ಸೋಮವಾರ, ಡಿಸೆಂಬರ್ 5, 2022
19 °C

ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯ ಜನರು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಶನಿವಾರ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

‘ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನರು ಸಂಬಂಧಪಟ್ಟ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡಿದರೂ ಸ್ಪಂದನೆ ದೊರೆಯುತ್ತಿಲ್ಲ. ದಾವಣಗೆರೆ ತಾಲ್ಲೂಕು ಅಣಜಿ ಕೆರೆಯು ಕೋಡಿ ಬಿದ್ದಿರುವ ಪರಿಣಾಮ ಕೆರೆಯಾಗಳಹಳ್ಳಿ, ಅಣಜಿ, ಗಾಂಧಿನಗರ, ಹುಲಿಕಟ್ಟೆ ಗ್ರಾಮಗಳ ಅಂದಾಜು 100 ಎಕರೆ ಅಡಿಕೆ, 75 ಎಕರೆ ಮೆಕ್ಕಜೋಳ ಬೆಳೆಗಳು ಜಲಾವೃತಗೊಂಡು ಸಂಪೂರ್ಣ ನಾಶವಾಗಿವೆ. ಅಂತಹ ರೈತರಿಗೆ ಪರಿಹಾರ ನೀಡಬೇಕು. ಗೋಪನಾಳು ಗ್ರಾಮದ ಕಲ್ಲೇಶಪ್ಪನವರ ಖಾಸಗಿ ನಿವೇಶನಕ್ಕೆ ಸರ್ಕಾರಿ ಪಾಳು ಜಾಗದಲ್ಲಿ ರಸ್ತೆ ನಿರ್ಮಿಸಿಕೊಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ವಿ.ಪಟೇಲ್ ಒತ್ತಾಯಿಸಿದರು.

ಚನ್ನಗಿರಿ ತಾಲೂಕು ಕಾರಿಗನೂರಿನ ಸರ್ವೆ ನಂಬರ್ 195ರಿಂದ 208ರವರೆಗಿನ ಜಮೀನುಗಳಿಗೆ ರೂಢಿಯಲ್ಲಿದ್ದ ರಸ್ತೆಯನ್ನು ಅಧಿಕೃತಗೊಳಿಸಬೇಕು. ಕೆರೆಬಿಳಚಿ ಗ್ರಾಮದ ಅನೇಕ ಜಮೀನುಗಳಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ವಿದ್ಯುತ್ ಗೋಪುರ ಅಳವಡಿಸುತ್ತಿದ್ದು, ಇದಕ್ಕಾಗಿ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಪತಿ ಕಳೆದುಕೊಂಡಿರುವ ಕಾರಿಗನೂರು ಗ್ರಾಮದ ಲಿಖಿತಾಗೆ ತನ್ನ ಪತಿಯ ಪಾಲಿನ ಆಸ್ತಿ ಕೊಡಿಸಬೇಕು. ಲಿಖಿತಾ ಸಲ್ಲಿಸಿದ್ದ ತಕರಾರು ಅರ್ಜಿ ನಿರ್ಲಕ್ಷಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.

ಬಸವಾಪಟ್ಟಣ ಹೋಬಳಿಯ ಹಲವು ಗ್ರಾಮಗಳ ವಿದ್ಯುತ್ ಸಮಸ್ಯೆ ನಿವಾರಿಸಲು ಮಂಜೂರಾಗಿರುವ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಕಂಚುಗಾರನಹಳ್ಳಿ ಗ್ರಾಮದಲ್ಲಿ ಕಾಯ್ದಿರಿಸಿರುವ ಜಮೀನಿನ ಖರೀದಿ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಕಶೆಟಿಹಳ್ಳಿ ಗ್ರಾಮದ ಗ್ರಾಮಠಾಣಾ ಗಡಿ ಗುರುತಿಸಬೇಕು. ಹರಿಹರ ತಾಲೂಕು ಹಿರೇಹಾಲಿವಾಣ ಗ್ರಾಮದ 3, 4ನೇ ವಾರ್ಡಿನಲ್ಲಿ ವಾಸಿಸುತ್ತಿರುವ ಎಲ್ಲ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಜೊತೆಗೆ ಶೌಚಾಲಯ, ವಿದ್ಯುತ್ ಸಂಪರ್ಕಗಳಂತಹ ಮೂಲ ಸೌಕರ್ಯ ಒದಗಿಸಬೇಕು. ಹೊನ್ನಾಳಿ ತಾಲೂಕು ವಡೇರ ಹತ್ತೂರ್ ಪ್ರಾಥಮಿಕ ಆರೋಗ್ಯ
ಕೇಂದ್ರಕ್ಕೆ ಮೂಲ ಸೌಕರ್ಯ ಕಲ್ಪಿಸಿ ಮೇಲ್ದರ್ಜೆಗೆ ಏರಿಸಬೇಕು. ಕೋವಿಡ್‍ನಿಂದ ಮೃತಪಟ್ಟವರ ಕುಟುಂಬಗಳಿಗೆ ತಕ್ಷಣವೇ ಒಂದು ₹ 1 ಲಕ್ಷ  ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ವಕೀಲ ಅನೀಸ್ ಪಾಷಾ, ಮುಖಂಡರಾದ ಬಸವರಾಜ, ಕೆ.ವಿ.ರುದ್ರೇಶ್, ಕೆ.ವಿ.ಅವಿನಾಶ್, ಶಶಿಧರ್, ಕೆ.ನಟರಾಜ, ನಿರಂಜನಮೂರ್ತಿ ಸೇರಿದಂತೆ ವಿವಿಧ ಹಳ್ಳಿಗಳ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.