ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ರಸ್ತೆ ನಿರ್ಮಾಣ: ತನಿಖೆಗೆ ಆದೇಶ

ಕೆಡಿಪಿ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
Last Updated 25 ಜನವರಿ 2019, 13:24 IST
ಅಕ್ಷರ ಗಾತ್ರ

ದಾವಣಗೆರೆ: ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ಸಂಸ್ಥೆ (ಕೆ.ಆರ್‌.ಐ.ಡಿ.ಎಲ್‌) ಜಗಳೂರು ತಾಲ್ಲೂಕಿನಲ್ಲಿ ₹ 7.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆಗಳು ಕಳಪೆಯಾಗಿವೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್. ಶ್ರೀನಿವಾಸ್‌ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ‘ಜಗಳೂರು ತಾಲ್ಲೂಕಿನಲ್ಲಿ ಒಟ್ಟು ₹ 15 ಕೋಟಿ ಅನುದಾನದಲ್ಲಿ ₹ 7.5 ಕೋಟಿ ವೆಚ್ಚದಲ್ಲಿ ನಮ್ಮ ಹೊಲ–ನಮ್ಮ ರಸ್ತೆ, ಸ್ಮಶಾನ ರಸ್ತೆ, ಕಣದ ರಸ್ತೆಗಳನ್ನು ನಿರ್ಮಿಸಲಾಗಿದ್ದು, ಇವು ಕಳಪೆಯಿಂದ ಕೂಡಿವೆ. ಇದರಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಚಿವರು, ‘ಕೆ.ಆರ್‌.ಐ.ಡಿ.ಎಲ್‌. ನಿಂದ ಕೆಲಸ ಮಾಡಿಸುವುದಕ್ಕೆ ರಾಜ್ಯದ ಎಲ್ಲಾ ಕಡೆ ವಿರೋಧ ವ್ಯಕ್ತವಾಗುತ್ತಿದೆ. ಸಂಸ್ಥೆ ತನ್ನ ಲಾಭ ಉಳಿಸಿಕೊಂಡು, ಉಪಗುತ್ತಿಗೆ ನೀಡುವುದರಿಂದ ಕೆಲಸ ಗುಣಮಟ್ಟದಿಂದ ಆಗುತ್ತಿಲ್ಲ. ಶಾಸಕರು ಸೂಚಿಸಿದ ರಸ್ತೆಗಳ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ನಿಂದ ತನಿಖೆ ನಡೆಸಬೇಕು. ಮೂರು ದಿನಗಳಲ್ಲಿ ವರದಿ ನೀಡಬೇಕು’ ಎಂದು ಆದೇಶಿಸಿದರು.

ವರ್ಷಾಂತ್ಯಕ್ಕೆ ಖರ್ಚು ಹಾಕುವ ರೋಗ: ಹಲವು ಇಲಾಖೆಗಳಲ್ಲಿ ಕೆಲ ಯೋಜನೆಗಳ ಪ್ರಗತಿ ಶೇ 50ಕ್ಕಿಂತಲೂ ಕಡಿಮೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ‘ಮಾರ್ಚ್‌ ಕೊನೆಯ ದಿನ ಖರ್ಚು ಹಾಕುವ ರೋಗ ಅಧಿಕಾರಿಗಳಿಗೆ ಬಂದಿದೆ. ರಾಜ್ಯ ಸರ್ಕಾರ ಫೆಬ್ರುವರಿಯಲ್ಲೇ ಬಜೆಟ್‌ ರೂಪಿಸಿ ಅನುದಾನ ಹಂಚಿಕೆ ಮಾಡುತ್ತಿದೆ. ಆದರೆ, ಜಿಲ್ಲಾ ಪಂಚಾಯಿತಿಗಳಲ್ಲಿ ಮುಂದಿನ ವರ್ಷದ ಜನವರಿ ನಂತರವೇ ಕೆಲಸ ಮಾಡಲಾಗುತ್ತಿದೆ. ಕೊನೆಗೆ ಒಂದೇ ಬಾರಿ ಹಣ ಖರ್ಚು ಮಾಡಲು ಸಾಧ್ಯವಾಗುವುದಿಲ್ಲ ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ? ನೀವೆಲ್ಲ ಡಲ್‌ ಸ್ಟುಡೆಂಟ್‌ನಂತೆ ಇದ್ದೀರಿ’ ಎಂದು ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ‘ನೀವು ಮೂರು ತಿಂಗಳಿಗೆ ಒಮ್ಮೆ ಬಂದು ಸಭೆ ನಡೆಸಿದರೆ ಎಲ್ಲಾ ಸರಿ ಹೋಗುತ್ತಾರೆ’ ಎಂದು ನಗುತ್ತಲೇ ಸಚಿವರ ಕಾಲೆಳೆದರು.

ಪಶುಭಾಗ್ಯ ಯೋಜನೆಯಡಿ ಕಾರ್ಪೊರೇಷನ್‌ ಬ್ಯಾಂಕಿನವರು ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸುತ್ತಿಲ್ಲ ಎಂಬುದನ್ನು ಸಭೆಯ ಗಮನಕ್ಕೆ ತಂದಾಗ, ‘ಬ್ಯಾಂಕಿನ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ. ವಾರದೊಳಗೆ ಸಾಲ ನೀಡದಿದ್ದರೆ ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಎಫ್‌.ಐ.ಆರ್‌. ದಾಖಲಿಸಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಜೆ. ಸವಿತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

‘ಎಂ.ವಿ.ಎಸ್‌.ಗೆ ಹಣ ಕೊಡಿಸಿ’

‘ಸಂತೆಮುದ್ದಾಪುರ ಗ್ರಾಮ ಸೇರಿ 240 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಆರು ವರ್ಷಗಳ ಹಿಂದೆಯೇ ಮಂಜೂರಾತಿ ನೀಡಲಾಗಿದೆ. ಆದರೆ, ಇನ್ನೂ ಹಣಕಾಸು ಲಭ್ಯವಾಗಿಲ್ಲ. ಹೀಗಾಗಿ ಇದಕ್ಕೆ ಅಗತ್ಯ ₹ 280 ಕೋಟಿ ಅನುದಾನಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಬೇಕು’ ಎಂದು ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ಅವರು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸಂಸದ ಸಿದ್ದೇಶ್ವರ ಸಹ ಧ್ವನಿಗೂಡಿಸಿದರು.

‘ದಾವಣಗೆರೆ ತಾಲ್ಲೂಕಿನ ಅಣಜಿ, ಆನಗೋಡಿನಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ ಗಮನಕ್ಕೆ ತಂದರು.

‘ಜಲಧಾರೆ’ ಯೋಜನೆಯಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಪ್ರಸ್ತಾವ ಕಳುಹಿಸಿಕೊಡಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ತಿಳಿಸಿದರು.

‘ಜಗಳೂರು ಕ್ಷೇತ್ರಕ್ಕೆ ಬರುವ ಹರಪನಹಳ್ಳಿ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಈಗ ಅವು ಬಳ್ಳಾರಿಗೆ ಸೇರಿರುವುದರಿಂದ ಕೆಲಸ ಮಾಡುತ್ತಿಲ್ಲ’ ಎಂದು ರಾಮಚಂದ್ರ ದೂರಿದರು.

‘ಮಾರ್ಚ್‌ ಅಂತ್ಯದವರೆಗೂ ದಾವಣಗೆರೆ ಜಿಲ್ಲೆಯಿಂದಲೇ ಕುಡಿಯುವ ನೀರಿನ ಕೆಲಸ ಕೈಗೊಳ್ಳಬೇಕು. ನಂತರ ಅನುದಾನ ನೀಡಲು ಸಾಧ್ಯವಾಗದೇ ಇರುವುದರಿಂದ ಮಾರ್ಚ್‌ ಅಂತ್ಯದೊಳಗೆ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಸಂತೆಮದ್ದೂರು ಬಹುಗ್ರಾಮ ನೀರಿನ ಯೋಜನೆ ಪ್ರಸ್ತಾವ ಕಳುಹಿಸಿ ನನಗೆ ವರದಿ ಕೊಡಿ’ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಹಿಂಗಾರು: ₹ 5.87 ಕೋಟಿ ಪರಿಹಾರಕ್ಕೆ ಬೇಡಿಕೆ

ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಒಟ್ಟು 9,279 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, 90,636 ರೈತರಿಗೆ ಪರಿಹಾರ (ಸಹಾಯಧನ) ವಿತರಿಸಲು ₹ 5.87 ಕೋಟಿ ಬೇಡಿಕೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್‌ ಮಾಹಿತಿ ನೀಡಿದರು.

ಮುಂಗಾರಿನಲ್ಲಿ 1.35 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, 1.52 ಲಕ್ಷ ರೈತರಿಗೆ ಪರಿಹಾರ ನೀಡಲು ₹ 82 ಕೋಟಿಯ ಬೇಡಿಕೆ ಸಲ್ಲಿಸಲಾಗಿತ್ತು ಎಂದು ವಿವರಿಸಿದರು.

‘ಮುಂಗಾರಿನಲ್ಲಿ 2,580 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಪರಿಹಾರ ವಿತರಿಸಲು ₹ 2.20 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಹಿಂಗಾರಿನಲ್ಲಿ 3,300 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಪರಿಹಾರ ವಿತರಿಸಲು ₹ 3.5 ಕೋಟಿ ಬೆಡಿಕೆ ಸಲ್ಲಿಸಲಾಗಿದೆ. 42,137 ತೆಂಗಿನ ಮರಗಳು ಒಣಗಿದ್ದು, ಪ್ರತಿ ತೆಂಗಿನ ಮರಕ್ಕೆ ₹ 400 ಪರಿಹಾರವನ್ನು ಶೀಘ್ರದಲ್ಲೇ ವಿತರಿಸಲಾಗುವುದು’ ಎಂದು ತೋಟಗಾರಿಕೆ ಉಪ ನಿರ್ದೇಶಕ ಟಿ.ಆರ್‌. ವೇದಮೂರ್ತಿ ಮಾಹಿತಿ ನೀಡಿದರು.

ಶಾಸಕ ಎಸ್‌.ವಿ. ರಾಮಚಂದ್ರಪ್ಪ ಅವರು, ಜಗಳೂರು ತಾಲ್ಲೂಕಿನಲ್ಲಿ ಕೃಷಿ ಹೊಂಡ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬೆಳೆವಿಮೆ ಸಮರ್ಪಕವಾಗಿ ರೈತರಿಗೆ ವಿತರಣೆಯಾಗುತ್ತಿಲ್ಲ ಎಂದು ಸಂಸದ ಸಿದ್ದೇಶ್ವರ, ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರು ಆಕ್ಷೇಪ ವ್ಯಕ್ತಪಡಿಸಿದರು.

‘ತಾಂತ್ರಿಕ ಕಾರಣದಿಂದಾಗಿ 2016–17 ಹಾಗೂ 2017–18ನೇ ಸಾಲಿನಿಂದ ಒಟ್ಟು ₹ 4.9 ಕೋಟಿ ಬೆಳೆವಿಮೆ ಪರಿಹಾರ ರೈತರಿಗೆ ವಿತರಿಸುವುದು ಬಾಕಿ ಉಳಿದಿದೆ. ಸರ್ಕಾರ ಮಟ್ಟದಲ್ಲಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ತಿಳಿಸಿದರು.

ಕಾಡಾನೆ ಹಾವಳಿ: ಟ್ರೆಂಚ್‌ ನಿರ್ಮಿಸಿ

ಚನ್ನಗಿರಿ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ. ಹಳ್ಳಿಗಳಿಗೆ ಕಾಡಾನೆ ಬರುವುದನ್ನು ತಪ್ಪಿಸಲು ಕಾಡಂಚಿನಲ್ಲಿ ಈಗಾಗಲೇ 9 ಕೆ.ಮೀ. ಟ್ರೆಂಚ್‌ ನಿರ್ಮಿಸಲಾಗಿದೆ. ಇನ್ನೂ 20 ಕಿ.ಮೀ ಟ್ರೆಂಚ್‌ ನಿರ್ಮಿಸಬೇಕಾಗಿದ್ದು, ಇದಕ್ಕೆ ಅಗತ್ಯವಿರುವ ಅಂದಾಜು ₹ 60 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿಸಬೇಕು’ ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸಚಿವರನ್ನು ಕೋರಿದರು.

‘ಸಾಧ್ಯವಾದವರೆ ‘ನರೇಗಾ’ ಯೋಜನೆಯಡಿ ಟ್ರೆಂಚ್‌ ತೋಡಿಸಿ. ಇಲ್ಲವೇ ಇದಕ್ಕೆ ಅಗತ್ಯವಿರುವ ಅನುದಾನದ ಬಗ್ಗೆ ಅರಣ್ಯ ಇಲಾಖೆಯಿಂದ ಪ್ರಸ್ತಾವ ಕಳುಹಿಸಿಕೊಡಿ. ಮಂಜೂರು ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ನೂತನ ಹೆದ್ದಾರಿ ಕಾಮಗಾರಿ ಆರಂಭಿಸಿ

‘ಮರಿಯಮ್ಮನಹಳ್ಳಿ–ಶಿವಮೊಗ್ಗ ನಡುವೆ ನೂತನ ರಾಷ್ಟ್ರೀಯ ಹೆದ್ದಾರಿಗೆ ಮಂಜೂರಾತಿ ಪಡೆದು ಹಲವು ತಿಂಗಳುಗಳೇ ಕಳೆದವು. ಇನ್ನೂ ಏಕೆ ಕಾಮಗಾರಿ ಆರಂಭಿಸಿಲ್ಲ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಪ್ರಶ್ನಿಸಿದರು.

‘ಯೋಜನೆಯ ಡಿ.ಪಿ.ಆರ್‌ ಸಿದ್ಧಪಡಿಸಲಾಗುತ್ತಿದ್ದು, ಎರಡು ತಿಂಗಳ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮಾಹಿತಿ ನೀಡಿದರು. ಇದರಿಂದ ಅಸಮಾಧಾನಗೊಂಡ ಸಂಸದರು, ‘ಎರಡು ತಿಂಗಳ ಬಳಿಕ ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಆಗ ಕೆಲಸ ಮಾಡಲು ಆಗುವುದಿಲ್ಲ. ಶೀಘ್ರವೇ ಕೆಲಸ ಆರಂಭಿಸಬೇಕು’ ಎಂದು ಸೂಚಿಸಿದರು.

ಕೊಂಡುಕುರಿ ಧಾಮಕ್ಕೆ ನೀರು ಕಲ್ಪಿಸಿ

‘ಜಗಳೂರು ತಾಲ್ಲೂಕಿನ ಕೊಂಡುಕುರಿ ಧಾಮದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರು ಲಭಿಸುತ್ತಿಲ್ಲ. ಪ್ರಾಣಿಗಳು ಸಾಯುತ್ತಿವೆ. ಹೀಗಾಗಿ ಒಳಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು’ ಎಂದು ಎಸ್‌.ವಿ. ರಾಮಚಂದ್ರ ಮನವಿ ಮಾಡಿದರು.

ಶಾಸಕರೊಂದಿಗೆ ವನ್ಯಧಾಮಕ್ಕೆ ಭಾನುವಾರ ತೆರಳಿ, ಸ್ಥಳ ಪರಿಶೀಲಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಸಚಿವರು ಡಿಎಫ್‌ಒಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT