ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ತಡೆ ಶರಣರ ತತ್ವಗಳಿಂದ ಸಾಧ್ಯ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಸಚಿವ ಎಸ್‌.ಎಸ್. ಪಾಟೀಲ್
Last Updated 30 ಜುಲೈ 2022, 4:34 IST
ಅಕ್ಷರ ಗಾತ್ರ

ದಾವಣಗೆರೆ:ಇಂದು ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಿಶ್ವವಿದ್ಯಾಲಯಗಳಲ್ಲೂ ಭ್ರಷ್ಟಾಚಾರ ಬಂದಿರುವುದು ದೊಡ್ಡ ದುರಂತ. ಬಸವಾದಿ ಶರಣರ ತತ್ವಾದರ್ಶಗಳಿಂದಭ್ರಷ್ಟಾಚಾರ ತಡೆ ಸಾಧ್ಯ ಎಂದು ಮಾಜಿ ಸಚಿವ ಎಸ್‌.ಎಸ್. ಪಾಟೀಲ್ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯಗಳ ಕುಲಪತಿಗಳೇ ಭ್ರಷ್ಟರಾದರೆ ದೇಶವನ್ನು ಮುನ್ನಡೆಸುವವರು ಯಾರು? ಮಾಗನೂರು ಬಸಪ್ಪನವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಭ್ರಷ್ಟಾಚಾರ ತಡೆ ಸಾಧ್ಯ. ಧಾರ್ಮಿಕ, ರಾಜಕೀಯ, ಸಾಹಿತ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಮಾದರಿಯಾದ ನಾಯಕ ಮಾಗನೂರು ಬಸಪ್ಪ ಎಂದು ಅವರು ಹೇಳಿದರು.

‘ತಮ್ಮ 60ನೇ ವಯಸ್ಸಿನಲ್ಲಿ ಉತ್ತರಾಧಿಕಾರಿಯನ್ನು ಘೋಷಿಸಿ ಪೀಠ ತ್ಯಾಗ ಮಾಡಿ ಮೇಲ್ಪಂಕ್ತಿ ಹಾಕಿದವರು ಸಿರಿಗೆರೆ ತರಳಬಾಳು ಬೃಹನ್ಮಠದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ. ಅವರಂತೆಯೇ ಸಿದ್ದರಾಮ ಸ್ವಾಮೀಜಿ ಅವರೂ ನಾಗನೂರು ರುದ್ರಾಕ್ಷಿಮಠದ ಪೀಠವನ್ನು ತ್ಯಾಗ ಮಾಡಿ ಮಾದರಿಯಾದರು. ಒಳ್ಳೆಯ ಸ್ವಾಮೀಜಿ ಸಿಗುವುದೂ ಕಷ್ಟವಾದ ಇಂದಿನ ಕಾಲದಲ್ಲಿ ಈ ಇಬ್ಬರೂ ಮಾದರಿಯಾಗಿದ್ದಾರೆ’ ಎಂದರು.

ಸಿದ್ಧರಾಮ ಸ್ವಾಮೀಜಿ ಅವರಿಗೆ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ’ ಪ್ರಶಸ್ತಿ ನೀಡಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ. ಹಲವು ಸಮಾಜಮುಖಿ ಕಾರ್ಯಗಳ ಮೂಲಕಸ್ವಾಮೀಜಿ ಮಾದರಿಯಾಗಿದ್ದಾರೆ ಎಂದು ಹೇಳಿದರು.

‘ಬಸವಾದಿ ಶರಣರ ತತ್ವಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಅದನ್ನು ಪಾಲಿಸಿದ ಮಾಗನೂರು ಬಸಪ್ಪನವರ ಹೆಸರಿನ ಪ್ರಶಸ್ತಿಯನ್ನು ಬಸವಾದಿ ಶರಣರ ಆಶೀರ್ವಾದ ಎಂದು ಸ್ವೀಕರಿಸಿದ್ದೇನೆ. ಅವರ ಬದುಕು ಎಲ್ಲರಿಗೂ ಆದರ್ಶಪ್ರಾಯ’ ಎಂದು ಪ್ರಶಸ್ತಿ ಸ್ವೀಕರಿಸಿದತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರಿಗೆ ಸೇರಿದ್ದು ಎನ್ನಲಾದ ಕೋಟಿ ಕೋಟಿ ಹಣ ಅವರ ಆಪ್ತೆಯ ಮನೆಯಲ್ಲಿ ಪತ್ತೆಯಾಗಿದೆ. ಇಂತಹವರು ಮಾಗನೂರು ಬಸಪ್ಪ ಅವರ ಚರಿತ್ರೆಯನ್ನು ಕೇಳಿದ್ದರೆ ಭ್ರಷ್ಟಾಚಾರ ಮಾಡುತ್ತಿರಲಿಲ್ಲ. ನಿರಾಪೇಕ್ಷ ಭಾವದಿಂದ ಕೆಲಸ ಮಾಡಿದವರು ಬಸಪ್ಪ’ ಎಂದರು.

‘ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆಯಲ್ಲಿಯೇ ಆಯೋಜಿಸಬೇಕು. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾ‌ಧ್ಯಕ್ಷ ಮಹೇಶ್‌ ಜೋಷಿ, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ, ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್ವರ ಗೌಡ ಹಾಗೂ ಅವರ ಪತ್ನಿ ಸುನಂದಾ ದೇವಿ, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಚ್‌.ಎಸ್‌. ಮಂಜುನಾಥ ಕುರ್ಕಿ ಮಾತನಾಡಿದರು.

ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ಮಾಗನೂರು ಬಸಪ್ಪನವರ ಕುಟುಂಬದವರು, ಕಸಾಪ ಜಿಲ್ಲಾ ಘಟಕದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.

ಪ್ರಶಸ್ತಿಯ ಹಣ ಅಧ್ಯಯನ ಕೇಂದ್ರಕ್ಕೆ

ಗದುಗಿನ ತೋಂಟದ ಸಿದ್ಧರಾಮ ಸ್ವಾಮೀಜಿ ಅವರಿಗೆ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು
₹ 50,000 ನಗದು, ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಾಗನೂರು ಬಸಪ್ಪ ಹೆಸರಿನಲ್ಲಿ ‘ಶರಣ ಸಂಸ್ಕೃತಿ ಅಧ್ಯಯನ ಕೇಂದ್ರ’ ಸ್ಥಾಪಿಸಲುಪ್ರಶಸ್ತಿಯೊಂದಿಗೆ ನೀಡಲಾದ₹ 50,000 ನಗದನ್ನು ನೀಡುವುದಾಗಿ ಸ್ವಾಮೀಜಿ ಘೋಷಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಹೆಸರಿನಲ್ಲಿ ‘ಶರಣ ಸಂಸ್ಕೃತಿ ಅಧ್ಯಯನ ಕೇಂದ್ರ’ ಸ್ಥಾಪಿಸಬೇಕು. ಇದಕ್ಕೆ ತಗುಲುವ ಖರ್ಚನ್ನು ಭರಿಸಲು ಪ್ರತಿಷ್ಠಾನ ಬದ್ಧ.

-ಎಚ್‌.ಎಸ್‌. ಮಂಜುನಾಥ ಕುರ್ಕಿ, ಮಾಜಿ ಅಧ್ಯಕ್ಷ, ಕಸಾಪ ಜಿಲ್ಲಾ ಘಟಕ

ದಾವಣಗೆರೆಯಲ್ಲಿಯೇ ಮುಂದಿನ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಂಬಂಧಿಸಿದವರೊಂದಿಗೆ ಚರ್ಚೆ ನಡೆಸಿ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

-ಮಹೇಶ್‌ ಜೋಷಿ, ಅಧ್ಯಕ್ಷ, ಕಸಾಪ ರಾಜ್ಯ ಘಟಕ

ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಲ್ಲೂ ಪೀಠ ತ್ಯಾಗದ ಸಂಬಂಧ ಮಾತುಕತೆ ನಡೆಸಿದ್ದೇನೆ. ಅದು ಅವರಿಗೆ ಬಿಟ್ಟ ವಿಷಯ. ಈ ಬಗ್ಗೆ ಏನೂ ಹೇಳುವುದಿಲ್ಲ.

-ಎಸ್‌.ಎಸ್. ಪಾಟೀಲ್, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT