ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥರಾಗಿದ್ದು, ಅನಾಥ ರಕ್ಷಕರಾಗಿ ಬದಲಾಗಿದ್ದ ಪ್ರವಾದಿ: ಮುಹಮ್ಮದ್‌ ಕುಂಞಿ

Last Updated 30 ನವೆಂಬರ್ 2021, 3:58 IST
ಅಕ್ಷರ ಗಾತ್ರ

ದಾವಣಗೆರೆ: ಹುಟ್ಟಿದಾಗಲೇ ತಂದೆಯನ್ನು ಕಳೆದುಕೊಂಡು, ಆರನೇ ವರ್ಷಕ್ಕೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಪ್ರವಾದಿ ಮುಹಮ್ಮದ್‌ ಅವರು ಅನಾಥ ರಕ್ಷಕರಾಗಿದ್ದೇ ಜೀವನದ ದೊಡ್ಡ ಪಾಠ. ಪ್ರವಾದಿ ಅವರು ದೊಡ್ಡ ಸಿದ್ಧಾಂತಗಳನ್ನು, ಸಂದೇಶಗಳನ್ನು ಬೋಧನೆ ಮಾಡಲಿಲ್ಲ. ತನ್ನ ಬದುಕಿನ ಮೂಲಕ ಸಿದ್ಧಾಂತ, ಸಂದೇಶಗಳನ್ನು ನೀಡಿದರು ಎಂದು ಜಮಾಅತೇ ಇಸ್ಲಾಮಿ ಹಿಂದ್‌ ರಾಜ್ಯ ಕಾರ್ಯದರ್ಶಿ ಮುಹಮ್ಮದ್‌ ಕುಂಞಿ ಹೇಳಿದರು.

ದಾವಣಗೆರೆಯ ಜಮಾಅತೇ ಇಸ್ಲಾಮಿ ಹಿಂದ್‌ ಸೋಮವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ‘ಸೌಹಾರ್ದ ಸಮಾಜ ಮತ್ತು ಪ್ರವಾದಿ ಮುಹಮ್ಮದ್‌ರ ಸಂದೇಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರವಾದಿಯವರಲ್ಲಿ ಅಧಿಕಾರ ಇತ್ತು. ಪತ್ನಿ ಆಗರ್ಭ ಶ್ರೀಮಂತೆಯಾಗಿದ್ದರು. ಶ್ರೀಮಂತ ಅನುಯಾಯಿಗಳಿದ್ದರು. ಆದರೆ ಅವರು ಕನಿಷ್ಠ ಸವಲತ್ತಿನಿಂದಿಗೆ ಸಂತೋಷದಿಂದ ಬದುಕಿ ಮಾದರಿಯಾದರು. ಏಕ ದೇವ ತತ್ವವನ್ನು ಸಾರಿದರು. ಯಾವುದೇ ಜಾತಿ, ಧರ್ಮ ಇರಲಿ, ಯಾವುದೇ ದೇಶದಲ್ಲಿ ಇರಲಿ ಅವರು ಒಂದೇ ದೇವರ ಸೃಷ್ಟಿ ಎಂದು ಎಲ್ಲರೂ ಸಹೋದರರು ಎಂಬ ತತ್ವವನ್ನು ಹೇಳಿಕೊಟ್ಟರು ಎಂದು ತಿಳಿಸಿದರು.

ದೇಹಕ್ಕೆ ಮತ್ತು ಮನಸ್ಸಿಗೆ ನೋವು ಕೊಡಬಾರದು. ಜಗತ್ತಿನ ಎಲ್ಲರನ್ನೂ ಪ್ರೀತಿಸಬೇಕು. ಗೌರವಿಸಬೇಕು. ನೊಂದವರ ನೆರವಿಗೆ ಬರಬೇಕು ಎಂಬುದು ಪ್ರವಾದಿ ತತ್ವ ಎಂದರು.

ಕರುಣೆಯ ಅಧ್ಯಾತ್ಮವನ್ನು ಯುವಜನರಿಗೆ ಹೇಳಿಕೊಡಬೇಕು. ಅದನ್ನು ಹೇಳಿಕೊಡದೇ ಇದ್ದರೆ ದ್ವೇಷವೇ ಧರ್ಮವಾಗುವ ಅಪಾಯವಿದೆ ಎಂದು ಹೇಳಿದರು.

ಜಮಾಅತೇ ಇಸ್ಲಾಮಿ ಹಿಂದ್‌ ಇಸ್ತಾನಿಯ ಅಧ್ಯಕ್ಷ ಅಯೂಬ್‌ಖಾನ್‌, ವಲಯ ಸಂಚಾಲಕ ಸಲೀಂ ಉಮ್ರಿ, ಜಿಲ್ಲಾ ಸಂಚಾಲಕ ಮೆಹಬೂಬ್‌ ಅಲಿ ಉಪಸ್ಥಿತರಿದ್ದರು. ಮನ್ಸೂರ್‌ ರೆಹಮತ್ ಕಾರ್ಯಕ್ರಮ ನಿರೂಪಿಸಿದರು.

ಒಳಗೆ ಕೊಳಕು ಹೊರಗೆ ಬೆಳಕು: ಸಾಣೇಹಳ್ಳಿ ಶ್ರೀ ವಿಷಾದ

ಎಲ್ಲ ಪ್ರವಾದಿಗಳು, ಸಂತರು, ಶರಣರು ಹೇಳಿದ್ದು ಬಹಿರಂಗ ಶುದ್ಧಿಯ ಜತೆಗೆ ಅಂತರಂಗದ ಶುದ್ಧಿ. ಆದರೆ ಈಗ ಒಳಗೆ ಕೊಳಕು ತುಂಬಿಕೊಂಡು ಹೊರಗೆ ಬೆಳಕು ತೋರಿಸುವುದೇ ಹೆಚ್ಚಾಗಿದೆ. ಎಲ್ಲರೂ ತತ್ವಗಳನ್ನು ಹೇಳುವವರಾಗಿದ್ದಾರೆ. ತತ್ವಗಳನ್ನು ಅಳವಡಿಸಿಕೊಳ್ಳುವವರು ಕಾಣುತ್ತಿಲ್ಲ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸುಳ್ಳು ಹೇಳಬಾರದು ಎಂದು ಪ್ರವಾದಿಯವರು ಹೇಳಿದ್ದಾರೆ. ಆದರೆ ಇಂದು ಸುಳ್ಳೇ ವಿಜ್ರಂಭಿಸುತ್ತಿದೆ. ಹೆಣ್ಣುಮಕ್ಕಳನ್ನು ತಾಯಿಯಂತೆ ಕಾಣಬೇಕು ಎಂದಿದ್ದಾರೆ. ಆದರೆ ಎಲ್ಲ ಕಡೆ ಅತ್ಯಾಚಾರಗಳೇ ಜಾಸ್ತಿಯಾಗಿವೆ. ಶರಣರು ಕಳಬೇಡ, ಕೊಲಬೇಡ ಎಂದು ಏಳು ಶೀಲಗಳನ್ನು ನೀಡಿದ್ದಾರೆ. ಆದರೆ ಅವುಗಳ ಪಾಲನೆಯಾಗುತ್ತಿಲ್ಲ ಎಂದು ಬೇಸರಿಸಿದರು.

‘ಬುದ್ಧ, ಯೇಸು, ಪೈಗಂಬರ್‌, ಬಸವಣ್ಣ ಅವರ ತತ್ವಗಳನ್ನು ಪಾಲಿಸದೇ ಅವರ ಹೆಸರು ಹೇಳುವ ನೈತಿಕತೆ ನಮಗಿದೆಯೇ ಎಂಬುದನ್ನು ಎಲ್ಲರೂ ಪ್ರಶ್ನಿಸಿಕೊಳ್ಳಬೇಕು. ಮರಳುಗಾಡಿನಲ್ಲಿ ಚೈತನ್ಯ ಅರಳಿಸಿದವರು ಪ್ರವಾದಿಯವರು. ಎಲ್ಲ ಸಂತರು ಜೀವ ಚೈತನ್ಯ ಅರಳಿಸುವ ಬಗ್ಗೆಯೇ ಹೇಳಿದ್ದಾರೆ. ಆದರೆ ಇಂದು ಅರಳಿಸುವ ಬದಲು ಮನಸ್ಸು ಕೆರಳಿಸುವ ಕ್ರಿಯೆಗಳಾಗುತ್ತಿವೆ’ ಎಂದು ವಿಷಾದಿಸಿದರು.

ಬದುಕಿಯು ಸತ್ತಂತಿರುವ ಬದಲು ಸತ್ತ ಮೇಲೂ ಬದುಕುವಂತಿರಬೇಕು. ಎಲ್ಲ ದಾರ್ಶನಿಕರು ಕಣ್ಣ ಮುಂದೆ ಇಲ್ಲದೇ ಇದ್ದರೂ ಇಂದಿಗೂ ನಮ್ಮ ನಡುವೆ ಬದುಕಿದ್ದಾರೆ ಎಂದರೆ ಅವರ ಬದುಕು ಮತ್ತು ಸಿದ್ಧಾಂತ ಒಂದೇ ಆಗಿರುವುದು ಕಾರಣ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT