ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಮಳೆಗಾಲದಲ್ಲಿ ಸಮಸ್ಯೆ: ಬೇಕು ಶಾಶ್ವತ ಪರಿಹಾರ

ಕಾಲುವೆಗಳ ದುರಸ್ತಿ, ಅಭಿವೃದ್ಧಿ ಕಾಮಗಾರಿಗೆ ₹350 ಕೋಟಿ ಪ್ರಸ್ತಾವ: ಆಯುಕ್ತೆ ರೇಣುಕಾ
Published 29 ಮೇ 2024, 6:07 IST
Last Updated 29 ಮೇ 2024, 6:07 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಈಗಾಗಲೇ ಹಲವು ಬಾರಿ ಮಳೆ ಸುರಿದಿದೆ. ಮುಂದಿನ ದಿನಗಳಲ್ಲಿ ಮುಂಗಾರು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮಳೆ ನೀರು ಹಳ್ಳಕೊಳ್ಳಗಳು ಹಾಗೂ ಬಡಾವಣೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ.

ಮಳೆ ಆರಂಭಕ್ಕೂ ಮುನ್ನ ಮಹಾನಗರ ಪಾಲಿಕೆ ಮಳೆಯಿಂದ ನಗರದಲ್ಲಿ ಅನಾಹುತಗಳು ಆಗದಂತೆ ಸಿದ್ಧತೆ ಆರಂಭಿಸಿದೆ. ಆದರೆ, ಸಿದ್ಧತಾ ಕ್ರಮಗಳ ಬಗ್ಗೆ ಜನರಲ್ಲಿ ಇನ್ನೂ ಸಮಾಧಾನ ಮೂಡಿಲ್ಲ. ಶಾಶ್ವತ ಪರಿಹಾರ ಬೇಕು ಎಂಬುದು ಜನರ ಒತ್ತಾಯವಾಗಿದೆ.

ಹಳೆ ದಾವಣಗೆರೆಯ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಸಮಸ್ಯೆಗಳು ಕಾಯಂ ಎನ್ನುವಂತಾಗಿದೆ. ಚರಂಡಿ ಕಟ್ಟಿಕೊಂಡು ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗುವ ದೃಶ್ಯ ಈಗಲೂ ಹಲವು ಕಡೆ ಕಂಡು ಬರುತ್ತದೆ. ರೈಲ್ವೆ ಅಂಡರ್‌ಬ್ರಿಡ್ಜ್‌ಗಳಲ್ಲಿ ನೀರು ನಿಲ್ಲುವ ಸಮಸ್ಯೆ ಕಡಿಮೆಯಾಗಿರುವುದು ಸ್ವಲ್ಪ ಮಟ್ಟಿನ ಸಮಾಧಾನಕ್ಕೆ ಕಾರಣವಾಗಿದೆ.

‘ಭಾಷಾನಗರ, ಮಹಾವೀರ ನಗರ, ಶಿವನಗರ, ಎಸ್‌ಎಸ್‌ಎಂ ನಗರಗಳಲ್ಲಿ ಚರಂಡಿಗಳಲ್ಲಿ ಕಸ ತುಂಬಿಕೊಂಡಿರುವುದರಿಂದ ಮಳೆ ಬಂದರೆ ನೀರು ಹರಿದು ಚರಂಡಿ ಕಸವೆಲ್ಲಾ ರಸ್ತೆಗೆ ಬರುತ್ತದೆ. ಕಸ ವಿಲೇವಾರಿ ಮಾಡುವ ವಾಹನಗಳು ಸರಿಯಾದ ಸಮಯಕ್ಕೆ ಬಾರದೇ ಇದ್ದರೆ ಈ ಸಮಸ್ಯೆ ಉದ್ಭವಿಸುತ್ತದೆ. ಕಸ ಸೂಕ್ತ ಸಮಯಕ್ಕೆ ವಿಲೇವಾರಿಯಾಗಬೇಕು’ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ ಒತ್ತಾಯಿಸಿದರು.

‘ಆವರೆಗೆರೆ ಸಮೀಪದ ದನವಿನ ಓಣಿಯಲ್ಲಿ ಪಕ್ಕದಲ್ಲಿಯೇ ಹಳ್ಳ ಹರಿಯುವುದರಿಂದ ಮಳೆ ಬಂದಾಗ ಮನೆಗಳು ಜಲಾವೃತವಾಗುತ್ತವೆ. ಎಪಿಎಂಸಿ ಚಿಕ್ಕನಹಳ್ಳಿಯಲ್ಲಿ 400 ಕುಟುಂಬಗಳು ಇದ್ದು, ಮಳೆ ಬಂದಾಗ ಇಲ್ಲಿ ಸಮಸ್ಯೆಯಾಗಿ ಕಾಳಜಿ ಕೇಂದ್ರದಲ್ಲಿ ಉಳಿಯಬೇಕಾದ ಸ್ಥಿತಿ ಪ್ರತಿವರ್ಷ ಸಾಮಾನ್ಯವಾಗಿದೆ. ಅಲ್ಲಿನ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು’ ಎಂದು ಕಾರ್ಮಿಕ ಮುಖಂಡ ಆವರಗೆರೆ ವಾಸು ಒತ್ತಾಯಿಸಿದರು.

‘ಒಳ ಚರಂಡಿಗಳು ಇದ್ದರೂ ಅವುಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ಮಳೆ ಬಂದರೆ ಚರಂಡಿಯಿಂದ ನೀರು ಮನೆಗೆ ನುಗ್ಗುತ್ತದೆ. ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಿಲ್ಲ. ಮನೆಗೆ ಹಕ್ಕುಪತ್ರ ನೀಡಿದ್ದರೂ ಮನೆ ನಿರ್ಮಿಸಿಕೊಟ್ಟಿಲ್ಲ. ಎಂದು ಧನಿವಿನ ಓಣಿಯ ಶೀಲಮ್ಮ ಅಳಲು ತೋಡಿಕೊಂಡರು.

‘ನಾವು ವಾಸಿಸುವ ಪ್ರದೇಶದಲ್ಲಿ ಒಳಚರಂಡಿಗಳು ನಿರ್ಮಾಣವಾಗಿಲ್ಲ. ಇದರಿಂದಾಗಿ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಮನೆಯಲ್ಲಿನ ವಸ್ತುಗಳು ತೇಲಿಕೊಂಡು ಬರುತ್ತವೆ’ ಎಂದು ಗೋಶಾಲೆಯ ಬಳಿಯ ಹಳ್ಳದ ದಂಡೆಯ ಮೇಲಿನ ನಿವಾಸಿ ಶಾರದಮ್ಮ ದೂರಿದರು. 

₹ 15 ಲಕ್ಷ ವೆಚ್ಚದಲ್ಲಿ ಹೂಳು ತೆಗೆಯುವ ಕಾರ್ಯ:

‘ಶಿವನಗರ, ಬಸಾಪುರ, ಎಸ್‌ಒಜಿ ಕಾಲೊನಿ, ಸ್ವಾಮಿ ವಿವೇಕಾನಂದ ಬಡಾವಣೆ, ಕೆಟಿಜೆ ನಗರ, ಭಗತ್‌ಸಿಂಗ್ ನಗರ ಮುಂತಾದ ಭಾಗಗಳಲ್ಲಿ ರಾಜಕಾಲುವೆ ಸ್ವಚ್ಛಗೊಳಿಸಲಾಗುತ್ತಿದೆ. ಬನಶಂಕರಿ ಬಡಾವಣೆ ಸೇರಿದಂತೆ ಹೆಚ್ಚು ನೀರು ಸಂಗ್ರಹವಾಗುವ ತಗ್ಗು ಪ್ರದೇಶಗಳಲ್ಲಿ ಹೂಳು ತೆಗೆಸಲಾಗುತ್ತಿದೆ. ಇದಕ್ಕಾಗಿ ₹15 ಲಕ್ಷ ಮೊತ್ತದ ಟೆಂಡರ್‌ ಕರೆಯಲಾಗಿದ್ದು, ಸಣ್ಣಪುಟ್ಟ ಚರಂಡಿಗಳಲ್ಲಿ ಪೌರಕಾರ್ಮಿಕರಿಂದಲೇ ಹೂಳು ತೆಗೆಸಲಾಗುತ್ತಿದೆ. ಕಳೆದ ಸಲ ಅಷ್ಟೊಂದು ಸಮಸ್ಯೆಯಾಗಿಲ್ಲ. ಈ ಸಲವೂ ಅಷ್ಟೊಂದು ಸಮಸ್ಯೆಯಾಗುವುದಿಲ್ಲ’ ಎಂದು ಮಹಾನಗರ ಪಾಲಿಕೆ ಅಧೀಕ್ಷಕ ಎಂಜಿನಿಯರ್ (ಸಿವಿಲ್) ಮನೋಹರ್ ತಿಳಿಸಿದರು.

ರೇಣುಕಾ
ರೇಣುಕಾ

‌- ‘₹ 350 ಕೋಟಿಗೆ ಸರ್ಕಾರಕ್ಕೆ ಪ್ರಸ್ತಾಪ’

‘ನಗರದಲ್ಲಿ ಮಳೆ ನೀರು ನಿಲ್ಲುವ ಒಳಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮ ವಹಿಸುವಂತೆ ಆರೋಗ್ಯ ನಿರೀಕ್ಷರಿಗೆ ಸೂಚನೆ ನೀಡಿದ್ದೇನೆ. 10 ದಿನಗಳಿಂದ ಕೆಲಸ ನಡೆಯುತ್ತಿದ್ದು 10 ದಿವಸಗಳಲ್ಲಿ ಕೆಲಸ ಮುಗಿಯುತ್ತದೆ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು. ‘ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಇರುವ ರಾಜಕಾಲುವೆ ಮಳೆ ನೀರು ಸಾಗುವ ಡ್ರೈನೇಜ್‌ಗಳನ್ನು ದುರಸ್ತಿಗೊಳಿಸಿ ಅವುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ₹350 ಕೋಟಿ ಮೊತ್ತದ ಪ್ರಸ್ತಾವವನ್ನು ಕಳುಹಿಸಿದ್ದು ಇದು ಸರ್ಕಾರದ ಹಂತದಲ್ಲಿದೆ. ಹಣ ಬಿಡುಗಡೆಯಾದರೆ ಕಾಮಗಾರಿ ಆರಂಭಿಸಲಾಗುವುದು. ಆಗ ಹೆಚ್ಚು ಮಳೆ ಸುರಿದು ಪ್ರವಾಹ ಬಂದರೂ ಸಮಸ್ಯೆಯಾಗುವುದಿಲ್ಲ’ ಎಂದು ಅವರು ಮಾಹಿತಿ ನೀಡಿದರು. ‘ಸಾರ್ವಜನಿಕರು ಮನೆಯ ಸುತ್ತಮುತ್ತ ಗಿಡಗಳನ್ನು ಬೆಳೆಸಿ ಮಳೆ ನೀರನ್ನು ಅಲ್ಲಿಗೆ ಬಿಡುವ ವ್ಯವಸ್ಥೆ ಮಾಡಬೇಕು. ಅಲ್ಲದೇ ಮಳೆ ನೀರು ಸಂಗ್ರಹ ಮಾಡಿ ಸಂಪುಗಳಲ್ಲಿ ಶೇಖರಿಸಿಟ್ಟು ಗಿಡಗಳಿಗೆ ಬಿಡಬೇಕು. ಮಳೆ ನೀರನ್ನು ಯುಜಿಡಿಗೆ ಬಿಡುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು ಸಾರ್ವಜನಿಕರು ಇದನ್ನು ತಪ್ಪಿಸಿ ಮಳೆ ನೀರುವ ಹೋಗುವ ಕಡೆಗೆ ತಿರುಗಿಸಬೇಕು. ಅಡುಗೆ ಕೋಣೆ ಮನೆಯಲ್ಲಿ ಬಳಸಿದ ನೀರನ್ನು ಮಾತ್ರ ಯುಜಿಡಿಗೆ ಬಿಡಬೇಕು’ ಎಂದು ಸಲಹೆ ನೀಡಿದರು.

‌ ‘ಗಿಡಗಳನ್ನು ಬೆಳೆಸಿ ನೀರು ಇಂಗಿಸುವಂತೆ ಜಾಗೃತಿ’

ದಾವಣಗೆರೆಯಲ್ಲಿ ಕಾಂಕ್ರೀಟ್ ರಸ್ತೆಗಳು ಇರುವುದರಿಂದ ಮಳೆಯ ನೀರು ಇಂಗುತ್ತಿಲ್ಲ. ಈ ನಿಟ್ಟಿನಲ್ಲಿ ಗಿಡಗಳನ್ನು ಬೆಳೆಸಿ ನೀರನ್ನು ಇಂಗಿಸುವ ಕೆಲಸ ಮಾಡಬೇಕು. ಪರಿಸರ ಆಸಕ್ತರು ಸ್ನೇಹಿತರ ಜೊತೆ ಸೇರಿ ರಸ್ತೆಯಲ್ಲಿ ಗಿಡಗಳ ಬಳಿ ಇರುವ ಕಸ ತೆಗೆದು ಪಾತಿ ಮಾಡಿ ನೀರು ಇಂಗಿಸುವ ಕೆಲಸವನ್ನು ಆರಂಭಿಸಿದ್ದೇವೆ. ಅಂಗಡಿಗಳ ಮಾಲೀಕರಿಗೂ ಈ ಬಗ್ಗೆ ಮನವಿ ಮಾಡಲಾಗುವುದು. ಸಾಮಾಜಿಕ ಮಾಧ್ಯಮಗಳ ಮೂಲಕ ಈ ಬಗ್ಗೆ ‌ಜಾಗೃತಿ ಮೂಡಿಸಲಾಗುವುದು’ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT