ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಖಾಸಗೀಕರಣದಿಂದ ಮಹಿಳಾ ಉದ್ಯೋಗಿಯ ಸೌಲಭ್ಯಕ್ಕೆ ಕುತ್ತು

ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ
Last Updated 12 ಮಾರ್ಚ್ 2023, 5:46 IST
ಅಕ್ಷರ ಗಾತ್ರ

ದಾವಣಗೆರೆ: ‘ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಒತ್ತು ನೀಡುತ್ತಿದ್ದು, ಖಾಸಗೀಕರಣದಿಂದ ಮಹಿಳಾ ಉದ್ಯೋಗಿಗಳಿಗೆ ಸೌಲಭ್ಯ ಕೈತಪ್ಪಲಿವೆ. ಇದರ ವಿರುದ್ಧ ಹೋರಾಟ ನಡೆಸಬೇಕಿದೆ’ ಎಂದು ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಕರೆ ನೀಡಿದರು.

ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ (ಕೆಪಿಬಿಇಎಫ್)ನಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಬ್ಯಾಂಕ್ ಉದ್ಯೋಗಿಗಳ ಆರನೇ ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಕಾರ್ಮಿಕರ ಕಾಯ್ದೆ, ಭವಿಷ್ಯನಿಧಿ, ಇ.ಎಸ್.ಐ., ಕನಿಷ್ಠ ವೇತನ ಸೇರಿ ಶ್ರಮಿಕರಿಗೆ ಸಂಬಂಧಿಸಿದ ಎಲ್ಲ ಕಾಯ್ದೆಗಳಲ್ಲಿ ಬದಲಾವಣೆ ತರುತ್ತಿದೆ. ಮುಂದಿನ ದಿನಗಳಲ್ಲಿ ಇವು ಬ್ಯಾಂಕ್‌ನ ಮಹಿಳಾ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸರ್ಕಾರಿ ಬ್ಯಾಂಕುಗಳ ಹುದ್ದೆಗಳಲ್ಲಿ ಹೊರಗುತ್ತಿಗೆ ಹೆಚ್ಚಿದೆ. ಬ್ಯಾಂಕ್ ಮಿತ್ರರ ಹೆಸರಿನಲ್ಲಿ 2 ಲಕ್ಷ ಜನರನ್ನು ಹೊರ ಗುತ್ತಿಗೆಯಲ್ಲಿ ನೇಮಕ ಮಾಡಲಾಗಿದೆ. ಇವರ ಸಂಖ್ಯೆ ಇನ್ನಷ್ಟು ಹೆಚ್ಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪೂರ್ಣಕಾಲಿಕ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ಎಚ್ಚರಿಸಿದರು.

‘ಬ್ಯಾಂಕ್‌ಗಳ ರಾಷ್ಟ್ರೀಕರಣದ ಬಳಿಕ ಮಹಿಳಾ ನೇಮಕಾತಿ ಹೆಚ್ಚಾಗಿದೆ. ಇಂದು ಶೇ 25ರಷ್ಟು ಮಹಿಳಾ ಬ್ಯಾಂಕ್ ಉದ್ಯೋಗಿಗಳಿದ್ದಾರೆ. ಸಂಘಟನೆ, ಬ್ಯಾಂಕ್ ಆಡಳಿತ ಮಂಡಳಿಗಳಲ್ಲೂ ಸ್ತ್ರೀಯರಿಗೆ ಅವಕಾಶ ನೀಡಲಾಗಿದೆ’ ಎಂದು ಕೆಪಿಬಿಇಎಫ್ ಪ್ರಧಾನ ಕಾರ್ಯದರ್ಶಿ ಎಂ. ಜಯನಾಥ್ ಹೇಳಿದರು.

ಎಐಬಿಇಎ ನ ಜಂಟಿ ಕಾರ್ಯದರ್ಶಿ ಲಲಿತಾ ಜೋಷಿ, ಲೇಖಕಿ ಎಚ್.ಜಿ. ಜಯಲಕ್ಷ್ಮೀ, ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್
ಫೆಡರೇಷನ್‌ನ ಅಧ್ಯಕ್ಷ ಎಂ.ಎಸ್. ಶ್ರೀನಿವಾಸನ್, ಮಹಿಳಾ ಕೌನ್ಸಿಲ್‌ನ ಸಂಚಾಲಕಿ ಶ್ರೀಲತಾ ಕುಲಕರ್ಣಿ, ಭೀಮಸೇನ ಡಿಸೋಜಾ, ಕೆ.ಜಿ.ಪಣೀಂದ್ರ, ಕೆಪಿಬಿಇಎಫ್ ಮಹಿಳಾ ಸಮಿತಿ ಅಧ್ಯಕ್ಷೆ ಆರ್.ಎಸ್. ಸುಮತಿ, ಬ್ಯಾಂಕ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಇದ್ದರು.

‘ವಾರದಲ್ಲಿ 5 ದಿನ ಕೆಲಸ: ಚರ್ಚೆ ಅಂತಿಮ’

ಬ್ಯಾಂಕ್‌ಗಳು ಇನ್ನು ಮುಂದೆ ವಾರದಲ್ಲಿ ಐದು ದಿನವಷ್ಟೇ ಕಾರ್ಯನಿರ್ವಹಿಸುವ ಕುರಿತು ಚರ್ಚೆ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡುವುದು ಬಾಕಿ ಇದೆ. ಬ್ಯಾಂಕ್‌ಗಳಲ್ಲಿ ಈಗ ಎರಡನೇ ಮತ್ತು ನಾಲ್ಕನೇ ಶನಿವಾರ‌ ರಜೆ ಇ‌ವೆ. ಪ್ರಸ್ತಾಪಿತ ಪದ್ಧತಿಯಲ್ಲಿ ಎಲ್ಲಾ ಶನಿವಾರ-ಭಾನುವಾರವೂ ರಜೆ ಇರಲಿದೆ’ ಎಂದು ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT