷದ ವರಿಷ್ಠರು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಕಡೆಯಿಂದ ಯಾವುದೇ ಸೂಚನೆಗಳು ಇದುವರೆಗೂ ಬಂದಿಲ್ಲ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ ಹೇಳಿದರು.

ಆಯಾ ತಾಲ್ಲೂಕು ಅಧ್ಯಕ್ಷರ ಸಭೆಯಾಗಿದೆ. ಆಕಾಂಕ್ಷಿಗಳ ಪಟ್ಟಿ ತೆಗೆದುಕೊಳ್ಳುತ್ತಿದ್ದೇವೆ. ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸುವ ಪ್ರಯತ್ನಿಸುತ್ತೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ ಜಿಲ್ಲೆಗೆ ಗುರುವಾರ ಭೇಟಿ ನೀಡಿ ಪಕ್ಷದ ಕಾರ್ಯಕರ್ತಯರು ಹಾಗೂ ಮುಖಂಡರ ಸಭೆ ನಡೆಸುವರು. ಅಲ್ಲಿಯೂ ಈ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸುವರು. ಇದು ‍ಪಕ್ಷದ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ತುಂಬಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಪ್ರಶ್ನೆಯೇ ಇಲ್ಲ:

‘ಅವಶ್ಯಕತೆ ಇದ್ದರೆ, ಎಲ್ಲಿ ಜೆಡಿಎಸ್‌ ಪ್ರಬಲವಾಗಿದೆ ಅಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ ಎಂದು ಪಕ್ಷದ ನಿರ್ದೇಶನವಿದೆ. ಜಿಲ್ಲೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ಕಂಡುಬರುತ್ತಿಲ್ಲ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಸ್ಪಷ್ಟಪಡಿಸಿದರು.

ಎಲ್ಲಾ ಸಭೆ ಮಾಡಿದ್ದೇವೆ. ವೀಕ್ಷಕರ ನೇಮಕವಾಗಿದೆ. ಆಕಾಂಕ್ಷಿಗಳ ಪಟ್ಟಿ ತಯಾರಿಸಲಾಗುತ್ತಿದೆ. ಶೀಘ್ರದಲ್ಲೇ ಅಭ್ಯರ್ಥಿಗಳನ್ನು ಘೋಷಿಸಲಾಗುವುದು. ರಾಜ್ಯದ ಮುಖಂಡರು ಈ ಚುನಾವಣೆಗೆ ಬರುವುದಿಲ್ಲ. ಆಯಾ ಭಾಗದ ಮಾಜಿ ಶಾಸಕರು, ಕಾಂಗ್ರೆಸ್‌ ಮುಖಂಡರೇ ಪ್ರಚಾರ ಕೈಗೊಂಡು ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದರು.

ಶಾಸಕರಿಗೆ ಜವಾಬ್ದಾರಿ:

ಚುನಾವಣೆಗೆ ಸಜ್ಜುಗೊಳ್ಳಲು ಪಕ್ಷದ ಆಯಾ ತಾಲ್ಲೂಕು ಮುಖಂಡರಿಗೆ ಸೂಚನೆ ನೀಡಿದ್ದೇವೆ. ಅವರು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಶೀಘ್ರದಲ್ಲೇ ಶಾಸಕರು, ಸಂಸದರ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್ ಹೇಳಿದರು.

ಸ್ಥಳೀಯವಾಗಿ ಮೈತ್ರಿ ಕುರಿತಂತೆ ನಾವು ಇದುವರೆಗೂ ಕಾಂಗ್ರೆಸ್‌ ಮುಖಂಡರ ಜತೆ ಚರ್ಚಿಸಿಲ್ಲ. ಅವರೂ ನಮ್ಮನ್ನು ಈ ಬಗ್ಗೆ ವಿಚಾರಿಸಿಲ್ಲ. 
ಬಿ. ಚಿದಾನಂದಪ್ಪ, ಅಧ್ಯಕ್ಷ ಜೆಡಿಎಸ್‌ ಜಿಲ್ಲಾ ಘಟಕ

ಚುನಾವಣೆ ನಡೆಯುವ ಮೂರೂ ತಾಲ್ಲೂಕುಗಳಲ್ಲಿ ನಮ್ಮದೇ ಪಕ್ಷದ ಶಾಸಕರು ಇರುವುದು ನಮ್ಮ ಗೆಲುವಿಗೆ ಸಹಕಾರಿಯಾಗುತ್ತದೆ.
ಯಶವಂತರಾವ್ ಜಾಧವ್, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

ಜೆಡಿಎಸ್‌ ಜತೆ ಮೈತ್ರಿ ಇಲ್ಲವೇ ಇಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿ, ಜಯ ಸಾಧಿಸಲಿದೆ.
–ಎಚ್‌.ಬಿ. ಮಂಜಪ್ಪ, ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಸಮಿತಿ

ಚುನಾವಣೆ ನಡೆಯಲಿರುವ ಕ್ಷೇತ್ರ ಹಾಗೂ ವಾರ್ಡ್‌ಗಳು

ಕ್ಷೇತ್ರ ವಾರ್ಡ್
ಚನ್ನಗಿರಿ    23
ಹೊನ್ನಾಳಿ   18
ಜಗಳೂರು 15

ಚುನಾವಣಾ ವೇಳಾಪಟ್ಟಿ

ನಾಮಪತ್ರ ಸಲ್ಲಿಕೆ ಆರಂಭ -   10

ಕೊನೆಯ ದಿನ  -   17

ನಾಮಪತ್ರಗಳ ಪರಿಶೀಲನೆ -   18

ಹಿಂದಕ್ಕೆ ಪಡೆಯಲು ಕಡೆ ದಿನ -  20

ಮತದಾನ ದಿನ   - 29

ಮತ ಎಣಿಕೆ ಸೆಪ್ಟೆಂಬರ್  - 1

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !