ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ: ಎಚ್.ಕೆ. ರಾಮಚಂದ್ರಪ್ಪ

ಸಿಪಿಐ ಜಿಲ್ಲಾ ಕಾರ್ಯದರ್ಶಿ
Last Updated 9 ನವೆಂಬರ್ 2019, 10:14 IST
ಅಕ್ಷರ ಗಾತ್ರ

ದಾವಣಗೆರೆ: ಎರಡು ದಶಕಗಳ ಕಾಲ ನಗರಸಭೆಯಲ್ಲಿ ಅಧಿಕಾರ ಏರಿದ್ದ ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಸಿ.ಪಿ.ಐ) ಕಾಟನ್‌ ಮಿಲ್‌ಗಳ ಅವಸಾನದ ಜೊತೆ ಜೊತೆಗೆ ಬಲ ಕಳೆದುಕೊಳ್ಳತೊಡಗಿತು. ಕಳೆದ ಬಾರಿ ಒಂದು ಸ್ಥಾನ ಗೆದ್ದಿದ್ದ ಸಿಪಿಐ ಈ ಬಾರಿ 6 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ದಾವಣಗೆರೆಯಲ್ಲಿ ಸಿಪಿಐ ಸಾಕಷ್ಟು ಕೆಲಸಗಳನ್ನು ಮಾಡಿದ್ದು, ಜನರಿಗೆ ಹಕ್ಕು ಕೊಡಿಸಲು ಹೋರಾಟ ಮಾಡುತ್ತೇವೆ ಎನ್ನುತ್ತಾರೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ. ‘ಪ್ರಜಾವಾಣಿ’ಯ ಜೊತೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

*ನಿಮ್ಮ ಆದ್ಯತೆಯ ಕ್ಷೇತ್ರಗಳು ಯಾವುವು?

ಶುದ್ಧ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ, ಸ್ವಚ್ಛತೆ, ಉದ್ಯಾನ ನಿರ್ಮಾಣ ಹಾಗೂ ವಸತಿರಹಿತರಿಗೆ ನಿವೇಶನ ಹಾಗೂ ಮನೆ ಕೊಡಿಸುವುದು ನಮ್ಮ ಆದ್ಯತೆ. ದಾವಣಗೆರೆಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಜನರಿಗೆ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಬೇಕು ಎಂಬುದು ನಮ್ಮ ಮೊದಲ ಆದ್ಯತೆ. ನಗರದಲ್ಲಿ ಸಾರ್ವಜನಿಕ ಶೌಚಾಲಯಗಳು ಇಲ್ಲ. ಇದರಿಂದಾಗಿ ಜನರು ಹಣ ಕೊಟ್ಟು ದೇಹ ಭಾದೆ ತೀರಿಸಿಕೊಳ್ಳಬೇಕಿದೆ. ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ನಿವೇಶನರಹಿತರು ಅರ್ಜಿ ಸಲ್ಲಿಸಿದ್ದು, ಅವರಿಗೆ ಆಶ್ರಯ ಮನೆ ಕೊಡಿಸುವುದು ನಮ್ಮ ಉದ್ದೇಶ. ಕೊಳೆಗೇರಿಯವರಿಗೆ ಹಕ್ಕುಪತ್ರ ಕೊಡಿಸಲು ಹೋರಾಟ ಮಾಡುತ್ತೇವೆ.

*ಯಾವ ವಿಷಯಗಳನ್ನು ಮುಂದಿಟ್ಟು ನೀವು ಮತ ಯಾಚಿಸುತ್ತೀರಿ?

ನಗರಸಭೆ ಆಗಿದ್ದ ಅವಧಿಯಲ್ಲಿ ಸಿ.ಪಿ.ಐ ತನ್ನದೇ ಆದ ಕೆಲಸಗಳನ್ನು ಮಾಡಿದ ಇತಿಹಾಸವಿದೆ. ಅವುಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ. ನಗರದ ಕೊಳಚೆ ಪ್ರದೇಶಗಳಲ್ಲಿ ಬಡವರಿಗೆ, ಕೂಲಿ ಕಾರ್ಮಿಕರಿಗೆ 10 ಸಾವಿರ ಗುಡಿಸಲು ನಿರ್ಮಿಸಿಕೊಟ್ಟಿದೆ. ಆಂಜನೇಯ ಮಿಲ್‌ ಬಳಿ 7 ಎಕರೆ ಪ್ರದೇಶದಲ್ಲಿ ಕಾರ್ಮಿಕರಿಗೆ ನಿವೇಶನಗಳನ್ನು ನೀಡಿದೆ. ನಗರದಲ್ಲಿ 15 ಸಾವಿರ ಸಸಿಗಳನ್ನು ನೆಟ್ಟು ಬೆಳೆಸಿದೆ. 26 ಪಾರ್ಕ್‌ಗಳನ್ನು ನಿರ್ಮಾಣ ಮಾಡಿದೆ. ಇಂಡಸ್ಟ್ರಿಯಲ್ ಏರಿಯಾದಲ್ಲಿ 10 ಎಕರೆ ಭೂಮಿಯಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರಿಗೆ ಪ್ರತ್ಯೇಕವಾಗಿ ಸ್ಮಶಾನ ನಿರ್ಮಿಸಿರುವುದು ಸಿಪಿಐನ ಮತ್ತೊಂದು ಸಾಧನೆ.

*ಯಾವ ಕಾರಣಕ್ಕಾಗಿ ಸಿಪಿಐ ಬೆಂಬಲಿಸಬೇಕು?

ನಮ್ಮದು ಶ್ರಮ ಜೀವಿಗಳ ಪಕ್ಷ. ನಗರದ ಅಭಿವೃದ್ಧಿಗೆ, ನಾಗರಿಕರಿಗೆ ಪ್ರಾಥಮಿಕ ಸೌಲಭ್ಯಗಳು ಸಿಗುವಂತೆ ಮಾಡಲು ಒಳಗೂ ಹಾಗೂ ಹೊರಗೂ ಹೋರಾಟ ಮಾಡಲು ಸಿಪಿಐಯನ್ನು ಜನರು ಬೆಂಬಲಿಸಬೇಕು. ಕಾರ್ಮಿಕರು, ಫುಟ್‌ಪಾತ್ ವ್ಯಾಪಾರಿಗಳು, ಕೊಳಗೇರಿ ನಿವಾಸಿಗಳು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ, ಕಟ್ಟಡ ಕಾರ್ಮಿಕರು, ಆಶಾ, ಕೃಷಿ, ಕಾರ್ಮಿಕ ಮಹಿಳೆಯರೇ ನಮ್ಮ ಪಕ್ಷಕ್ಕೆ ಬಲ. ಶ್ರೀಸಾಮಾನ್ಯರ ಮೇಲಿನ ದೌರ್ಜನ್ಯ, ಶೋಷಣೆಯ ಹೋರಾಟ ನಡೆಸುತ್ತೇವೆ. ಸಂವಿಧಾನಬದ್ಧ ಹಕ್ಕುಗಳಿಗಾಗಿ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸಲು ಪಕ್ಷ ಶ್ರಮಿಸುತ್ತದೆ.

*ಎಷ್ಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ, ನಿಮ್ಮ ಬೆಂಬಲ ಯಾವ ಪಕ್ಷಕ್ಕೆ?

ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸುವುದು ಬೇಡ. ಆರು ಕಡೆಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಇಂತಿಷ್ಟೇ ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವಿಲ್ಲ. ಸಿಪಿಐಗೆ ಅಧಿಕಾರದ ದಾಹ ಇಲ್ಲ. ನಮಗೆ ಚುನಾವಣೆ ಮುಖ್ಯವಲ್ಲ. ಜನರ ಸಮಸ್ಯೆ ನಿವಾರಣೆಗೆ ಹೋರಾಟ ನಡೆಸುವುದು ಮುಖ್ಯ. ವಿರೋಧ ಪಕ್ಷದ ಜೊತೆ ಇರುತ್ತೇವೆ ಹೊರತು ಬಿಜೆಪಿ ಜೊತೆ ಕೈಜೋಡಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT