ಬುಧವಾರ, ಅಕ್ಟೋಬರ್ 28, 2020
28 °C
ಎರಡು ಕಡೆ ಪತ್ರಿಕಾಗೋಷ್ಠಿ ಕರೆದ ಎರಡು ತಂಡಗಳು* ಒಂದೇ ಕಡೆ ಮಾತನಾಡಿದ ಚೌಡರೆಡ್ಡಿ

ದಾವಣಗೆರೆ: ಅಭ್ಯರ್ಥಿಗೆ ಮುಜುಗರ ತಂದ ಜೆಡಿಎಸ್‌ ಬಣ ರಾಜಕೀಯ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಭಾನುವಾರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬಹಿರಂಗಗೊಂಡಿತು. ಅಭ್ಯರ್ಥಿಗೆ ಮುಜುಗರದ ಸನ್ನಿವೇಶ ಸೃಷ್ಟಿಸಿತು.

ಅಭ್ಯರ್ಥಿ ಚೌಡರೆಡ್ಡಿ ಆರ್. ತೂಪಲ್ಲಿ ಅವರು ಹೋಟೆಲ್‌ ಶಾಂತಿಪಾರ್ಕ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಟಿಕೆಟ್‌ ಆಕಾಂಕ್ಷಿಯೂ ಆಗಿದ್ದ ಜಸ್ಟಿನ್‌ ಜಯಕುಮಾರ್‌ ಮತ್ತು ತಂಡದವರು ಮಾಧ್ಯಮದವರಿಗೆ ಆಹ್ವಾನ ನೀಡಿದ್ದರು. ಮಧ್ಯಾಹ್ನ 12.20ಕ್ಕೆ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಜಿಲ್ಲಾ ಸಮಿತಿ ಕರೆದಿತ್ತು.

ಜಸ್ಟಿನ್‌ ಜಯಕುಮಾರ್‌ (ಕುಮಾರನಾಯ್ಕ್‌), ಜೆಡಿಎಸ್‌ ನಾಯಕರಾದ ಗುಡ್ಡಪ್ಪ, ಗೋಣಿವಾಡ ಮಂಜುನಾಥ, ಮಂಜುಳಾ, ಸಂಗನಗೌಡ, ಶ್ರೀಧರ ಪಾಟೀಲ್‌, ಮಳಲ್ಕೆರೆ ಪ್ರಕಾಶ್‌, ಶಿವಣ್ಣ, ಅನೀಸ್‌ ಪಾಶಾ ಮುಂತಾದವರು ಅಭ್ಯರ್ಥಿ ಬರುವುದನ್ನೇ ಕಾಯುತ್ತಾ ಕುಳಿತಿದ್ದರು.

ದಾವಣಗೆರೆಯಲ್ಲೇ ಇದ್ದರೂ ಮಧ್ಯಾಹ್ನ 12 ಗಂಟೆಯ ವರೆಗೆ ಚೌಡರೆಡ್ಡಿ ಅವರು ಶಾಂತಿಪಾರ್ಕ್‌ ಕಡೆ ಬರಲಿಲ್ಲ. ಬಳಿಕ ಬಂದರಾದರೂ,  ‘ಇಲ್ಲಿ ಪತ್ರಿಕಾಗೋಷ್ಠಿ ಕರೆದಿಲ್ಲ. 12.20ಕ್ಕೆ ಅಷ್ಟೇ ಕರೆದಿದ್ದು, ಅಲ್ಲೇ ಬರಬೇಕು’ ಎಂದು ಆಹ್ವಾನಿಸಿ ಹೊರಟರು.

‘ಇಂದಿನ ಸಭೆಗೆ ಜಿಲ್ಲಾ ಸಮಿತಿ ನಮಗೆ ಆಹ್ವಾನ ನೀಡಿಲ್ಲ. ಎಲ್ಲರನ್ನೂ ಕರೆದು ಮಾಡಬೇಕಿತ್ತು. ನಾವು ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿ ಚೌಡರೆಡ್ಡಿ ಪರ ಕೆಲಸ ಮಾಡುತ್ತೇವೆ’ ಎಂದು ಬಳಿಕ ಜಸ್ಟಿನ್‌ ಜಯಕುಮಾರ್‌ ಸ್ಪಷ್ಟನೆ ನೀಡಿದರು.

ಜಿಲ್ಲಾ ಸಮಿತಿ ನಡೆಸಿಕೊಂಡಿರುವ ರೀತಿ ಸರಿ ಇಲ್ಲ ಎಂದು ಜೆಡಿಎಸ್‌ನ ಕೆಲವರು ಹೊರಗೆ ಅಸಮಾಧಾನ ತೋಡಿಕೊಂಡರು.

ಯಾರೆಂದೇ ಗೊತ್ತಿಲ್ಲ: ‘ಶಾಂತಿಪಾರ್ಕ್‌ನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಿದವರು ಯಾರು ಎಂಬುದೇ ಗೊತ್ತಿಲ್ಲ. ಸಣ್ಣಪುಟ್ಟ ಗೊಂದಲಗಳು ಎಲ್ಲ ಪಕ್ಷಗಳಲ್ಲಿ ಇರುವುದು ಸಹಜ. ಅವೆಲ್ಲವನ್ನು ಸರಿಮಾಡಿಕೊಂಡು ಹೋಗುತ್ತೇವೆ. ಈ ಭಾಗದಿಂದ ಯಾರೂ ಟಿಕೆಟ್‌ ಕೇಳಿಲ್ಲ’ ಎಂದು ಬಳಿಕ ಚೌಡರೆಡ್ಡಿ ಸ್ಪಷ್ಟನೆ ನೀಡಿದರು.

‘ಯಾರದೋ ಹೆಗಲ ಮೇಲೆ ಕುಳಿತು ನಾನೂ ಪೈಲ್ವಾನ್‌ ಎಂದು ಹೇಳಿಕೊಳ್ಳುವುದು ಸುಲಭ. ಅಖಾಡಕ್ಕಿಳಿದು ಸಡ್ಡು ಹೊಡೆಯುವುದು ಸುಲಭವಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಬೇಕಿದ್ದರೆ ಅದಕ್ಕೆ ಬೇಕಾದಷ್ಟು ತಯಾರಿ ಮಾಡಿಕೊಳ್ಳಬೇಕು’ ಎಂದು ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಟಾಂಗ್‌ ನೀಡಿದರು.

‘ಪದವೀಧರ ಕ್ಷೇತ್ರದ ಆಕಾಂಕ್ಷಿಯಾ ಎಂದು ನನ್ನಲ್ಲಿ ದೇವೇಗೌಡ, ಕುಮಾರಸ್ವಾಮಿ ವಿಚಾರಿಸಿದ್ದರು. ನಾನು ವಿಧಾನಸಭೆಗೆ ಹರಿಹರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಹಾಗಾಗಿ ನಮ್ಮ ಬೆಂಬಲ ಚೌಡರೆಡ್ಡಿಗೆ ಎಂದು ತಿಳಿಸಿದ್ದೆ. ಜಿಲ್ಲಾ ಸಮಿತಿ ಕೂಡ ಅವರಿಗೆ ಬೆಂಬಲ ಸೂಚಿಸಿ ನಿರ್ಣಯ ಕೈಗೊಂಡಿದೆ’ ಎಂದು ಸ್ಪಷ್ಟನೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ನಾಯಕರಾದ ಅಮಾನುಲ್ಲಾ ಖಾನ್‌, ಗಣೇಶ್‌ ದಾಸ್‌ ಕರಿಯಪ್ಪ, ಎ.ಕೆ. ನಾಗಪ್ಪ, ಅಂಜಿನಪ್ಪ, ಶೀಲಾ ಕುಮಾರ್‌, ಧನಂಜಯ, ಹನುಮಂತಪ್ಪ ಅವರೂ ಇದ್ದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದಪ್ಪ ಅನಾರೋಗ್ಯದ ಕಾರಣ ಎರಡೂ ಕಡೆಗಳಲ್ಲಿ ಭಾಗವಹಿಸಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು